twitter
    For Quick Alerts
    ALLOW NOTIFICATIONS  
    For Daily Alerts

    ‘ಸಿನಿಮಾ ಮಾಡಲು ಹೆಚ್ಚು ಹಣ ಬೇಡ.

    By Super
    |

    '2ಸ್ಟ್ರೀಮ್ಸ್‌" ಆವರಣವನ್ನು ಪ್ರವೇಶಿಸಿದಾಗ ಮಧ್ಯಾನ್ಹವಾಗಿತ್ತು. ಈ-ಟಿವಿಯ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ, ಈಗ ಮರು ಪ್ರಸಾರವಾಗುತ್ತಿರುವ 'ಗರ್ವ" ದೈನಿಕ ಧಾರಾವಾಹಿಯ ವೀಕ್ಷಕರಿಗೆ 2 ಸ್ಟ್ರೀಮ್ಸ್‌ ಹೆಸರು ಚಿರಪರಿಚಿತ. ನಮ್ಮ ಕಡೆಗೆ ನಡೆದುಬರುತ್ತಿದ್ದ ವ್ಯಕ್ತಿ ಪ್ರಕಾಶ ಬೆಳವಾಡಿ(40) ಎಂದು ಗುರುತಿಸುವುದು ನಮಗೆ ಕಷ್ಟವಾಗಲಿಲ್ಲ. ಆತ 2ಸ್ಟ್ರೀಮ್ಸ್‌ ಸಂಸ್ಥೆಯ ಸಂಸ್ಥಾಪಕ.

    ಕೆದರಿದ ತಲೆಯ ಮೇಲೆ ಕೈಯಾಡಿಸುತ್ತಾ, ಇತ್ತೀಚಿಗಷ್ಟೇ ಮುಂಬೈಯ ಚಿತ್ರ ವಿತರಕರೊಡನೆ ನಡದ ಮಾತುಕತೆಯನ್ನು ಪ್ರಕಾಶ್‌ ಬೆಳವಾಡಿ ನೆನಪಿಸಿಕೊಂಡರು. 'ಮಧ್ಯಮ ವರ್ಗದ ಜನರು ಸಿನಿಮಾ ಮಾಡುವ ಯೋಚನೆಯನ್ನೇ ಮಾಡಬಾರದು. ಅದು ತುಂಬಾ ಕಠಿಣ ಕೆಲಸ ಹಾಗೂ ಅದಕ್ಕಾಗಿ ವಿನಿಯೋಗಿಸುವ ಹಣದ ಲೆಕ್ಕವನ್ನಂತೂ ಕೇಳಲೇಬಾರದು" ಎನ್ಮುತ್ತಾ , ತಮ್ಮ ಪ್ರಥಮ ಸಿನಿಮಾ 'ಸ್ಟಂಬ್ಲ್‌" (STUMBLE) ಬಗ್ಗೆ ತುಂಬಾ ಉತ್ಸುಕರಾಗಿಯೇ ಮಾತಾಡಲು ಆರಂಭಿಸಿದರು.

    ಪ್ರಕಾಶ್‌ ಬೆಳವಾಡಿ ಅವರೊಂದಿಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ :

    ನಿಮ್ಮ ಪಾಲಕರು ನಿಮ್ಮ ಬಾಲ್ಯ ಹಾಗೂ ಬೆಳವಣಿಗೆಯ ಮೇಲೆ ಬೀರಿದ ಪ್ರಭಾವವೇನು?
    ತಂದೆ ತಾಯಿಯರ ಅಭಿನಯವನ್ನು ನೋಡುತ್ತಲೇ ನಾನು ಬೆಳೆದದ್ದು. ( ತಂದೆ ನಾರಾಯಣ- ಮೇಕಪ್‌ ನಾಣಿಯೆಂದೇ ಪರಿಚಿತ, ತಾಯಿ ಭಾರ್ಗವಿ ನಾರಾಯಣ). ನಾವು ಚಿಕ್ಕವರಾಗಿದ್ದಾಗ, ತಾಯಿಯ ಜೊತೆ ರಿಹರ್ಸಲ್‌ಗೆ ಹೋಗುತ್ತಿದ್ದೆ. ಸ್ವಂತ ಉದ್ದಿಮೆ ಪ್ರಾರಂಭಿಸುವ ಉದ್ದೇಶವಿದ್ದ ನನಗೆ , ರಂಗಭೂಮಿ, ಸಿನಿಮಾ ಬಗ್ಗೆ ಯಾವತ್ತೂ ಒಲವಿರಲಿಲ್ಲ. ಆದರೂ ನನ್ನ ತಾಯಿಯ ಅಭಿನಯದಿಂದ ನಾನು ತುಂಬಾ ಪ್ರಭಾವಿತಗೊಂಡೆ.

    ವೃತ್ತಿಯಿಂದ ಮೆಕ್ಯಾನಿಕಲ್‌ ಇಂಜಿನಿಯರ್‌ ಆಗಿರುವ ನೀವು, ಮೊದಲು ಪತ್ರಿಕೋದ್ಯಮ ನಂತರ ನಾಟಕದತ್ತ ಹೊರಳಿದ್ದೇಕೆ ?
    ನಮ್ಮ ದೇಶದಲ್ಲಿ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶ ತುಂಬಾ ಕಡಿಮೆ. ಸ್ನಾತಕೋತ್ತರ ಪದವಿಗಾಗಿ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸುವ ಆಸಕ್ತಿ ನನಗಿರಲಿಲ್ಲ. ಆದಾಗ್ಯೂ ತುಂಬಾ ಖುಷಿಯಿಂದ ನಾನು ಎರಡು ವರ್ಷ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡಿದೆ. ಇನ್ನೂ ಬೇಗ ಹಣ ಮಾಡುವ ಉದ್ದೇಶದಿಂದ ಸ್ವಲ್ಪ ದಿನ ರಿಯಲ್‌ ಎಸ್ಟೇಟ್‌ ವ್ಯಾಪಾರವನ್ನೂ ಮಾಡಿದೆ. ಆದರೆ ಅದು ತುಂಬಾ ತಲೆನೋವಿನ ಕೆಲಸ. ಆಗ ನಾನು ಸಂಪೂರ್ಣವಾಗಿ ರಂಗ ಮಂದಿರ ಹಾಗೂ ಪತ್ರಿಕೋದ್ಯಮ (ಯಾವಾಗ ಏನೂ ಆಗೊಲ್ಲ, ಆವಾಗ ಪತ್ರಕರ್ತನಾಗುತ್ತಾರೆ)ದ ಬಗ್ಗೆ ಯೋಚಿಸಿದ್ದು.

    ತುರ್ತು ಪರಿಸ್ಥಿತಿಯ ವೇಳೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಆಳ್ವಿಕೆಯ ಮಧ್ಯದ ವಿರಸ ನನ್ನಲ್ಲಿ ಸ್ವತಂತ್ರ ಯೋಚನೆ ಹಾಗೂ ಹೊಸ ಸಂಶೋಧನೆ ಪ್ರವೃತ್ತಿಯನ್ನು ಹುಟ್ಟು ಹಾಕಿದವು. 70ರ ದಶಕದ ಆರಂಭದಲ್ಲಿ ರಂಗಭೂಮಿ ಜನಪ್ರಿಯತೆಯ ಉತ್ತುಂಗದಲ್ಲಿತ್ತು. ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸುವುದರಲ್ಲಿ ರಂಗ ಕಲಾವಿದರು ತುಂಬಾ ಮಹತ್ವದ ಪಾತ್ರ ವಹಿಸಿದ್ದರು. ವರ್ತಮಾನದ ಬಗ್ಗೆ ಹೇಳುವ ಧೈರ್ಯ ಆಗಿನ ರಂಗ ಕಲಾವಿದರು ತೋರಿದ್ದರು.

    ರಂಗ ಭೂಮಿಯ ಅನುಭವದ ಬಗ್ಗೆ ಸ್ವಲ್ಪ ಹೇಳುತ್ತೀರಾ ?
    ರಂಗಭೂಮಿಯನ್ನು ಪ್ರವೇಶಿಸಿದಾಗ ಕೂಡ ನಾನು ತಾಂತ್ರಿಕತೆಯ ಕಡೆ ಹೆಚ್ಚು ಆಕರ್ಷಣೆಗೊಂಡಿದ್ದೆ. ಆಗ ನಾನು ಲೈಟಿಂಗ್‌ನ್ನು ನೋಡಿಕೊಳ್ಳುತ್ತಿದ್ದೆ. ಆಗ ಯಾರೋ ನನಗೆ ನಿರ್ದೇಶನದ ಕಡೆ ಗಮನಹರಿಸುವಂತೆ ಹೇಳಿದರು.

    ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯ ನಾಟಕಗಳ ನಡುವೆ ವ್ಯತ್ಯಾಸವೇನು ?
    ಮುಂಚೆ ಕನ್ನಡ ರಂಗಭೂಮಿಯಲ್ಲಿ ಜಾತಿ ಸಮಸ್ಯೆ ತುಂಬಾ ಇದ್ದುದರಿಂದ ನಾನು ಇಂಗ್ಲಿಷ್‌ ರಂಗಭೂಮಿಯನ್ನು ಆರಿಸಿಕೊಂಡೆ. ಇಂಗ್ಲಿಷ್‌ ಭಾಷೆಯಲ್ಲಿ ನಿಮಗೆ ಜಗತ್ತಿನ ಸುಪ್ರಸಿದ್ದ ಕೃತಿಗಳು ಸಿಗುತ್ತವೆ. ಅದೇ ಸಮಯಕ್ಕೇ ತಾಂತ್ರಿಕತೆಗೆ ಹೆಚ್ಚು ಪ್ರಾಮುಖ್ಯತೆಯಿರುತ್ತದೆ. ನಿರೂಪಣಾ ಶೈಲಿಯಲ್ಲಿ ಬಿಗಿಯಿದ್ದು, ಭಾವನೆಗಳಲ್ಲಿ ಭಾಷೆ ಸ್ವಲ್ಪ ತೊಡಕಾಗುವ ಸಾದ್ಯತೆ ಇರುತ್ತದೆ.

    ರಂಗ ಭೂಮಿಯ ವೀಕ್ಷಕರಲ್ಲಿ ಏನಾದರೂ ಬದಲಾವಣೆ ಆಗಿದೆಯೆ ?
    ಹೌದು, ಕೆಲವು ಧನಾತ್ಮಕ ಬದಲಾವಣೆಗಳಾಗಿವೆ. ನಾಟಕಗಳ ಗುಣಮಟ್ಟ ಚೆನ್ನಾಗಿದ್ದರೆ ಜನ ಅದನ್ನು ನೋಡಲು ಬಂದೇ ಬರುತ್ತಾರೆ. ಟಿ.ವಿ.ಯಲ್ಲಿ ಬರುವ ಅನೇಕ ಕೆಟ್ಟ ಕಾರ್ಯಕ್ರಮ ಕೂಡ, ವೀಕ್ಷಕರನ್ನು ರಂಗಮಂದಿರಕ್ಕೆ ಕರೆತರುತ್ತಿದೆ.

    ಮಧ್ಯಮ ವರ್ಗದವರನ್ನು ಉದ್ದೇಶಿಸುವ ಚಲನಚಿತ್ರ ಹಾಗೂ ಟಿ.ವಿ. ಧಾರಾವಾಹಿಗಳು ಯಶಸ್ವಿಯಾಗುತ್ತವೆ. ಇವೆರಡನ್ನೂ ಹೊರತುಪಡಿಸಿ ಗರ್ವ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇಕೆ ?
    ಪ್ರೇಕ್ಷಕರು ಬೇರೆ ಬೇರೆ ರೀತಿಯ ಕಥೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಇತ್ತೀಚಿಗೆ ಬರುತ್ತಿರುವ ಧಾರಾವಾಹಿಗಳು ಪ್ರೇಕ್ಷಕರ ಅಭಿರುಚಿಯನ್ನು ಅವಮಾನಿಸುತ್ತಿವೆ. ಮೊದಲು ನಾನು ಕೂಡ ಒಂದು ಸೆಂಟಿಮೆಂಟ್‌ ಚಿತ್ರದ ಬಗ್ಗೆ ಯೋಚಿಸಿದ್ದೆ. ರಾಜಕೀಯ, ಆರ್ಥಿಕ ಹೀಗೆ ಅನೇಕ ವಿಷಯಗಳನ್ನು ಒಂದೇ ಚಿತ್ರಕಥೆಯಲ್ಲಿ ಅಳವಡಿಸಿಕೊಳ್ಳಬೇಕೆಂದಿದ್ದೆ. ಅದೇ ಯೋಚನೆಯ ಮೂಲಕ ಗರ್ವ ಸಿಧ್ದವಾಯಿತು.

    ಖ್ಯಾತ ಚಿತ್ರನಟ ಅನಂತನಾಗ್‌ ಅವರನ್ನು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಮನವೊಲಿಸಿದ್ದು ಹೇಗೆ ?
    ಮುಖ್ಯ ಪಾತ್ರ ಕಠಿಣವಾದ ವ್ಯಾಪಾರಿಯದು. ಅದನ್ನು ಸಾರಾಯಿ ವ್ಯಾಪಾರಿಯನ್ನಾಗಿ ಮಾಡಲಾಯಿತು. ಅದರಿಂದ ನೈತಿಕ ಹಾಗೂ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಏಳುವಂತೆ ಕಥೆಯನ್ನು ಹೆಣೆಯಲಾಯಿತು. ಅನಂತ್‌ ಅವರಿಗೆ ಚಿತ್ರಕಥೆಯನ್ನು ವಿವರಿಸಿದಾಗ, ಅವರು ಕಥೆಯನ್ನು ಬಹುವಾಗಿಯೇ ಮೆಚ್ಚಿಕೊಂಡರು, ಹಾಗೂ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದರು.

    ಗರ್ವದಲ್ಲಿ ಹಿರಿಯ ನಟರಾದ ಅನಂತನಾಗ್‌, ಭಾರ್ಗವಿ ನಾರಾಯಣ್‌ರೊಂದಿಗೆ ಯುವ ಕಲಾವಿದರ ಅಭಿನಯ ಕೂಡ ಚೆನ್ನಾಗಿತ್ತು. ಇದಲ್ಲದೆ ಅನೇಕ ಯುವ ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿವೆಯೇ?
    ಇದರಲ್ಲಿ ಹೆಚ್ಚಾಗಿ ತಪ್ಪು ಗ್ರಹಿಕೆ. ಬೆಂಗಳೂರಂಥಹ ನಗರದಲ್ಲಿ ಪ್ರತಿಭೆಗಳಿಗೆ ಬರವೇ ಇಲ್ಲ. ಅವಕಾಶ ಕೊಟ್ಟರೆ ನಿಮ್ಮ ಯೋಚನೆಯನ್ನೂ ಮೀರಿ ಕೆಲಸ ಮಾಡುತ್ತಾರೆ. ಗರ್ವದಲ್ಲಿ ಏನಾದರೂ ಕೊರತೆ ಕಂಡು ಬಂದರೆ ಅದು ನನ್ನ ತಪ್ಪೇ ಹೊರತು ಕಲಾವಿದರದಲ್ಲ.

    ನಿಮ್ಮ ಹೊಸ ಯೋಜನೆ 'ಸ್ಟಂಬ್ಲ್‌" ಬಗ್ಗೆ ಸ್ವಲ್ಪ ವಿವರಿಸುತ್ತೀರಾ?
    ಚಿತ್ರದ ಬಗ್ಗೆ ಹೇಳುವುದು ಸ್ವಲ್ಪ ಕಷ್ಟ. ಏಕೆಂದರೆ ಇದು ಚೆನ್ನಾಗಿದೆಯೆ ಅಥವಾ ಇಲ್ಲ ಅಂತ ಹೇಳುವುದು ತುಂಬಾ ಕಷ್ಟ. ಇಡೀ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸುವುದು ಕರ್ಮಭೂಮಿ ( ಆಫೀಸ್‌). ಚಿತ್ರದ ಹೆಚ್ಚು ಘಟನೆಗಳು ನಡೆಯುವುದು ಇಲ್ಲೇ.

    ದಿನನಿತ್ಯದ ಜೀವನದಲ್ಲಿ ಯಾವಾಗಲೂ ಕಾಡುವ ಸಮಸ್ಯೆಗಳಾದ ಭವಿಷ್ಯ, ಹಣ, ಮದುವೆ ಹೀಗೆ ಜೀವನದ ಅನೇಕ ಮಜಲುಗಳನ್ನು ಪರಿಚಯಿಸುವುದೇ ಚಿತ್ರದ ಮುಖ್ಯ ಉದ್ದೇಶ, ಹೀಗೆ 'ಸ್ಟಂಬ್ಲ್‌" ಪ್ರತಿ ಮನುಷ್ಯನ ಜೀವನದಲ್ಲಿ ನಡೆವ ಘಟನೆಗಳನ್ನು ಬಿಂಬಿಸುತ್ತದೆ.

    ಈ ಚಿತ್ರ ಇಂಗ್ಲೀಷಿನಲ್ಲೇ ಏಕೆ ?
    ಕೆಲವು ಇಂಗ್ಲೀಷ್‌ ಪದಗಳಿಗೆ ಕನ್ನಡದಲ್ಲಿ ಸಮನಾದ ಪದಗಳೇ ಇಲ್ಲ, ಉದಾ : Venture Capital, under selling, ಇಂಗ್ಲೀಷ್‌ ಪದಗಳಿಗೆ ಹೋಲಿಸಿದರೆ ಕನ್ನಡದ ಶಬ್ದ ಕೋಶ ಅಷ್ಟಾಗಿ ಬೆಳೆದಿಲ್ಲ. ಈ ದಿಸೆಯಲ್ಲಿ ನಮ್ಮ ಚಿತ್ರ ತಯಾರಕರು ತುಂಬಾ ಹಿಂದುಳಿದಿದ್ದಾರೆ. ಅನೈತಿಕವಾಗಿ ಹಣ ಗಳಿಸಿದ ಕೆಲವರು ಅದನ್ನು ಅಷ್ಟೇ ನೀರಸವಾಗಿ ಖರ್ಚು ಮಾಡುತ್ತಾರೆ. ಅಲ್ಲದೆ ಕೀಳು ಅಭಿರುಚಿಯ ಚಿತ್ರ ನಿರ್ಮಾಣಕ್ಕೆ ಭೂಗತ ಲೋಕದಿಂದಲೂ ಹಣ ಬರುತ್ತದೆ. ಈ ರೀತಿ ಹಣ ಹಾಕಿದ ನಿರ್ಮಾಪಕರು ಚಿತ್ರದ ಗುಣಮಟ್ಟ ಇಳಿಮುಖವಾಗುವಂತೆ ಮಾಡುತ್ತಾರೆ. ಈ ಚಿತ್ರ ಆ ಎಲ್ಲ ಚಿತ್ರ ತಯಾರಿಕರಿಗೆ ಒಂದು ಉತ್ತರವಾಗಿ ಪರಿಣಮಿಸಲಿದೆ. ಗುಣಮಟ್ಟ ಚೆನ್ನಾಗಿರುವರು ಮಾತ್ರ ಗೆಲ್ಲುತ್ತಾರೆ.

    ನಿಮ್ಮ ಇತರೆ ಹವ್ಯಾಸಗಳ ಬಗ್ಗೆ ಸ್ವಲ್ಪ ಹೇಳುತ್ತೀರಾ?
    ನಾನು ತುಂಬಾ ಓದುತ್ತೇನೆ ಹಾಗೂ ಸಂಗೀತ ಕೂಡ ನನಗಿಷ್ಟ. ನಮ್ಮಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ತುಂಬಾ ತಪ್ಪು ಗ್ರಹಿಕೆಯಿದೆ. ಭೂತ ಹಾಗೂ ವರ್ತಮಾನದ ಸಂಗೀತದ ಮಧ್ಯೆ ವ್ಯತ್ಯಾಸವಿದೆ. ಹಿಂದಿನ ಸಂಗೀತವನ್ನು ಆಧರಿಸಿ ನಾವು ಉತ್ತಮ ಸಂಗೀತವನ್ನು ನೀಡಬೇಕಾಗಿದೆ. ಈ ದಿಸೆಯಲ್ಲಿ ನಾವು ತುಂಬಾ ಶ್ರಮಿಸಬೇಕಿದೆ.

    ಒಂದು ಸಿನಿಮಾ ಮಾಡಲು ನಿಮಗೆ ಹೆಚ್ಚಿಗೆ ಬಂಡವಾಳ ಸಿಕ್ಕಾಗ ನೀವೇನು ಮಾಡುತ್ತೀರಿ ?
    ಮೊದಲನೆಯದಾಗಿ ಸಿನಿಮಾ ಮಾಡಲು ನನಗೆ ಜಾಸ್ತಿ ಹಣ ಬೇಡ. ಒಂದು ವೇಳೆ ನೀವು ಜಾಸ್ತಿ ಹಣ ಕೊಡುವುದಾದರೇ ಅದರಿಂದ ನಾನು ಸಮಾಜಕ್ಕೆ ಅನುಕೂಲವಾಗುವಂಥ ಒಂದು ಶಾಲೆ, ಉತ್ತಮ ಸೌಕರ್ಯಗಳುಳ್ಳ ಡಿಜಿಟಲ್‌ ಲೈಬ್ರರಿ ಹಾಗೂ ಡಿಜಿಟಲ್‌ ಕಾರ್ಯಾಲಯವನ್ನು ಪ್ರಾರಂಭಿಸುತ್ತೇನೆ.

    English summary
    Belawadis Quantum Physics! An interview
    Sunday, October 6, 2013, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X