»   » ಪಾಪ ‘ಮಾಧವಿ ಪಟೇಲ್‌’ಗೆ ಎಷ್ಟೊಂದು ವ್ಯಥೆ!

ಪಾಪ ‘ಮಾಧವಿ ಪಟೇಲ್‌’ಗೆ ಎಷ್ಟೊಂದು ವ್ಯಥೆ!

Posted By:
Subscribe to Filmibeat Kannada

ನಟಿ ಮಾಳವಿಕಾ ಬೇಸರದಲ್ಲಿದ್ದರು. ಮಾಧವಿ ಪಟೇಲ್‌ ವೇಷ ಕಳಚಿದ ಯಾತನೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ‘ಈ ಟೀವಿ’ಯಲ್ಲಿ ಪ್ರಸಾರವಾಗುವ ‘ಮುಕ್ತ’ ಧಾರಾವಾಹಿಯ ಈ ಮಾಧವಿ ಪಟೇಲ್‌ ಪಾತ್ರ, ಮಾಳವಿಕಾಗೆ ಸಕತ್ತು ಜನಪ್ರಿಯತೆ ತಂದು ಕೊಟ್ಟಿದೆ. ಇಂಥ ಪಾತ್ರ ಮುಗಿದಾಗ ಬೇಸರ ಸಹಜವೇ.

ನಗರದ ಗಾಯನ ಸಮಾಜದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, ‘ಮೊನ್ನೆ ‘ಮುಕ್ತ’ ಚಿತ್ರೀಕರಣ ಮುಕ್ತಾಯವಾಯಿತು. ಈ ಮಾಧವಿ ಪಟೇಲ್‌ ಒಂದು ಏಳೆಂಟು ದಿನ ನಿಮಗೆ ದರ್ಶನ ನೀಡಬಹುದು ಅಷ್ಟೆ. ಆಮೇಲೆ ಅವಳ ದರ್ಶನವಿಲ್ಲ. ನಾನು ಮತ್ತೆ ಮಾಧವಿ ಪಟೇಲ್‌ ಆಗುವುದು ಹೇಗೆ? ಅಂಥ ಪಾತ್ರ ನನಗೆ ಯಾವಾಗ ಸಿಗುತ್ತೆ ?’ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು.

ಸಿನಿಮಾ, ಕಿರುತೆರೆ ಸೇರಿದಂತೆ ಹತ್ತಾರು ಪಾತ್ರಗಳನ್ನು ನಾನು ಮಾಡಿದ್ದೇನೆ. ಆದರೆ ಮಾಧವಿ ಪಟೇಲ್‌ ಪಾತ್ರ ಮಾಡುವಾಗ, ನಾನು ಮಾಳವಿಕಾ ಆಗಿರುತ್ತಿರಲಿಲ್ಲ. ಈಗಲೂ ನನ್ನ ರಕ್ತದಲ್ಲಿ ಮಾಧವಿ ಪಟೇಲ್‌ ಪಾತ್ರವೇ ತುಂಬಿಕೊಂಡಿದೆ. ಜನರಂತೂ ನನ್ನ ಮೂಲ ಹೆಸರನ್ನೇ ಮರೆತು ಬಿಟ್ಟಿದ್ದಾರೆ ಎಂದು ಭಾವುಕರಾದರು.

ಟಿ.ಎನ್‌.ಸೀತಾರಾಮ್‌ ನಿರ್ದೇಶನದ ಕಳೆದ ಎರಡೂವರೆ ವರ್ಷಗಳಿಂದ ಪ್ರಸಾರವಾಗುತ್ತಿರುವ ‘ಮುಕ್ತ’ ಧಾರಾವಾಹಿ ಮೂಲಕ, ಮಾಳವಿಕಾ ಇಂದು ಮನೆಮಾತು. ‘ಇಂಥ ಮಗಳೊಬ್ಬಳಿದ್ದರೆ ಎಷ್ಟು ಚೆನ್ನಾಗಿತ್ತು..’, ‘ಇಂಥ ಅಕ್ಕ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು.. ’ ಎಂದು ಜನ ಆ ಪಾತ್ರದ ಜೊತೆ ತಮ್ಮನ್ನು ತಾವು ಗುರ್ತಿಸಿಕೊಂಡಿದ್ದರು.

ಮಾಧವಿ ಪಟೇಲ್‌ ಇಮೇಜ್‌ ಒಂದು ಹಂತಕ್ಕೆ ಮಾಳವಿಕಾರಲ್ಲಿ ಆತ್ಮವಿಶ್ವಾಸದ ಜೊತೆ ಅಹಂಕಾರವನ್ನೂ ತಂದಿದೆ ಎಂಬುದು ಗಾಂಧಿನಗರದಲ್ಲಿನ ಮಾತು. ಏನೋ ಕನ್ನಡದ ಹುಡುಗಿ ಮಾಳವಿಕಾಗೆ ಮುಂದೆ ಇನ್ನೂ ಒಳ್ಳೆ ಪಾತ್ರ ಸಿಗಲಿ.

ಹೀಗೂ ಉಂಟೆ? : ‘ಸೈನೈಡ್‌’ ಚಿತ್ರದ ಕೀರ್ತಿಯನ್ನು ಹಂಚಿಕೊಳ್ಳುವ ಸಂಬಂಧದಲ್ಲಿ , ತಾರಾ ಮತ್ತು ಮಾಳವಿಕಾ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಅದು ಮಾಧ್ಯಮಗಳ ಮುಂದೆ ಕೆಲವು ಸಲ ವ್ಯಕ್ತವಾಗಿದೆ. ಈ ಮಧ್ಯೆ ತಾರಾ ಅಮೆರಿಕಾದ ವಿಶ್ವಕನ್ನಡ ಸಮ್ಮೇಳನಕ್ಕೆ ಹಾರಿದ್ದಾರೆ. ‘ಸಮ್ಮೇಳನಕ್ಕೆ ನನ್ನನ್ನೂ ಕರೆದಿದ್ದರೆ ಚೆನ್ನಾಗಿತ್ತು. ನಾನು ತಾರಾಗಿಂತಲೂ ಯಾವುದರಲ್ಲಿ ಕಮ್ಮಿ’ ಎಂದು ಮಾಳವಿಕಾ ಮನದಲ್ಲಿಯೇ ಮಂಡಿಗೆ ತಿನ್ತಾಯಿದ್ದಾರೇನೋ?

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada