twitter
    For Quick Alerts
    ALLOW NOTIFICATIONS  
    For Daily Alerts

    ಮಯೂರಿ ಅಕಾ ಫ್ಲೋರಾ ಸೈನಿ ಸಂದರ್ಶನ

    By *ಜಯಂತಿ
    |

    ಕಣ್ಣಸುತ್ತಲ ಕಪ್ಪುವೃತ್ತವನ್ನು ದಪ್ಪ ಮೇಕಪ್ ಮುಚ್ಚಿತ್ತು. ಕಣ್ಣೊಳಗಿನ ಲೆನ್ಸ್ ಫಳಫಳ. ಅಸ್ಖಲಿತ ಇಂಗ್ಲಿಷ್. ನಡುನಡುವೆ ಹಿಂದಿ. ಫೋನ್ ರಿಂಗಿಸಿದರೆ ತೆಲುಗು. ಮೈಗಂಟಿದ ಕೆಂಪು, ಕಪ್ಪು ಕಾಂಬಿನೇಷನ್‌ನ ಉಡುಪು. ತುಂಬು ಜೌವನೆ. ವಿಸ್ಮಯ ಪ್ರಣಯ ಎಂಬ ಹೊಸ ಕನ್ನಡ ಚಿತ್ರದ ನಾಯಕಿಯಾಗಿರುವ ಮಯೂರಿ(ಫ್ಲೋರಾ ಸೈನಿ) ಎಲ್ಲಾ ಮಾತಿಗೂ ತೆರೆದುಕೊಂಡದ್ದು ಹೀಗೆ...

    ದೀರ್ಘ ಕಾಲ ಯಾಕೆ ಕನ್ನಡ ಚಿತ್ರಗಳಿಂದ ದೂರವಿದ್ದದ್ದು?
    'ಧಿಮಾಕು' ಆದಮೇಲೆ ತೆಲುಗಿನ ಆ ಇಂಟಿಲೊ ಎಂಬ ಚಿತ್ರದಲ್ಲಿ ಬ್ಯುಸಿಯಾದೆ. ಈಗ ಮತ್ತೆ ಒಳ್ಳೆಯ ಅವಕಾಶ ಕನ್ನಡದಲ್ಲಿ ಸಿಕ್ಕಿತು. ಅದಕ್ಕೇ ಬಂದೆ.

    ಧಿಮಾಕು ಚಿತ್ರದ ಅತ್ತೆ ಪಾತ್ರವನ್ನು ನೀವು ಒಪ್ಪಿದ್ದು ಹೇಗೆ?
    ನನಗೆ ಎರಡು ಸಲ ಆ ಪಾತ್ರವನ್ನು ನಿರಾಕರಿಸಿದೆ. ನವೀನ್ ಕೃಷ್ಣ ಕನ್‌ವಿನ್ಸ್ ಮಾಡಿದರು. ಆ ಚಿತ್ರದ ನಾಯಕಿ ನನ್ನ ಬಯಾಲಾಜಿಕಲ್ ಮಗಳಲ್ಲ. ಅವಳನ್ನು ನಾನು ದತ್ತು ತೆಗೆದುಕೊಂಡಿರುತ್ತೇನೆ. ಹಾಗಾಗಿ ಅದು ನನ್ನ ವಯಸ್ಸಿಗೆ ಹೊಂದದ ಪಾತ್ರವೇನೂ ಆಗಿರಲಿಲ್ಲ. ಸಿನಿಮಾ ನೋಡಿದ ಅನೇಕರು ಹೇಳಿದ ಮಾತೆಂದರೆ, ನಾನು ನಾಯಕಿಗಿಂತ ಚೆನ್ನಾಗಿದ್ದೀನಿ ಎಂಬುದು. ನನಗೆ ಬೇಕಾದ ಕಾಂಪ್ಲಿಮೆಂಟ್ ಅಲ್ಲೂ ಸಿಕ್ಕಿತಲ್ಲ.

    ಕನ್ನಡದ ಸ್ಕ್ರಿಪ್ಟನ್ನು ನೀವು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ?
    ನನಗೆ ಸ್ಕ್ರಿಪ್ಟ್‌ನಲ್ಲಿ ತೂಕ ಇದೆ ಅನ್ನಿಸಿದರೆ ಸಾಕು; ಪಾತ್ರವನ್ನು ಒಪ್ಪಿಕೊಳ್ಳುತ್ತೇನೆ. ನನಗೆ ವಿವರಿಸುವ ಚಿತ್ರತಂಡದವರಿಗೆ ಸ್ಕ್ರಿಪ್ಟ್‌ನ ಸಾರಾಂಶ ತಿಳಿಸುವ ಸಾಮರ್ಥ್ಯ ಇರುತ್ತದೆ. ಅವರ ಮಾತಿನಲ್ಲೇ ಚಿತ್ರದ ಯೋಗ್ಯತೆ ಏನು ಎಂಬುದು ಗೊತ್ತಾಗುತ್ತದೆ. ಎಷ್ಟೋ ಸಲ ನಾನು ಸ್ಕ್ರಿಪ್ಟ್ ಚೆನ್ನಾಗಿದ್ದು, ಅಂಥ ದೊಡ್ಡ ಪಾತ್ರ ಅಲ್ಲದಿದ್ದರೂ ಒಪ್ಪಿಕೊಂಡಿರುವ ಉದಾಹರಣೆ ಇದೆ.

    ನೀವು ಪಾಸ್‌ಪೋರ್ಟ್ ವಿವಾದಕ್ಕೆ ಸಿಲುಕಿದ್ದಿರಲ್ಲ?
    ನಾನು ತಪ್ಪು ಮಾಡಿಲ್ಲವೆಂಬುದು ನನಗಷ್ಟೆ ಗೊತ್ತು. ನಾನು ಜೈಲಿನಲ್ಲಿ ಕೂತಿದ್ದಾಗ ಅನುಭವಿಸಿದ ತಾಕಲಾಟಗಳೇನು ಎಂಬುದು ಬೇರೆಯವರಿಗೆ ಅರ್ಥವಾಗಲು ಸಾಧ್ಯವಿಲ್ಲ. ಒಬ್ಬ ಪತ್ರಕರ್ತರನ್ನು ಹೊರತುಪಡಿಸಿ ಮಿಕ್ಕವರಾರೂ ಜೈಲಿಗೆ ಬಂದು, ನನ್ನ ಪ್ರತಿಕ್ರಿಯೆಯನ್ನು ಕೇಳಲಿಲ್ಲ. ಹೊರಗೆ ಬಂದಮೇಲೆ ಮಾಧ್ಯಮ ಬರೆದದ್ದೆಲ್ಲವನ್ನೂ ಓದಿದೆ. ನನ್ನ ಬಗ್ಗೆ ನನಗೇ ಪಾಪ ಅನ್ನಿಸಿತು. ಮಾಧ್ಯಮಕ್ಕೂ ಬರೆಯುವುದು ಈಗ ವ್ಯಾಪಾರವಲ್ಲವೇ? ಅದು ಅವರ ಕೆಲಸ ಮಾಡಿಕೊಳ್ಳಲಿ ಅಂತ ಅಮ್ಮ ಬುದ್ಧಿಹೇಳಿದಳು. ನಾನು ಹಾಗಾದರೂ ಪ್ರಚಾರ ಸಿಕ್ಕಿತಲ್ಲ ಎಂದು ಸಮಾಧಾನ ಪಟ್ಟುಕೊಂಡೆ. ಆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ತೀರ್ಪು ಬಂದಮೇಲೆ ನಾನು ನಿರ್ದೋಷಿ ಎಂಬುದು ಗೊತ್ತಾಗುತ್ತದೆ.

    ಬಾಲಿವುಡ್ ಹಾಗೂ ದಕ್ಷಿಣ ಕನ್ನಡ ಚಿತ್ರಗಳ ನಡುವಿನ ಫರಕೇನು?
    ಬಾಲಿವುಡ್‌ನಲ್ಲಿ ಇರುವುದು ಶುದ್ಧ ಅಶಿಸ್ತು. ನಾಯಕ ಸಮಯಕ್ಕೆ ಸರಿತಾಗಿ ಶೂಟಿಂಗ್‌ಗೆ ಬರುವುದೇ ಇಲ್ಲ. ನಾನು ಎಷ್ಟೋ ಸಲ ಬೆಳಿಗ್ಗೆ ಮೇಕಪ್ ಮಾಡಿಕೊಂಡು, ಮಧ್ಯಾಹ್ನದ ನಂತರ ಮೊದಲ ಶಾಟ್ ಎದುರಿಸಿರುವ ಉದಾಹರಣೆ ಇದೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ವಿಷ್ಣುವರ್ಧನ್, ರಜನೀಕಾಂತ್, ವೆಂಕಟೇಶ್, ರವಿಚಂದ್ರನ್ ತರಹದ ಸೂಪರ್‌ಸ್ಟಾರ್‌ಗಳು ಕೂಡ ಸಮಯಕ್ಕೆ ಸರಿಯಾಗಿ ಶೂಟಿಂಗ್‌ಗೆ ಬರುತ್ತಾರೆ.

    ಈಗ ನಾಯಕರಾಗುತ್ತಿರುವ ಹೊಸಬರನ್ನು ನೋಡಿದರೆ ಏನನ್ನಿಸುತ್ತೆ?
    ಅನೇಕರಿಗೆ ದೇಹ ಬೆಳೆದಿರುತ್ತದೆ; ಬುದ್ಧಿ ಬೆಳೆದಿರುವುದಿಲ್ಲ. ಹಾಫ್‌ಪ್ಯಾಂಟ್ ಮಟ್ಟದಿಂದ ಮೇಲಕ್ಕೆ ಯೋಚಿಸುವುದೇ ಇಲ್ಲ. ನಾವೆಲ್ಲಾ ಚಿಕ್ಕವರಾಗಿದ್ದಾಗ ನಾಯಕರನ್ನು ಮಾದರಿ ಎಂದುಕೊಳ್ಳುತ್ತಿದ್ದೆವು. ಹದಿನೇಳು, ಹದಿನೆಂಟನೇ ವಯಸ್ಸಿಗೇ ನಾಯಕರಾಗುವವರಿಗೆ ಆ ಗಮ್ಮತ್ತು ಎಲ್ಲಿಂದ ಬರಬೇಕು?

    ವಿಸ್ಮಯ ಪ್ರಣಯದ ಪಾತ್ರ ಹೇಗಿದೆ?
    ನನ್ನನ್ನು ಸ್ಲ್ಪಿಟ್ ಕ್ಯಾರೆಕ್ಟರ್‌ನ ಪಾತ್ರ. ಸವಾಲಿನ ಪಾತ್ರವದು. ನನ್ನ ಪಾತ್ರವೇ ಚಿತ್ರದ ಜೀವಾಳ.

    ಪ್ರೀತಿ, ಪ್ರೇಮ, ಪ್ರಣಯ ಏನಾದರೂ ಇದೆಯೇ?
    ಒಂದು ಸಲ ಲವ್ವಲ್ಲಿ ಬಿದ್ದಿದ್ದೆ. ಅದು ಸರಿಯಲ್ಲ ಅಂತ ಗೊತ್ತಾದ ತಕ್ಷಣ ಆಚೆ ಬಂದೆ. ಸದ್ಯಕ್ಕೆ ಅದರ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಕೆರಿಯರ್ ಅಷ್ಟೇ ಮುಖ್ಯ.

    ಅದು ಸರಿ, ನಿಮ್ಮ ಹೆಸರು ಬದಲಿಸಿಕೊಂಡಿದ್ದೇಕೆ?
    ನ್ಯೂಮರಾಲಜಿಯನ್ನು ನಂಬುತ್ತೇನೆ, ಅದಕ್ಕೆ.

    ಯಾವ ಜ್ಯೋತಿಷಿ ನಿಮ್ಮ ಹೆಸರು ಬದಲಿಸಲು ಹೇಳಿದ್ದು?
    ಇಟಲಿಯನ್ ಜ್ಯೋತಿಷಿ ಹೇಳಿದ್ದು (ನಗು)

    Wednesday, August 5, 2009, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X