»   » ಕೋಟೀಶ್ವರನ್‌ ಕಾರ್ಯಕ್ರಮದಲ್ಲಿ ಗೆದ್ದ 10 ಲಕ್ಷ ರೂಪಾಯಿ ಹಣ

ಕೋಟೀಶ್ವರನ್‌ ಕಾರ್ಯಕ್ರಮದಲ್ಲಿ ಗೆದ್ದ 10 ಲಕ್ಷ ರೂಪಾಯಿ ಹಣ

Posted By: Staff
Subscribe to Filmibeat Kannada

ಅದು ಜಯಾ ಟೀವಿಯಲ್ಲಿ ಬಿತ್ತರವಾಗುವ ಕೌನ್‌ ಬನೇಗಾ ಕರೋಡ್‌ಪತಿ ಮಾದರಿಯ 'ಕೋಟೀಶ್ವರನ್‌" ಕಾರ್ಯಕ್ರಮ. ಕಾರ್ಯಕ್ರಮ ನಿರ್ವಾಹಕಿಯ ಮುಂದಿನ ಹಾಟ್‌ ಸೀಟ್‌ನಲ್ಲಿ ಕುಳಿತವರು ಮಾಯಾಮೃಗ ಧಾರಾವಾಹಿಯ ಮೂಲಕ ಮನೆ ಮಾತಾಗಿರುವ ನಟಿ, ಮಾಳವಿಕಾ.

'ಮಾಳವಿಕಾ ಅವರೇ... ಬಂಪರ್‌ ಬಹುಮಾನ 10 ಲಕ್ಷ ರೂಪಾಯಿ ಗೆದ್ದು ಬಿಟ್ಟರೆ ಆ ಹಣದಲ್ಲಿ ಏನು ಮಾಡಬೇಕೆಂದಿದ್ದೀರಿ...?" ಅಮಿತಾಬ್‌ಬಚ್ಚನ್‌ ಶೈಲಿಯಲ್ಲೇ ಕಾರ್ಯಕ್ರಮ ನಿರ್ವಾಹಕಿ ಖುಷ್ಬೂ ಕೇಳಿದ ಈ ಪ್ರಶ್ನೆಗೆ ಮಾಳವಿಕಾ ನಕ್ಕರು. ಅವಿನಾಶ್‌ ಜೊತೆಗೆ ಮಾಲ್ಡೀವ್ಸ್‌ ಗೆ ಹೋಗೋದು, ಸೀರೆ, ಚಿನ್ನ ಖರೀದಿ... ಫ್ಲ್ಯಾಟ್‌ ಕೊಳ್ಳುವುದು...ಊಹೂಂ ಮಾಳವಿಕಾ ಇದ್ಯಾವುದೂ ಹೇಳಲಿಲ್ಲ. ಹಣವನ್ನು ತಮಿಳನಾಡಿನ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟುಬಿಡುತ್ತೇನೆ ಎಂದು ಹೇಳಿ ಎಲ್ಲರನ್ನೂ ದಂಗಾಗಿಸಿದರು.

'ಬೊಗಳೆ ಬಿಡುತ್ತಿದ್ದಾಳೆ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತ, ಅದೆಷ್ಟು ಗೆಲ್ಲುತ್ತಾಳೋ... ನೋಡೇ ಬಿಡೋಣ" ಎಂದು ವೀಕ್ಷಕರು ಪಟ್ಟುಬಿಡದೆ ಟಿವಿ ಮುಂದೆ ಕುಳಿತರೆ, ಪ್ರಶ್ನೆಗಳಿಗೆಲ್ಲ ಪಟಪಟನೆ ಉತ್ತರಿಸಿದ ಮಾಳವಿಕಾ ಗೆದ್ದೇ ಬಿಟ್ಟರಲ್ಲ ಹತ್ತು ಲಕ್ಷ... !!

ಕುಶಾಲಿಗೋ, ಗಂಭೀರವಾಗಿಯೋ ಗೆದ್ದ ಬಹುಮಾನವನ್ನು ಮುಖ್ಯಮಂತ್ರಿಗಳ ಪರಿಹಾರನಿಧಿಗೆ ನೀಡುತ್ತೇನೆ ಎಂದ ಮಾತಿಗೆ ತಪ್ಪಲಾಗುವುದೇ...? ಹತ್ತು ಲಕ್ಷ ರೂಪಾಯಿ ಚೆಕ್‌ ಕೈಲಿ ಹಿಡಕೊಂಡು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಮ್ಮನ ಕಚೇರಿಗೆ ಹೋದರು. ಮಾಳವಿಕಾರ ನಿರ್ಧಾರ ಕೇಳಿ ದಂಗಾಗುವ ಸರದಿ ಜಯಲಲಿತಾರದ್ದು. ಹೆಣ್ಮಕ್ಕಳಿಗೆ ಚಿನ್ನ, ಸೀರೆ, ತರಾವಳಿಯ ಚಪ್ಪಲಿಗಳೆಂದರೆ ಇಷ್ಟ ಎಂಬುದು ಅವರಿಗೂ ಗೊತ್ತಿಲ್ಲವೇ. ಸ್ವಲ್ಪ ವಾದ್ರೂ ಹಣ ನೀನೇ ಇಟ್ಟುಕೊಳ್ಳಮ್ಮ ಎಂದು ಸಲಹೆ ಮಾಡಿದರು. ಆದರೆ ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬಂತೆ ಮಾಳವಿಕಾ ದಿಲ್‌ದಾರ್‌ ಆಗಿ ಚೆಕ್‌ ದಾನ ಮಾಡಿದರು.

ಈಗ ಚೆನ್ನೈನಲ್ಲಿ ಮಾಳವಿಕಾರ ದೊಡ್ಡ ಕಟೌಟ್‌ಗಳು ರೆಡಿಯಾಗುತ್ತಿವೆಯಂತೆ. ಈಗಾಗಲೇ ಕೆ. ಬಾಲಚಂದರ್‌ ಅವರ 'ಅಣ್ಣಿ" ಧಾರಾವಾಹಿಯ ಮೂಲಕ ಮಾಳವಿಕಾ ತಮಿಳರಿಗೆ ಪರಿಚಿತರು. ಆಕೆಯ ದಾನಶೂರ ಗುಣ ನೋಡಿ ಅಭಿಮಾನಿಗಳ ಸಂಖ್ಯೆ ಮುಪ್ಪಟ್ಟುಗೊಂಡಿದೆ.

ಹೆಂಡತಿಯ ಈ ಪರಾಕ್ರಮದ ಬಗ್ಗೆ ಅವಿನಾಶ್‌ಗೂ ತುಂಬಾ ಖುಷಿ.'ಅವಳು ಸಂಪಾದಿಸಿದ ಹಣ. ಒಳ್ಳೆಯ ಕಾರ್ಯಕ್ಕೆ ನೀಡಿದ್ದಾಳೆ. ಆಕೆ ತನ್ನ ನಿರ್ಧಾರ ತಿಳಿಸಿದಾಗ ನಂಗೂ ಸಂತೋಷವಾಯಿತು" ಎಂದು ಬೀಗುತ್ತಾರೆ.

ಬಾಲಂಗೋಚಿ : ಇವತ್ತಲ್ಲ ನಾಳೆ ಮಾಳವಿಕಾ ಎಐಎಡಿಎಂಕೆ ಸೇರುತ್ತಾರೆ, ಅಧಿಕಾರ ರಾಜಕೀಯಕ್ಕೆ ಬರುತ್ತಾರೆ ಎಂದೂ, ಹಣ ದೇಣಿಗೆ ಕೊಡುವ ಅವರ ಈ ಉದಾರತೆ ನಾಳಿನ ಮೇಲೆ ಕಣ್ಣಿಟ್ಟ ಒಂದು ಪಕ್ಕಾ ಸ್ಟಂಟ್‌ ಎಂದೂ ಚೆನ್ನೈನಲ್ಲಿ ಜನ ಮಾತಾಡಿಕೊಳ್ಳುತ್ತಾರೆ.

English summary
Malavika donates 10 lakhs for Tamilnadu CMs relief fund
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada