»   » ಡಾನ್‌ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ವಿಲನ್‌ಗಳಾದ ಪ್ರೇಕ್ಷಕರು !

ಡಾನ್‌ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ವಿಲನ್‌ಗಳಾದ ಪ್ರೇಕ್ಷಕರು !

Posted By: Staff
Subscribe to Filmibeat Kannada

ಉಪೇಂದ್ರ!ಮೂರೂ ಮುಕ್ಕಾಲು ಅಕ್ಷರಗಳ ಈ ಹೆಸರಿಗೆ ಏನರ್ಥ ಅಂತ ಯಾರನ್ನಾದರೂ ಕೇಳಿ ನೋಡಿ. 300 ರೀತಿಯ ಪ್ರತಿಕ್ರಿಯೆಗಳು ಬರುತ್ತವೆ. ಅವು ಹೀಗೆ-

ಉಪೇಂದ್ರ ಅಂದ್ರೆ ವಿಕಾರ, ಉಪೇಂದ್ರ ಅಂದ್ರೆ ವಿಕ್ಷಿಪ್ತ , ಆತ ಕೂತು ಮಾತಾಡಿದ್ರೆ ವಾದ, ಎದ್ದು ನಿಂತ್ರೆ ವಿವಾದ, ಉಪೇಂದ್ರ ಅದಕ್ಕೇ ವಿಶಿಷ್ಟ ! ಗೊತ್ತಾ , ಉಪೇಂದ್ರ ಅಂದ್ರೆ ವಿನೋದ, ಅದು ಅತೀ ಅನ್ನಿಸಿದ್ರೆ ವಿಷಾದ. ಉಪೇಂದ್ರ ಅಂದ್ರೆ ನಾಯಕ, ಕೆಲವೊಮ್ಮೆ ಅಮಾಯಕ, ಮೈಕಿನ ಮುಂದೆ ಗಾಯಕ, ಭಕ್ತರ ಪಾಲಿಗೆ ವಿನಾಯಕ! ಉಪೇಂದ್ರ ದೊಡ್‌ ಹೀರೋ, ಸದ್ಯಕ್ಕೆ ಬಿಗ್‌ ರಿkುೕರೋ!

ಉಪೇಂದ್ರ ಎಂಬ ಪದಕ್ಕೆ, ಆ ಒಂದು ಹೆಸರಿಗೆ ಹುಡುಕಿದಷ್ಟೂ ಅರ್ಥ! ಈ ರೀತಿ, ಈ ಥರ!

ನೋಡಿದ ತಕ್ಷಣಕ್ಕೆ ವರ್ಷದಿಂದ ಸೆಲೂನ್‌ಗೆ ಕಾಲಿಡದ ಭಗ್ನಪ್ರೇಮಿಯಂತೆ ; ತಿರುಪತಿಗೋ, ಧರ್ಮಸ್ಥಳದ ದೇವರಿಗೋ ಹರಕೆ ಕಟ್ಟಿಕೊಂಡ ಬಯಲು ಸೀಮೆಯ ಹುಡುಗರಂತೆ ಕಾಣುವ ಕರಡಿ ಕೂದಲಿನ ಉಪೇಂದ್ರ ಹೊಚ್ಚ ಹೊಸ ಟ್ರೆಂಡ್‌ ಆರಂಭಿಸಿದ ಭೂಪ!

ಬೆಳಗಾಗುವುದರೊಳಗೆ ಸ್ಟಾರ್‌ ಪಟ್ಟಕ್ಕೇರಿದ ಉಪೇಂದ್ರ, ಜನರ ಒಳಮನಸ್ಸಿನಲ್ಲಿ ಏನಿರ್ತದೋ ಅದನ್ನೇ ನಾನು ತೆರೆಯ ಮೇಲೆ ತೋರಿಸ್ತೀನಿ ಎಂದು ಕೊಚ್ಚಿಕೊಳ್ಳುತ್ತಾ ಪರಮ ಸ್ಯಾಡಿಸ್ಟಿಕ್‌ ರೀತಿಯಲ್ಲಿ ತೆರೆಯ ಮೇಲೆ 'ಪ್ರೇಮ"(?)ದ ದೃಶ್ಯಗಳನ್ನು ತೋರಿದಾತ. ಮಾತ್ರವಲ್ಲ , ಪೊರ್ಕಿ ಹುಡುಗರು ಇವತ್ತಿಗೂ ಇಷ್ಟಪಡುವ 'ಡವ್‌ ಹಾಕು, ಡಗಾರ್‌, ಪೆಟ್ರೊಮ್ಯಾಕ್ಸ್‌..." ಇತ್ಯಾದಿ ಸಂಸ್ಕೃತ ಶಬ್ದಗಳ ಸೃಷ್ಟಿಕರ್ತ! ಆ ಮಟ್ಟಿಗೆ ಆತ 'ಬ್ರಹ್ಮ"!

ಉಪ್ಪಿ ಮೇನಿಯಾ ಎಲ್ಲೆಲ್ಲೂ ಜ್ವರದಂತೆ ವ್ಯಾಪಿಸುವವರೆಗೂ ಪ್ರೇಮದಲ್ಲಿ , ಪ್ರೇಮಿಗಳ ವರ್ತನೆಯಲ್ಲಿ ಒಂದು ನಂಬಿಕೆಯಿತ್ತು . ಹುಡುಗಿ ಅಥವಾ ಹುಡುಗ ಪರಸ್ಪರರಿಗೆ ಕಾಯುತ್ತಿದ್ದರು. ಬೊಗಸೆಯಾಡ್ಡಿ ಪ್ರೇಮ ಯಾಚಿಸುತ್ತಿದ್ದರು. ಚೆಂದದ ಗುಲಾಬಿ ಹಿಡಿದು ಪ್ರೇಮದ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದ್ದರು.

ಹಳೆಯದೆಲ್ಲ ಈವತ್ತಿಗೇ ಮುಗಿಯಬೇಕ್‌, ನಾನು ಹೇಳಿದ ಹಾಗೇ ನಡೆಯಬೇಕ್‌ ಎಂದು ಗುಟುರು ಹಾಕಿದ ಉಪೇಂದ್ರ ಒಮ್ಮೆ 'ಪ್ರೀತ್ಸೆ ಪ್ರೀತ್ಸೆ" ಎಂದು ವಿಕಾರವಾಗಿ ಕೂಗಿಕೊಂಡ. ಇನ್ನೊಮ್ಮೆ 'ಕೋಡಂಗಿಯ ಥರ ವೇಷ ಹಾಕಿಕೊಂಡು ಎಮ್ಮು ಟೀವೀ ಸುಬ್ಬುಲಕ್ಷ್ಮಿಗೆ" ಎಂದು ಹಾಡುತ್ತಲೇ 'ಲೈನು ಹೊಡೆದ್ರೇ ಫೈನು" ಅಂದ. ಅಲಾರಾಂ ಟೈಂಪೀಸ್‌ ಕೈಲಿ ಹಿಡಿದೇ ಪ್ರೇಯಸಿಗಾಗಿ ಕಾದು ತಡವಾಗಿ ಬಂದದ್ದಕ್ಕೆ ಯಕ್ಕಾಮಕ್ಕಾ ಉಗಿವ ದೃಶ್ಯ ತೋರಿ 'ನೀನು ಪ್ರೀತಿಸ್ದೇ ಇದ್ರೆ ಪೊಲೀಸ್ನೋರ ಥರಾ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಕೊಡ್ತೀನಿ ನೋಡ್‌" ಎಂದು ಅಬ್ಬರಿಸಿದ್ದ. ಉಪೇಂದ್ರ ಅಂದ್ರೆ ವಿಕಾರ, ಉಪೇಂದ್ರ ಅಂದ್ರೆ ವಿಕ್ಷಿಪ್ತ ಎಂಬ ಮಾತು ಹುಟ್ಟಿದ್ದೇ ಆವಾಗ !

ಒಂದು ಸಣ್ಣ ವಿವಾದ ಎದ್ದರೂ ಸೈ, ಅದೇ ವಸ್ತುವಿನ ಒಂದು ಎಳೆಯನ್ನು ತಲೆಯಲ್ಲಿಟ್ಟುಕೊಂಡು ಅದಕ್ಕೊಂದು ಟೈಟಲ್‌ ಕೊಟ್ಟು ಸಿನಿಮಾ ಘೋಷಿಸಿಬಿಡುವ ಉಪ್ಪಿ ಯಾರೆಂದರೆ ಯಾರಿಗೂ ಕತೆ ಹೇಳುವುದಿಲ್ಲ . ಯಾಕೆಂದರೆ, ಹೇಳುವುದಕ್ಕೆ ಆತನಲ್ಲಿ ಕತೆಯೇ ಇರುವುದಿಲ್ಲ . ಕಾವೇರಿ ವಿವಾದ ಅಂತ ಯಾರೋ ಉಸುರಿದ್ದಕ್ಕೆ ಎಚ್‌ಟುಒ ಅಂತ ಚಿತ್ರ ತೆಗೆದನಲ್ಲ ಉಪ್ಪಿ , ಆಗ- ಬೆಳೆ, ನೀರು, ನೀರಿನ ಪ್ರಮಾಣ, ನದಿಯೆಡೆಗಿನ ಜನರ ಭಾವುಕ ಸೆಳೆತ, ಗಲಭೆ ಹುಟ್ಟಿಕೊಳ್ಳುವುದಕ್ಕಿರುವ ಲಾಜಿಕ್ಕು... ಇದಾವುದನ್ನೂ ಆತ ಯೋಚಿಸಲಿಲ್ಲ . ಎಚ್‌ಟುಒ ಅತ್ತ ಆಕ್ಸಿಜನ್ನೂ ಇಲ್ಲದ, ಹೈಡ್ರೋಜನ್ನೂ ಸಿಗದ ಚರಂಡಿ ನೀರು ಅನ್ನಿಸಿಕೊಂಡಿದ್ದೇ ಅದಕ್ಕೆ.

ಮುಂದೆ ನೇಪಾಳದ ದೊರೆ ದೀಪೇಂದ್ರನ ದುರಂತ ಕತೆಯನ್ನೇ ಎತ್ತಿಕೊಂಡು 'ಸೂಪರ್‌ಸ್ಟಾರ್‌" ಆರಂಭಿಸಿದಾಗಲೂ ಉಪ್ಪಿಯ ಬಳಿ ಕತೆ ಇರಲಿಲ್ಲ. ಈ ಹುಂಬ ಮುಹೂರ್ತದಂದೇ ಎಲ್ಲರಿಗೂ 100ನೇ ದಿನದ ಫಲಕ ವಿತರಿಸಿ ನೋಡ್ತಿರಿ ಮುಂದೇನಾಗ್ತದೆ ಅಂತ.. ಎಂದು ಮೀಸೆ ತಿರುವಿದ್ದ. ಬಿಡುಗಡೆಯಾದ ಸಿನಿಮಾ ಮೂರೇ ದಿನಕ್ಕೆ ಮೂಲೆ ಸೇರಿತು!

'ದಿಲ್‌ ಇಲ್ದೇ ಲವ್‌ ಮಾಡಕ್ಕಾಗಲ್ರೀ" ಎಂದು ಘಂಟಾಘೋಷವಾಗಿ ಸಾರುವ, 'ವಿಕಾರವಿರೋದು ನನ್ನ ಮುಖದಲ್ಲಲ್ಲ, ನೋಡುವ ನಿನ್ನ ಕಣ್ಣಲ್ಲಿ" ಎಂದು ಅಬ್ಬರಿಸಿ ಟೀಕಾಕಾರರ ಬಾಯ್ಮುಚ್ಚಿಸುವ ಉಪ್ಪಿ ಸೂಪರ್ಬ್‌ ಸ್ಕಿೃಪ್ಟ್‌ ರೈಟ್ರರೇ ಹೊರತು ಬೊಂಬಾಟ್‌ ಹೀರೊ ಅಲ್ಲ . ಆತನ ಡೈಲಾಗ್‌ ಡೆಲಿವರಿ ರೇಜಿಗೆ ಹುಟ್ಟಿಸುತ್ತದೆ. ಮಾತಾಡುತ್ತ ಆಡುತ್ತಲೇ ಕದಲುವ ಕಣ್ಗುಡ್ಡೆ ಸ್ಥಿರಗೊಂಡು ನಿಲ್ಲುವುದೇ ಇಲ್ಲ . ಲಹರಿ ಬಂದಾಗ 'ಮದ್ಯ ವಯಸ್ಕ" ಗೆಳೆಯರೊಂದಿಗೆ 'ಎಲ್ಲವನ್ನೂ" ಹೇಳಿಕೊಂಡು ಅಳುವ ಉಪ್ಪಿಗೆ ಬುದ್ಧಿ ಹೇಳುವ, ಕೈ ಹಿಡಿದು ನಡೆಸುವ ಜನ ಬೇಕಾಗಿದ್ದಾರೆ.

ಯಾರಾದರೂ ಉಪ್ಪೀ ನೀನ್‌ ಬದಲಾಗ್‌ ಬೇಕೂ... ಅಂದರೆ ಸಿಟಾರನೆ ಸಿಡುಕುವ ಉಪ್ಪಿ ಪ್ರತ್ಯುತ್ತರ ನೀಡದೆ 'ನಾನು ನಾನೇ" ಅನ್ನುತ್ತಾರೆ. ಈ ಕಿರಿಕ್ಕು ಉತ್ತರದಿಂದ ಪೇಚಿಗೆ ಸಿಲುಕುವ ಜನ 'ನೀನಾ?" ನಾವು ಯಾರೋ ಅಂದ್ಕಂಡಿದ್ದೋ ಎನ್ನುತ್ತಿದ್ದಾರೆ.

ತನ್ನ ಸಂಭ್ರಮದ ದಿನಗಳಲ್ಲಿ ಉಪೇಂದ್ರ- ಉಪ್ಪಿಗಿಂತ ರುಚಿ ಇಲ್ಲ ಎಂದು ಹೇಳಿಸಿದ್ದ. ಹಿಂದೆ ಅದನ್ನು ರಾಷ್ಟ್ರಗೀತೆಯಂತೆ ಹಾಡುತ್ತಿದ್ದ ಜನ ಈಗ ದಿಢೀರ್‌ ರಾಗ ಬದಲಿಸಿದ್ದಾರೆ. ಚಿತ್ರ ವಿಚಿತ್ರ ವೇಷದಲ್ಲಿ ಆತನನ್ನು ಕಂಡು 'ಪಾಪ ಕಣ್ರೀ ಉಪ್ಪಿ" ಅನ್ನುತ್ತಿದ್ದವರೇ ಈಗ 'ಪ್ಲಾಪು ಕಣ್ರೀ ಉಪ್ಪಿ" ಅನ್ನುತ್ತಿದ್ದಾರೆ. ಕುಹಕಿಗಳ ಬಾಯಲ್ಲಿ ಮಾತು 'ಪಾಪಿ ಕಣ್ರೀ ಉಪ್ಪಿ" ಆಗುತ್ತಿದೆ. ಉಹುಂ ಉಪ್ಪಿ ತಲೆ ಎತ್ತುತ್ತಿಲ್ಲ . ಯಾವ ಮಾತನ್ನೂ ಒಪ್ಪುತ್ತಿಲ್ಲ . ಸುತ್ತ ಚೆಂದದವರೇ ಇದ್ದರೂ ಯಾರನ್ನೂ ಅಪ್ಪುತ್ತಲೂ ಇಲ್ಲ... ಎದುರಿಗೆ ಕೇರೆ ಹಾವಿದ್ದರೂ ಅರರೆ ನಾಗರಹಾವೂ... ಎಂದು ಚೀರುತ್ತಿದ್ದಾನೆ.

ಉಪ್ಪಿ ಅಂದರೆ ವಿಚಿತ್ರ, ತಪ್ಪಿದ್ರೆ ವಿಕಾರ. ಏನಂತೀರಿ !?(ವಿಜಯ ಕರ್ನಾಟಕ)

English summary
Upendra : Hero amidst Controversies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada