»   » ಸರಿ, ನಾ ಹೋಗಿ ಬರುವೆ- ರಕ್ಷಿತಾ

ಸರಿ, ನಾ ಹೋಗಿ ಬರುವೆ- ರಕ್ಷಿತಾ

Posted By:
Subscribe to Filmibeat Kannada
  • ರಘುನಾಥ ಚ.ಹ.
ಅದ್ಯಾವ ಗಳಿಗೆಯಲ್ಲಿ ಮೋಡ ಬಿತ್ತನೆಯ ವಿಮಾನ ಅಮೆರಿಕದಿಂದ ಬೆಂಗಳೂರಿನ ಜಕ್ಕೂರಿನ ಬಯಲಿಗೆ ಬಂದಿಳಿಯಿತೊ, ಅವತ್ತಿನಿಂದ ಬೆಂಗಳೂರಿನಲ್ಲಿ ಪ್ರತಿದಿನ ‘ಸಂಜೆ ಐದರ ಮಳೆ’ ! ಕಾಲೇಜು- ಕಚೇರಿಗಳಿಂದ ಹೊರಬಿದ್ದ ದಣಿವಿನ ಮೈಮೋರೆಗಳಿಗೆ ಮಳೆಹನಿಯ ಸಿಂಚನ. ಇದೇ ಮಳೆ ಕೋಲಾರದಲ್ಲಿ , ತುಮಕೂರಿನ ಹಳ್ಳಿಗಳಲ್ಲಿ , ಗುಲ್ಬರ್ಗಾದ ಕಪ್ಪುನೆಲದಲ್ಲಿ ಸುರಿಯಬಾರದಾ ?

ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌ನತ್ತ ಬುಧವಾರ ಸಂಜೆ (ಸೆ.3) ಹೊರಟಾಗ ಮಳೆಯದೇ ನೆನಪು, ಭಯ ! ಆದರೆ, ನಿರೀಕ್ಷಿತ ಮಳೆ ಬರಲಿಲ್ಲ . ಹಗುರ ಮೋಡಗಳು ಭೂಮಿಗಿಳಿಯಲೇ ಇಲ್ಲ . ‘ನಿಮ್ಮೊಂದಿಗೆ ಮಾತಾಡುವುದಿದೆ, ಬನ್ನಿ’ ಎಂದು ಮಾಧ್ಯಮದ ಗೆಳೆಯರನ್ನು ಕರೆದಿದ್ದ ಯುವನಟಿ ರಕ್ಷಿತಾ ಬಳಿ ಕೂಡ ಹೇಳುವಂಥ ಮಾತುಗಳೇನೂ ಇರಲಿಲ್ಲ .

‘ಇನ್ನು ಒಂದು ಒಂದೂವರೆ ತಿಂಗಳು ಊರಲ್ಲಿರೊಲ್ಲ . ನಾಳೆ ವೈಜಾಗ್‌ಗೆ ಹೋಗ್ತಿದೇನೆ. ಅಲ್ಲಿಂದ ಬಂದಮೇಲೆ ಹೈದರಾಬಾದ್‌ನಲ್ಲಿ ಶೂಟಿಂಗ್‌. ನಿಮ್ಮನ್ನೆಲ್ಲ ಮಾತಾಡಿಸಿ ತುಂಬಾ ದಿನವಾಗಿತ್ತಲ್ಲ . ಹಾಗಾಗಿ ಕರೆದೆ. ಅಷ್ಟೇನಪ್ಪ , ಮತ್ತೇನು ವಿಷಯವಿಲ್ಲ , ಪ್ರಾಮಿಸ್‌’ ಎಂದರು ರಕ್ಷಿತಾ.

ಅದೊಂದು ಸುಖಾಸುಮ್ಮನೆ ಏರ್ಪಾಟಾದ ಸ್ನೇಹಕೂಟ. ಪರೀಕ್ಷೆಯ ನಂತರ ರಜೆಗಾಗಿ ಊರಿಗೆ ಹೊರಡುವ ಕಾಲೇಜು ಹುಡುಗ- ತನ್ನ ಗೆಳೆಯ-ಗೆಳತಿಯರಿಗೆ ಪಾರ್ಟಿ ಕೊಡಿಸುತ್ತಾನಲ್ಲ , ಅಂತಾದ್ದು . ಅದೊಂದು ನಿರುದ್ದಿಶ್ಯ ಮಾತಿನ ಮಂಟಪ. ಮಾತಿನ ನಡು ನಡುವೆ ಪಾನಕ ಪನಿವಾರ !

ಸದ್ಯಕ್ಕೆ ರಕ್ಷಿತಾ ಕೈಯಲ್ಲಿ ಕನ್ನಡ ಸಿನಿಮಾಗಳಿಗಿಂತ ತೆಲುಗು ಸಿನಿಮಾಗಳೇ ಹೆಚ್ಚಿವೆ. ಆಕೆ ತೆಲುಗಿನಲ್ಲಿ ಜನಪ್ರಿಯ ನಟಿ. ಬಿಡುಗಡೆಯಾಗಿರುವ ಮೂರು ಚಿತ್ರಗಳು ಸೇರಿದಂತೆ ಒಟ್ಟು 6 ತೆಲುಗು ಚಿತ್ರಗಳಲ್ಲಿ ರಕ್ಷಿತಾ ಅಭಿನಯಿಸಿದ್ದಾರೆ. ಬಿಡುಗಡೆಯಾದ ಮೂರೂ ಚಿತ್ರಗಳು (ಈಡಿಯೆಟ್‌, ಪೆಳ್ಳಾಂ ಊರೆಳ್ಳಿತೆ, ತೇಜ) ನೂರು ದಿನ ಪ್ರದರ್ಶನ ಭಾಗ್ಯ ಕಂಡಿವೆ ಎಂದು ರಕ್ಷಿತಾ ಹಿಗ್ಗಿದರು. ‘ಹ್ಯಾಟ್ರಿಕ್‌ ಹೀರೋಯಿನ್‌’ ಅನ್ನಲಿಕ್ಕಡ್ಡಿಯಿಲ್ಲ .

‘ಶಿವಮಣಿ ಚಿತ್ರದ ಶೂಟಿಂಗ್‌ಗಾಗಿ ವೈಜಾಗ್‌ಗೆ ಹೋಗುತ್ತಿದ್ದೇನೆ. ಚಿತ್ರದ ನಾಯಕ ನಾಗಾರ್ಜುನ’ ಎಂದು ರಕ್ಷಿತಾ ಹೇಳಿದರು. ಅಕ್ಟೋಬರ್‌ನಲ್ಲಿ ‘ಶಿವಮಣಿ’ ಬಿಡುಗಡೆಯಾಗುತ್ತದಂತೆ. ಅದಾದ ನಂತರ ‘ಆಂಧ್ರಾವಾಲಾ’. ಜೂನಿಯರ್‌ ಎನ್‌ಟಿಆರ್‌ ‘ಆಂಧ್ರಾವಾಲಾ’ದ ನಾಯಕ. ಜೂನಿಯರ್‌ ಎನ್‌ಟಿಆರ್‌ ಅಪಾರ ಜನಪ್ರಿಯತೆ, ‘ಸಿಂಹಾದ್ರಿ’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಗ್ಗೆ ರಕ್ಷಿತಾ ಮಾತನಾಡಿದರು. ಸ್ಥೂಲಕಾಯನಾದ ಜೂ. ಎನ್‌ಟಿಆರ್‌ ಹೊಡೆದಾಟದ ಸನ್ನಿವೇಶಗಳಲ್ಲಿ ಮಿಂಚಿಂಗು, ದಢೂತಿ ಮೈಯಲ್ಲೂ ಎದ್ದು ಕಾಣುವ ಡಾನ್ಸ್‌ನ್ನು ರಕ್ಷಿತಾ ಮೆಚ್ಚಿಕೊಂಡರು.

‘ಆಂಧ್ರಾವಾಲ’ ಮಾತ್ರವಲ್ಲದೆ ಜೂನಿಯರ್‌ ಎನ್‌ಟಿಆರ್‌ ಜೊತೆಯಲ್ಲಿ ನಾಯಕಿಯಾಗಿ ರಕ್ಷಿತಾಗೆ ಇನ್ನೊಂದು ಅವಕಾಶ ಸಿಕ್ಕಿದೆ. ‘ಸಾಂಬ’ ಎಂದು ಚಿತ್ರದ ಹೆಸರು. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ರಕ್ಷಿತಾ ಇಬ್ಬರಲ್ಲೊಬ್ಬಳು.

ಸದ್ಯಕ್ಕೆ ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ರಕ್ಷಿತಾ ನಟಿಸುತ್ತಿದ್ದಾರೆ. ರಾಜೇಂದ್ರಸಿಂಗ್‌ಬಾಬು ಪುತ್ರ ಆದಿತ್ಯನ ‘ಲವ್‌’ ಚಿತ್ರದಲ್ಲಿ ರಕ್ಷಿತಾ ನಾಯಕಿ. ‘ಲವ್‌’ ಶೂಟಿಂಗ್‌ಗಾಗಿ ಮೊನ್ನೆಯಷ್ಟೇ ರಕ್ಷಿತಾ ಹೈದರಾಬಾದ್‌ಗೆ ಹೋಗಿ ಬಂದಿದ್ದಾರೆ. ರಾಮೋಜಿ ಫಿಲಂಸಿಟಿಯ ಥಳಕ್ಕು ಬಳುಕಿಗೆ ಬೆರಗಾಗಿದ್ದಾರೆ. ‘ಲವ್‌’ ಚಿತ್ರದ ಶೂಟಿಂಗ್‌ಗೆ ಮತ್ತೆ ಹೈದರಾಬಾದ್‌ಗೆ ಹೋಗುವ 15 ದಿನಗಳ ಕಾರ್ಯಕ್ರಮವೂ ಇದೆ.

ರಕ್ಷಿತಾ ಅಭಿನಯಿಸುತ್ತಿರುವ ಇನ್ನೊಂದು ಕನ್ನಡ ಚಿತ್ರ ಉಪೇಂದ್ರ ಅವರದು. ಚಿತ್ರದ ಟೈಟಲ್‌ ಇನ್ನೂ ಪಕ್ಕಾ ಆಗಿಲ್ಲ . ಸದ್ಯಕ್ಕೆ ‘ಸಿದ್ಧ’ ಎನ್ನುವ ಟೈಟಲ್‌ ಚಾಲ್ತಿಯಲ್ಲಿದೆ. ಪುನೀತ್‌ ನಾಯಕರಾಗಿ ಅಭಿನಯಿಸುತ್ತಿರುವ ‘ಆಂಧ್ರಾವಾಲ’ ಚಿತ್ರದ ಕನ್ನಡ ರೂಪದಲ್ಲಿ ರಕ್ಷಿತಾ ನಾಯಕಿಯಾಗಿ ಅಭಿನಯಿಸಬೇಕಾಗಿತ್ತು . ‘ಡೇಟ್ಸ್‌ ಸಮಸ್ಯೆ. ಒಪ್ಪಿಕೊಳ್ಳಲಾಗಲಿಲ್ಲ . ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವ ಅನಿತಾ ಕೂಡ ಒಳ್ಳೆಯ ಹುಡುಗಿ’ ಎಂದರು ರಕ್ಷಿತಾ. ಕನ್ನಡ ಸಿನಿಮಾಕ್ಕೆ ತೆಲುಗು ನಾಯಕಿ, ತೆಲುಗು ಸಿನಿಮಾಕ್ಕೆ ಕನ್ನಡದ ನಾಯಕಿ ಎಂದು ಪತ್ರಕರ್ತರೊಬ್ಬರು ನಕ್ಕರು. ನಗೆ ಅಲೆಯಾಯಿತು.

‘ತಮಿಳು ಚಿತ್ರಗಳಿಂದಲೂ ಕರೆ ಬಂದಿದೆ. ಮುಂದಿನ ವರ್ಷ ತಮಿಳು ಚಿತ್ರದಲ್ಲಿ ಅಭಿನಯಿಸುವುದು ಹೆಚ್ಚೂ ಕಡಿಮೆ ಗ್ಯಾರಂಟಿ. ಈ ವರ್ಷವಂತೂ ಬಿಡುವೇ ಇಲ್ಲ . ಮೊದಲು ಕೈಲಿರುವ ಚಿತ್ರಗಳನ್ನು ಮುಗಿಸಬೇಕು’ ಎಂದು ರಕ್ಷಿತಾ ತಮಗಿರುವ ಅವಕಾಶಗಳ ಬಗ್ಗೆ ಹೇಳಿಕೊಂಡರು. ತೆಲುಗಿನ ತೇಜಾ ಜೊತೆ ಅದೇನದು ಕಿರಿಕ್ಕು ? ಅನ್ನುವ ಪ್ರಶ್ನೆಗೆ- ‘ಅಂಥದ್ದೇನೂ ಇಲ್ಲ . ನಮ್ಮಿಬ್ಬರ ನಡುವೆ ಸಣ್ಣದೊಂದು ಮಿಸ್‌ ಅಂಡರ್‌ಸ್ಟಾಂಡಿಂಗ್‌. ಇಂಗ್ಲಿಷ್‌ ಪತ್ರಿಕೆಯಾಂದು ಅದನ್ನು ದೊಡ್ಡದು ಮಾಡಿತು. ಈಗ ಅದೆಲ್ಲ ಸರಿಯಾಗಿದೆ’ ಎಂದರು ರಕ್ಷಿತಾ.

ರಕ್ಷಿತಾ ಮಾತನಾಡುತ್ತಿದ್ದಲೇ ಇದ್ದರು. ‘ಶ್ವೇತಾ (ರಕ್ಷಿತಾ) ಹೀಗೇನೇ, ತುಂಬಾ ಮಾತಾಡ್ತಾಳೆ’ ಎಂದು ಮುದ್ದಿನಿಂದ ಆಕ್ಷೇಪಿಸಿದರು ಅಮ್ಮ ಮಮತಾ. ಅಮ್ಮ- ಮಗಳಿಂದ ಬೀಳ್ಕೊಂಡು ಹೊರಬಂದರೆ ಆಕಾಶದಲ್ಲದೇ ಹಗುರ ಹಗುರ ಮೋಡಗಳು!

Post your views

ಪೂರಕ ಓದಿಗೆ-
ಸಂಗೀತಗಾರನೆ ನನ್ನ ಗಂಡ - ರಕ್ಷಿತಾ
ರಕ್ಷಿತಾ ಫೋಟೊಗ್ಯಾಲರಿ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada