»   » ಮತ್ತೆ ಜೋಡಿಯಾದರು ಸುದೀಪು-ರಕ್ಷಿತಾ

ಮತ್ತೆ ಜೋಡಿಯಾದರು ಸುದೀಪು-ರಕ್ಷಿತಾ

Posted By: Super
Subscribe to Filmibeat Kannada

'ಈ ಟಚ್ಚಲಿ ಏನೋ ಇದೆ.." ಎಂದು ಹಾಡಿ ಕುಣಿದ ಸುದೀಪ್‌-ರಕ್ಷಿತಾ ಜೋಡಿ ನೆನಪಿದೆಯಾ? ನೆನಪಿಸಿಕೊಳ್ಳುವ ಸಮಯ ಮತ್ತೆ ಬಂದಿದೆ. 'ಧಮ್‌" ಸಿನಿಮಾದ ಈ ತಾರಾ ಜೋಡಿ ಮತ್ತೆ ಒಟ್ಟಾಗಿ ನಟಿಸುತ್ತಿದೆ.

'ಧಮ್‌" ಚಿತ್ರದ ನಂತರ ಸುದೀಪ್‌ ಹಾಗೂ ರಕ್ಷಿತಾ ಜೋಡಿಯಾಗಿ ಅಭಿನಯಿಸುತ್ತಿರುವುದು ಇದೇ ಮೊದಲು. ಕಾರಣಗಳು ಹಲವು. ಮೊದಲನೆಯದು, ಕಾಲ ಕೂಡಿ ಬರಲಿಲ್ಲ . ಎರಡನೆಯದು ಧಮ್‌ ವೇಳೆಗಾಗಲೇ ದಪ್ಪಗಾಗತೊಡಗಿದ್ದ ರಕ್ಷಿತಾ ನಂತರದ ದಿನಗಳಲ್ಲಿ ಥೇಟ್‌ ಗಾಂಡಲೀನಳೇ ಆದದ್ದು . ಮೂರನೆಯದು ಹಾಗೂ ಬಹು ಮುಖ್ಯವಾದದ್ದು - ಧಮ್‌ ಗೆಲ್ಲಲಿಲ್ಲ .

ರಕ್ಷಿತಾ ಈಗ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅವಕಾಶಗಳೂ ಮತ್ತೆ ಬಾಗಿಲು ತಟ್ಟುತ್ತಿವೆ. ತೆಳ್ಳಗಾಗುವುದಕ್ಕೂ ಅವಕಾಶಗಳು ಹೆಚ್ಚುವುದಕ್ಕೂ ಸಂಬಂಧವಿರಬೇಕು? ಮತ್ತೊಬ್ಬ ನಟಿ ದಾಮಿನಿಯನ್ನೇ ನೋಡಿ. ಆಕೆ ಸೊಂಟದ ಸುತ್ತಳತೆ ಇಳಿಸಿಕೊಂಡ ನಂತರವೇ 'ಗುಡ್‌ಲಕ್‌" ಶುರುವಾದದ್ದು . ಈಗ ರಕ್ಷಿತಾ ಸರದಿ.

ರಕ್ಷಿತಾ ಹಾಗೂ ಸುದೀಪ್‌ ಜೋಡಿಯಾಗಿ ನಟಿಸುತ್ತಿರುವ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ . ಮೊನ್ನೆ ನವಂಬರ್‌ 24ರಂದು ಚಿತ್ರದ ಮುಹೂರ್ತ ಹೆಚ್ಚು ಸದ್ದಿಲ್ಲದೆ ನಡೆಯಿತು. ಚಿತ್ರದ ನಿರ್ಮಾಪಕ ಕೆಸಿಎನ್‌ ಮೂವೀಸ್‌ನ ಎನ್‌.ಕುಮಾರ್‌ ಅವರಿಗಿದು 24ನೇ ಚಿತ್ರ.

'ರಂಗ ಎಸ್‌ಎಸ್‌ಎಲ್ಸಿ" ನೆನಪಿದೆ ತಾನೆ? ಸುದೀಪ್‌ರ ಚೆಂದದ ಅಭಿನಯದ ರಂಗನ ನಿರ್ಮಾಪಕರು ಇದೇ ಕುಮಾರ್‌. ರಂಗ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಕುಮಾರ್‌ ಹಾಗೂ ಸುದೀಪ್‌ರ ಸಂಗ ಮುಗಿಯಿತೆಂದೇ ಗಾಂಧಿನಗರ ಭಾವಿಸಿತ್ತು . ಆದರೆ ಗೆಳೆಯರು ಯಶಸ್ಸಿಗಾಗಿ ಮತ್ತೆ ಕೈ ಜೋಡಿಸಿದ್ದಾರೆ. ಜೊತೆಗಿದ್ದಾರೆ ರಕ್ಷಿತಾ!

ಕುಮಾರ್‌ ನಿರ್ಮಿತ ಚಿತ್ರದ ಮತ್ತೊಂದು ವಿಶೇಷ ನಿರ್ದೇಶಕ ಕೆ.ವಿ.ರಾಜು. ಮಿಂಚಿನಂಥ ಕಂಚಿನಂಥ ಸಂಭಾಷಣೆಗಳನ್ನು ಹೊಸೆಯುವುದಕ್ಕೆ ಕೆ.ವಿ.ರಾಜು ಸಿದ್ಧಹಸ್ತರು. ಹುಲಿಯಾ, ಇಂದ್ರಜಿತ್‌ನಂಥ ಗಮನಾರ್ಹ ಚಿತ್ರಗಳನ್ನು ನಿದೇಶಿಸಿದ ಹಿರಿಯ ನಿರ್ದೇಶಕರು. ಈ ಪರಿಯ ರಾಜು ಕೈಗೆ ಕುಮಾರ್‌ ತಮ್ಮ ಚಿತ್ರದ ಸಾರಥ್ಯ ನೀಡಿದ್ದಾರೆ.

ಹಿರೀಕ ರಾಜು ನಿರ್ದೇಶನದಲ್ಲಿ ಬಿಸಿರಕ್ತದ ಸುದೀಪು ಹಾಗೂ ರಕ್ಷಿತಾ ಅಭಿನಯಿಸುತ್ತಿರುವುದು ಇದೇ ಮೊದಲು. ಹಳೆ ಬೇರು ಹೊಸ ಚಿಗುರು ಸೇರಿ ಒಳ್ಳೆಯದೊಂದು ಸಿನಿಮಾ ಪ್ರೇಕ್ಷಕರಿಗೆ ಸಿಗಲಿ.

English summary
Sudeep-Rakshitha pairup in KCN Kumars film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada