»   » ನಾ ಕಂ‌ಡ ರಾಜಕೀಯ:ನಟ ಶಾಸಕ ಜಗ್ಗೇಶ್ ಪುಸ್ತಕ

ನಾ ಕಂ‌ಡ ರಾಜಕೀಯ:ನಟ ಶಾಸಕ ಜಗ್ಗೇಶ್ ಪುಸ್ತಕ

Posted By:
Subscribe to Filmibeat Kannada

ನಾ ಕಂ‌ಡ ರಾಜಕೀಯ- ಇದು ಚಿತ್ರನಟ ಜಗ್ಗೇಶ್ ಅವರು ಬರೆಯುತ್ತಿರುವ ಪುಸ್ತಕದ ಹೆಸರು. ಜೀವನದಲ್ಲಿ ಒಂದು ಸಲ ಶಾಸಕನಾಗಬೇಕು ಎಂಬ ಮಹದಾಸೆಯನ್ನು ಈಡೇರಿಸಿಕೊಂಡಿರುವ ಜಗ್ಗೇಶ್ ತುರುವೇಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಮೂಲಕ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ.

'ಹೈತ್ತರೇ ಲಕಡಿ ಪಕಡಿ ಜುಮ್ಮ ..'ಹೀಗೆ ತಮ್ಮ ವಿಶಿಷ್ಠ ಮ್ಯಾನರಿಸಂನಿಂದ ಚಿತ್ರರಂಗದಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿರುವ ಜಗ್ಗೇಶ್, ಕಳೆದ ಸಲ ತುರುವೇಕೆರೆ ಕ್ಷೇತ್ರದಿಂದ ಸೋಲುಂಡಿದ್ದರು. ಚಿತ್ರನಟ ಎನ್ನುವ ಮಾತ್ರಕ್ಕೆ ಮತ ನೀಡುವುದಿಲ್ಲ ಎಂದು ಮತದಾರ ಇವರನ್ನು ತಿರಸ್ಕರಿಸಿದ್ದರು. ಸೋಲನುಭವಿಸಿದ ಜಗ್ಗೇಶ್ ಛಲದಂಕಮಲ್ಲನಂತೆ ಮತ್ತೆ ಕ್ಷೇತ್ರದ ಕಡೆಗೆ ಮುಖ ಮಾಡಿದರು. ಅನೇಕ ಜನಪರ ಕೆಲಸ ಮಾಡಿದರು. ಬಡವರಿಗೆ ಸಹಾಯಹಸ್ತ ಚಾಚಿದರು. ಪರಿಣಾಮ ಈ ಚುನಾವಣೆಯಲ್ಲಿ ವಿಧಾನಸಭೆಗೆ ಕಾಲಿಟ್ಟಿದ್ದಾರೆ.

ಬಹುದಿನದ ಕನಸು ನನಸಾದ ಈ ಶುಭ ಸಂದರ್ಭದಲ್ಲಿ ವಿಧಾನಸಭೆ ಮೊಗಸಾಲೆಯಲ್ಲಿ ಆತ್ಮೀಯ ಪತ್ರಕರ್ತ ಮಿತ್ರರನ್ನು ಕರೆದು' ಗುರುವೇ ನಾನು ಪುಸ್ತಕ ಬರಿತೀನಿ ಒಸಿ ಸುದ್ದಿ ಮಾಡಿಬಿಡಿ' ಅಂದರಂತೆ. ಮೊದಲೇ ಹಾಸ್ಯ ಚಟಾಕಿಯಲ್ಲಿ ಎತ್ತಿದ ಕೈ. ಸುಮ್ಮನೇ ಹೇಳುತ್ತಿರಬಹುದು ಎಂದು ಅಂದುಕೊಂಡರೆ ಇಲ್ಲ ಗುರುವೇ 'ನಾ ಕಂಡ ರಾಜಕೀಯ 'ಪುಸ್ತಕದ ಹೆಸರು ಅಂದರಂತೆ. ನಂತರ ಪುಸ್ತಕದ ಬಗ್ಗೇ ಹಂಚಿಕೊಂಡಿದ್ದು ಹೀಗೆ.

ನೂತನ ಸರಕಾರದ ಪ್ರಥಮ ಅಧಿವೇಶನದ ಮುನ್ನ ಆಯ್ಕೆಯಾಗಿರುವ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸಂದರ್ಭದಲ್ಲಿ ವಿಧಾನಸಭೆ ಮೊಗಸಾಲೆಯಲ್ಲಿ ಈ ವಿಷಯವನ್ನು ಹೊರಗೆಡವಿರುವ ಜಗ್ಗೇಶ್, ಪುಸ್ತಕ ಓದುವವರು ನಕ್ಕು ನಲಿಯಲಿದ್ದಾರೆ.

ನಟನೆ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ನುರಿತ ಕಲಾವಿದನಿಗಿಂತಲೂ ರಾಜಕಾರಣದಲ್ಲಿ ಅದ್ಭುತ ಕಲಾವಿದರಿದ್ದಾರೆ. ಇವರ ಮುಂದೆ ಚಿತ್ರ ಕಲಾವಿದರನ್ನು ನಿವಾಳಿಸಿ ಒಗೆಯಬೇಕು ಎಂದು ಹಾಸ್ಯಭರಿತವಾಗಿ ಹೇಳಿದರು. ನನ್ನ ನಟನೆಗೆ ರಾಜ್ಯ ಪ್ರಶಸ್ತಿ ಬರದಿದ್ದಕ್ಕೆ ಬೇಸರ ಮಾಡಿಕೊಂಡಿದ್ದೆ. ಆದರೆ ಅದ್ಭುತ ಅಭಿನಯ ಸಾಮರ್ಥ್ಯದ ರಾಜಕಾರಣಿಗಳನ್ನು ನೋಡಿದಾಗ ಅವರ ಮುಂದೆ ನಾನು ಏನೇನು ಅಲ್ಲ ಎಂದು ಸುಮ್ಮನಾದೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.

ಕಳೆದ ಒಂದೂವರೆ ವರ್ಷದಿಂದ ಪುಸ್ತಕ ಬರೆಯಲು ಕೈಹಾಕಿದೆ. ಈಗ ಸುಮಾರು 70 ಪುಟಗಳಷ್ಟು ಬರೆದಿದ್ದೇನೆ. ಶಾಸಕನಾಗಿ ಪಡೆಯುವ ಅನುಭವಗಳನ್ನು ಸೇರಿಸಿ ಇನ್ನು ಎರಡು ವರ್ಷಗಳ ನಂತರ ಪುಸ್ತಕವನ್ನು ಬಿಡುಗಡೆ ಮಾಡುವೆ ಎಂದು ಹೇಳಿದರು. ನಾನು ರಾಜಕೀಯದಲ್ಲಿ ತೊಡಗಿಸಿಕೊಂಡು ಏಳೆಂಟು ವರ್ಷಗಳಾಗಿವೆ. ಅಲ್ಲಿ ಅನುಭವಿಸಿರುವ ಅನೇಕ ಏಳುಬೀಳುಗಳು, ಅವಮಾನ ಮತ್ತು ಸಂತಸದ ಕ್ಷಣಗಳನ್ನು ದಾಖಲಿಸುವೆ ಎಂದು ಜಗ್ಗೇಶ್ ಹೇಳಿದರು.

(ದಟ್ಸ್ ಕನ್ನಟ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada