»   » ಓಹ್ ..ಮೊದಲ ಸಮಾಗಮದ ಆ ರಾತ್ರಿ

ಓಹ್ ..ಮೊದಲ ಸಮಾಗಮದ ಆ ರಾತ್ರಿ

Subscribe to Filmibeat Kannada
Ugragami, A Baragaooru movie, storyline
ಯರ್ಮುಂಜ ರಾಮಚಂದ್ರರ ಜನಪ್ರಿಯ ಕವಿತೆಯ ಸಾಲುಗಳನ್ನು ನೆನಪಿಸುವ ಕಥೆ 'ಉಗ್ರಗಾಮಿ" ಚಿತ್ರದ್ದು. ನಿರ್ದೇಶಕ ಬರಗೂರು ರಾಮಚಂದ್ರಪ್ಪ ಕಥೆಯ ಎಳೆ ಹೇಳುತ್ತಾರೆ ಕೇಳಿ:

ಉಗ್ರಗಾಮಿಯೊಬ್ಬ ಸಚಿವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಪೊಲೀಸರು ಅವನನ್ನು ಬೆನ್ನಟ್ಟಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡ ಉಗ್ರ ಸ್ವತಂತ್ರಪುರ ಎನ್ನುವ ಊರು ಪ್ರವೇಶಿಸುತ್ತಾನೆ. ಊರಿನ ಮುಖಂಡನ ಮನೆಯಲ್ಲಿ ಅಡಗಿ ಕೂರುತ್ತಾನೆ. ವಿಪರ್ಯಾಸ ನೋಡಿ. ಉಗ್ರ ಮನೆಯನ್ನು ಪ್ರವೇಶಿಸಿದ ರಾತ್ರಿ, ಆ ಮನೆಯೊಡೆಯನ ಮಗಳ ಹೊಸಬದುಕಿನ ಪ್ರಥಮ ರಾತ್ರಿ. ಈ ರಾತ್ರಿ ಮನೆಯ ಒಬ್ಬೊಬ್ಬರ ಪಾಲಿಗೆ ಒಂದೊಂದು ರೀತಿ ಪರಿಣಮಿಸುತ್ತದೆ. ಕತ್ತಲೆಯಲ್ಲಿ ಮನಸ್ಸು ಬೆಳಗುತ್ತದೆ. ವ್ಯಕ್ತಿತ್ವದ ಹುಳುಕುಗಳು ಬಯಲಾಗುತ್ತವೆ. ಭಯೋತ್ಪಾದನೆ ಎನ್ನುವುದು ಬಾಹ್ಯ ವ್ಯವಸ್ಥೆಯಲ್ಲಷ್ಟೇ ಅಲ್ಲ, ವ್ಯಕ್ತಿಯ ಅಂತರಂಗದಲ್ಲೂ ಇರುವುದನ್ನು ಸಿನಿಮಾ ಶೋಧಿಸುತ್ತದೆ... ಇದಿಷ್ಟು 'ಉಗ್ರಗಾಮಿ" ಚಿತ್ರದ ಕಥೆ.

ಉಗ್ರಗಾಮಿಯಾಗಿ ಕಿಶೋರ್, ನವವಧುವಾಗಿ ನೀತು, ಆಕೆಯ ಗಂಡನಾಗಿ ನೀನಾಸಂ ಅಶ್ವಥ್ ನಟಿಸಿದ್ದಾರೆ. ಛಾಯಾಗ್ರಹಣ ನಾಗರಾಜ ಅದ್ವಾನಿ ಅವರದ್ದು, ಸಂಗೀತ ಪ್ರವೀಣ್ ಗೋಡ್ಖಿಂಡಿ ಅವರದ್ದು.

'ಉಗ್ರಗಾಮಿ" ಹಿಂಸೆಯನ್ನು ವಿರೋಧಿಸುವ ಚಿತ್ರ ಎಂದು ಬರಗೂರು ಸ್ಪಷ್ಟವಾಗಿ ಹೇಳಿದರು. ಮುಂಬೈ ನಗರಿಯಲ್ಲಿ ಉಗ್ರರ ಅಟ್ಟಹಾಸ ತಾರಕ್ಕೇರಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭಯೋತ್ಪಾದಕನಿಗೆ ದೇಶವೂ ಇಲ್ಲ, ಧರ್ಮವೂ ಇಲ್ಲ. ಅವನಿಗೆ ಇರುವುದು ದ್ವೇಷ ಮಾತ್ರ" ಎಂದು ವಿಶ್ಲೇಷಿಸಿದರು.

ಹುಳಿಮಾವು ರಾಮಚಂದ್ರ 'ಉಗ್ರಗಾಮಿ"ಯ ನಿರ್ಮಾಪಕರು. ಈ ಮೊದಲು ಬರಗೂರರ ಚಿತ್ರಗಳಲ್ಲಿ ನಟನಾಗಿ ಅಭಿನಯಿಸಿದ್ದ ಅವರು ಮೊದಲ ಬಾರಿಗೆ ನಿರ್ಮಾಣಕ್ಕಿಳಿದಿದ್ದಾರೆ. ಗುರುಗಳು ಬೆನ್ನು ತಟ್ಟಿದರೆ ಮತ್ತಷ್ಟು ಚಿತ್ರ ನಿರ್ಮಿಸಲು ಹಿಂಜರಿಯುವುದಿಲ್ಲ ಎಂದರು ಹುಳಿಮಾವು.

ಅಂದಹಾಗೆ, 'ಏಕಲವ್ಯ" ಚಿತ್ರದ ಶತದಿನ ಯಾತ್ರೆ ಕಾರ್ಯಕ್ರಮದಲ್ಲಿ ಊರು ಸುತ್ತುತ್ತಿದ್ದಾಗ ಬರಗೂರು ಅಪಘಾತವೊಂದಕ್ಕೆ ತುತ್ತಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಲಾರಿಯ ನಡುವಣ ಡಿಕ್ಕಿಯದು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಕುರುಹಾಗಿ ಬೆರಳೊಂದು ಬ್ಯಾಂಡೇಜ್ ಸುತ್ತಿಕೊಂಡಿದೆ.

ಇದನ್ನೂ ಓದಿ:
ಉಗ್ರಗಾಮಿಗೆ ಗೋಡ್ಖಿಂಡಿ ಏಕವ್ಯಕ್ತಿ ಸಂಗೀತ
ಕನ್ನಡದ ನಡುವೆ ಇಂಗ್ಲಿಷ್ ಬೆರೆಸೊಲ್ಲ"! :ನೀತು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada