»   » ಕನ್ನಡ ಧ್ಯಾನ್‌, ಹಿಂದಿ ಸಮೀರ್‌ನಾದ..

ಕನ್ನಡ ಧ್ಯಾನ್‌, ಹಿಂದಿ ಸಮೀರ್‌ನಾದ..

Posted By: Staff
Subscribe to Filmibeat Kannada

ಕನ್ನಡದ ಚಿತ್ರ ನಟರಲ್ಲಿ ಚಾಕಲೇಟ್‌ ಹೀರೋಗಳಿಗೇನೂ ಕಮ್ಮಿಯಿಲ್ಲ. ಅವರ ಸಾಲಿಗೆ ಮಿಂಚುಗಣ್ಣಿನ, ಸದಾ ಲವಲವಿಕೆಯಿಂದ ಕೂಡಿರುವ ಧ್ಯಾನ್‌ ಕೂಡ ಸೇರಿದ್ದಾನೆ. 'ನನ್ನ ಪ್ರೀತಿಯ ಹುಡುಗಿ" ಚಿತ್ರದಿಂದ 'ಕಾರ್‌.. ಕಾರ್‌.. ಕಾರ್‌.. ಎಲ್ನೋಡಿ ಕಾರ್‌.." ಎಂದು ಹಾಡುತ್ತ ಬಂದು ಪ್ರೇಕ್ಷಕರನ್ನು ರಂಜಿಸಿ ಕಣ್ಮರೆಯಾಗಿದ್ದ ಈ ಹುಡುಗನನ್ನು ಇಂದ್ರಜಿತ್‌ ಲಂಕೇಶ್‌ ಅವರು ಪುನಃ 'ಕಾರ್‌.. ಕಾರ್‌.. ಹುಡ್ಗ ಬಂದ.. " ಎಂದು ಹೇಳುತ್ತಲೇ 'ಮೊನಾಲಿಸಾ" ಚಿತ್ರದ ಮೂಲಕ ಕರೆ ತಂದಿದ್ದಾರೆ.

ಧ್ಯಾನ್‌ ಇನ್ನೂ 22 ವರ್ಷ ವಯಸ್ಸು. ನೋಡಿದರೆ 18 ವರ್ಷದವನಂತೆ ಕಾಣುತ್ತಾನೆ. ನನ್ನ ಸ್ನೇಹಿತರೆಲ್ಲ ನಾನು ನನ್ನ ವಯಸ್ಸಿಗಿಂತ ತುಂಬ ಚಿಕ್ಕವನ ಥರಾ ಕಾಣಿಸ್ತೀನಿ ಅಂತ ಹೇಳ್ತಾರೆ. ಇದು ನನ್ನ ಅಡ್ವಾಂಟೇಜ್‌ ಅಂತ ಭಾವಿಸ್ತೀನಿ. ಇದಕ್ಕೇ ನನಗೆ ಹಿಂದಿಯಲ್ಲೂ ಛಾನ್ಸ್‌ ಸಿಕ್ಕಿದ್ದು ಎಂದು ಹೇಳುತ್ತಾನೆ ಈ ಪೋರ.

ಸ್ಕೇಟ್‌ ಚಾಂಪಿಯನ್‌ ಅಗಿರುವ ಧ್ಯಾನ್‌, 'ಮೊನಾಲಿಸಾ" ಚಿತ್ರದಲ್ಲೂ ತನ್ನ ಸ್ಕೇಟ್‌ ಚಾತುರ್ಯವನ್ನು ತೋರಿಸಿದ್ದಾನೆ. ಕಳೆದ ವಾರ ಬಿಡುಗಡೆಗೊಂಡ ರಾಜಶ್ರೀ ಪ್ರೊಡಕ್ಷನ್‌ನ ಹಿಂದಿ ಚಿತ್ರ 'ಉಫ್‌.. ಕ್ಯಾಜಾದೂ ಮೊಹಬ್ಬತ್‌ ಹೈ"ನಲ್ಲಿ ಧ್ಯಾನ್‌ ಸಮೀರ್‌ ಆಗಿದ್ದಾನೆ. ಹಿಂದಿ ಚಿತ್ರ ರಸಿಕರಿಗೆ ಧ್ಯಾನ್‌ ಅಂದರೆ ತಿಳಿಯದು. ಸಮೀರ್‌ ಅಂದರೆ ಮಾತ್ರ ಗೊತ್ತಾಗುವುದು. ಇದೇ ರಾಜಶ್ರೀ ಪ್ರೊಡಕ್ಷನ್ಸ್‌ನವರು 14 ವರ್ಷದ ಹಿಂದೆ 'ಮೈನೆ ಪ್ಯಾರ್‌ ಕಿಯಾ" ಚಿತ್ರದ ಮೂಲಕ ಸಲ್ಮಾನ್‌ ಖಾನ್‌ನನ್ನು ಚಿತ್ರರಂಗಕ್ಕೆ ಪರಿಚಯಿಸಿತ್ತು. ಹಾಗಾದರೆ ಸಮೀರ್‌ ಮೂಲಕ ಮತ್ತೊಬ್ಬ ಸಲ್ಮಾನ್‌ ಹೊರ ಬರುವನೇ?

ನಾನು ದಿನಕ್ಕೆರಡು ಸಿನಿಮಾ ನೋಡುತ್ತೇನೆ. ಸಿನಿಮಾ ಶೂಟಿಂಗ್‌ ಸಮಯದಲ್ಲಂತೂ ಸಿಕ್ಕಾಪಟ್ಟೆ ಗ್ರೌಂಡ್‌ ವರ್ಕ್‌ ಮಾಡಬೇಕಾಗುತ್ತೆ. ಅಮಿತಾಬ್‌ ಬಚ್ಚನ್‌ರಿಂದ ಹ್ರಿತಿಕ್‌ ರೋಶನ್‌ವರೆಗೆ ಎಲ್ಲರ ಚಿತ್ರಗಳನ್ನೂ ನೋಡುತ್ತೇನೆ ಎಂದು ಹೇಳುವ ಧ್ಯಾನ್‌ ಆಲಿಯಾಸ್‌ ಸಮೀರ್‌ ಮಾತುಗಳಲ್ಲಿ ಕನ್ನಡ ಸಿನಿಮಾ ಬಗೆಗೆ ಅಷ್ಟು ಒಲವು ಕಾಣಿತ್ತಿರಲಿಲ್ಲ. 'ಉಫ್‌.. ಕ್ಯಾಜಾದೂ..." ಸಿನಿಮಾದಿಂದ ಜನರು ಸಮೀರ್‌ನನ್ನು ಗುರುತಿಸುತ್ತಾರೋ ಇಲ್ಲವೋ ಎಂದು ಕಾದು ನೊಡಬೇಕು.

ಸಮೀರ್‌ ಕುಟುಂಬದವರು ಬಟ್ಟೆ ವ್ಯಾಪಾರಿಗಳು. ಹೀಗಾಗಿ ಈ ಹುಡುಗ ಹಣ ಗಳಿಸುವುದಕ್ಕಾಗಿ ಚಿತ್ರರಂಗಕ್ಕಿಳಿದಿಲ್ಲ. ದುಡ್ಡು ಮಾಡುವುದು ದೊಡ್ಡ ವಿಷಯವಲ್ಲ. ಮನಸ್ಸಿಗೆ ಸಂಪೂರ್ಣ ತೃಪ್ತಿ ಸಿಗುವ ಮಾರ್ಗದಲ್ಲಿಯೇ ಹಣ ಗಳಿಸಬೇಕು. ದುಡ್ಡನ್ನು ಯಾರು ಮಾಡಲ್ಲ? ಸಾಫ್ಟ್‌ವೇರ್‌ ಇಂಜಿನಿಯರೂ ಗಳಿಸುತ್ತಾನೆ, ದರೋಡೆಕೋರನೂ ಗಳಿಸುತ್ತಾನೆ.

'ನಾನು ದುಡ್ಡಿಗೆ ಮಹತ್ವ ಕೊಡುವವನಲ್ಲ. ದುಡ್ಡು ಇವತ್ತು ಇರುತ್ತೆ, ನಾಳೆ ಹೋಗುತ್ತೆ"- ಎಂಬ ಪಾಲಿಸಿಯ ಸಮೀರ್‌ ಆಲಿಯಾಸ್‌ ಕನ್ನಡಿಗರ ಧ್ಯಾನ್‌ ಗೆಲ್ಲಲಿ, ಹೆಸರು ಮಾಡಲಿ. ಅದೂ ಕನ್ನಡ ಚಿತ್ರರಂಗಕ್ಕೆ ತನ್ನ ಹೆಚ್ಚಿನ ಕೊಡುಗೆ ನೀಡಲಿ ಎಂದು ದಟ್ಸ್‌ ಕನ್ನಡ ಹಾರೈಸುತ್ತದೆ.

English summary
Dhyan tries his luck in Hindi as Sameer
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada