ದೀಪಾವಳಿ ನನ್ನ ಜೀವನದ ಟರ್ನಿಂಗ್ ಪಾಯಿಂಟ್
ಬೆಳಕಿನ ಹಬ್ಬ ದೀಪಾವಳಿ ಎಂದರೆ ಬಾಳು ಬೆಳಗುವ ಹಬ್ಬ. ಎಲ್ಲರ ಮೊಗದಲ್ಲೂ ನಗೆ ಬೀರುವ ಶಕ್ತಿ ಇರುವುದು ದೀಪಾವಳಿ ಹಬ್ಬಕ್ಕೆ. ಮನೆ ಮತ್ತು ಮನದ ಅಂಧಕಾರವನ್ನು ನೀಗುವ ಹಬ್ಬ ಅಲ್ಲವೆ? ಈ ಹಬ್ಬ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಎಂದಿದ್ದಾರೆ ನಟ ರಮೇಶ್ ಅರವಿಂದ್.
ಅವರು ಜನಮನದ ಜೀವನಾಡಿ 'ಉದಯವಾಣಿ' ಜೊತೆಗೆ ತಮ್ಮ ಸಡಗರ, ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಅವರ ವೃತ್ತಿಜೀವನದ ಮೊದಲ ಕಾರ್ಯಕ್ರಮ ದೂರದರ್ಶನದಲ್ಲಿ ದೀಪಾವಳಿ ಕಾರ್ಯಕ್ರಮವಾಗಿತ್ತು. ಅದಾದ ಬಳಿಕ ಅವರಿಗೆ ಬೆಳ್ಳಿಪರದೆ ಮೇಲೆ ಅವಕಾಶಗಳ ಬಾಗಿಲೇ ತೆರೆಯಿತು ಎಂದಿದ್ದಾರೆ.
ಸುಂದರ ಸ್ವಪ್ನಗಳು, ಮೌನಗೀತೆ ಹಾಗೂ ಅವಳ ಚರಿತ್ರೆ ಈ ಮೂರು ಚಿತ್ರಗಳ ಅವಕಾಶ ಬಂದಿದ್ದು ದೀಪಾವಳಿಯಲ್ಲೇ. ಹಾಗಾಗಿ ದೀಪಾವಳಿ ಎಂಬುದು ನನ್ನ ಪಾಲಿಗೆ ಸುಂದರ ಸ್ವಪ್ನಗಳಿದ್ದಂತೆ. ದೀಪಾವಳಿ ಹಬ್ಬ ಅಂದ್ರೆ ನಾವು ಬೆಳಗ್ಗೆ ಬೇಗನೆ ಎದ್ದು ಬಿಡ್ತಿದ್ವಿ. ಎಣ್ಣೆ ಸ್ನಾನ, ಬಳಿಕ ಇಡೀ ದಿವಸ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದೆವು ಎಂದು ತಮ್ಮ ಬಾಲ್ಯದ ದಿನಗಳಿಗೆ ರಮೇಶ್ ನೆನಪಿಸಿಕೊಂಡಿದ್ದಾರೆ.
ಆಗಿನ ದೀಪಾವಳಿಗೂ ಈಗಿನ ದೀಪಾವಳಿಗೂ ತುಂಬಾ ವ್ಯತ್ಯಾಸವಿದೆ. ಈಗ ಬರೀ ನೆಪಕ್ಕೆ ಮಾತ್ರ ಹಬ್ಬ ಆಚರಿಸುತ್ತಿದ್ದೇವೆ. ಮೊದಲ ಥರ ನೆಂಟರಿಷ್ಟರನ್ನು ಭೇಟಿ ಮಾಡಲ್ಲ. ರಿಚ್ಯುವಲ್ಸ್ ಇಲ್ಲ. ಕಾಲ ಮೇಲೆ ಕಾಲು ಹಾಕಿಕೊಂಡು ಟಿವಿ ನೋಡುತ್ತಾ, ಸಿನಿಮಾ ತಾರಯನ್ನು ನೋಡುವುದೇ ಹಬ್ಬ ಎಂದು ಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











