»   » ಲತಾ ದೀದಿ ಘಾಸಿಗೊಂಡಿದ್ದಾರೆ

ಲತಾ ದೀದಿ ಘಾಸಿಗೊಂಡಿದ್ದಾರೆ

Posted By:
Subscribe to Filmibeat Kannada

*ಶಿವಾಜಿ, ಮುಂಬಯಿ

ಡೀಜೆ ಡಾಲಿ ಎಂಬ ಒಂದು ಹಿಂದಿ ಆಲ್ಬಂ. ಹಳೆಯ ಹಾಡುಗಳನ್ನು ರೀ- ಮಿಕ್ಸ್‌ ಮಾಡಿ, ಅದರಲ್ಲಿ ಆದಷ್ಟೂ ಬಿಚ್ಚಮ್ಮಗಳನ್ನು ಚಿತ್ರಿಸಿರುವುದರಿಂದ ಈ ಆಲ್ಬಂ ಪಿಜ್ಜಾಗೂ ಮೀರಿ ಬಿಕರಿಯಾಗುತ್ತಿದೆ. ಆದರೆ, ಪ್ರಕಾಶ್‌ ಮೆಹ್ರಾ ಎಂಬ ಹಿಂದಿ ಚಿತ್ರದ ನಿರ್ದೇಶಕ ‘ಸಮಾಧಿ’ ಚಿತ್ರದಲ್ಲಿ ತೋರಿದ್ದ ಸೌಂದರ್ಯ ಪ್ರಜ್ಞೆಗೂ, ಈ ಕೆಸೆಟ್ಟಿನ ತಿರುಳಿಗೂ ಅಜಗಜಾಂತರ. ಈ ಹಾಡಿಗೆ ಹೊಟ್ಟೆ ತೋರುತ್ತಾ, ಎದೆ ಮೇಲೆ ಅದಾವುದೋ ವಿಚಿತ್ರ ಚಿತ್ರವನ್ನು ಠಸ್ಸೆ ಹಾಕಿಸಿಕೊಳ್ಳುವ ಮಾಡೆಲ್ಲನ್ನು ನೋಡಿ ಹಿರಿಯ ಗಾಯಕಿ, ಎಲ್ಲರ ನೆಚ್ಚಿನ ದೀದಿ ಲತಾ ಮಂಗೇಶ್ಕರ್‌ ಘಾಸಿಗೊಂಡಿದ್ದಾರೆ.

1970ರ ದಶಕದಲ್ಲಿ ತೆರೆಕಂಡ ಸಮಾಧಿ ಚಿತ್ರದ ‘ಬಂಗ್‌ಲೆ ಕೆ ಪೀಚೆ...’ ಎಂಬ ಹಾಡನ್ನು ಹಾಡಿದ್ದು ಇದೇ ಲತಾ ಮಂಗೇಶ್ಕರ್‌. ಆರ್‌.ಡಿ.ಬರ್ಮನ್‌ ಇದಕ್ಕೆ ಮಟ್ಟು ಹಾಕಿದ್ದರು. ಈಗಿನ ರೀಮಿಕ್ಸ್‌ ಶೂರರು ಅದನ್ನು ಅಡ್ಡಾದಿಡ್ಡಿ ತಟ್ಟಿಹಾಕಿರುವುದು ಮಾತ್ರ ದುರಂತ ಎನ್ನುತ್ತಾರೆ ಲತಾ.

ನಾನು, ಆಶಾ, ಕಿಶೋರ್‌ ಜೀ ಹಾಗೂ ಮೊಹಮ್ಮದ್‌ ರಫಿ ಸಾಬ್‌ ಹಾಡಿರುವ ಅನೇಕ ಗೀತೆಗಳನ್ನು ಈಗಾಗಲೇ ರೀಮಿಕ್ಸ್‌ ಮಾಡಿರೋದನ್ನ ನೋಡಿದ್ದೇನೆ. ಆದರೆ, ‘ಬಂಗ್‌ಲೆ ಕೆ ಪೀಚೆ’ ಹಾಡನ್ನು ಕೆಡಿಸಿರುವ ರೀತಿ ನೋಡಿದರೆ ವಾಕರಿಕೆ ಬರುತ್ತದೆ. ಬರ್ಮನ್‌ ಸಾಬ್‌ ಸೊಗಸಾಗಿ ಹೊಸೆದ ಮಟ್ಟಿಗೆ ನಾವು ಎದೆ ತುಂಬಿ ಹಾಡಿದ್ದೇವೆ. ಅದಕ್ಕೆ ನಟ- ನಟಿಯರು ಸಭ್ಯತೆಯ ಎಲ್ಲೆಯಲ್ಲೇ ನಟಿಸಿ ಛಾಪು ಮೂಡಿಸಿದ್ದಾರೆ. ಅಂಥಾ ಹಾಡನ್ನು ತೀರಾ ಅಸಭ್ಯವಾಗಿ ತೋರಿಸಿದರೆ ಆಗುವ ಸಂಕಟ ಅನುಭವಿಸಿದವರಿಗೇ ಗೊತ್ತು. ಒಳ್ಳೆಯ ಹಾಡನ್ನು ಕೆಡಿಸುವ ಇಂಥವರನ್ನ ಏನಾದರೂ ಮಾಡಬೇಕು ಅಂತ ಲತಾ ಪೇಚಾಡಿಕೊಂಡಿದ್ದರಲ್ಲಿ ನೋವು ಮಡುಗಟ್ಟಿತ್ತು.

ಹಿರಿತೆರೆಯ ಬಣ್ಣದ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಕೂಡ ಲತಾ ಅವರ ಹಾಡನ್ನು ಹಾಳುಗೆಡವಿರುವುದನ್ನು ಪ್ರತಿಭಟಿಸಿದ್ದಾರೆ. ಆದೇಶ್‌ ಶ್ರೀವಾಸ್ತವ ಎಂಬ ಹೊಸ ತಲೆಮಾರಿನ ಸಂಗೀತ ನಿರ್ದೇಶಕನ ಮೂರು ವರ್ಷದ ಮಗ ಆ ಹಾಡು ಬಂತೆಂದರೆ, ಥೂ ಎಂದು ಕ್ಯಾಕರಿಸಿ ಉಗಿದು ಟೀವಿಯನ್ನು ಆರಿಸುತ್ತಾನಂತೆ.

ರೀಮಿಕ್ಸಿನವರ ಈ ಪರಿಯ ಹಾವಳಿಯನ್ನು ಹೇಗಾದರೂ ತಡೆಗಟ್ಟಲೇಬೇಕು. ಅದು ಹೇಗೆ? ನಿಮಗೆ ಗೊತ್ತಿದ್ದರೆ ಹೇಳಿ.

ಇವನ್ನೂ ಓದಿ
ನನ್ನ ಪಾಡಿಗೆ ನನ್ನನ್ನು ಬಿಡಿ- ಲತಾ ಮಂಗೇಶ್ಕರ್‌
ಕನ್ನಡ ಚಿತ್ರದಲ್ಲಿ ಲತಾ-ಆಶಾ-ಲಕ್ಕಿ ಆಲಿ ಹಾಡು?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada