»   » ಚಿತ್ರ ಸಾಹಿತಿ ಕಲ್ಯಾಣ್‌ರ ಒಂದು ದಿನ..

ಚಿತ್ರ ಸಾಹಿತಿ ಕಲ್ಯಾಣ್‌ರ ಒಂದು ದಿನ..

Subscribe to Filmibeat Kannada

*ಬಾಷಗೂಳ್ಯಂ

‘ಜೆಟ್‌ ವಿಮಾನದಂತೆ ತಿರುಗುತಿದೆ ಕಾಲಚಕ್ರ. ನಗರಗಳಲ್ಲಿ ಮಾನವೀಯ ಸಂಬಂಧಗಳೂ ಮಸುಕು ಮಸುಕು.‘ಲೋ, ಹಾಯ್‌’ ಉಚ್ಚಾರವೂ ಒರಟೊರಟು. ಇಂತಹ ಕರ್ಕಶ ಕುಶಲೋಪರಿ ನಡುವೆ ‘ಮಧುರ’ ಹಾಗೂ ಲಾಲಿತ್ಯ ಪದಗಳ ಅನವೇಷಣೆಯಲ್ಲಿ ಟೈಂಪಾಸ್‌ ಮಾಡುವುದೆಂದರೆ ನನಗೆ ಖುಷಿಯೋ ಖುಷಿ’ ಎನ್ನುತ್ತಾರೆ ಚಿತ್ರ ಸಾಹಿತಿ ಕಲ್ಯಾಣ್‌.

ಕಲ್ಯಾಣ್‌ ಹೇಳುತ್ತಾರೆ : ನಾನು ಮಲಗುವುದು ಮಧ್ಯರಾತ್ರಿಯಾದರೂ ಏಳುವುದು ಮಾತ್ರ ಬೆಳ್ಳಂಬೆಳಗ್ಗೆ. ಅತ್ಯುತ್ತಮ ಟ್ಯೂನ್‌ ಹಾಗೂ ಹೃದಯ ಸ್ಪರ್ಶಿ ಸನ್ನಿವೇಶದ ಹಾಡು ಬರೆಯಬೇಕಾದರೆ ಇನ್ನೂ ಬೇಗೆ ಏಳುವೆ. ಮೂಡಣ ಕೆಂಪಾಗುವ ಮುನ್ನ ಬೀಸುವ ತಂಗಾಳಿಗೆ ಹೃದಯ ತನಗೆ ತಾನೇ ತನನೋಂ ಅನ್ನುತ್ತದೆ. ಉಳಿದವರು ಹೇಗೋ ಗೊತ್ತಿಲ್ಲ. ನಾನಂತೂ ಸರಸ್ವತಿಯ ಆರಾಧಕ. ಆಕೆಯನ್ನು ಸ್ಮರಿಸಿ ಶೃತಿ ನಡೆಸಿದರೆ ಹೊಸದೊಂದು ಹಾಡು ಹೊಳೆದೇ ಬಿಡುತ್ತದೆ. ಅಷ್ಟರಲ್ಲಿ ನನ್ನ ತಾಯಿಯಿಂದ ಖಡಕ್‌ ಕಾಫಿ. ದೇಗುಲಗಳಲ್ಲಿ ಸುಪ್ರಭಾತ ಕೇಳಿ ಬರುವುದರೊಳಗೆ ಹಾಡು ರೆಡಿ ಎನ್ನುವಾಗ ಕಲ್ಯಾಣರ ತುಟಿ ಮೇಲೆ ನಗೆಯ ನವಿಲು.

ನಂತರ ಸ್ನಾನ, ಪೂಜೆ, ಒಂದೆರೆಡು ತಾಸು ಅಂತರಂಗದಲ್ಲಿ ಆಧ್ಯಾತ್ಮ ಮಥನ ಇತ್ಯಾದಿ. ಜೊತೆ ಜೊತೆಗೆ ನನ್ನದೇ ಆದ ಆಪ್ತ ಹವ್ಯಾಸ ಬೆನ್ನಟ್ಟುತ್ತದೆ. ಮಲ್ಲಿಗೆ ಪರಿಮಳದ ಕವಿ ಕೆಎಸ್‌ನ, ರಸ ಋಷಿಯ ಕುವೆಂಪು, ವರಕವಿ ಬೇಂದ್ರೆ ಕವಿತೆಗಳ ಆಪ್ಯಾಯತೆ ಆಸ್ವಾದಿಸದ ದಿನ ದಿನವೇ ಅಲ್ಲ. ಅದೇ ರೀತಿ ಕುಮಾರವ್ಯಾಸ, ಪಂಪ, ರನ್ನರನ್ನು ಅವಲೋಕಿಸದಿದ್ದರೆ ಹೇಗೆ ಹೇಳಿ ಎಂಬ ಪ್ರಶ್ನೆ ಹಾಕುತ್ತಾರೆ ಕಲ್ಯಾಣ್‌.

ಸ್ಟುಡಿಯೋ, ರೆಕಾರ್ಡಿಂಗ್‌, ನಿರ್ದೇಶಕರ ನಲ್ಮೆ, ನಿರ್ಮಾಪಕರ ಒಲವು ಹಾಗೂ ಅಭಿಮಾನಿಗಳ ಮೆಚ್ಚುಗೆ ನನ್ನ ಮುಂದಿರುವಾಗ ದಿನ ಉರುಳಿದ್ದೇ ಗೊತ್ತಾಗೋದಿಲ್ಲ. ಗೊಂದಲದ ನಡುವೆಯೂ ಮೂಡ್‌ ಬಂದ್ರೆ ಷಾಪಿಂಗ್‌ ಕೆಂಪ್‌ ಪೋರ್ಟ್‌ಗೆ ಹೋಗ್ತೇನೆ. ಗುರು ಹಂಸಲೇಖರ ಹಿತ ನುಡಿ ಕೇಳ್ತೇನೆ. ಆದ್ರೆ ಒಂದ್‌ ವಿಷಯ ; ನಾನೆಲ್ಲೇ ಸುತ್ತುತ್ತಿರಲಿ ಹಸಿವಾದ್ರೆ ಸೀದಾ ಮನೆಗೆ ಬರ್ತೀನಿ. ತಾಯಿ ಮಾಡಿದ ಅಡುಗೆ ನಂಗೆ ರುಚಿಯೋ ರುಚಿ !

‘ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಪ್ರತಿ ಸಲ ಇಲ್ಲಿಗೆ ಬಂದಾಗ ಮನೆಗೆ ಫೋನಾಯಿಸುತ್ತಾರೆ. ಗಾಯಕಿ ಚಿತ್ರಾ ಅವರೂ ಮನೆಗೆ ಬರ್ತಾರೆ. ಅಂಥ ಹೃದಯವಂತರ ಜತೆ ಕ್ಷಣ ಕಾಲ ಕಳೆಯುವುದು ನಂಗೆ ತುಂಬ ತುಂಬ ಇಷ್ಟ. ಆದ್ರೆ ಎಸ್ಪಿಯವರು ತೀರ ಜಿದ್ದಿಗೆ ಬಿದ್ದು ‘ಮದುವೆ’ ಬಗ್ಗೆ ಮಾತನಾಡಿದಾಗ ನನಗೆ ಎಲ್ಲಿಲ್ಲದ ಕಸಿವಿಸಿ ಆಗಿಬಿಡ್ತದೆ ಎನ್ನುತ್ತ ಕಲ್ಯಾಣ್‌ ಮಾತು ಮುಗಿಸಿದರು.

ಮದುಮಗನಾಗುವುದು ಯಾವಾಗ ಎಂಬ ಪ್ರಶ್ನೆಗೆ ಕಿಲ ಕಿಲ ನಕ್ಕರು !

(ಸ್ನೇಹ ಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...