ರಾಧಿಕಾ ಪಂಡಿತ್ ಗೆ ಸಖತ್ ಖುಷಿ: ಬ್ರೇಕಿಂಗ್ ನ್ಯೂಸ್
ಕನ್ನಡದ ಪ್ರತಿಭಾವಂತ ನಟಿ ಎಂಬ ಹೆಗ್ಗಳಿಕೆಯ ರಾಧಿಕಾ ಪಂಡಿತ್ ಗೆ ಆ ವಿಷಯದಲ್ಲಿ ಯಾರೂ ಅಪಸ್ವರ ಎತ್ತುವಂತಿಲ್ಲ. ಕಾರಣ ಸತತ ಮೂರು ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಪ್ರಶಸ್ತಿಯ ನಟಿ ಎನಿಸಿಕೊಂಡಿರುವಾಕೆ. ವಿಭಿನ್ನ ಪಾತ್ರಗಳ ಬೇಟೆಗೆ ಹೆಸರಾಗಿರುವ ಈಕೆಯ ಕೈಯಲ್ಲೀಗ ಅಲೆಮಾರಿ, ಬ್ರೇಕಿಂಗ್ ನ್ಯೂಸ್, ಸಾಗರ್ ಮತ್ತು ಅದ್ಧೂರಿ, ಹೀಗೆ ನಾಲ್ಕು ಸಿನಿಮಾಗಳಿವೆ.
ಮಸಾಲೆ ಚಿತ್ರಗಳೇನೋ ಪರಾವಾಗಿಲ್ಲ, ಅಲ್ಲಿ ಹೆಚ್ಚು ಕಷ್ಟಗಳಿರುವುದಿಲ್ಲ. ಗಟ್ಟಿಯಾದ ಕಥೆ ಇರುವ ಕಠಿಣ ಪಾತ್ರಗಳಿಗೆ ಜೀವ ತುಂಬುವುದೆಂದರೆ ಹೇಳಿದಷ್ಟು ಸುಲಭವಲ್ಲ. ಆದರೆ ರಾಧಿಕಾ ಪಂಡಿತ್ ಮಾತ್ರ ಅದನ್ನು ತಪವೆಂದು ಪರಿಗಣಿಸುತ್ತಾರೆ. ಹಾಗೆ ಸವಾಲುಗಳನ್ನು ಮೆಟ್ಟಿ ನಿಲ್ಲುವುದೆಂದರೆ ಆಕೆಗೆ ಎಲ್ಲಿಲ್ಲದ ಖುಷಿ.
"ಅಲೆಮಾರಿಯಲ್ಲಿ ನನ್ನದು ಬ್ರಾಹ್ಮಣ ಹುಡುಗಿಯ ಪಾತ್ರ. ತಾಯಿಯಿಲ್ಲದ ತಬ್ಬಲಿ, ಮೌನಿ, ಸಮಾಧಾನಿ, ಅಂತರ್ಮುಖಿ ಬೇರೆ. ಆದರೆ ಬ್ರೇಕಿಂಗ್ ನ್ಯೂಸ್ ಇದಕ್ಕೆ ತದ್ವಿರುದ್ಧ. ಶ್ರದ್ಧಾ ಹೆಸರಿನ ನಾನಿಲ್ಲಿ ಶ್ರೀಮಂತೆ, ಹಠಮಾರಿ, ಮುಂಗೋಪಿ. ಇನ್ನೆರಡು ಚಿತ್ರಗಳದ್ದೂ ಅಷ್ಟೇ. ಇವುಗಳಿಗಿಂತ ಭಿನ್ನ ಕತೆ, ಪಾತ್ರ ಅಲ್ಲಿದೆ" ಎನ್ನುತ್ತಾರೆ ಅಚ್ಚ ಕನ್ನಡದ ಮಲ್ಲಿಗೆ ರಾಧಿಕಾ ಪಂಡಿತ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











