ಬಾಕ್ಸಾಫೀಸಲ್ಲಿ ಚಿಂದಿ ಉಡಾಯಿಸಿದ ಸೂಪರ್!
ಉಪೇಂದ್ರ ಅಭಿನಯದ 'ಸೂಪರ್' (ವಿಮರ್ಶೆ) ಚಿತ್ರಕ್ಕೆ ರಾಜ್ಯದಾದ್ಯಂತ ಸೂಪರ್ ಡೂಪರ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ತೆರೆಕಂಡಿರುವ 133 ಚಿತ್ರಮಂದಿರಗಳಲ್ಲಿ ಮೊದಲ ದಿನವೇ ಸೂಪರ್ ಬಾಕ್ಸಾಫೀಸಲ್ಲಿ ಚಿಂದಿ ಉಡಾಯಿಸಿದೆ. ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಸೂಪರ್ ನುಚ್ಚು ನೂರು ಮಾಡಲಿದೆ ಎಂದು ಉಪ್ಪಿ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯ 'ರಾಜ್ ದಿ ಶೋ ಮ್ಯಾನ್' ಚಿತ್ರ 125 ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಆ ದಾಖಲೆಯನ್ನು 'ಸೂಪರ್' ಚಿತ್ರ ಮುರಿದಿದೆ. ಇದೇ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಧೀರ ರಾಜ್ ಲೈನ್ ವೆಂಕಟೇಶ್ ಮಾತನಾಡುತ್ತಾ, ಶೀಘ್ರದಲ್ಲೇ ನೆರೆಹೊರೆಯ ರಾಜ್ಯಗಳಲ್ಲಿ ಹಾಗೂ ವಿದೇಶದಲ್ಲಿ ಸೂಪರ್ ಬಿಡುಗಡೆ ಮಾಡಲಿದ್ದೇವೆ ಎಂದರು.
ಬೆಂಗಳೂರು, ಮೈಸೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಮಂಗಳೂರು ಸೇರಿದಂತೆ ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲೂ 'ಸೂಪರ್' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. "ರಾಜ್ಯದ ನಾನಾ ಭಾಗಗಳಿಂದ ಮತ್ತಷ್ಟು ಪ್ರಿಂಟ್‌ಗಳಿಗೆ ಬೇಡಿಕೆ ಬಂದಿದೆ" ಎಂದು ರಾಕ್ ಲೈನ್ ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು ಮತ್ತು ದಾವಣಗೆರೆಯಲ್ಲಿ ಶೇಕಡಾ 75ರಷ್ಟು ಟಿಕೆಟ್‌ಗಳು ಒಂದು ವಾರ ಮುಂಗಡವಾಗಿ ಕಾದಿರಿಸಲಾಗಿದೆ. 'ಸೂಪರ್' ಚಿತ್ರವನ್ನು ನೋಡಲು ಪ್ರೇಕ್ಷಕರು ಮುಗಿಬೀಳುತ್ತಿರುವ ಕಾರಣ ದಿನವಹಿ ಆಟಗಳ ಸಂಖ್ಯೆಯನ್ನು ಕೆಲವು ಚಿತ್ರಮಂದಿರಗಳು ಹೆಚ್ಚಿಸಿವೆ.
ಚಿತ್ರಮಂದಿರಗಳ ಬಳಿ ಉಪ್ಪಿ ಅಭಿಮಾನಿಗಳನ್ನು ನಿಯಂತ್ರಿಸುವುದು ಪೊಲೀಸರಿಗೂ ಹಾಗೂ ಚಿತ್ರಮಂದಿರದ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದಾವಣಗೆರೆಯಲ್ಲಿ ಅಭಿಮಾನಿಗಳು ಉಪೇಂದ್ರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು. ಬೆಂಗಳೂರು, ಮೈಸೂರು ಅಭಿಮಾನಿಗಳೂ ತಾವೇನು ಕಮ್ಮಿ ಎಂಬಂತೆ ಉಪ್ಪಿ ಕಟೌಟ್‌ಗಳಿಗೆ ಹಾರ, ತುರಾಯಿ ಹಾಕಿ ಹಬ್ಬ ಆಚರಿಸಿಕೊಂಡಿದ್ದಾರೆ.
'ಸೂಪರ್' ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತ್ತೆ? ದಿನವೊಂದಕ್ಕೆ 532 ಪ್ರದರ್ಶನಗಳನ್ನು ಕಂಡಿರುವ 'ಸೂಪರ್' ಚಿತ್ರ ಒಂದೇ ದಿನದಲ್ಲಿ ರು.1 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ ಎನ್ನುತ್ತವೆ ಮೂಲಗಳು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸಕ್ಕೆ ಸೂಪರ್ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.


Click it and Unblock the Notifications











