»   » ಕಟಕಟೆ ಏರಿದ ನಟ ಸುದೀಪ್‌ !

ಕಟಕಟೆ ಏರಿದ ನಟ ಸುದೀಪ್‌ !

Posted By: Staff
Subscribe to Filmibeat Kannada

'ನಾನು ಸತ್ಯವನ್ನೇ ಹೆಳುತ್ತೇನೆ. ಸತ್ಯವನ್ನಲ್ಲದೆ ಇನ್ನೇನನ್ನು ಹೇಳುವುದಿಲ್ಲ. ' 'ದರ್ಶನ್‌ ಪ್ರತಿಭಾನ್ವಿತ ನಟ. ಆತ ಕಷ್ಟಪಟ್ಟು ಮೇಲೆ ಬಂದಿದ್ದಾನೆ. ಅವನು ನನ್ನ ಆತ್ಮೀಯ ಗೆಳೆಯ ಅಲ್ಲದಿದ್ದರೂ ಆತನ ಮೇಲೆ ನನಗೆ ಗೌರವವಿದೆ. ನನ್ನ ಮತ್ತು ಆತನ ಮಧ್ಯೆ ಯಾವುದೇ ಶೀತಲ ಸಮರ ನಡೆಯುತ್ತಿಲ್ಲ.'

- ಹೀಗೆಂದದ್ದು ಕನ್ನಡ ಚಿತ್ರ ನಟ ಸುದೀಪ್‌. ಅವರು ಹೇಳಿಕೆ ನೀಡಿದ್ದು ಕಟಕಟೆಯಲ್ಲಿ ! ... ಗಾಬರಿಗೊಳ್ಳಬೇಡಿ! ಇದು ನಿಜವಾದ ನ್ಯಾಯಾಲಯದ ಕಟಕಟೆಯಲ್ಲ ; ಸಿನಿಮಾ ಶೂಟಿಂಗೂ ಅಲ್ಲ . ಸುದೀಪ್‌ ಮತ್ತೊಂದು ವಿವಾದಕ್ಕೂ ಹೊರಟಿಲ್ಲ. ಇದು ಕಿರಿಯರ ಕಟಕಟೆ. ಸುದೀಪ್‌ ಉತ್ತರಿಸಿದ್ದು ಮಾಸ್ಟರ್‌ ವಕೀಲರುಗಳ ಪ್ರಶ್ನೆಗಳಿಗೆ.

ಬೆಂಗಳೂರಿನ ಮಾಗಡಿ ರಸ್ತೆಯ ಪ್ರಮೀಳಾಬಾಯಿ ಮಾನೆ ಶಾಲೆಯಲ್ಲಿ ಮೇ2ರ ಭಾನುವಾರ ನಡೆದ 'ಕಿರಿಯರ ಕಟಕಟೆ' ಎಂಬ ಅಣಕು ನ್ಯಾಯಾಲಯದ ಕಲಾಪ ಕಾರ್ಯಕ್ರಮವಿದು. ಇಲ್ಲಿ ಸುದೀಪ್‌ ಆರೋಪಿ! ಕಟಕಟೆಯಲ್ಲಿ ನಿಂತು, ಮನಬಿಚ್ಚಿ ಮಾತಾಡಿದ 'ಕಿಚ್ಚ ', ಮಕ್ಕಳೊಂದಿಗೆ 'ಶಿವಯ್ಯ'(ಸ್ವಾತಿಮುತ್ತು)ನಂತೆಯೂ ವರ್ತಿಸಿದ್ದು ವಿಶೇಷ.

ಮರಿವಕೀಲರ ಪ್ರಶ್ನೆಗೆ ಸುದೀಪ್‌ ಉತ್ತರಗಳು...

ನೀವು ಮತ್ತು ದರ್ಶನ್‌ ಜೊತೆಯಾಗಿ ನಟಿಸಲು ಆಫರ್‌ ಬಂದರೆ ನಟಿಸ್ತೀರಾ?

ಇಲ್ಲ , ನಾನು ಚಿತ್ರರಂಗದಲ್ಲಿ ಬೆಳೆಯಬೇಕಾಗಿರುವುದರಿಂದ ಸದ್ಯ ಅಂಥ ತಪ್ಪು ಮಾಡುವುದಿಲ್ಲ. ಏಕೆಂದರೆ ಇಬ್ಬರು ನಾಯಕರ ಕನ್ನಡ ಚಿತ್ರಗಳು ಯಶಸ್ವಿಯಾಗಿಲ್ಲ.

ಕೇವಲ ನಾಯಕಿಯರ ಫೋಟೊ ಮಾತ್ರ ಪ್ರಕಟಿಸುತ್ತೀರಿ. ನನ್ನ ಚಿತ್ರ ಪ್ರಕಟಿಸುತ್ತಿಲ್ಲ ಎಂದು ಪತ್ರಕರ್ತರ ಮೇಲೆ ಹರಿಹಾಯ್ದಿದ್ದೀರಂತೆ, ಹೌದೇ?

ಹೌದು. ಕೆಲವು ಕಾರಣಕ್ಕೆ ಅವರು ನನ್ನ ಫೋಟೋ ಪ್ರಕಟಿಸುತ್ತಿರಲಿಲ್ಲ. ನನಗೆ ಯಶಸ್ಸು ಮತ್ತು ಹೆಸರು ಎರಡು ದಕ್ಕಿರುವಾಗ, ನನ್ನ ಫೋಟೋ ಪ್ರಟಿಸಿ ಎಂದು ಕೇಳುವುದರಲ್ಲಿ ತಪ್ಪೇನಿದೆ.

ನಿಮ್ಮ ಮೊದಲ ಸಿನಿಮಾ ಮತ್ತು ಮೂರನೇ ಸಿನಿಮಾ ಅರ್ಧದಲ್ಲೆ ೕ ನಿಂತಿದೆಯಂತೆ ಹೌದಾ?

ಹೌದು. ಕೆಲವು ಕಾರಣದಿಂದ.

ನಿಮ್ಮನ್ನು 'ಸಿಡುಕ' ಅಂತಾರಲ್ಲ ?

ನಾನು ಪಕ್ಕದ ಮನೆಯವರ ಮಾತಿಗೆ ಸೊಪ್ಪು ಹಾಕುದಿಲ್ಲ. ಮನೆಯವರು ಹಾಗೆ ಹೇಳಿದ್ದರೆ ನನ್ನಲ್ಲೇನೋ ದೋಷವಿದೆ ಎಂದಾಗುತ್ತಿತ್ತು. ಯಶಸ್ಸು ಸಹಿಸಲಾಗದವರು ಹಾಗಂತಾರೆ. ಇದಕ್ಕೆಲ್ಲ ಬೇಸರವಿಲ್ಲ. ಬಿಡಿ...

ಸಿನಿಮಾದಲ್ಲಿ ಅಶ್ಲೀಲತೆ ಯಾಕೆ ತುರುಕುತ್ತಾರೆ?

ನೀವು ಯಾವ, ಎಷ್ಟು ಕನ್ನಡ ಸಿನಿಮಾ ನೋಡಿದ್ದೀರಿ ಹೇಳಿ. (ಮಕ್ಕಳಿಗೆ ಮರುಪ್ರಶ್ನೆ). ಹಿಂದಿ ಅಥವಾ ಇನ್ಯಾವುದೋ ಭಾಷೆಯ ಸಿನಿಮಾ ನೋಡ್ತೀರಿ, ಸುಮ್ಮನೇ ಮಾತಾಡ್ತೀರಿ. ಕೆಲವೊಂದು ಪ್ರೇಕ್ಷಕವರ್ಗ ಅಶ್ಲೀಲ ಸಿನಿಮಾ ನೋಡ್ತಾರೆ. ನೀವೆಲ್ಲ ಒಳ್ಳೆ ಚಿತ್ರ ನೋಡಿ ಪ್ರೋತ್ಸಾಹಿಸಿದರೆ ಅದೆಲ್ಲ ನಿಂತು ಹೋಗುತ್ತದೆ.

ನಿಮ್ಮ ಸಿನಿಮಾಕ್ಕೆ ವಿತರಕರು ಓಡಿ ಬರಲು ಕಾರಣ, ಕಥೇನಾ-ನಾಯಕನಾ?

ಸ್ಟಾರ್‌ ಮೇಲೆ ಜನ ಸಿನಿಮಾ ನೋಡಲು ಬರುವುದಿಲ್ಲ. ಚಿತ್ರದ ಕಥೇನಾ ಪ್ರೇಕ್ಷಕರಿಗೆ ತಿಳಿಸಬೇಕು. ಕೆಲವೊಮ್ಮೆ ಜನರಿಗೆ ಇಷ್ಟವಾಗೋದು ಪತ್ರಕರ್ತರಿಗೆ ಇಷ್ಟವಾಗುವುದಿಲ್ಲ.

ನೀವು 'ಮಕ್ಕಳ ಸಿನಿಮಾ' ಯಾಕೆ ಮಾಡಿಲ್ಲ ?

ವಿತರಕರು, ನಿರ್ಮಾಪಕರು ಕಷ್ಟ ತಗೋಬೇಕಾಗುತ್ತೆ. ನೋಡೋರು ಕಮ್ಮಿ. ಆದರೂ ಮುಂದೆ ಒಂದುದಿನ ಮಕ್ಕಳ ಚಿತ್ರ ಮಾಡ್ತೇನೆ.

ನೀವು 'ಬೋಧನಾತ್ಮಕ' ಸಿನಿಮಾದಲ್ಲೇಕೆ ನಟಿಸಬಾರದು?

ಸಿನಿಮಾ ಮನರಂಜನೆ ಉದ್ದೇಶಿಸಿದ ಮಾಧ್ಯಮ. ಚಿತ್ರ ಮಂದಿರದೊಳಕ್ಕೆ ಬರುವ ವ್ಯಕ್ತಿ ಹಾಡು, ನೃತ್ಯ..... ಎಲ್ಲಾ ವೀಕ್ಷಿಸಿ ಮನಸ್ಸಿನ ಭಾರ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆ ಚಿತ್ರದಲ್ಲಿ ಬೋಧನೆ ಮಾಡಿದ್ರೆ ಪ್ರೇಕ್ಷಕ ಸಿನಿಮಾ ಬಗ್ಗೆ ಆಸಕ್ತಿ ಕಳೆದು ಕೊಳ್ಳಬಹುದು. ಅಂತಹ ಚಿತ್ರಗಳು ಬರಲು ನೀವೆಲ್ಲ ಸೇರಿ ಪ್ರೋತ್ಸಾಹಿಸಬೇಕು.

ಸುದೀಪ್‌ ಹೊಡಿಬಡಿ ಚಿತ್ರದಲ್ಲಿ ನಟಿಸಲ್ವೇ?

ಅಂತಹ ಚಿತ್ರಗಳಲ್ಲಿ ನಟಿಸಿದರೆ ವರ್ಷಕ್ಕಿಷ್ಟು ಅಂತ ಸಿನಿಮಾ ಲೆಕ್ಕ ಕೊಡಬಹುದು. ಆದರೆ ಸಿನಿಮಾ ರಂಗದಲ್ಲಿ ನೆಲೆಯೂರಲು ಆಗುವುದಿಲ್ಲ. ಕಲಾವಿದನಾಗ ಬೇಕು ಎಂಬ ಆಸೆ ... ಮತ್ತೆ ಅಂತ ಚಿತ್ರಗಳಲ್ಲಿ ನಟಿಸಿದರೆ ನೀವೆಲ್ಲಾ ನನ್ನನ್ನು ಕಟಕಟೆಗೆ ಕರೆಯೋದಿಲ್ಲಾ ... (ಚಿಗುರು ಮೀಸೆ ಅಡಿಯಲ್ಲಿ ಒಂದು ... ಕಿರುನಗೆ)

ನೀವು ರಾಜಕೀಯ ಸೇರುತ್ತೀರಾ?

ನನ್ನ ಬಳಿ ಕೆಲವರು ಬಂದು ನೀವು ಎಂ.ಪಿ. ಆಗುತ್ತೀರಾ ಅಂದರು? ಎಂ.ಪಿ. ಎಂದರೆ ಏನು? ಎಂದೆ. ದುಡ್ಡು ಮಾಡಲು ಉತ್ತಮ ಸಾಧನ ಅಂದ್ರು. ಇಲ್ಲೇ ಮಾಡುತ್ತಿದ್ದೇನಲ್ಲ ಎಂದೆ( ಮೆಲ್ಲಗೆ ನಕ್ಕು... ಮತ್ತೆ ಗಂಭೀರವಾಗಿ) ಎಲ್ಲ ರಂಗದಲ್ಲೂ ಭ್ರಷ್ಟಾಚಾರ ಇದೆ. ಭ್ರಷ್ಟರಲ್ಲಿ ಕಡಿಮೆ ಭ್ರಷ್ಟರನ್ನು ಆರಿಸಿ.

ನೀವು ರಾಜಕೀಯ ಸೇರಿದ್ರೆ, ಯಾವ ಪಕ್ಷ ಸೇರ್ತೀರಾ?

ಯಾವ ಪಕ್ಷಾನೂ ಬೇಡ. ನಾವೇ ಒಂದು ಪಕ್ಷ ಮಾಡೋಣ. ಇತರರನ್ನು ನಾವೇ ಮುನ್ನಡೆಸೋಣ.

ಸುದೀಪ್‌ ಯಾವ್‌ ತರಾ ? ಯಾರ ತರಾ ?

ನಾನು ಯಾವ ನಟನನ್ನೂ ಅನುಕರಿಸುತ್ತಿಲ್ಲ . ನನಗೆ ನನ್ನದೇ ಆದ ನಟನೆ ಇದೆ. ಪ್ರತಿ ಸಿನಿಮಾದಲ್ಲೂ ಹೊಸ ಹೊಸ ಪ್ರಯೋಗ ಮಾಡ್ತೇನೆ. '

ವಕೀಲರ ಕೋರಿಕೆ ಮೇರೆಗೆ 'ಸ್ವಾತಿಮುತ್ತು'ನ 'ಮಲಗಿರುವ ಭೂಮಿಗೆ ಚಂದಿರನ ಲಾಲಿ'. 'ರಂಗ(ಎಸ್‌ಎಸ್‌ಎಲ್‌ಸಿ)' ಚಿತ್ರದ 'ಢವ ಢವ ಅಲ್ಲಾ ಕಣೋ...... ರಂಗ ಒಬ್ಬನೇ ಸಾಚಾ ಕಣೋ' ಗೀತೆಯನ್ನು ಸುದೀಪ್‌ ಹಾಡಿದರು.

ಹಿರಿಯ ನ್ಯಾಯಮೂರ್ತಿ ತುಳಸಿ ಶಿವಮಣಿ ಹಾಡುವಂತೆ ಹಾಗೂ ನರ್ತಿಸುವಂತೆ ಆರೋಪಿ ಸುದೀಪ್‌ಗೆ ಆದೇಶಿದರು. ಬಳಿಕ ಸುದೀಪ್‌ ಉತ್ತಮ ನಟ ಎಂದು ತೀರ್ಪಿತ್ತರು.

English summary
Sudeep's personality reveals in mockery court
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada