»   » ಲಕ್ಷ್ಮಿ ಗೋಪಾಲ ಸ್ವಾಮಿಗೆ ಸೂಕ್ತ ವರ ಬೇಕಂತೆ

ಲಕ್ಷ್ಮಿ ಗೋಪಾಲ ಸ್ವಾಮಿಗೆ ಸೂಕ್ತ ವರ ಬೇಕಂತೆ

Subscribe to Filmibeat Kannada

* ಜಯಂತಿ

Lakshmi Gopalaswamy
ಮದುವೆ ಯಾವಾಗ ಅಂತ ಕೇಳಿದ್ದೇ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಚಿಂತೆಗೀಡಾದಂತೆ ಮಾತಿಗೆ ಬ್ರೇಕ್ ಹಾಕಿದರು. ಇಂಥ ನೇರ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ ಅಂತ ಆಮೇಲೆ ನಕ್ಕು, ಮಾತು ಮುಂದುವರಿಸಿದರು.

ಲಕ್ಷ್ಮೀ ಗೋಪಾಲಸ್ವಾಮಿ ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಲ್ಲಿ ಓದಿದ್ದು. 'ವುಮೆನ್ಸ್ ಸ್ಟಡೀಸ್"ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಮನಸ್ಸು ಮಾಡಿದ್ದರೆ ರ್ಯಾಂಪ್ ತುಳಿದು ದೊಡ್ಡ ಮಾಡೆಲ್ ಆಗುವ ಅವಕಾಶ ಖಂಡಿತ ಇತ್ತು. ಆದರೆ, ಲಕ್ಷ್ಮೀ ಗ್ಲ್ಯಾಮರ್ ಜಗತ್ತಿಗೆ ಬೆನ್ನುಮಾಡಿದರು. ಈಗಲೂ ಈ ವಿಷಯದಲ್ಲಿ ಅವರ ನಿಲುವು ಸಡಿಲವಾಗಿಲ್ಲ.

ಮಲೆಯಾಳಿ ಸಿನಿಮಾಗಳಲ್ಲಿ ಅಭಿನಯ ಪ್ರಧಾನ ಪಾತ್ರಗಳನ್ನು ಹೆಕ್ಕಿಕೊಂಡು ಏಳು ವರ್ಷದಿಂದ ಅಲ್ಲಿ ಬ್ಯುಸಿಯಾಗಿರುವ ಲಕ್ಷ್ಮೀ, ಬಾಲಿವುಡ್‌ನ ಎರಡು ಆಫರ್‌ಗಳನ್ನು ಎಡಗೈಲಿ ತಳ್ಳಿರುವುದು ಅಚ್ಚರಿ. ಮೀರಾ ನಾಯರ್ ಒಮ್ಮೆ ಕರೆದು ಸ್ಕ್ರೀನ್ ಟೆಸ್ಟ್ ಮಾಡಿದ್ದಾರೆ. ಆದರೆ, ಎಕ್ಸ್‌ಪೋಸ್ ಮಾಡುವ ಪಾತ್ರ ಅದಾಗಿದ್ದರಿಂದ ಎರಡನೇ ಯೋಚನೆಯೇ ಇಲ್ಲದೆ ಲಕ್ಷ್ಮೀ ಹೊರನಡೆದು ಬಂದಿದ್ದಾರೆ. ಇನ್ನೊಮ್ಮೆ ಸಲ್ಮಾನ್ ಖಾನ್ ಚಿತ್ರಕ್ಕೂ ಬುಲಾವು ಬಂದಿತ್ತಂತೆ. ಕನ್ನಡದಲ್ಲಿ ಹುಡುಕಿಕೊಂಡು ಬಂದ ಪಾತ್ರಗಳು ಕೂಡ ಮೈದೋರುವಂಥದ್ದೇ ಆಗಿದ್ದ ಕಾರಣಕ್ಕೆ ಲಕ್ಷ್ಮೀ ಅವನ್ನೆಲ್ಲಾ ಬದಿಗೊತ್ತಿದ್ದಾರೆ.

ಇಷ್ಟು ಬಿಗಿಯಾದ ನಿಲುವು ಇಟ್ಟುಕೊಂಡ ಅವರು ಈಗ ಹಿಂದಿಯ 'ಧುಆ" (ಹೊಗೆ) ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್‌ನ ಮೊದಲ ಸಿನಿಮಾ ಇದು. ಪರಿಸರ ಕಾಳಜಿಗೆ ಸಂಬಂಧಿಸಿದ ಕಥೆಯುಳ್ಳ ಇದು ಇತ್ತೀಚೆಗೆ ಪಣಜಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡಿತು. ಮುಂದೆ ಇನ್ನಷ್ಟು ಪಾತ್ರಗಳು ಕೈಬೀಸಿ ಕರೆಯುವ ಸೂಚನೆಗಳು ಈಗಾಗಲೇ ಅವರಿಗೆ ಸಿಕ್ಕಿವೆ. ಕನ್ನಡದ 'ನಂಯಜಮಾನ್ರು" ತೆರೆಕಾಣಬೇಕಿದೆ.

ಅವೆಲ್ಲಾ ಸರಿ, ಮದುವೆ ಯಾವಾಗ? ಅಂತ ಮತ್ತೆ ಕೇಳಿದಾಗ ಲಕ್ಷ್ಮೀ ಹೇಳಿದ್ದು- 'ಆಗಬೇಕು ಅಂತ ಈಗ ಅನ್ನಿಸುತ್ತಿದೆ. ಸೂಕ್ತ ವ್ಯಕ್ತಿ ಸಿಗಬೇಕಷ್ಟೆ"!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada