»   » ಮನ್ಮಥ ಚಿತ್ರಕ್ಕೆ ಪ್ರೇಕ್ಷಕರಿಂದ ಶಬಾಸ್‌ಗಿರಿ : ಜಗ್ಗೇಶ್ ಸಂತಸ

ಮನ್ಮಥ ಚಿತ್ರಕ್ಕೆ ಪ್ರೇಕ್ಷಕರಿಂದ ಶಬಾಸ್‌ಗಿರಿ : ಜಗ್ಗೇಶ್ ಸಂತಸ

Subscribe to Filmibeat Kannada


ಬಿಡುಗಡೆಯ ಮೊದಲ ದಿನದ ಮೂರೂ ಆಟಗಳನ್ನು ಪ್ರೇಕ್ಷಕರರೊಂದಿಗೆ ಕುಳಿತು ಆನಂದಿಸಿದ ಬಳಲಿಕೆ ಅವರ ಕಣ್ಣುಗಳಲ್ಲಿ ಮನೆಮಾಡಿತ್ತು. ಆದರೂ ಜನ ತನ್ನ ನಟನೆಯನ್ನು ಮೆಚ್ಚಿಕೊಂಡಿರುವರಲ್ಲ ಎಂಬ ಸಾರ್ಥಕ ಭಾವ ಮುಖದಲ್ಲಿ ಮಂದಹಾಸ ಜಿನುಗಿಸಿತ್ತು.

ಮನ್ಮಥ ಚಿತ್ರದ ಪ್ರಥಮ ಮೂರು ಶೋಗಳನ್ನು ಪ್ರೇಕ್ಷಕರಲ್ಲಿ ಪ್ರೇಕ್ಷಕರಾಗಿ ನೋಡಿಬಂದ ನಂತರ ಜಗ್ಗೇಶ್ ತಮ್ಮ ಸಂತಸ ಹಂಚಿಕೊಳ್ಳಲು ಶುಕ್ರವಾರ ಸಾಯಂಕಾಲ ಗ್ರೀನ್‌ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು.

ತಮ್ಮ ಯಾವ ಚಿತ್ರವನ್ನೂ ಬೆಳ್ಳಿತೆರೆಯ ಮೇಲೆ ಪ್ರಥಮ ದಿನವೇ ನೋಡದ ಜಗ್ಗೇಶ್ ತಮ್ಮ ಹೃದಯಕ್ಕೆ ಹತ್ತಿರವಾದ ಪಾತ್ರವಿರುವ, ಅತ್ಯಂತ ನಿರೀಕ್ಷೆಯ ಮನ್ಮಥ ಚಿತ್ರವನ್ನು ಹದಿನಾರು ವರುಷಗಳ ನಂತರ ಥಿಯೇಟರ್‌ನಲ್ಲಿ ಕುಳಿತು ನೋಡಿದ್ದಾಗಿ ಹೇಳಿದರು. ಭಂಡ ನನ್ನ ಗಂಡ ನಂತರ ಚಿತ್ರಮಂದಿರದಲ್ಲಿ ಕುಳಿತು ನೋಡಿದ ಪ್ರಥಮ ಚಿತ್ರ ಇದು.

ಬೆಂಗಳೂರು ಮಾತ್ರವಲ್ಲದೇ ದಾವಣಗೆರೆ, ಹಾಸನ, ಶಿವಮೊಗ್ಗ, ಬಳ್ಳಾರಿಗಳಲ್ಲಿ ಪ್ರಥಮ ಮೂರು ಪ್ರದರ್ಶನಗಳೂ ಹೌಸ್‌ಫುಲ್ ಎಂದು ಹೇಳಿದಾಗ ಪಕ್ಕದಲ್ಲಿ ಕುಳಿತಿದ್ದ ನಿರ್ದೇಶಕ ರಾಜೇಶ್ ಫರ್ನಾಂಡಿಸ್ ಮತ್ತು ನಿರ್ಮಾಪಕ ಕ್ವಾಡ್ರರ್ಸ್ ಮೊಗದಲ್ಲಿಯೂ ಮನ್ಮಥ ಮಂದಹಾಸ.

ಅತ್ಯಂತ ಶ್ರದ್ಧೆಯಿಂದ ತಯಾರಿಸಿದ ಚಿತ್ರವನ್ನು ಈಗ ಪ್ರೇಕ್ಷಕರ ಮತ್ತು ಪತ್ರಕರ್ತರ ಮಡಿಲಿಗೆ ಹಾಕಿದ್ದೇವೆ. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದ್ದರೂ ಪತ್ರಿಕೆಗಳಲ್ಲಿ ವಿಮರ್ಶೆಗಳನ್ನು ಓದಿ ಬರುವ ಪ್ರೇಕ್ಷಕ ವರ್ಗವೂ ಇದೆ ಎಂದಾಗ ಯಾಕೋ ಚಿಂತೆಯ ಎರಡೆಳೆ ಅವರ ಹಣೆಯಲ್ಲಿ ಮೂಡಿ ಮಾಯವಾಯಿತು.

ಉತ್ತಮ ಓಪನಿಂಗ್ ನಟನಿಗೆ, ನಿರ್ಮಾಪಕನಿಗೆ ಶಕ್ತಿಕೊಟ್ಟಂತಾಗುತ್ತದೆ. ಪ್ರತಿ ಡೈಲಾಗಿಗೆ ಪ್ರೇಕ್ಷಕರಿಂದ ಚಪ್ಪಾಳೆ ಮತ್ತು ನಗು ತಮಗೆ ಸಂತಸ ತಂದಿದೆ. ಇಷ್ಟೊಂದು ಕಷ್ಟಪಟ್ಟು ಚಿತ್ರಿಸಿದರೂ ನಿರ್ಮಾಪಕ ಸ್ಪಿರಿಟ್ ಕಳೆದುಕೊಂಡಿಲ್ಲ ಮತ್ತು ಪ್ರೇಕ್ಷಕರಿಂದಲೂ ಶಭಾಸ್‌ಗಿರಿ ಸಿಕ್ಕಿದೆ ಎಂದು ಜಗ್ಗೇಶ್ ಸಂತಸ ವ್ಯಕ್ತಪಡಿಸಿದರು.

ಚಿತ್ರ ಪ್ರದರ್ಶನಗಳನ್ನು ಸುಗಮಗೊಳಿಸಲಿಕ್ಕಾಗಿ ಆಗಸ್ಟ್ 23ರಂದು ಸ್ಕ್ರೀನಿಂಗ್ ಕಮಿಟಿ ಸೇರುತ್ತಿದ್ದು ನಿರ್ಮಾಪಕರು ತದನಂತರ ಧೈರ್ಯವಾಗಿ ಚಿತ್ರಪ್ರದರ್ಶಿಸಬಹುದು ಎಂದು ಆಶಾಭಾವನೆ ಜಗ್ಗೇಶ್ ವ್ಯಕ್ತಪಡಿಸಿದರು.

ಒಳ್ಳೆಯ ಚಿತ್ರಮಂದಿರ ಸಿಗಲು ಸಹಕಾರ ನೀಡಿದ್ದಕ್ಕೆ ಜಗ್ಗೇಶ್ ಅವರಿಗೆ ಆಭಾರಿಯಾಗಿದ್ದೇನೆ ಎಂದು ನಿರ್ಮಾಪಕ ರೈಮಂಡ್ ಕ್ವಾಡ್ರಸ್ ನುಡಿದರು. ತಾವೇ ನಿರ್ಮಿಸಿದ ಕೊಂಕಣಿ ಚಿತ್ರ ಪಾದ್ರಿ ಮತ್ತು ತುಳು ಭಾಷೆಯ ಬದಿಗೆ ಪ್ರಶಸ್ತಿ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿದ್ದ ಪಾದ್ರಿ ಮತ್ತು ಬದಿ ಚಿತ್ರ ನಿರ್ದೇಶಕ ರಿಚರ್ಡ್ ಕ್ಯಾಸ್ಟೋಲಿನ್, ಬದಿ ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada