»   » ಜೀ ಕನ್ನಡದಲ್ಲಿ ಯೇಸುದಾಸ್ ಅವರ 'ಗುಣಗಾನ'

ಜೀ ಕನ್ನಡದಲ್ಲಿ ಯೇಸುದಾಸ್ ಅವರ 'ಗುಣಗಾನ'

Subscribe to Filmibeat Kannada

ಬೆಂಗಳೂರು, ಜು.4 : ಜೀ ಕನ್ನಡದ ಜನಮೆಚ್ಚುಗೆಯ ಕಾರ್ಯಕ್ರಮ 'ಗುಣಗಾನ'ದಲ್ಲಿ ಈಗ ಯೇಸುದಾಸ್ ಗೀತೆಗಳ ಗುನುಗು. ಕನ್ನಡ ಚಿತ್ರ ಸಂಗೀತದಲ್ಲಿ ಯೇಸುದಾಸ್ ಅವರದು ಮರೆಯಲಾರದ ಧ್ವನಿ. ಗಂಧರ್ವ ತಾರೆಯರ ನಮನಕ್ಕೆ ಸಜ್ಜಾಗಿರುವ 'ಗುಣಗಾನ'ದಲ್ಲಿ ಈಗ ಯೇಸುದಾಸ್ ಅವರ ಧ್ವನಿಗೆ ಸರಿಸಾಟಿಯಾಗುವವರು ಯಾರು ಎಂಬುದಕ್ಕೆ ಸ್ಫರ್ಧೆ ಪ್ರಾರಂಭವಾಗಿದೆ. ಈ ವಾರದ ಎಲ್ಲ ಹಂತಗಳಲ್ಲೂ ಗೆದ್ದ ಹರ್ಷ ಮತ್ತು ಪ್ರಜ್ವಲ್ ನಡುವೆ ಅಂತಿಮ ಸ್ಫರ್ಧೆ ನಡೆಯಲಿದೆ. ಈ ಸ್ಫರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಎಲ್ಲರ ಕುತೂಹಲವಾಗಿದ್ದು ಶುಕ್ರವಾರ ಜುಲೈ 4ರಂದು ರಾತ್ರಿ 9ರಿಂದ10:30ರವರೆಗಿನ ಕಂತನ್ನು ವೀಕ್ಷಿಸಬಹುದು.

ಅಂತಿಮ ಹಂತಕ್ಕೆ ಆಯ್ಕೆಯಾಗಿರುವ ಹರ್ಷ ಶುಕ್ರವಾರದ ಸಂಚಿಕೆಯಲ್ಲಿ 'ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವಾ' ಹಾಗೂ ಮಲಯ ಮಾರುತ ಸಿನೆಮಾದ 'ಎಲ್ಲೆಲ್ಲೂ ಸಂಗೀತವೇ...' ಗೀತೆಗಳನ್ನು ಹಾಗೂ ಪ್ರಜ್ವಲ್ ಅವರು 'ನಿಮ್ಮೂರು ಯಾವುರು ನಮ್ಮೂರು ಮೈಸೂರು' ಹಾಗೂ 'ಯಾರೆ ನೀನು ಸುಂದರ ಚೆಲುವೆ ಒಬ್ಬಳೇ ನಿಂತಿರುವೆ' ಗೀತೆಯನ್ನು ಹಾಡಲಿದ್ದಾರೆ.

'ಗುಣಗಾನ' ಕರ್ನಾಟಕದ ಸಿನೆಮಾ ಸಂಗೀತ ಪ್ರಪಂಚದಲ್ಲಿ ಹೆಸರು ಮಾಡಿರುವ ದಿಗ್ಗಜರಾದ ಪಿ.ಬಿ.ಶ್ರೀನಿವಾಸ್, ಡಾ.ರಾಜ್‌ಕುಮಾರ್, ಎಸ್,ಪಿ.ಬಾಲಸುಬ್ರಮಣ್ಯಂ, ಡಾ.ಯೇಸುದಾಸ್, ಎಸ್.ಜಾನಕಿ, ಎಲ್.ಆರ್.ಈಶ್ವರಿ, ಪಿ.ಸುಶಿಲಾ, ವಾಣಿ ಜಯರಾಂರವರ ನೆನಪಿಗೆ ಒಂದು ಅದ್ಭುತ ವೇದಿಕೆಯಾಗಿದೆ. ಈ ಕಾರ್ಯಕ್ರಮದ ಮೂಲಕ ಕನ್ನಡ ಸಂಗೀತ ಪ್ರಪಂಚದ ಪ್ರಸಿದ್ಧ ಗಾಯಕರ ಧ್ವನಿಗೆ ಹೋಲುವಂತೆ ಸಹಜವಾಗಿ ಹಾಡುವ ಅತ್ಯುತ್ತಮ ಗಾಯಕರನ್ನು ಹುಡುಕುವ ಕಾಯಕಕ್ಕೆ ಜೀ ಕನ್ನಡ ತೊಡಗಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮತ್ತು ಗಾಯಕ ಹೇಮಂತ್ ನಿರೂಪಕರಾಗಿ ಹಾಗೂ ಕೆ.ಎಸ್.ಎಲ್.ಸ್ವಾಮಿ ಮತ್ತು ಬಿ.ಆರ್. ಛಾಯಾ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

"ಗುಣಗಾನದ ರೀತಿಯ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಮೊದಲನೆಯದಾಗಿದ್ದು, ಉತ್ತಮ ಅಭಿರುಚಿಯ ಕಾರ್ಯಕ್ರಮ ಇದಾಗಿದೆ. ಕರ್ನಾಟಕದ ಜನತೆಯ ಮನದಲ್ಲಿ ಮಿಂಚಿನ ಸಂಚಲನೆ ಉಂಟು ಮಾಡುವುದರಲ್ಲಿ ಸಂಶಯವಿಲ್ಲ" ಎಂದು ಜೀ ಕನ್ನಡದ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ. 'ಪ್ರತಿಭಾ ಯೇಸುದಾಸ್' ಪ್ರಶಸ್ತಿಗೆ ನಡೆಯಲಿರುವ 'ಯೇಸುದಾಸ್' ವಾರದ ಈ ಸಂಚಿಕೆಯಲ್ಲಿ ನಂದಿನಿ ಆಳ್ವಾ, ಪದ್ಮಿನಿ ರಾವ್ - ಖ್ಯಾತ ನೃತ್ಯ ಪಟುಗಳು, ಆಲೂರು ಅನಂತ ಶರ್ಮಾ - ಸಂಗೀತಗಾರರು, ಖ್ಯಾತ ಡ್ರಮ್ ವಾದಕರು, ನಾಗರಾಜ್ ಹವಾಲ್ದಾರ್ - ಸಂಗೀತಗಾರರು, ಸುಮಾ ಸುಧೀಂದ್ರ (ವೀಣಾ ವಾದಕರು), ಆರ್.ಟಿ.ವಿಟ್ಠಲ್ ಮೂರ್ತಿ, ಮುಂತಾದವರು ಭಾಗವಹಿಸಲಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada