twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನೆಮಾಗಳ ಅರ್ಧ ವಾರ್ಷಿಕ ಪೋಸ್ಟ್ ಮಾರ್ಟಂ

    By * ಮಲೆನಾಡಿಗ
    |

    ಕನ್ನಡ ಚಿತ್ರರಂಗದ ಯಶಸ್ಸಿನ ಗ್ರಾಫ್ ತೀವ್ರ ಇಳಿಮುಖವಾಗಿದ್ದು, ಅವನತಿ ಕಾಣುವ ಎಲ್ಲಾ ಸೂಚನೆಗಳು ಕಂಡುಬಂದಿವೆ. ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣವಾಗಿರುವ ಬೆನ್ನಲ್ಲೇ ಕಳೆದ ಆರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳತ್ತ ಸಿಂಹಾವಲೋಕನ ಮಾಡಿದರೆ, ತಲೆ ತಗ್ಗಿಸುವಂಥ ಸಂಗತಿಗಳು ಗೋಚರಿಸುತ್ತವೆ. ಬೇಸರವಾದರೂ ಚಿತ್ರರಂಗದ ಆರು ತಿಂಗಳ ಫಲಾಫಲ ವರದಿಯನ್ನುನೀಡಲೇ ಬೇಕು.

    ಸುಮಾರು 60ಕ್ಕೂ ಹೆಚ್ಚು ಚಿತ್ರಗಳು ತೆರೆ ಕಂಡರೂ ಬಾಕ್ಸಾಫೀಸ್ ನಲ್ಲಿ ವಿಮರ್ಶಕರ ಕಣ್ಣಲ್ಲಿ, ಜನಮಾನಸದಲ್ಲಿ ಉಳಿದಿದ್ದು, ಯಶ ಗಳಿಸಿದ್ದು ಮಾತ್ರ ಆಪ್ತರಕ್ಷಕ ಚಿತ್ರ ಎಂಬುದು ಅಚ್ಚರಿಯಾದರೂ ಸತ್ಯ. ಉಳಿದಂತೆ ಪೊರ್ಕಿ ಶತದಿನ ಕಂಡರೂ ಕೆಲವು ಸೆಂಟರ್ ಗಳಿಗೆ ಮಾತ್ರ ಯಶಸ್ಸು ಮೀಸಲಾಗಿತ್ತು. ಪೃಥ್ವಿ, ನಾನು ನನ್ನ ಕನಸು ಅರ್ಧ ಶತಕ ಬಾರಿಸಿ ಸುಸ್ತಾಗಿದ್ದರೆ, ಮತ್ತೆ ಕೆಲವು 25 ದಿನ ಓಡಿದ ಸಾಧನೆಗೆ ಆ ಚಿತ್ರಗಳ ನಿರ್ಮಾಪಕರು ಪಾರ್ಟಿ ಮಾಡಿದ ಸುದ್ದಿ ಇದೆ.

    ಚಿತ್ರರಂಗದ ಬಗೆಗಿನ ಹೆಚ್ಚಿನ ಮಾಹಿತಿಗೆ ಪಾಪ್ ಕಾರ್ನ್ ತಾಣ ವೀಕ್ಷಿಸಿ

    ತಿಂಗಳುವಾರು ಚಿತ್ರಗಳ ಸಮೀಕ್ಷೆ ನೋಡುವ: ಜನವರಿಯಲ್ಲಿ ಒಟ್ಟು 14 ಚಿತ್ರಗಳು ತೆರೆ ಕಂಡಿತ್ತು. ಎಎಂಆರ್ ರಮೇಶ್ ನಿರ್ದೇಶನದ ಪೊಲೀಸ್ ಕ್ವಾಟರ್ಸ್, ಚೈತನ್ಯ ನಿರ್ದೇಶನದ ಸೂರ್ಯಕಾಂತಿ, ದಿನೇಶ್ ಬಾಬು ನಿರ್ದೇಶನದ ಸ್ಕೂಲ್ ಮಾಸ್ಟರ್ ಅಲ್ಲದೆ ಎಂಡಿ ಶ್ರೀಧರ್ ಅವರ ಪೊರ್ಕಿ ನಿರೀಕ್ಷೆ ಹುಟ್ಟಿಸಿದ ಚಿತ್ರಗಳು. ಪೊರ್ಕಿ ಶತದಿನ ಕಂಡರೆ, ಮಿಕ್ಕವು ನಿರಾಸೆ ಮೂಡಿಸಿದವು. ಪೊರ್ಕಿ ರಿಮೇಕ್ ಚಿತ್ರ ಎಂಬುದು ವಿಶೇಷ.

    ಫೆಬ್ರವರಿಯಲ್ಲಿ 11 ಚಿತ್ರಗಳು ಬಿಡುಗಡೆಯಾಗಿದ್ದು, ಜನವರಿಗೆ ಹೋಲಿಸಿದರೆ ಸದಭಿರುಚಿಯ ಚಿತ್ರಗಳು ಹೆಚ್ಚಾಗಿದ್ದವು. ಸುದೀಪ್ ನಿರ್ದೇಶನದ ಜಸ್ಟ್ ಮಾತ್ ಮಾತಲ್ಲಿ, ರಾಮಮೂರ್ತಿ ಅವರ ಕ್ರೇಜಿ ಕುಟುಂಬ, ಅವಿನಾಶ್ ನಿರ್ದೇಶನದ ಜುಗಾರಿ, ಪಿ ವಾಸು ನಿರ್ದೇಶನದ ಆಪ್ತರಕ್ಷಕ, ಸುಮಾರು ಹತ್ತು ನಿರ್ದೇಶಕರ ಕೂಸಾದ ಸುಗ್ರೀವ ನಿರೀಕ್ಷೆ ಹುಟ್ಟಿಸಿದ ಚಿತ್ರಗಳು. ಇದಲ್ಲದೆ, ಪಿ ಶೇಷಾದ್ರಿ ನಿರ್ದೇಶನದ ವಿಮುಕ್ತಿ, ರೂಪಾ ಅಯ್ಯರ್ ನಿರ್ದೇಶನದ ಮುಖಪುಟ ಚಿತ್ರಗಳು ಗಮನ ಸೆಳೆದವು.

    ಆರ್ಟ್ ಫಿಲ್ಮಂಗೆ ಎಲ್ಲಿದೆ ಜಾಗ?: ಆಪ್ತರಕ್ಷಕ ಚಿತ್ರ ಚಿತ್ರರಂಗದ ರಕ್ಷಣೆ ಮಾಡಿ, ಹಣಗಳಿಕೆ ಮಾತ್ರವಲ್ಲದೆ, ವಿಮರ್ಶಕರ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಣ್ಣಪುಟ್ಟ ನ್ಯೂನತೆಗಳ ನಡುವೆಯೂ ಡಾ. ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಭರ್ಜರಿ ಯಶಸ್ಸು ಕಂಡ ಏಕೈಕ ಎನ್ನಲಡ್ಡಿಯಿಲ್ಲ. ಜುಗಾರಿ, ಸುಗ್ರೀವ ಬಗ್ಗೆ ಜನರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದರೂ ಹಣಗಳಿಕೆಯಲ್ಲಿ ವೈಫಲ್ಯ ಕಂಡವು.

    ರಾಷ್ಟ್ರಪ್ರಶಸ್ತಿ ವಿಜೇತ ಶೇಷಾದ್ರಿ ಅವರ ಭಾವನಾ ಅಭಿನಯದ ವಿಮುಕ್ತಿ ಚಿತ್ರ ಬಿಡುಗಡೆಯಾದ ದಿನ ಪಿವಿಆರ್ ನಲ್ಲಿ ಚಿತ್ರ ವೀಕ್ಷಿಸಲು ಇದ್ದ ಪ್ರೇಕ್ಷಕರ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಆರ್ಟ್ ಫಿಲ್ಮಂ ಎಂಬ ಹಣೆಪಟ್ಟಿ ಹೊತ್ತಿದ್ದ ಮುಖಪುಟ ಚಿತ್ರವನ್ನು ರೂಪಾ ಆಯ್ಯರ್ ಅವರು ಕಷ್ಟಪಟ್ಟು ಮೂರು ವಾರಗಳ ಕಾಲ ಇದೇ ಪಿವಿಆರ್ ನಲ್ಲಿ ಪ್ರದರ್ಶಿಸುವಂತೆ ಮಾಡಿದ್ದು ಗಮನಿಸಿದ ಬೇಕಾದ ಸಂಗತಿ.

    ಮಾರ್ಚ್ ನಲ್ಲಿ 9 ಚಿತ್ರಗಳು ಮಾತ್ರ ತೆರೆ ಕಂಡವು. ಶ್ರೀಹರಿಕಥೆ, ಸ್ವಯಂವರ ಯಾವುದೇ ಸದ್ದು ಮಾಡಲಿಲ್ಲ. ಈ ತಿಂಗಳು ಫ್ಲಾಪ್ ಚಿತ್ರಗಳಿಗೆ ಮೀಸಲಾಗಿಬಿಟ್ಟಿತು. ಮುರಳಿ ಶ್ರೀಮುರಳಿ ಆದರೂ ಇನ್ನೂ ಹಿಟ್ ಚಿತ್ರ ನೀಡಲು ಹೆಣಗಾಡುತ್ತಿದ್ದಾರೆ. ದೇವರು ಅವರಿಗೆ ಇನ್ನಷ್ಟು 'ಶ್ರೀ''ಶಕ್ತಿ' ಕೊಡಲಿ.

    ಏಪ್ರಿಲ್ ತಿಂಗಳು ಕೊಂಚ ಭರವಸೆ ಮೂಡಿಸಿದ ಮಾಸ. 11 ಚಿತ್ರಗಳು ತೆರೆ ಕಂಡವು. ರತ್ನಜರ ಪ್ರೇಮಿಸಂ, ಉಲ್ಲಾಸ ಉತ್ಸಾಹ, ಪೃಥ್ವಿ, ಪೆರೋಲ್ ನಿರೀಕ್ಷೆ ಮೂಡಿಸಿದ ಚಿತ್ರಗಳು. ಆದರೆ, ಪುನೀತ್ ನಾಯಕತ್ವ ಪೃಥ್ವಿ ಮಾತ್ರ ಕಷ್ಟಪಟ್ಟು 50 ದಿನ ಪೂರೈಸಿತು, ಪ್ರೇಮಿಸಂ, ಪೆರೋಲ್ ಉತ್ತಮ ಜಾಹೀರಾತಿನ ನಡುವೆಯೂ ಹೆಚ್ಚು ದಿನ ಓಡಲಿಲ್ಲ. ಪ್ರೇಮಿಸಂ ಒಂದೆರೆಡು ಕಡೆ 50 ದಿನ ಓಡಿತು.

    ಉಲ್ಲಾಸ ಉತ್ಸಾಹ ಪ್ರಚಾರ ನೀಡುವಲ್ಲಿ ಗಣೇಶ್ ನಿರುತ್ಸಾಹ ತೋರಿದ ಫಲವೋ ಅಥವಾ ರಿಮೇಕ್ ಎಂಬ ಕಾರಣಕ್ಕೋ ಚಿತ್ರ ಮೇಲೆಳಲಿಲ್ಲ. ಹಲವು ವರ್ಷಗಳ ನಂತರ ಡಬ್ಬದಿಂದ ಹೊರಬಂದ ಕುಮಾರ್ ಗೋವಿಂದು ಅವರ ಸತ್ಯದ ಚಿತ್ರದ ರೀಲುಗಳು, ಪ್ರೇಕ್ಷಕರ ತಿರಸ್ಕಾರಕ್ಕೆ ಒಳಪಟ್ಟು ಡಬ್ಬ ಸೇರಿತು. ಹಾಲಿವುಡ್ ಶೈಲಿಯಲ್ಲಿ ಬಂದ ಅಂತರಾತ್ಮ ಭರವಸೆ ಮೂಡಿಸಿದರೂ ಬರೀ ಗಿಮಿಕ್ ನಲ್ಲೇ ಕಾಲದೂಡಿತು.

    ಏಪ್ರಿಲ್ ನಂತರ ವಿವಾದಗಳದ್ದೇ ಸುದ್ದಿ: ಮೇ ತಿಂಗಳಲ್ಲಿ 9 ಚಿತ್ರಗಳು ತೆರೆಗಪ್ಪಳಿದವು. ನಾನು ನನ್ನ ಕನಸು, ಶಂಕರ್ ಐಪಿಎಸ್ ಚಿತ್ರಗಳು ತಿಂಗಳು ಪೂರ್ತಿ ಸುದ್ದಿ ಮಾಡುತ್ತಲೇ ಇದ್ದವು. ಆದರೆ, ಅದು ಬಾಕ್ಸಾಫೀಸಲ್ಲಿ ಏನು ಪ್ರಯೋಜನಕ್ಕೆ ಬರಲಿಲ್ಲ. ರಿಮೇಕ್ ಚಿತ್ರವಾದರೂ ಉತ್ತಮ ಜಾಹೀರಾತು ತಂತ್ರ, ಚಿತ್ರದ ಸೆಂಟಿಮೆಂಟ್, ರೈ ನಟನೆ ನಾನು ನನ್ನ ಕನಸು ಚಿತ್ರವನ್ನು ಐವತ್ತರ ಗಡಿ ದಾಟಿಸಿಬಿಟ್ಟಿತು.

    ಶಂಕರ ಐಪಿಎಸ್ ಯಾಕೋ ವಕೀಲರ ಜೊತೆ ಕಿತ್ತಾಟವಾದ ಮೇಲೆ ಸದ್ದು ಮಾಡದೇ ತಣ್ಣಾಗಾಗಿಬಿಡ್ತು. ನೂರು ಜನ್ಮಕೂ ಚಿತ್ರ ನಾಗತಿಹಳ್ಳಿ ಐಂದ್ರಿತಾ ರೇ ಕಪಾಳಮೋಕ್ಷ ಪ್ರಕರಣದಿಂದ ಮಾತ್ರ ನೆನಪಲ್ಲುಳಿಯಬಲ್ಲುದು. ಬೊಂಬಾಟ್ ಕಾರ್, ನನ್ನವನು ಬಗ್ಗೆ ಹೇಳದಿದ್ದರೆ ಚೆನ್ನ. ಅಚ್ಚರಿ ಎಂಬಂತೆ ಪ್ರೀತಿಯಿಂದ ರಮೇಶ್ ಚಿತ್ರ ಸಿನಿವಿಮರ್ಶಕರ ಕೃಪೆಗೆ ಪಾತ್ರವಾಗಿ ಬಹು ಪರಾಕ್ ಗಿಟ್ಟಿಸಿಕೊಂಡಿತ್ತು. ಆದರೆ, ಚಿತ್ರಮಂದಿರದಿಂದ ಬೇಗನೆ ಹೊರದೂಡಲ್ಪಟ್ಟಿತು.

    ಜೂನ್ ತಿಂಗಳಲ್ಲಿ ಒಂದಿಷ್ಟು ಭರವಸೆ ಚಿತ್ರಗಳು ಬಂದವು ಹಾಗೆ ಮರೆಯಾದವು. 8 ಚಿತ್ರಗಳು ತೆರೆಕಂಡವು. ರವಿಚಂದ್ರನ್ , ನಮಿತಾ ಅಭಿನಯದ 'ಹೂ' ಎಂಬ ಅಪ್ಪಟ ರಿಮೇಕ್ ಚಿತ್ರಕ್ಕೆ ಇಲ್ಲದ ಪ್ರಚಾರ ನೀಡಲಾಯಿತು. ಕೆಟ್ಟ ವಿಮರ್ಶೆಯ ನೆಪ ಹೇಳಿ ನಿರ್ಮಾಪಕನಿಂದ ಪತ್ರಕರ್ತನಿಗೆ ಬೆದರಿಕೆ ಕರೆ ಕೂಡ ಬಂತು. ಅನಗತ್ಯ ವಿವಾದಕ್ಕೂ ಕಾರಣವಾಯಿತು.

    ತಮಸ್ಸು ವಿವಾದದೊಂದಿಗೆ ಹುಟ್ಟಿ, ಬೆಳೆದು, ಅವನತಿಯ ಹಾದಿ ಹಿಡಿದಿದೆ. ಐತಲಕ್ಕಡಿ ಟೈಮ್ ಪಾಸ್ , ರಿಮೇಕ್ ಪುಂಡ, ತೀರ್ಥಕ್ಕೆ ನಮೋ ನಮಃ, ಕೃಷ್ಣನ್ ಲವ್ ಸ್ಟೋರಿ, ಕಥೆ, ನಿರ್ದೇಶನ ಹಾಗೂ ರಾಧಿಕಾ ಪಂಡಿತ್ ದೆಸೆಯಿಂದ ಚಿತ್ರಮಂದಿರದಲ್ಲಿ ಇನ್ನೂ ಜೀವಂತವಿದೆ. ಜುಲೈನಲ್ಲಿ ಆಗಲೇ ಆರು ಚಿತ್ರಗಳು ತೆರೆ ಕಂಡಿದ್ದು, ಯಾವುದೂ ಎರಡು ವಾರ ಓಡುವ ಲಕ್ಷಣಗಳಿಲ್ಲ.

    ಅಂತಿಮ ತೀರ್ಪು: ಉತ್ತಮ ಸ್ವಮೇಕ್ ಚಿತ್ರಗಳು ಬಂದರೂ ಸತ್ವವಿರಲಿಲ್ಲ. ರಿಮೇಕ್ ಚಿತ್ರಗಳಿಗೆ ಸಿಕ್ಕ ಪ್ರಚಾರಕ್ಕೆ ಮಿತಿಯಿರಲಿಲ್ಲ. ರೈ ಅಂತಹ ಕನ್ನಡ ಕಾದಂಬರಿ ಓದುವ ಆದರೆ ರಿಮೇಕ್ ಚಿತ್ರಗಳ ಮಾಡುವವರ ಮೇಲೆ ಭರವಸೆ ಇಡುವಂತಿಲ್ಲ.

    ಸದಭಿರುಚಿ ಚಿತ್ರಗಳಿಗೆ ದೊಡ್ಡ ಚಿತ್ರಮಂದಿರಗಳಲ್ಲಿ ಸ್ಥಳವಿಲ್ಲ. ಬಾಲಿವುಡ್ ನ ತೋಪೆದ್ದ ಚಿತ್ರಗಳಾದ ಕೈಟ್ಸ್, ರಾವಣನ ಎದುರು ಹೋರಾಟ ನಡೆಸಿದ ಮಂಡಳಿಗೆ ಬುದ್ಧಿ ಇಲ್ಲ. ಒಳಜಗಳ ನಿಲ್ಲದ ಹೊರತೂ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿಲ್ಲ. ಆರು ತಿಂಗಳಲ್ಲಿ ಚಿತ್ರರಂಗವನ್ನು ರಕ್ಷಿಸಿದ ಅಪ್ತ ರಕ್ಷಕ ಮುಂದಿನ ಆರು ತಿಂಗಳು ರಕ್ಷಿಸಲು ಜೀವಂತವಿಲ್ಲ.

    Sunday, July 4, 2010, 18:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X