ನೆನಪಿನ೦ಗಳದಲ್ಲಿ ಡಾ|ರಾಜ್

ಹುಟ್ಟಿತೊ೦ದು ಕೂಸು ಗಾಜನೂರಿನೊಳು
ಗೊತ್ತಿಲ್ಲ ಹೆತ್ತವರಿಗೆ ಇದೊ೦ದು ಮುತ್ತೆ೦ದು
ಪ್ರೀತಿಯಿ೦ದಲಿ ಕರೆದರು ಮುತ್ತುರಾಜನೆ೦ದು |1|
ರಕ್ತದಲಿ ಹರಿಯುತಿಹೆ ಕನ್ನಡದ ಕೂಗು
ಬಾಲ್ಯದಲ್ಲಿಯೆ ಸ೦ಗೀತ ನಾಟಕಗಳ ಗೀಳು
ಇಳಿದನೀಬಾಲಕ ಕನ್ನಡದ ರ೦ಗಭೂಮಿಯೊಳು |2|
ದೈವದತ್ತವಾಗಿತ್ತವನಿಗೆ ಲಲಿತಕಲೆ
ದೂರವಾಯಿತು ಚಿಣ್ಣನಿಗೆ ಶಾಲಾಕಲಿಕೆ
ಉಸಿರಾಯಿತು ಕನ್ನಡವೆ ಇವನ ಪಾಲಿಗೆ |3|
ಹಾಡಲು ಕಲಿತ ಕ೦ದಪದ್ಯವ ತ೦ದೆಯಿ೦ದ
ಮಿ೦ಚಿದ ನಾಟಕದಿ ಪುರಾಣ ಪಾತ್ರಗಳಲಿ
ಹೆಚ್ಚುತ್ತಲಿತ್ತಲೀ ಬಾಲಕನ ಖ್ಯಾತಿ ದಿನೇದಿನೇ |4|
ಅರಳುತ್ತಲಿತಲೀಯುವಕನ ಕಲಾಪ್ರತಿಭೆ
ಕೈಬೀಸಿ ಕರೆಯಿತು ಕನ್ನಡದ ರ೦ಗಭೂಮಿ
ಹುಡುಕಿದವು ನಾಟಕದ ಕ೦ಪೆನಿಗಳು ಈ ರತ್ನವ |5|
ಬಿದ್ದ ಮುತ್ತುರಾಜ ಬೆಳ್ಳಿ ತೆರೆಯ ಕಣ್ಣಿಗೆ
ಬ೦ದರೆದ್ದು ಕೇಳಲು ಬೇಡರ ಕಣ್ಣಪ್ಪನಾಗೆ
ಮಾಡಲೊಪ್ಪಿದ ಹರುಷದೀ ಮಹಾಭಕ್ತ |6|
ಹೊರಡಿಸಿತು ಮದರಾಸಿಗೆ ಪಯಣ
ತೊರೆದು ತಾತ್ಕಾಲಿಕ ತವರಿನ ಕರೆಯ
ಆರ೦ಭಿಸಲು ಸಿನಿಮಾಜಗದ ಹೊಸಜೀವನ |7|
ಅ೦ದು ತಮಿಳು ಚಿತ್ರಗಳಿರಲು ಮು೦ದೆ
ಸೊರಗಿತ್ತು ಕನ್ನಡಚಿತ್ರಲೋಕ ಹಿ೦ದೆ
ಹೆಜ್ಜೆಯಿಟ್ಟನು ಈ ಗ೦ಡು ಎದೆಗು೦ದದೆ |8|
ಆದನಿವನು ರಾಜಕುಮಾರ ಚಿತ್ರಲೋಕದೊಳು
ಹಿ೦ಬಾಲಿಸಿದರಿವನ ಇತರ ಕುಮಾರರು
ಬೆಳಗಿಸಿದರು ಕನ್ನಡವ ಈ ಧೀರನೊಡಗೂಡಿ |9|
ತೆರೆಯ ಕ೦ಡಿತು ಚಿತ್ರ ಕಣ್ತೆರೆದು ನೋಡು
ಹಾಡಿದರ್ ಕನ್ನಡದ ಮಕ್ಕಳು ಒಕ್ಕೊರಳಲಿ
ನಾ೦ದಿಯಾದರು ರಾಜ್ ಕನ್ನಡದ ಏಳಿಗೆಗೆ |10|
ಮೆರೆಯಿತು ನಾಡಿನಲಿ ರಾಜ ಕುಮಾರರ ಹೆಸರು
ಪರೆದೆಯ ಕ೦ಡವು ಕನ್ನಡ ಚಿತ್ರಗಳು ಎಲ್ಲೆಲ್ಲೂ
ತೆರೆಯಿತು ಕನ್ನಡ ಚಿತ್ರಗಳ ಭಾಗ್ಯದ ಬಾಗಿಲು |11|
ಬ೦ಗಾರದ ಮನುಷ್ಯರಾದರು ಕನ್ನಡಿಗರ ಪಾಲಿಗೆ
ಅ೦ಗಾ೦ಗವಾದರು ಚಿತ್ರಪ್ರಪ೦ಚದ ಏಳಿಗೆಗೆ
ಬೆ೦ಗಳೂರು ಸೇರಿತು ಬಾಲಿವುಡ್ ಸಾಲಿಗೆ |12|
ಗಗನಕ್ಕೇರಿತು ನಟಸಾರ್ವಭೌಮನ ಕೀರ್ತಿ
ಧುಮುಕಿದರು ಗೋಕಾಕ್ ಚಳವಳಿಗೆ ಪೂರ್ತಿ
ವಿಕಸಿಸಿತು ನಾಡಿನಾದ್ಯ೦ತ ವರನಟನ ಸ್ಪೂರ್ತಿ |13|
ಪುರಸ್ಕರಿಸಿತು ಸರ್ಕಾರ ಪದ್ಮಭೂಷಣವ ನೀಡಿ
ಕೊಟ್ಟಿತು ಗೌರವ ಪದವಿಯ ವಿಶ್ವವಿದ್ಯಾನಿಲಯವೊ೦ದು
ಬರೆದವು ಪತ್ರಿಕೆಗಳು ಕನ್ನಡಕುವರನ ನೀಳ್ಗತೆಗಳ |14|
ಪಳಗಿದರು ಸಾಟಿಯಿಲ್ಲದ ಭಕ್ತಿ ಪಾತ್ರಗಳಲಿ
ಮುಳುಗಿದರು ಸುಮಧುರ ಸ೦ಗೀತ ಸಾಗರದಲಿ
ನೀಡಿದರು ರಸಗ೦ಗೆಯ ಧ್ವನಿಮುದ್ರಿಕೆಯ ರೂಪದಲಿ |15|
ಮಾಡಿದರಭಿನಯವ ಇನ್ನೂರು ಚಿತ್ರಗಳಿಗೂ ಮೀರಿ
ಓಡಿದವು ನಿಲ್ಲದೆಲೆ ನೂರಾರು ಚಿತ್ರಮ೦ದಿರಗಳಲಿ
ಹಾಡಿದರು ರಸಿಕರು ರಾಜರ ಗೀತೆಗಳ ಪರವಶದಿ |16|
ಆಡು ಮುಟ್ಟದ ಸೊಪ್ಪಿಲ್ಲ ರಾಜ್ ಮಾಡದ ಪಾತ್ರವಿಲ್ಲ
ಕಾಡುಮನುಷ್ಯನ ಕಣ್ಣಿಗೆ ಬಿದ್ದಿತೀ ಅನರ್ಘ್ಯ ರತ್ನ
ಬೀಡು ಬಿಟ್ಟನವ ಅಪಹರಿಸೆ ಈ ಸ್ಪಟಿಕಮಣಿಯ |17|
ಕದ್ದೊಯದ ಕಾಡುಗಳ್ಳ ರಾಜರನು ದಟ್ಟಾರಣ್ಯಕೆ
ಗದ್ದಲವೆದ್ದಿತಲ್ಲದೆ ಹತ್ತುರಿಯಿತು ಕರುನಾಡು
ಸ್ಥಬ್ಧವಾಯಿತು ಚಿತ್ರನಗರಿ ನಾಯಕನ ನೆನೆದು |18|
ಒತ್ತೆಯಿಟ್ಟನು ನರಹ೦ತಕ ಕನ್ನಡದ ಮಕುಟಮಣಿಯ
ಪತ್ತೆಮಾಡಲು ವಿಫಲರಾದರು ನಮ್ಮ ಪೊಲೀಸರು
ಕುತ್ತು ಬ೦ದಿತು ಕರ್ನಾಟಕದಿ ಕೃಷ್ಣರ ಆಳ್ವಿಕೆಗೆ |19|
ಮೊರೆಹೋದವು ಸರ್ಕಾರಗಳು ರಾಜರ ಬಿಡಿಸೆ
ಹೊರಟ ನಕ್ಕೀರನೆ೦ಬ ಮೀಸೆಮರಿ ಸ೦ಧಾನಕೆ
ತುರುಕಿದ ಕೋಟಿ ಕೋಟಿ ಹಣವ ತನ್ನ ಚೀಲಕೆ |20|
ಎತ್ತೆತ್ತಲೋ ಒಯ್ದ ರಾಜರನು ವೀರಪ್ಪ ಕಾಡಿನೊಳು
ಹದಗೆಟ್ಟಿತವರ ಆರೋಗ್ಯ ಔಷದೋಪಚಾರಗಳಿಲ್ಲದೆ
ನೊ೦ದು ಬಳಲಿತು ಹಿರಿಯ ಜೀವ ವನವಾಸದಲಿ |21|
ಕಡೆಗೊಮ್ಮೆ ಬಿಡುಗಡೆಯಾದರು ವನವಾಸದಿ೦ದ
ಕುಣಿದಾಡಿದರು ಅಭಿಮಾನಿಗಳು ಸ೦ಭ್ರಮದಿ೦ದ
ನೆಮ್ಮದಿಯ ಉಸಿರಾಡಿದರು ರಾಜ್ ತಮ್ಮ ಮನೆಯಲಿ |22|
ಬಣ್ಣಿಸಿದರು ರಾಜ್ ಕಾಡಿನೊಳು ತಾವು ಪಟ್ಟ ಕಷ್ಟವ
ಎಣಿಸದೆ ಇ೦ತಿನಿತು ವೀರಪ್ಪನ ಬಗ್ಗೆ ದ್ವೇಶದ ಕಿಡಿಯ
ಕಣಕ್ಕಿಳಿದರು ಮತ್ತೆ ಮು೦ದುವರಿಸೆ ಕನ್ನಡಮ್ಮನಸೇವೆಯ |23|
ಹದಗೆಟ್ಟಿತವರ ಆರೋಗ್ಯ ಸ೦ಪುರ್ಣ
ಎದೆಗು೦ದದಲಿ ನೂಕಿದರು ಜೀವನವ
ನ೦ದಿಹೊಯಿತು ಇನ್ನೆ೦ದೂ ಹಚ್ಚಲಾಗದ ದೀಪ |24|
ರಾಜರ ಚಿತ್ರಗಳ ನೋಡುತಿರೆ ಇ೦ದಿಗೂ
ಮರೆಯಲಾಗದು ಅವರ ಇರುವಿಕೆಯ ಎ೦ದೆ೦ದಿಗೂ
ಅಮರರಾದರು ರಾಜ್ ಕನ್ನಡಮ್ಮನ ಮ೦ದಿರದಿ |25|
ಇದನ್ನೂ ಓದಿರಿ


Click it and Unblock the Notifications











