'ಗಂಡ ಹೆಂಡತಿ' ಸಂಜನಾ ಈಗೇನು ಮಾಡುತ್ತಿದ್ದಾರೆ?

By Staff


ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆಯಿದ್ದರೂ ಸದ್ಯಕ್ಕೆ ಸಂಜನಾ ಯಾವುದನ್ನೂ ಒಪ್ಪಿಕೊಂಡಿಲ್ಲ. ಜಾಹಿರಾತು ಜಗತ್ತಿನಲ್ಲಿದ್ದರೂ ನಟನೆ ಅಷ್ಟೊಂದು ಗೊತ್ತಿಲ್ಲ ಎಂದು ಒಪ್ಪಿಕೊಳ್ಳುವ ಸಂಜನಾ ನಟನಾ ಪಾಠ ಕಲಿಯಲು ತೆಲುಗಿಗೆ ಹಾರಿದ್ದಾರೆ. ದಟ್ಸ್‌ಕನ್ನಡದೊಡನೆ ನಡೆಸಿದ ಪುಟ್ಟ ಸಂದರ್ಶನದಲ್ಲಿ ಅರ್ಚನಾ ತಮ್ಮ ಮನವನ್ನು ತೆರೆದಿಟ್ಟಿದ್ದಾರೆ.


'ಗಂಡ ಹೆಂಡತಿ' ಚಿತ್ರದಲ್ಲಿ ಹಿಂದಿಯ 'ಮರ್ಡರ್' ಚಿತ್ರದ ಮಲ್ಲಿಕಾ ಶೇರಾವತ್‌ಳನ್ನೂ ನಾಚಿಸುವಂತೆ ನಟನಾವರಸೆಗಳನ್ನು 'ತೆರೆದಿಟ್ಟಿದ್ದ' ಅರ್ಚನಾ ಘಲ್ರಾನಿ ಈಗೇನು ಮಾಡುತ್ತಿದ್ದಾರೆ? ಯಾರಿದು ಅರ್ಚನಾ ಘಲ್ರಾನಿ ಎಂದು ಗಾಬರಿಯಾಗಬೇಡಿ. ಈಕೆ ಮತ್ತಾರೂ ಅಲ್ಲ. ಅದೇ ಸಂಜನಾ. ಗಂಡ ಹೆಂಡತಿ ತಮಿಳಿಗೂ ಡಬ್ ಆಗಿ ಅಲ್ಲಿಯೂ ಸಾಕಷ್ಟು 'ಹೆಸರು' ತಂದುಕೊಂಟ್ಟಿದೆ ಸಂಜನಾಳಿಗೆ. ಅವಳ ವರಸೆಯನ್ನು ನೋಡಿ ತೆಲುಗು ಚಿತ್ರರಂಗ ಕೂಡ ತೆರೆದ ಬಾಹುಗಳಿಂದ ಅವರನ್ನು ಅಪ್ಪಿಕೊಂಡಿದೆ. ಕನ್ನಡದಲ್ಲಿ ಸದ್ಯಕ್ಕೆ ಯಾವುದೇ ಚಿತ್ರದಲ್ಲಿ ಅವರು ನಟಿಸುತ್ತಿಲ್ಲದಿದ್ದರೂ ತೆಲುಗಿನಲ್ಲಿ ಅವರು ಸಾಕಷ್ಟು 'ಬಿಸಿ'. ಹಿಂದಿ ಚಿತ್ರರಂಗ ಕೂಡ ತನ್ನ ತೆಕ್ಕೆಯಲ್ಲಿ ಹಾಕಿಕೊಂಡರೂ ಅಚ್ಚರಿಯಿಲ್ಲ.

ಸಂಜನಾ ಅಪ್ಪಟ ಕನ್ನಡತಿ. ಅರಳುಹುರಿದಂತೆ ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡ ಬರೆಯಲು, ಓದಲು ಕೂಡ ಗೊತ್ತು. ಜಾಹಿರಾತು ಜಗತ್ತಿನ ಎಬಿಸಿಡಿಯೂ ಗೊತ್ತು ಆದರೆ ಗೊತ್ತಿಲ್ಲದಿರುವುದು ನಟನೆ ಅಂತ ಅವರೇ ಒಪ್ಪಿಕೊಳ್ಳುತ್ತಾರೆ. ಇದೇ ಕಾರಣದಿಂದ ಜಾಹಿರಾತು ಜಗತ್ತಿಗೆ ಮತ್ತೆ ಮರಳಿದ ಸಂಜನಾ ತೆಲುಗಿನಲ್ಲಿ ಮಾತ್ರ ನಟಿಸುತ್ತಿದ್ದಾರೆ. ಅಲ್ಲಿ ನಟನೆ ಬೇಕಾಗಿಲ್ಲ! ಆಟೋಗ್ರಾಫ್‌ನಲ್ಲಿ ನಟನೆ, ಗಂಡ ಹೆಂಡತಿಯಿಂದ ಪಾಠ ಕಲಿತಿರುವ ಸಂಜನಾ ತಮ್ಮನ್ನು ಮಲ್ಲಿಕಾ ಶೇರಾವತ್‌ಳಿಗೆ ಹೋಲಿಸಿದರೆ ಸುತಾರಾಂ ಇಷ್ಟಪಡುವುದಿಲ್ಲ.

ಈಗ ನಟನೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಸಂಜನಾಳ ಮೂಲ ಹೆಸರು ಅರ್ಚನಾ ಘಲ್ರಾನಿ. ಚಿತ್ರರಂಗದಲ್ಲಿ ಅನೇಕ ಅರ್ಚನಾ ಹೆಸರಿನವರು ಬೇರುಬಿಟ್ಟಿದ್ದರಿಂದ ಸಂಜನಾ ಎಂದು ತಮ್ಮ ಮೊದಲ ಚಿತ್ರ ಗಂಡ ಹೆಂಡತಿಯಲ್ಲಿ ಬದಲಾಯಿಸಿಕೊಂಡರು. ಅಲ್ಲಿ ಮತ್ತೊಬ್ಬಳು ಸಂಜನಾ ಇದ್ದರೆ ಇನ್ನೊಂದು ಹೆಸರು. ಹೆಸರಲ್ಲೇನಿದೆ ಬಿಡಿ?

ಹೆಸರು ಬದಲಾಯಿಸಿಕೊಳ್ಳುವುದು ಚಿತ್ರರಂಗದಲ್ಲಿ ಹೊಸದೇನಲ್ಲ. ಅದೃಷ್ಟ, ಹೆಸರು, ಹಣ ತರುವವರೆಗೆ ಇಟ್ಟುಕೊಂಡ ಹೆಸರು, ಹೆಸರು ಕೆಟ್ಟ ಮೇಲೆ ಮೂಲ ಹೆಸರು. ಇದು ಸದ್ಯಕ್ಕೆ ಭಾರತದ ಎಲ್ಲ ಭಾಷೆಯ ಚಿತ್ರದಲ್ಲಿರುವ ಟ್ರೆಂಡು. ಗಿರಿಜಾ ಶ್ರುತಿ ಆಗ್ತಾರೆ, ರೇಖಾ ಅಕ್ಷರ ಆಗ್ತಾರೆ, ಪೂಜಾ ಗಾಂಧಿ ಸಂಜನಾ ಗಾಂಧಿ ಆಗ್ತಾರೆ. ಮುಂಗಾರು ಮಳೆಯ ಸಂಜನಾ ಗಾಂಧಿ ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಸಂಜನಾ ಇದ್ದದ್ದರಿಂದ ಮತ್ತೆ ತಮ್ಮ ಮೂಲ ಹೆಸರಿಗೆ ಅಂಟಿಕೊಂಡಿದ್ದಾರೆ. ಅಂತೆಯೇ ಅರ್ಚನಾ ಘಲ್ರಾಣಿ ಕೂಡ ಈಗ ಸಂಜನಾ.

ಗಂಡ ಹೆಂಡತಿ, ಆಟೋಗ್ರಾಫ್ ಪ್ಲೀಸ್ ನಂತರ ಜಾಹಿರಾತು ಜಗತ್ತಿನ ಆಕರ್ಷಣೆಯಿಂದಲೋ ನೆರೆರಾಜ್ಯದ ಚಿತ್ರದಲ್ಲಿ ನಿರತರಾಗಿದ್ದರಿಂದಲೋ ಸದ್ಯಕ್ಕೆ ಕನ್ನಡದ ಯಾವ ಚಿತ್ರದಲ್ಲಿಯೂ ಸಂಜನಾ ನಟಿಸುತ್ತಿಲ್ಲ. ಕೇಳಿದರೆ, ಕನ್ನಡ ಚಿತ್ರದಲ್ಲೇನೋ ನಟಿಸಲು ಇಷ್ಟ ಆದರೆ ಬೇರೆ ಭಾಷೆಯಲ್ಲಿ ಬಿಜಿ, ಉತ್ತಮ ಆಫರ್ ಬಂದರೆ ಖಂಡಿತ ನಟಿಸುತ್ತೇನೆ ಎನ್ನುವ ಉತ್ತರ. ಗಂಡ ಹೆಂಡತಿ ನಂತರ ಹರಿದುಬಂದಿದ್ದು ಅಂತಹುದೇ ಪಾತ್ರಗಳು. ಅದೇ ತರಹದ ಡಿಮ್ಯಾಂಡು. ಒಂದೇ ಬಗೆಯ ಪಾತ್ರಗಳಿಗೆ ಬ್ರಾಂಡ್ ಮಾಡುತ್ತಾರೆ ಎಂದು ಬೇರೆ ಭಾಷೆಗಳಿಗೆ ಜಿಗಿದಿರುವ ಅಪ್ಪಟ ಕನ್ನಡತಿಯರು ಅಲ್ಲಿ ಕೂಡ ಇಲ್ಲಿರುವ ಪಾತ್ರಗಳಿಗಿಂತ 'ರೋಚಕ' ಪಾತ್ರಗಳಲ್ಲಿ ನಟಿಸುತ್ತಿರುವುದು ಕನ್ನಡ ಚಿತ್ರರಂಗದ ದೌರ್ಭಾಗ್ಯ. ಇದಕ್ಕೆ ರೇಖಾ ಅಕಾ ಅಕ್ಷರ, ಶುಭಾ ಪೂಂಜಾ, ರಮ್ಯಾ ಮೊದಲಾದ ನಟಿಯರೇ ಸಾಕ್ಷಿ. ಭಾಷೆ ಬರದಿದ್ದರೇನಂತೆ ನಟನೆಯ ಅವಶ್ಯಕತೆಯೂ ಅಲ್ಲಿ ಬೇಕಾಗಿಲ್ಲ!

ಸಂಜನಾ ತೆಲುಗಿನಲ್ಲಿ ಪೂರಿ ಜಗನ್ನಾಥ್ ನಿರ್ದೇಶನದ ಬುಜ್ಜಿಗಾಡು ಚಿತ್ರದಲ್ಲಿ ಪ್ರಭಾಸ್ ಮತ್ತು ತ್ರಿಶಾ ಜೊತೆ ನಟಿಸುತ್ತಿದ್ದಾರೆ. ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಚಿತ್ರದ ಹಾರ್ಟ್‌ಥ್ರೋಬ್ ಜಾನ್ ಅಬ್ರಹಾಂ ಜೊತೆ ಫಾಸ್ಟ್ ಟ್ರಾಕ್‌ಗಾಗಿ ಜಾಹಿರಾತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಪೂರಿ ಜಗನ್ನಾಥ್ ಅವರೊಂದಿಗೆ ಚಕ್ಕಂದವಾಡುತ್ತಿದ್ದಾರೆಂಬ ಸುದ್ದಿಯೂ ಹಬ್ಬಿತ್ತು. ಚಿತ್ರರಂಗದಲ್ಲಿಳಿದ ಮೇಲೆ ಗಾಳಿಸುದ್ದಿಗಳಿಗೆ ಹೆದರಿದೊಡೆಂತಯ್ಯಾ ಎಂಬಂತೆ ಗಾಳಿಸುದ್ದಿಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಹೊರಬಿಟ್ಟಿದ್ದಾರೆ ಸಂಜನಾ. ಸಿನೆಮಾದಲ್ಲಿ ಇದೆಲ್ಲಾ ಮಾಮೂಲಿ ಈ ರೂಮರ್‌ಗಳಿಗೆ ತಲೆಬುಡವಿಲ್ಲ ಎಂದು ತಳ್ಳಿಹಾಕಿದ್ದಾರೆ. ಅಷ್ಟಕ್ಕೂ, ಇದು ನಿಜಾನಾ ಅಂತ ಕೇಳಿದರೆ ಯಾರು ಎದೆತಟ್ಟಿಕೊಂಡು ಇದು ಸತ್ಯ ಎಂದು ಹೇಳುತ್ತಾರೆ ಹೇಳಿ?

ಅಂತೂ ಮತ್ತೊಂದು ಕನ್ನಡದ ಪ್ರತಿಭೆ ಬೇರೆ ಭಾಷೆಗಳಿಗೆ ಪಲಾಯನಗೈದಿದೆ.

ಸಂಜನಾ ಚಿತ್ರಪಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X