»   » ದೈನಿಕ ಧಾರಾವಾಹಿ ಮನ್ವಂತರ ದ್ವಿಶತಕ

ದೈನಿಕ ಧಾರಾವಾಹಿ ಮನ್ವಂತರ ದ್ವಿಶತಕ

Posted By: Staff
Subscribe to Filmibeat Kannada

ಟಿ.ಎನ್‌.ಸೀತಾರಾಂ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಸಿ.ಅಶ್ವಥ್‌, ಕಲಾವಿದರಾದ ಹೇಮಾ ಬೆಳ್ಳೂರ್‌, ಸುಂದರ್‌, ಮೇಘನಾ ನಾಡಿಗೇರ್‌, ಸುಧಾ ಬೆಳವಾಡಿ, ಮನ್ವಂತರ ಶೀರ್ಷಿಕೆ ಗೀತೆ ಬರೆದಿರುವ ರಾಧಾ ಕಿನ್ಹಾಳ್‌- ಎಲ್ಲಾ ಕಳೆದ ಸೋಮವಾರ ಮಲ್ಲೇಶ್ವರಂ ಕ್ಲಬ್‌ನಲ್ಲಿ ಜಮಾಯಿಸಿದ್ದರು. ಆದರೆ, ನೆರೆದವರ ದೃಷ್ಟಿ ನೆಟ್ಟಿದ್ದು ಮೊನ್ನೆ ತಾನೆ ಮದುವೆಯಾಗಿರುವ ನಮಸ್ತೆ ಈ ಟೀವಿಯ ಜಯಶ್ರೀ ಎಸ್‌. ರಾಜ್‌ ಮೇಲೆ.

ಮನ್ವಂತರ 200 ನಾಟೌಟ್‌ ಸಂಭ್ರಮ ಆಚರಿಸಲು ನಡೆದ ಕಾರ್ಯಕ್ರಮ ಜಯಶ್ರೀಗೆ ಅಭಿನಂದನೆ ಹೇಳುವ ಅವಕಾಶವಾಗಿ ಮಾರ್ಪಟ್ಟಿತು. ಕಾರ್ಯಕ್ರಮ ಅಪರೂಪದ್ದಾಗಿತ್ತು. ಅದು ಶುರುವಾಗಿದ್ದು ಮನ್ವಂತರದ 200ನೇ ಕಂತನ್ನು ಪ್ರದರ್ಶಿಸುವುದರ ಮೂಲಕ. ಆಮೇಲೆ ಸೀತಾರಾಂ ಮೈಕನ್ನು ಕೈಗೆತ್ತಿಕೊಂಡರು.

ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಸಿದ ಸಂವಾದ ಕಾರ್ಯಕ್ರಮಕ್ಕೆ ಬಂದ ಅಸಂಖ್ಯ ಅಭಿಮಾನಿಗಳೇ ಮನ್ವಂತರದ ಜನಪ್ರಿಯತೆಗೆ ಹಿಡಿದ ಕನ್ನಡಿ. ಮಧ್ಯಮ ವರ್ಗದ ಸಾಮಾನ್ಯ ಜನ, ನ್ಯಾಯ ಪಡೆಯಲು ಅವರ ತೊಳಲಾಟ, ನಾಗರಿಕರು ಹಾಗೂ ಅವರಿಗೆ ನ್ಯಾಯ ದಕ್ಕಿಸಿಕೊಡುವವರ ಸಾಮಾಜಿಕ ಹೊಣೆಗಾರಿಕೆಗಳನ್ನು ಮನ್ವಂತರ ಭಾವನಾತ್ಮಕ ಎಳೆಗಳ ಸಹಿತ ತೆರೆದಿಡುತ್ತಿದೆ. ಜನರ ಜೀವನಕ್ಕೆ ಸನ್ನಿವೇಶಗಳು ತೀರಾ ಹತ್ತಿರವಾಗಿರುವುದೇ ನಮ್ಮ ಧಾರಾವಾಹಿಯ ಆಕರ್ಷಣೆ ಎಂದು ಸೀತಾರಾಂ ಹೇಳಿದಾಗ, ಅವರ ತುಟಿಗಳ ಮೇಲೆ ಸಾರ್ಥಕ ನಗೆಯಿತ್ತು.

ನಟನೆಯ ವಿಷಯದಲ್ಲಿ ರಮೇಶ್‌ ಕುಮಾರ್‌ಗೆ ಇದು ಮೊದಲ ಅನುಭವ. ಅವರು ಈ ಧಾರಾವಾಹಿಗೆ ಆಯ್ಕೆಯಾಗಿದ್ದು ಸ್ವಇಚ್ಛೆಯಿಂದ. 'ಹಲವು ವರ್ಷಗಳ ಹಿಂದೆಯೇ ಸೀತಾರಾಂ ನನಗೆ ನಟನೆಯ ಆಫರ್‌ ಕೊಟ್ಟಿದ್ದರು. ಒಂದು ದಿನ ನಾನೇ ಅವರನ್ನು ನನಗೆ ಅವಕಾಶ ಕೊಡುವುದಾಗಿ ಪ್ರಾಮಿಸ್‌ ಮಾಡಿದ್ದಿರಿ ಎಂದೆ. ತಕ್ಷಣವೇ ಸೀತಾರಾಂ ನನಗೆ ಮನ್ವಂತರದಲ್ಲಿ ಮುಖ್ಯಮಂತ್ರಿಯ ಪಾತ್ರ ಕೊಟ್ಟರು. ನಟನೆ ನನಗೆ ಹೊಸದು. ನನ್ನ ಜೀವನಾನುಭವ ಕಲಿಸಿದ್ದನ್ನೇ ಇಲ್ಲೂ ಅಭಿವ್ಯಕ್ತಿಸಿದ್ದೇನೆ. ಪಾತ್ರಕ್ಕೆ ನಾನು ನ್ಯಾಯ ಸಲ್ಲಿಸಿದ್ದರೆ, ಅಷ್ಟೇ ಸಾಕು" ಎಂದು ರಮೇಶ್‌ ಕುಮಾರ್‌ ಹೇಳಿದರು.

ಸೀತಾರಾಂ, ರಮೇಶ್‌ ಕುಮಾರ್‌ ಮಾತುಗಳ ನಡುವೆಯೂ ಎಲ್ಲರ ಕಣ್ಣು ನೆಟ್ಟಿದ್ದು ಜಯಶ್ರೀ ಮೇಲೆ. ಇನ್ನೂ ಚಿಕ್ಕ ಹುಡುಗಿ, ಇಷ್ಟು ಬೇಗ ಮದುವೆಯಾದಳಲ್ಲ ಎಂಬ ವಿಚಿತ್ರ ಅನುಮಾನ ಕೆಲವರಲ್ಲಿ. ಜಯಶ್ರೀಯನ್ನು ಒಂದೆಡೆ ನಿಲ್ಲಲೇ ಬಿಡುತ್ತಿರಲಿಲ್ಲ. ಎಲ್ಲಾ ದಿಕ್ಕುಗಳಿಂದಲೂ ಶುಭಾಶಯದ ಮಳೆ. ಅಂದಹಾಗೆ, ಜಯಶ್ರೀ ಅಟ್ಲಾಂಟದಲ್ಲಿ ನೆಲೆಸಿರುವ ಗಣೇಶ್‌ ಪ್ರಸಾದ್‌ ಎಂಬ ಎಂಜಿನಿಯರನ್ನು ಮದುವೆಯಾಗಿದ್ದಾರೆ.

ಆಗಾಗ ವರಸೆ ಬದಲಿಸುತ್ತಿರುವ ಈಟಿವಿಯಲ್ಲಿ ಉಳಿಗಾಲ ಕಂಡಿರುವ ಕೆಲವೇ ಧಾರಾವಾಹಿಗಳ ಪೈಕಿ ಮನ್ವಂತರವೂ ಒಂದು. 'ಗರ್ವ"ಗೆ ಬೇಗ ಫುಲ್‌ಸ್ಟಾಪ್‌ ಹಾಕಿದ ಉದಾಹರಣೆ ಇನ್ನೂ ಹಸುರಾಗಿದೆ. ಜಾಹೀರಾತುಗಳನ್ನು ಪಾಪ ಪಾಂಡು ಕೊಳ್ಳೆ ಹೊಡೆದಿರುವುದರಿಂದ ಈಟಿವಿ ಈಗ ಕಾಮಿಡಿ ಮಂತ್ರವನ್ನು ಪಠಿಸುತ್ತಿದೆ. ಗರ್ವ ಜಾಗಕ್ಕೆ ಯದ್ವಾ ತದ್ವಾ ಎಂಬ ಇನ್ನೊಂದು ಕಾಮಿಡಿ ಬರುತ್ತಿದೆ. ಜನರಿಗೆ ಕಚಗುಳಿ ಇಡುತ್ತಲೇ ಬೊಕ್ಕಸ ತುಂಬಿಸಿಕೊಳ್ಳುವ ಈಟಿವಿಯ ಹೊಸ ವರಸೆ ಕಾಯೋ ಹಣ್ಣೋ ಕಾಲವೇ ಹೇಳಬೇಕು!
ವಾರ್ತಾ ಸಂಚಯ

English summary
Jayashri steals show as Manvanthara turns 200
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada