'ಭೂಲೋಕ ರಕ್ಷಕ'ನಾಗಿ ಸಿಎಂ ಯಡಿಯೂರಪ್ಪ
'ಭೂಲೋಕ ರಕ್ಷಕ' ಎಂಬ ಬಹುಭಾಷಾ ಚಿತ್ರದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಟಿಸಲಿದ್ದಾರೆ. ಕೇರಳದ ಗುರುವಾಯೂರಿನ ವಿಜೀಶ್ ಮಣಿ ಈ ಚಿತ್ರದ ನಿರ್ದೇಶಕರು. ಕನ್ನಡ ಸೇರಿದಂತೆ ಈ ಚಿತ್ರ ಒಟ್ಟು 33 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ.
ಸ್ವಾಮಿಯೇ ಶರಣಂ ಅಯ್ಯಪ್ಪ ಹಾಗೂ ಪ್ರಚಲಿತ ವಿದ್ಯಮಾನಗಳೇ ಚಿತ್ರದ ಕಥಾವಸ್ತು ಎನ್ನಲಾಗಿದೆ. ಚಿತ್ರದಲ್ಲಿ ಕೇವಲ ಯಡಿಯೂರಪ್ಪನವರಷ್ಟೆ ಅಲ್ಲ ಮದ್ಯದ ದೊರೆ ವಿಜಯ್ ಮಲ್ಯ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಸೇರಿದಂತೆ ಕೆಲವು ಕ್ರಿಕೆಟ್ ತಾರೆಗಳು ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುತ್ತವೆ ಮೂಲಗಳು.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನ ಚಿತ್ರ ಸೆಟ್ಟೇರಲಿದೆ. ಚಿತ್ರವನ್ನು ನೋಡಬೇಕಾದರೆ 2012ರವರೆಗೆ ಕಾಯಬೇಕು. ಮೈಸೂರು ಸೇರಿದಂತೆ ಚಿತ್ರೀಕರಣ ಕೈಲಾಸ ಪರ್ವತ, ಬದರೀನಾಥ, ಮಾನಸ ಸರೋವರ, ನೇಪಾಳ, ಟಿಬೆಟ್, ಕಾಶ್ಮೀರ, ಜೈಪುರ, ಶಬರಿಮಲೈ, ಲಕ್ಷ ದ್ವೀಪ, ಈಜಿಪ್ಟ್ ನಲ್ಲಿ ನಡೆಯಲಿದೆ.
ಕನ್ನಡ,ತಮಿಳು, ತೆಲುಗು, ಒರಿಯಾ, ಭೋಜಪುರಿ, ಪಂಜಾಬಿ, ಗುಜರಾತಿ, ಮರಾಠಿ, ಅಸ್ಸಾಮಿ, ಬೆಂಗಾಳಿ, ಮಣಿಪುರಿ, ಉರ್ದು, ಕಾಶ್ಮೀರಿ, ಸಂಸ್ಕೃತ, ಹಿಂದಿ, ಅರೇಬಿಕ್, ಸಿಂಹಳಿ, ಮಲಯ್, ಇರಾನಿ, ಚೀನಿ, ಜಪಾನಿ, ಜರ್ಮನ್, ಗ್ರೀಕ್, ರಷ್ಯಾ, ಸ್ಪೇನ್, ಫ್ರೆಂಚ್, ಇಟಲಿ, ಐರಿಷ್, ಪೋರ್ಚುಗೀಸ್, ಕೊರಿಯಾ, ನೇಪಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ಮೂಡಿಬರಲಿದೆ.
ಸದ್ಯಕ್ಕೆ ಗಣಿ ಗಲಾಟೆಯಲ್ಲಿ ಮುಳುಗಿಹೋಗಿರುವ ಯಡಿಯೂರಪ್ಪ ಈ ಚಿತ್ರದಲ್ಲಿ ನಟಿಸಲು ಸಮಯವನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ.ರಿಲ್ಯಾಕ್ಸ್ ಆಗೋದಕ್ಕೆ ಆಗಾಗ ಚಿತ್ರಗಳನ್ನು ನೋಡಬೇಕು ಎಂದು ಹೇಳುವ ಸಿಎಂ ಸ್ವತಃ ಈಗ ಬಣ್ಣ ಹಚ್ಚಿಕೊಳ್ಳಲು ಮುಂದಾಗಿದ್ದಾರೆ.


Click it and Unblock the Notifications











