ರವಿಚಂದ್ರನ್-ಹಂಸಲೇಖ ಸಂಗಮ 'ನರಸಿಂಹ' ತೆರೆಗೆ
ಕನಸುಗಾರ ರವಿಚಂದ್ರನ್ ಹಾಗೂ ಸಂಗೀತ ಮಾಂತ್ರಿಕ ಹಂಸಲೇಖ ಮತ್ತೆ ಒಂದಾಗಿ ಜಾದೂ ಮಾಡಲು ಹೊರಟಿರುವ ಚಿತ್ರ 'ನರಸಿಂಹ' ಈ ತಿಂಗಳು (ಡಿಸೆಂಬರ್, 2011) ರಲ್ಲಿ ಬಿಡುಗಡೆ ಆಗಲಿದೆ. ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ಜಾಹೀರಾತು ನೀಡಿದೆ. ತುಂಬಾ ದಿನಗಳಿಂದ ಈ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೂ ಈ ಮಾಹಿತಿಯಿಂದ ಕೊನೆಗೂ ಸಂತೋಷ ದಕ್ಕಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಂಗೀತ ಬ್ರಹ್ಮ ಹಂಸಲೇಖ ಒಂದಾನೊಂದು ಕಾಲದಲ್ಲಿ ಅಪ್ಪಟ ಸ್ನೇಹಿತರು. 'ಪ್ರೇಮಲೋಕ'ದಲ್ಲಿ ಒಂದಾದ ಈ ಜೋಡಿ, ನಂತರ ರಣಧೀರ, ಅಂಜದ ಗಂಡು, ಕಿಂದರ ಜೋಗಿ, ಯಾರೇ ನೀನು ಚೆಲುವೆ, ಮುಂತಾದ ಚಿತ್ರಗಳಲ್ಲಿ ಹಾಡು, ಸಂಗೀತ ಹಾಗೂ ಶ್ರೀಮಂತ ದೃಶ್ಯವೈಭವಗಳ ಸಂಗಮದಲ್ಲಿ ಮೂಡಿ ಬಂದ ಚಿತ್ರಗಳಿಂದ ಅಕ್ಷರಶಃ ಸಿನಿಪ್ರೇಕ್ಷಕರನ್ನು ಮೋಡಿ ಮಾಡಿದ್ದರು.
ನಂತರ ಅದೇಕೋ ಬೇರಾದ ಜೋಡಿ, ಒಟ್ಟಾಗಿ ಪ್ರೇಕ್ಷಕರ ಮುಂದೆ ಬಂದಿರಲಿಲ್ಲ. ಒಮ್ಮೆ 'ಒಂದಾಗೋಣ ಬಾ' ಅಂದಿದ್ದರಾದರೂ ಒಂದಾಗಿರಲಿಲ್ಲ. ಈಗ ಬಿಡುಗಡೆಗೆ ಕಾದಿರುವ 'ನರಸಿಂಹ' ಚಿತ್ರ ಮತ್ತೆ ಅವರಿಬ್ಬರ ಸಂಗಮದ ಮೂಲಕ ತೆರೆಗೆ ಬರುತ್ತಿರುವ ಚಿತ್ರ. ಪ್ರೇಕ್ಷಕರು ಈ ಕಾರಣಕ್ಕೇ ಈ ಚಿತ್ರಕ್ಕೆ ಕಾಯುತ್ತಿರುವುದು. ಬೇರಾದ ನಂತರ ಇಬ್ಬರೂ ವೃತ್ತಿಯಲ್ಲಿ ಕೆಳಗಿಳಿದ್ದರು ಎಂಬುದನ್ನು ಮರೆಯುವಂತಿಲ್ಲ. ಇದೀಗ ಒಂದಾಗಿರುವ ಜೋಡಿಯ ಮುಂದಿನ ಮೋಡಿ ಏನಾಗಲಿದೆಯೋ? (ಒನ್ ಇಂಡಿಯಾ ಕನ್ನಡ)


Click it and Unblock the Notifications











