»   » ಸ್ಮಿತಾ ಎಂಬ ಮಂದಸ್ಮಿತ ನಖರಾವಾಲಿ

ಸ್ಮಿತಾ ಎಂಬ ಮಂದಸ್ಮಿತ ನಖರಾವಾಲಿ

Subscribe to Filmibeat Kannada

ಕನ್ನಡ ಚಿತ್ರರಂಗದವರಿಗೆ ಹಿತ್ತಲಗಿಡ ಯಾವತ್ತೂ ಮದ್ದಲ್ಲ. ಇಲ್ಲಿ ಸಾಕಷ್ಟು ಪ್ರತಿಭಾನ್ವಿತ ನಟಿಯರಿದ್ದರೂ ಬೇರೆ ಭಾಷೆಯ ಪ್ರತಿಭೆ(?)ಗಳಿಗೇ ಹೆಚ್ಚಿನ ಅವಕಾಶ ನೀಡುತ್ತಾರೆ. ಸ್ಥಳೀಯ ಪ್ರತಿಭೆಗಳು ಇಲ್ಲಿಯ ನಿರ್ಮಾಪಕರಿಗೆ ಕಾಲಕಸವಿದ್ದಂತೆ. ಇಲ್ಲಿನ ನಿರ್ಮಾಪಕರಿಗೆ ಪರಭಾಷಾ ಬಿಚ್ಚಮ್ಮಗಳ ಮೇಲೇ ಹೆಚ್ಚಿನ ಪ್ರೀತಿ.

ಮುಂತಾದವುಗಳು ಇಂದು, ಮುಂದು, ಎಂದೆಂದಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಕೇಳಿಬರುತ್ತಿರುವ ನುಡಿಮುತ್ತುಗಳು. ಅರವತ್ತೆಪ್ಪತ್ತೆಂಬತ್ತರ ದಶಕದಲ್ಲಿ ಪರಭಾಷಾ ನಟಿಯರಿದ್ದರೂ ಅವರು ಕನ್ನಡತಿಯರಂತೇ ಇದ್ದರು. ಜೊತೆಗೆ ಬೇರೆ ಕ್ಯಾಬರೆ ನಟಿಯರೂ ಇದ್ದರು. ಈ ಜಮಾನಾದಲ್ಲಿ ಕ್ಯಾಬರೆ ನಟಿಯರಿಗೆ ಇಲ್ಲಿ ಜಾಗವಿಲ್ಲ. ಅವರ ಸ್ಥಾನವನ್ನು ನಾಯಕಿಯರೇ ತುಂಬಿದ್ದಾರೆ.

ಪ್ರಸ್ತುತ ಕನ್ನಡದ ಪ್ರತಿಭೆಗಳಿಗೆ ಅವಕಾಶ ಸಿಗುತ್ತಲೇ ಇಲ್ಲವೆಂದರೆ ನಿರ್ಮಾಪಕ, ನಿರ್ದೇಶಕರು ಸಿಟ್ಟಿಗೇಳುತ್ತಾರೆ. ರಮ್ಯಾ, ರಕ್ಷಿತಾ, ರಾಧಿಕಾ, ಸುಧಾರಾಣಿ, ಶ್ರುತಿ ಮೊದಲಾದವರಿಗೆ ಒಂದಿಲ್ಲೊಂದು ಕಾಲದಲ್ಲಿ ಅಗ್ರಸ್ಥಾನ ದೊರಕಿದೆ. ಹೊಸ ಮುಖಗಳಿಗೂ ಸಾಕಷ್ಟು ಅವಕಾಶ ದೊರೆಯುತ್ತಿದೆ. ಆಟೋಗ್ರಾಫ್ ಪ್ಲೀಸ್ ಚಿತ್ರದ ದೀಪು, ಸವಿಸವಿ ನೆನಪು ಚಿತ್ರದ ತೇಜಸ್ವಿನಿ, ಇಂತಿ ನಿನ್ನ ಪ್ರೀತಿಯ ಸೋನು, ಅವ್ವ ಚಿತ್ರದ ಸ್ಮಿತಾ ಮೊದಲಾದವರು ತಮ್ಮ ಛಾಪು ಒತ್ತಲು ತುದಿಗಾಲಲ್ಲಿ ನಿಂತಿದ್ದಾರೆ.

ನಮ್ಮ ಕನ್ನಡ ನಟಿಯರಿಗೂ ಒಂದಷ್ಟು ಅವಕಾಶಗಳು ಸಿಗಲಿ ಎಂದು ಸೀತಾರಾಂ, ಸೂರಿಯಂಥ ನಿರ್ದೇಶಕರು ಮುದ್ದಾಂ ಕನ್ನಡತಿಯರನ್ನೇ ಆರಿಸುತ್ತಿದ್ದಾರೆ. ಆದರೆ, ಅರಳುತ್ತಿರುವ ಈ ಕೆಲ ಪ್ರತಿಭೆಗಳು ಎರಡನೇ ಚಿತ್ರದಿಂದಲೇ ನಖರಾ ಶುರು ಹಚ್ಚಿಕೊಂಡರೆ, ನಿರ್ಮಾಪಕರು ಪರಭಾಷಾ ನಟಿಯರತ್ತ ಮುಖ ಮಾಡಿದರೆ ತಪ್ಪೇನಿಲ್ಲ, ಅಲ್ವೆ? ಪ್ರತಿಭೆ, ಅದೃಷ್ಟ, ಅಂದ ಚೆಂದ ಇದ್ದರೆ ಅವಕಾಶಗಳು ತನ್ನಿತಾನೇ ಹುಡುಕಿಕೊಂಡು ಬರುತ್ತವೆ ಅನ್ನುವ ಮಾತು ಬೇರೆ. ಆದರೆ ಈಗೀಗ ಕನ್ನಡದ ನಾಯಕಿಯರ ಸಹವಾಸವೇ ಬೇಡಪ್ಪ ಎಂದು ನಿರ್ಮಾಪಕ, ನಿರ್ದೇಶಕರು ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದಾರೆ! ಕಾರಣ ಅವರು ಕೊಡುವ ಹಿಂಸೆ... ಒಂದೊಂದಲ್ಲ ಬಿಡಿ.

ನಾವು ಮಾತಾಡಲು ಹೊರಟಿರುವುದು 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದ ಪುಟ್ಟ ಪಾತ್ರದ ಮುಖಾಂತರ ಕಂಪನ್ನು ಬೀರಿದ ಸ್ಮಿತಾ ಎಂಬ ಎಣ್ಣೆಗೆಂಪು ಬಣ್ಣದ ಮುದ್ದು ಮುಖದ ಚೆಲುವೆಯ ಬಗ್ಗೆ. ಈಗ ಕವಿತಾ ಲಂಕೇಶ್‌ರ 'ಅವ್ವ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿ. ಇನ್ನೇನು ಅದು ಫೆ.8ಕ್ಕೆ ತೆರೆ ಕಾಣಲಿದೆ. ಚಿತ್ರದಲ್ಲಿ ಯಾವ ಪರಭಾಷಾ ನಟಿಗೂ ಕಮ್ಮಿಯಿಲ್ಲವೆಂಬಂತೆ ನಟಿಸಿದ್ದಾರೆ ಮತ್ತು ಚಿತ್ರದಲ್ಲಿ ಆಕೆ ನೀಡಿದ ತುಟಿಗೆ ತುಟಿ ಬೆಸೆದ ರೀತಿ ಆಕೆಯನ್ನು ಸದ್ಯಕ್ಕೆ ಹಾಟ್ ಫೆವರಿಟ್ ಅನ್ನಾಗಿ ಮಾಡಿದೆ.

ಸ್ಮಿತಾ ನಟಿಸುತ್ತಿರುವ ಹೊಸ ಚಿತ್ರ 'ದೀನ' ಚಿತ್ರತಂಡ ಈಕೆ ಕೊಟ್ಟ ಕಾಟಕ್ಕೆ ಹೈರಾಣಾಗಿದೆ. ಆಕೆ ಕೊಟ್ಟ ಪರಿಪರಿ ಹಿಂಸೆಗೆ ನಿರ್ದೇಶಕ ಸಹನಾ ಕಂಗಾಲಾಗಿದ್ದಾರೆ. ಕಾಲ್‌ಶೀಟ್ ಕೊಟ್ಟು ಸಮಯಕ್ಕೆ ಸರಿಯಾಗಿ ಬರದೆ ನಾಪತ್ತೆ ಆಗುವುದು. ಬಟ್ಟೆಗೊಂದು ಖ್ಯಾತೆ, ಘಳಿಗೆಗೊಂದು ನಖರಾ ಮಾಡುವುದು. ಫೋನ್ ಮಾಡಿದರೆ ಸ್ವಿಚ್ ಆಫ್ ಮಾಡುವುದು. ಹೀಗೆ ಎರಡು ಮೂರು ದಿನ ಆಟ ಆಡಿಸಿ ಕಾಟಾಚಾರಕ್ಕೆ ಒಂದು ದಿನ ಚಿತ್ರೀಕರಣಕ್ಕೆ ಬರುವುದು. ಹೀಗೆ ಮಾಡಿ ಕೊನೆಗೆ ಕೈಕೊಟ್ಟಿದ್ದಾಳೆ. ಹೇಗೋ ಚಿತ್ರೀಕರಣವನ್ನು ಮುಗಿಸಿಕೊಂಡು ಆಕೆಯನ್ನು ಸಾಗಹಾಕಿದ್ದಾರೆ ಚಿತ್ರೀಕರಣ ತಂಡದವರು.

ಮೂರನೇ ಚಿತ್ರಕ್ಕೇ ಈ ಪಾಟಿ ನಖರಾ ಮಾಡಿದರೆ ಹೇಗೆ? ಇದು ಸ್ಮಿತಾ ಒಬ್ಬಳ ಕತೆಯಲ್ಲ. ಈ ಪಟ್ಟಿಯಲ್ಲಿ ಇನ್ನ್ನೂ ಸಾಕಷ್ಟು ಜನರಿದ್ದಾರೆ. ಹಾಗಾಗಿ ಕನ್ನಡತಿಯರು ಎಂದರೆ ಗಾಬರಿ ಬೀಳುತ್ತಾರೆ ಎಲ್ಲಾ ಚಿತ್ರತಂಡವರು. ಪರಭಾಷಾ ನಟಿಯರಾದರೆ ಹೇಳಿದ ಟೈಮಿಗೆ ಬಂದು, ಕ್ಯಾತೆ ಗೀತೆ ತೆಗೆಯದೆ ಕೆಲಸ ಮುಗಿಸಿಕೊಟ್ಟು ಒಂದು ನೆನಪು ಉಳಿಸಿ ಹೋಗುತ್ತಾರಂತೆ. ಕನ್ನಡತಿಯರನ್ನು ಬಿಟ್ಟು ಪರಭಾಷಿಕರಿಗೆ ಮಣೆ ಹಾಕುವುದು ಯಾಕೆ ಅಂತ ಈಗಲಾದರೂ ಗೊತ್ತಾಯಿತಾ?

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada