ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರಕ್ಕೆ ಪುನರ್ಜನ್ಮ ಪ್ರಾಪ್ತಿ
'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದ ಶೀರ್ಷಿಕೆ ಬದಲಾಗಿದೆ. ಈ ಚಿತ್ರಕ್ಕೆ 'ಮತ್ತೆ ಬನ್ನಿ ಪ್ರೀತ್ಸೋಣ' ಎಂದು ಹೆಸರಿಡಲಾಗಿದ್ದು ಎರಡನೆ ಬಾರಿಗೆ ರಾಜ್ಯದಾದ್ಯಂತೆ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕತೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ.
ರೆಬೆಲ್ ಸ್ಟಾರ್ ಅಂಬರೀಷ್ ಅವರ ಸಹಕಾರದೊಂದಿಗೆ 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ, ನಿರ್ಮಾಪಕ ರವೀಂದ್ರ ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಹಾಗಿದ್ದೂ ಚಿತ್ರಮಂದಿರದಿಂದ ಮೂರೇ ದಿನಕ್ಕೆ ಚಿತ್ರ ಎತ್ತಂಗಡಿಯಾಗಿತ್ತು.
ಈಗ ಚಿತ್ರ ಶೀರ್ಷಿಕೆಯಲ್ಲಿ 'ಐ ಯಾಮ್ ಸಾರಿ' ಕೈಬಿಟ್ಟಿದ್ದು 'ಮತ್ತೆ ಬನ್ನಿ ಪ್ರೀತ್ಸೋಣ' ಎಂದು ಹೆಸರಿಡಲಾಗಿದೆ. ಅಂಬರೀಷ್ ಅವರ ಸಹಕಾರದೊಂದಿಗೆ ಅ.21ರಂದು 25 ರಿಂದ 30 ಚಿತ್ರಮಂದಿರಗಳಲ್ಲಿ ರಾಜ್ಯದಾದ್ಯಂತ ಪುನಃ ಬಿಡುಗಡೆ ಮಾಡಲಾಗುತ್ತಿದೆ.
ಈ ಚಿತ್ರವನ್ನು ನೋಡಿದ ನಾನಾಗೌಡ ಬಿರಾದಾರ್ ಹಾಗೂ ಲೀಲಾ ಶಂಕರ್ ಎಂಬ ಪ್ರೇಕ್ಷಕರು ಮೆಚ್ಚಿ ಪುನಃ ಬಿಡುಗಡೆ ಮಾಡುತ್ತಿದ್ದಾರೆ. ಲೀಲಾ ಶಂಕರ್ ಅವರು ಚಿತ್ರದ ವಿಮರ್ಶೆಗಳನ್ನು ಪತ್ರಿಕೆಗಳಲ್ಲಿ ಓದಿ ಚಿತ್ರ ನೋಡಿದ್ದರಂತೆ. ಇಂತಹ ಅದ್ಭುತ ಚಿತ್ರ ಯಾಕೆ ಎತ್ತಂಗಡಿ ಆಯಿತು. ಅದನ್ನು ಪುನಃ ಯಾಕೆ ಬಿಡುಗಡೆ ಮಾಡಬಾರದು. ಪ್ರೀತ್ಸೋಣ ಚಿತ್ರವನ್ನು ಜನಕ್ಕೆ ತಲುಪಿಸೋಣ ಎಂಬುದು ಅವರ ಕಾಳಜಿ. ಅವರ ಈ ಕಾಳಜಿಗೆ ಅಂಬಿ ಕೂಡ ನೀರೆರೆದಿರುವುದು ವಿಶೇಷ. (ಒನ್‌ಇಂಡಿಯಾ ಕನ್ನಡ ಸಿನಿವಾರ್ತೆ)


Click it and Unblock the Notifications











