»   » ‘ವಿಷ್ಣು ನಾಯಕಿಯಾಗಲ್ಲ ಅಂತ ನಾನೆಲ್ಲಿ ಹೇಳಿದ್ದೆ’

‘ವಿಷ್ಣು ನಾಯಕಿಯಾಗಲ್ಲ ಅಂತ ನಾನೆಲ್ಲಿ ಹೇಳಿದ್ದೆ’

Subscribe to Filmibeat Kannada

*ವಿಘ್ನೕಶ್ವರ ಕುಂದಾಪುರ

ಅಭಿನವ ಮಾಲಾಶ್ರೀ ಅಂತ ಕರೆಸಿಕೊಳ್ಳುತ್ತಿರುವ, ಕನ್ನಡ ಚಿತ್ರಲೋಕದಲ್ಲಿ ಇವತ್ತು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕಿ ರಾಧಿಕ ಕೋಪ ಮಾಡಿಕೊಂಡಿದ್ದರು. ರವಿಚಂದ್ರನ್‌ ಹಾಗೂ ವಿಷ್ಣುವರ್ಧನ್‌ ಅವರು ಅಂಕಲ್‌ ಥರ. ಅವರ ಜೊತೆ ನಟಿಸಲ್ಲ ಅಂತ ತಾವು ಹೇಳಿದ್ದಾಗಿ ಪುಗ್ಗ ಸುದ್ದಿ ಹಬ್ಬಿಸಿದ್ದ ಗಾಂಧಿನಗರಕ್ಕೆ ಹಿಡಿ ಶಾಪ ಹಾಕಿದರು.

ಶಾಪಕ್ಕೆ ಅವರು ಕೊಟ್ಟ ಸ್ಪಷ್ಟೀಕರಣ ಹೀಗಿತ್ತು- ‘ನಾನು ರವಿಚಂದ್ರನ್‌, ವಿಷ್ಣುವರ್ಧನ್‌ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು. ಶಿವರಾಜ್‌ಕುಮಾರ್‌ ಜೊತೆ ತವರಿಗೆ ಬಾ ತಂಗಿ ನಟಿಸಿದೆ. ಅದು ಬಾಕ್ಸಾಫೀಸಿನ ದಾಖಲೆಗಳನ್ನು ಮುರಿದು ಬಿಸಾಕಿದ್ದು ಎಲ್ಲರಿಗೂ ಗೊತ್ತೇ ಇದೆ. ನನಗೆ ರವಿಚಂದ್ರನ್‌ ಅಥವಾ ವಿಷ್ಣುವರ್ಧನ್‌ ಸಿನಿಮಾಗೆ ನಾಯಕಿಯಾಗಿ ನಟಿಸುವ ಆಫರನ್ನು ಯಾರೂ ಕೊಟ್ಟಿಲ್ಲ. ಯಾರೋ ಕೆಲವರು ಹೃದಯವಂತ ಚಿತ್ರದಲ್ಲಿ ವಿಷ್ಣು ಅವರ ತಂಗಿಯಾಗಿ ರಾಧಿಕ ನಟಿಸುತ್ತಾರಾ ಅಂತ ನನ್ನ ಅಪ್ಪನ ಹತ್ತಿರ ಕೇಳಿದ್ದರು. ಆದರೆ ಆಗ ನಾನು ತಾಯಿಯಿಲ್ಲದ ತಬ್ಬಲಿ ಮತ್ತು ಹುಡುಗಿಗಾಗಿ ಚಿತ್ರಗಳನ್ನು ಒಪ್ಪಿಕೊಂಡಿದ್ದೆ. ಕಾಲ್‌ಷೀಟ್‌ಖಾಲಿ ಇರಲಿಲ್ಲ. ಹೀಗಾಗಿ ಪಾತ್ರ ಒಪ್ಪಿಕೊಳ್ಳಲಿಲ್ಲ. ಇವತ್ತೂ ಯಾರಾದರೂ ಬಂದು ವಿಷ್ಣು ಅವರ ಚಿತ್ರದ ನಾಯಕಿ ನೀನೇ ಅಂದರೆ ಅದಕ್ಕೆ ಒಲ್ಲೆ ಅನ್ನಲು ನಾನು ಮೂರ್ಖಳಲ್ಲ. ವಿಷ್ಣು ಅವರ ನಾಯಕಿಯಾಗೋಕಿಂತ ಬೇರೆ ಭಾಗ್ಯವಿದ್ದೀತೇ?’

ರಾಧಿಕಾ ಈ ರೀತಿ ಕ್ಲಾರಿಫಿಕೇಷನ್ನು ಕೊಟ್ಟರೂ ಈಕೆಗೆ ಇಮೇಜ್‌ ಭೂತ ಮೆಟ್ಟಿಕೊಂಡಿದೆ ಅಂತ ಕಾನಿಷ್ಕಾ ಅಂಗಳದಲ್ಲಿ ಪಟ್ಟಾಂಗ ಶುರುವಾಗಿದೆ. ಸದ್ಯಕ್ಕೆ ಪ್ರೇಮಾ, ಅನು ಪ್ರಭಾಕರ್‌, ರಕ್ಷಿತಾ ಸರ್ವರನ್ನೂ ರನ್ನಿಂಗ್‌ ರೇಸಲ್ಲಿ ಸೋಲಿಸಿರುವ ರಾಧಿಕಾ ನಟನೆಯ ಸುಮಾರು ಅರ್ಧ ಡಜನ್ನು ಸಿನಿಮಾಗಳು ಡಬ್ಬದಲ್ಲಿ ಬಿಡುಗಡೆಗಾಗಿ ಕೂತಿವೆ. ಸಾಯಿ ಪ್ರಕಾಶ್‌ ನಿರ್ದೇಶನದ ಮನೆ ಮಗಳು ಚಿತ್ರದ ರಾಧಿಕಾ ನಟನೆಯನ್ನು ವಿಜಯ ರಾಘವೇಂದ್ರ ಹಾಗೂ ರಕ್ಷಿತಾ ಕೊಂಡಾಡಿದ್ದಾರೆ. ‘ನಮ್ಮ ಪ್ರೀತಿಗೆ ಜಯ’ ಸಿನಿಮಾ ಬಗ್ಗೆ ರಾಧಿಕಾಗೆ ನಿರೀಕ್ಷೆಯಿದೆ. ಜಂಭದ ಕೋಳಿ ಸಿನಿಮಾದಲ್ಲಿ ಡ್ಯೂಪಿಲ್ಲದೆ ಫೈಟ್‌ ಮಾಡಿದ ಪರಿಯನ್ನು ತಂತಾವೇ ಹೇಳಿಕೊಂಡು, ರಾಧಿಕಾ ಮೆಚ್ಚುಗೆಯನ್ನೂ ಕೊಟ್ಟುಕೊಳ್ಳುತ್ತಾರೆ.

ಇಂತಿದ್ದರೂ ರಾಧಿಕಾ ಲಕ್ಕು ಲಕಲಕಿಸುತ್ತಿದೆ. ಸಿಲ್ಲಿ ಅನ್ನಿಸುವ ಊ..ಲಾ..ಲಾ ಚಿತ್ರದ ಕಲೆಕ್ಷನ್ನು ಜೋರಾಗಿದೆ. ತಾಯಿಯಿಲ್ಲದ ತಬ್ಬಲಿ ಸೋತಿದೆ ಎಂಬ ರಿಪೋರ್ಟ್‌ಗಳನ್ನು ವಿತರಕರೇ ತಳ್ಳಿಹಾಕುತ್ತಾ, ನಷ್ಟವಾಗಿಲ್ಲ ಅಂತ ತಮಟೆ ಸಾರುತ್ತಿದ್ದಾರೆ. ಜೊತೆಗೆ ಗಂಡನಿಂದ ನೊಂದು, ಅವನನ್ನು ಕಳಕೊಂಡು, ಅಪ್ಪನ ಸಾಲದ ಹೊರೆಯನ್ನು ಹೆಗಲ ಮೇಲೆ ಹೊತ್ತ ನತದೃಷ್ಟೆ ಎಂಬ ಅನುಕಂಪದ ಅದೃಷ್ಟವೂ ರಾಧಿಕಾ ಪಾಲಿಗಿದೆ. ಎಸ್ಪಿ ಬಾಲು ಪುತ್ರ ಚರಣ್‌ ಜೊತೆ ನಾಯಕಿಯಾಗಿರುವ ‘ಹುಡುಗಿಗಾಗಿ’ ಚಿತ್ರ ಬಿಡುಗಡೆಯಾದ ಮೊದಲ ದಿನ ಹೌಸ್‌ಫುಲ್‌ ಆಗಿರುವ ಸುದ್ದಿ ಬಂದಿದೆ. ಸದ್ಯಕ್ಕೆ ಆಕೆ ದುಡ್ಡು ದಕ್ಕಿಸಿಕೊಡುತ್ತಿರುವ ಚಮಕ್‌ ಚಲ್ಲೋ. ದುಡ್ಡು ಹಾಕಿ ನೋಡಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada