»   » ‘ಬೇರು’ ಬಿಡಿಸುವ ಕಾಯಕದಲ್ಲಿ ಶೇಷಾದ್ರಿ

‘ಬೇರು’ ಬಿಡಿಸುವ ಕಾಯಕದಲ್ಲಿ ಶೇಷಾದ್ರಿ

Posted By: Staff
Subscribe to Filmibeat Kannada

'ಮುನ್ನುಡಿ"ಯಂಥ ಕಲಾತ್ಮಕ ಚಿತ್ರವನ್ನು, 'ಅತಿಥಿ"ಯಂಥ ಅಚ್ಚುಕಟ್ಟು ಚಿತ್ರವನ್ನು ನಿರ್ದೇಶಿಸಿದ್ದ , ಎರಡೂ ಚಿತ್ರಗಳಿಗೆ ಪ್ರಶಸ್ತಿ ಗಳಿಸಿದ್ದ ಪಿ.ಶೇಷಾದ್ರಿ ಎನ್ನುವ ಯುವ ನಿರ್ದೇಶಕರನ್ನು ನೀವಿನ್ನೂ ಮರೆತಿರಲಾರಿರಿ. ಆದರೆ ಗಾಂಧಿನಗರ ಮರೆತಿದೆ. ಬಹಿಷ್ಕಾರ, ಬಂದ್‌ಗಳಲ್ಲೇ ಗಿರಿಗಿಟ್ಲೆಯಾಡುವ ಗಾಂಧಿನಗರಕ್ಕೆ ಶೇಷಾದ್ರಿಯಂಥ ನಿರ್ದೇಶಕರು ಬೇಕಾಗಿಯೂ ಇಲ್ಲ . ಆ ಮಾತು ಬಿಡಿ, ಸದ್ಯಕ್ಕೆ ಶೇಷಾದ್ರಿ ಕೈಗೆತ್ತಿಕೊಂಡಿರುವ ಹೊಸಚಿತ್ರದ ಬಗ್ಗೆ ಮಾತಾಡುವ.

ಶೇಷಾದ್ರಿ ಕೈಗೆತ್ತಿಕೊಂಡಿರುವ ಹೊಸಚಿತ್ರದ ಹೆಸರು- 'ಬೇರು". ನವಂಬರ್‌ 1ರಂದು ತುಮಕೂರಿನಲ್ಲಿ 'ಬೇರು" ಚಿತ್ರಕ್ಕೆ ಚಾಲನೆ ದೊರೆಯಿತು.

ಇದು ವ್ಯಕ್ತಿಯ ಬೇರುಗಳನ್ನು ಹುಡುಕುವ ಕಥನವಲ್ಲ ; ವ್ಯವಸ್ಥೆಗಂಟಿದ ಭ್ರಷ್ಟಾಚಾರದ ಬೇರುಗಳನ್ನು ವಿಶ್ಲೇಷಿಸುವ ಪ್ರಯತ್ನ. ಜನಪ್ರಿಯ ಸಂಭಾಷಣೆಕಾರ ಜೆ.ಎಂ.ಪ್ರಹ್ಲಾದ್‌ ಕಥೆ ಬರೆದಿದ್ದಾರೆ. ಪ್ರಹ್ಲಾದ್‌ ಕಥೆ ಅಂದಮಾತ್ರಕ್ಕೆ ಇದೊಂದು ಕಮರ್ಷಿಯಲ್‌ ಚಿತ್ರ ಎಂದುಕೊಳ್ಳಬೇಕಿಲ್ಲ . ಶೇಷಾದ್ರಿ ನಿರ್ದೇಶನ ಎಂದಮೇಲೆ ಅದೊಂದು ಒಳ್ಳೆಯ ಚಿತ್ರವಾಗಿರುತ್ತದೆ ಎಂದು ನಂಬಬಹುದು.

'ಬೇರು" ಚಿತ್ರದಲ್ಲಿ ಇನ್ನಷ್ಟು ವೈಶಿಷ್ಟ್ಯಗಳೂ ಇವೆ. ಚೆಂದದ ಫ್ರೇಂಗಳನ್ನು ಕಟ್ಟಿಕೊಡುವ ಎಸ್‌.ರಾಮಚಂದ್ರರ ಕೆಮರಾ ಈ ಚಿತ್ರಕ್ಕಿದೆ. ಸಂಗೀತ ಪ್ರವೀಣ್‌ ಗೋಡ್ಖಿಂಡಿಯವರದು. ಗೋಡ್ಖಿಂಡಿ ಎಂದಾಕ್ಷಣ ನಿಮಗೆ ಈಟೀವಿಯ 'ಗರ್ವ" ಧಾರಾವಾಹಿಯ ಟೈಟಲ್‌ಸಾಂಗ್‌ ನೆನಪಿಗೆ ಬಂದಿರಬೇಕು. ಹೌದು, ಗೋಡ್ಖಿಂಡಿ ಮಾಧುರ್ಯಕ್ಕೆ ಇನ್ನೊಂದು ಹೆಸರು.

'ಬೇರು" ಚಿತ್ರದ ತಾರಾಗಣವೂ ಭರ್ಜರಿಯಾಗಿಯೇ ಇದೆ. ಎಚ್‌.ಜಿ.ದತ್ತಾತ್ರೇಯ, ವಿದ್ಯಾಮೂರ್ತಿ, ಸುಚೇಂದ್ರ ಪ್ರಸಾದ್‌, ವೆಂಕಟರಾವ್‌, ಲಕ್ಷ್ಮಿಚಂದ್ರಶೇಖರ್‌... ಚಿತ್ರವೊಂದು ಕಳೆಗಟ್ಟಲು ಇಷ್ಟುಮಂದಿ ಸಾಕಲ್ಲ . ಇವರೊಂದಿಗೆ ಟಿ.ಎನ್‌.ಸೀತಾರಾಂ ಕೂಡ ಇದ್ದಾರೆ. ಕಿರುತೆರೆಯಲ್ಲಷ್ಟೇ ಅಭಿನಯಿಸುವ, ನಟಿಸುವುದಕ್ಕಿಂಥ ನಿರ್ದೇಶನವನ್ನೇ ಹೆಚ್ಚು ಇಷ್ಟಪಡುವ ಸೀತಾರಾಂ 'ಬೇರು" ಚಿತ್ರದಲ್ಲಿ ನಟಿಸಲು ಶೇಷಾದ್ರಿ ಮೇಲಿನ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಅನಂತನಾಗ್‌ ಕೂಡ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ದೇವರಾಯನದುರ್ಗ ಮತ್ತು ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ. ಹಿಂದಿನ ಚಿತ್ರಗಳಲ್ಲಿ 20 ದಿನಗಳ ಒಂದೇ ಷೆಡ್ಯೂಲ್‌ನಲ್ಲಿ ಚಿತ್ರೀಕರಣ ಮುಗಿಸುವುದು ಶೇಷಾದ್ರಿ ಉದ್ದೇಶ. ಅಂದಹಾಗೆ, ಚಿತ್ರದ ಬಜೆಟ್‌ ಎಷ್ಟು ? ಶೇಷಾದ್ರಿ ಹೇಳಲಿಲ್ಲ . ಅವರ 'ಅತಿಥಿ" ಚಿತ್ರಕ್ಕೆ 20 ಲಕ್ಷ ರುಪಾಯಿ ಖರ್ಚಾಗಿತ್ತು .

English summary
P. Sheshadris new film Beru launched

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada