»   » ಹಾಡಿನೊಂದಿಗೆ 'ಮುಸ್ಸಂಜೆ ಮಾತು' ಮುಕ್ತಾಯ

ಹಾಡಿನೊಂದಿಗೆ 'ಮುಸ್ಸಂಜೆ ಮಾತು' ಮುಕ್ತಾಯ

Subscribe to Filmibeat Kannada

ಹೆಸರಾಂತ ಜಂಕಾರ್ ಸಂಸ್ಥೆಯ ಮೂರನೇ ಕೊಡುಗೆ, ಸುದೀಪ್ ಹಾಗೂ ರಮ್ಯ ಅಭಿನಯದ ಮುಸ್ಸಂಜೆ ಮಾತು ಚಿತ್ರದ ಚಿತ್ರೀಕರಣ ಹಾಡಿನೊಂದಿಗೆ ಪೂರ್ಣವಾಗಿದೆ. ಚಿತ್ರಕ್ಕೆ 70ದಿನಗಳ ಕಾಲ ಮಾತಿನಭಾಗದ ಚಿತ್ರೀಕರಣ ನಡೆಸಿದ ನಿರ್ದೇಶಕ ಮಹೇಶ್ ಇತ್ತೀಚೆಗೆ ಎರಡು ಹಾಡುಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.

"ನಿನ್ನ ನೋಡಲೆಂತೋ..ಮಾತನಾಡಲೆಂತೋ..ಮನಸ ತಿಳಿಯಲೆಂತೋ..ಪ್ರೀತಿ ಹೇಳಲೆಂತೋ" ಎಂಬ ಸಾಹಿತಿ ರಾಮ್‌ನಾರಾಯಣ್ ಬರೆದಿರುವ ಹಾಡಿಗೆ ಸುದೀಪ್, ರಮ್ಯ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಹೆಜ್ಜೆಹಾಕಿದರು. ಕೂಲ್ ಜಯಂತ್ ಈ ಗೀತೆಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಸಂಗೀತ ನಿರ್ದೇಶಕ ವಿ.ಶ್ರೀಧರ್ ರಚಿಸಿರುವ "ಏನಾಗಲಿ ಮುಂದೆ ಸಾಗಲಿ....ಬಯಸಿದ್ದು ಸಿಗದು ಬಾಳಲಿ..." ಎಂಬ ಗೀತೆಯನ್ನು ಮೈಸೂರು- ಕೆ ಆರ್ ನಗರದ ನಡುವೆ ಚಲಿಸುವ ರೈಲಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಸುದೀಪ್, ರಮ್ಯ ಪಾಲ್ಗೊಂಡ ಈ ಹಾಡಿನ ಚಿತ್ರೀಕರಣಕ್ಕಾಗಿ ಸುಮಾರು 75ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಮೇಲ್ಕಂಡ ಹಾಡುಗಳ ಚಿತ್ರೀಕರಿಸಿಕೊಳ್ಳುವುದರೊಂದಿಗೆ ಚಿತ್ರೀಕರಣ ಪೂರ್ಣಗೊಂಡಾಗ ಎಲ್ಲರ ಕಣ್ಣಲ್ಲೂ ಆನಂದ ಭಾಷ್ಪ. ಇದಕ್ಕೆ ಕಾರಣ ಚಿತ್ರತಂಡದಲ್ಲಿದ ಹೊಂದಾಣಿಕೆ. ಚಿತ್ರೀಕರಣ ಸಮಯದಲ್ಲಿ ನಮ್ಮ ತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಒಂದೇ ಕುಟುಂಬದ ಸದಸ್ಯರ ಹಾಗಿದ್ದು ನಮಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆಂದು ಸುರೇಶ್‌ಜೈನ್ ಸಂತಸ ವ್ಯಕ್ತ ಪಡೆಸಿದ್ದಾರೆ. ನಿರ್ಮಾಣದಲ್ಲಿ ಯಾವುದೇ ಕುಂದುಕೊರತೆ ಬಾರದಂತೆ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಭರತ್‌ಜೈನ್ ಚಿತ್ರತಂಡದ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಮಹೇಶ್ ಮೊದಲ ಬಾರಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಮುಸ್ಸಂಜೆ ಮಾತು ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ಸಂಯೋಜಿಸಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ಶ್ರೀ ಸಂಕಲನ, ವಿ.ಮನೋಹರ್, ಶ್ರೀಧರ್, ಕವಿರಾಜ್, ರಾಮ್‌ನಾರಾಯಣ್ ಗೀತರಚನೆ, ಮೋಹನ್ ಕಲೆ, ಚಿನ್ನಿಪ್ರಕಾಶ್ ನೃತ್ಯ, ರವಿವರ್ಮ ಸಾಹಸ ಹಾಗೂ ಕುಮಾರ್, ನರಸಿಂಹ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ರಮ್ಯ, ರಮೇಶ್‌ಭಟ್, ಅನುಪ್ರಭಾಕರ್, ಭರತ್‌ಭಾಗವತರ್, ಅಶ್ವತ್ ನೀನಾಸಂ, ಹೊನ್ನವಳ್ಳಿ ಕೃಷ್ಣ, ಎಂ.ಎಸ್.ಉಮೇಶ್, ಮೇಘಶ್ರೀ ಭಾಗವತರ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada