»   » ಕನ್ನಡ ಚಿತ್ರರಂಗದಲ್ಲೀಗ ಕಲ್ಯಾಣ ಯೋಗ. ತಾರೆಯರೆಲ್ಲ ಮದುವೆಗೆ ಮನಸ್ಸು ಮಾಡಿದಂತಿದೆ. ಸದ್ಯಕ್ಕೆ‘ಬಾರೊ ಬಾ ಕಲ್ಯಾಣ ಮಂಟಪಕೆ ಬಾ’ ಎಂದು ಕಲ್ಯಾಣ ರಾಗ ಹಾಡುತ್ತಿರುವಾಕೆ ನಟಿ ಪ್ರೇಮಾ ! ‘ಆಹಾ ಪ್ರೇಮ ಮದುವೆಯಂತೆ’ ಎಂದು ಇಡೀ ಗಾಂಧಿನಗರ ಪಿಸುಗುಟ್ಟುತ್ತಿದೆ ; ನೀವು ಕೇಳಿಸಿಕೊಂಡಿರಾ ?

ಕನ್ನಡ ಚಿತ್ರರಂಗದಲ್ಲೀಗ ಕಲ್ಯಾಣ ಯೋಗ. ತಾರೆಯರೆಲ್ಲ ಮದುವೆಗೆ ಮನಸ್ಸು ಮಾಡಿದಂತಿದೆ. ಸದ್ಯಕ್ಕೆ‘ಬಾರೊ ಬಾ ಕಲ್ಯಾಣ ಮಂಟಪಕೆ ಬಾ’ ಎಂದು ಕಲ್ಯಾಣ ರಾಗ ಹಾಡುತ್ತಿರುವಾಕೆ ನಟಿ ಪ್ರೇಮಾ ! ‘ಆಹಾ ಪ್ರೇಮ ಮದುವೆಯಂತೆ’ ಎಂದು ಇಡೀ ಗಾಂಧಿನಗರ ಪಿಸುಗುಟ್ಟುತ್ತಿದೆ ; ನೀವು ಕೇಳಿಸಿಕೊಂಡಿರಾ ?

Subscribe to Filmibeat Kannada

*ರಾಜು ಮಹತಿ

ಸ್ವರ್ಣಕಮಲ ಪ್ರಶಸ್ತಿ ವಿಜೇತ ‘ದ್ವೀಪ’ ಸಿನಿಮಾದ ನಾಯಕಿ-ನಿರ್ಮಾಪಕಿ ಸೌಂದರ್ಯ ಮದುವೆಗೆ ಮನಸ್ಸು ಮಾಡಿರುವ ಸುದ್ದಿ ಹೆಚ್ಚೂ ಕಡಿಮೆ ಖಚಿತವಾಗಿರುವಂತೆಯೇ, ಗಾಂಧಿನಗರದಿಂದ ಮತ್ತೊಂದು ಮದುವೆಯ ಸಮಾಚಾರ ಬಂದಿದೆ. ಈ ಬಾರಿ ಚಾಲ್ತಿಯಲ್ಲಿರುವ ಹೆಸರು ಪ್ರೇಮಾ !

‘ಆಹಾ ಪ್ರೇಮ ಮದುವೆಯಂತೆ’ ಎಂದು ಇಡೀ ಗಾಂಧಿನಗರವೇ ಪಿಸುಗುಟ್ಟುತ್ತಿದೆ. ಆದರೆ, ಪ್ರೇಮಾ ಮದುವೆ ಯಾವಾಗ ಅನ್ನುವುದು ಮಾತ್ರ ಖಚಿತವಾಗಿಲ್ಲ . ಸದ್ಯಕ್ಕದು ಗುಟ್ಟು !

ಪ್ರೇಮಾ ಜೊತೆಯಲ್ಲಿ ಕೇಳಿಬರುತ್ತಿರುವ ಹುಡುಗನ ಹೆಸರು ಯಾವುದೆನ್ನುವುದನ್ನು ಊಹಿಸಬಲ್ಲಿರಾ ? ಉಪೇಂದ್ರ ಎಂದು ನೀವು ಅಂದುಕೊಂಡಿದ್ದರೆ ಅದು ಸುಳ್ಳು. ‘ಉಪೇಂದ್ರ’ ಸಿನಿಮಾ ನಿರ್ಮಾಣದ ಆಜೂಬಾಜು ಸಂದರ್ಭದಲ್ಲಿ ಪ್ರೇಮಾ ಹಾಗೂ ಉಪೇಂದ್ರ ಮದುವೆಯಾಗುತ್ತಾರೆ ಎನ್ನುವ ಗುಲ್ಲು ಹಬ್ಬಿದ್ದುದು ನಿಜ. ಆದರೆ, ಆನಂತರ ಉಪೇಂದ್ರ ಚಿತ್ರದ ‘ಏನಿಲ್ಲ ಏನಿಲ್ಲ , ನನ್ನ ನಿನ್ನ ನಡುವೆ ಏನಿಲ್ಲ’ ಎನ್ನುವ ಹಾಡಿನಂತೆ ಉಪ್ಪಿ-ಪ್ರೇಮ ಅರ್ಥಗರ್ಭಿತವಾಗಿ ದೂರಾದರು.

‘ಸೈನಿಕ’ ಖ್ಯಾತಿಯ ಸಿ.ಪಿ.ಯೋಗೇಶ್ವರ್‌ ಜೊತೆಯೂ ಪ್ರೇಮಾ ಹೆಸರು ತಳುಕು ಹಾಕಿಕೊಂಡಿತ್ತು . ಆದರೆ ಅದ್ಯಾವುದು ಗಟ್ಟಿಯಾಗದೇ, ಸುದ್ದಿ ಮನೆಯಲ್ಲೇ ಆ ಸುದ್ದಿಗಳು ಕರಗಿಹೋದವು. ಸದ್ಯಕ್ಕೆ ಪ್ರೇಮಾ ಜೊತೆಯಲ್ಲೇ ಕೇಳಿಬರುತ್ತಿರುವ ಹುಡುಗನ ಹೆಸರು - ಶಿವಧ್ವಜ !

ನಾಗಾಭರಣ ನಿರ್ದೇಶನದ ‘ನೀಲಾ’ ಸಿನಿಮಾ ನೋಡಿದ್ದೀರಾ ? ನೋಡಿದ್ದರೆ ಶಿವಧ್ವಜನನ್ನೂ ನೋಡಿಯೇ ಇರುತ್ತೀರಿ. ಇದೇ ಶಿವಧ್ವಜ ‘ಪ್ರೇಮ’ ಅನ್ನುವ ಸಿನಿಮಾದಲ್ಲೂ ನಟಿಸಿದ್ದಾನೆ. ಪ್ರೇಮಾ ನಾಯಕಿಯಾಗಿರುವ ‘ಪ್ರೇಮ’ ಚಿತ್ರದ ನಾಯಕ ಶಿವಧ್ವಜ. ಚಿತ್ರೀಕರಣದ ಸಂದರ್ಭದಲ್ಲೇ ಪ್ರೇಮ ಅಂಕುರಿಸಿತು ಅನ್ನುವುದು ಸುದ್ದಿ.

ಪ್ರೇಮಾ ನಟಿಸಿರುವ, ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ‘ಸಿಂಗಾರೆವ್ವ’ ಚಿತ್ರದಲ್ಲೂ ಶಿವಧ್ವಜ ಅಭಿನಯಿಸಿದ್ದಾರೆ. ಇತ್ತೀಚೆಗೆ ಪ್ರೇಮಾ ಒಪ್ಪಿಕೊಳ್ಳುತ್ತಿರುವ ಚಿತ್ರಗಳಲ್ಲಿ ಶಿವಧ್ವಜನಿಗೂ ಪಾತ್ರಗಳು ಸಿಕ್ಕುತ್ತಿವೆ. ‘ನಮ್ಮ ಶಿವಧ್ವಜನಿಗೂ ಒಂದು ಪಾತ್ರ ಕೊಡಿ’ ಎಂದು ಮಗಳ ಕಾಲ್‌ಷೀಟ್‌ ಕೇಳಲು ಬಂದವರನ್ನು ಪ್ರೇಮಾ ಅಪ್ಪ ಕೇಳುತ್ತಿದ್ದಾರಂತೆ.

ಸ್ವಲ್ಪ ದಿನಗಳ ಹಿಂದಷ್ಟೇ ‘ಮದುವೆ ಬಗ್ಗೆ ಇನ್ನೂ ಯೋಚಿಸಿಲ್ಲ ’ ಎಂದೇ ಪ್ರೇಮಾ ಹೇಳುತ್ತಿದ್ದರು. ಈಗ ಮದುವೆಯ ಬಗ್ಗೆ ಪ್ರೇಮಾರನ್ನು ಕೇಳಿ ; ಈಗಲೂ ಏನನ್ನೂ ಹೇಳುವುದಿಲ್ಲ , ನಿರಾಕರಿಸುವುದೂ ಇಲ್ಲ .

ಸದ್ಯಕ್ಕೆ ಪ್ರೇಮಾ ಕೈಯಲ್ಲಿ ಹೇಳಿಕೊಳ್ಳುವಂಥ ಭಾರೀ ಚಿತ್ರಗಳು ಇಲ್ಲ . ಆದರೆ ಆರಕ್ಕೇರದ ಪ್ರೇಮಾ ಯಾವತ್ತೂ ಮೂರಕ್ಕಿಳಿದುದಿಲ್ಲ . ರವಿಚಂದ್ರನ್‌, ವಿಷ್ಣುವರ್ಧನ್‌ರಂಥ ಹಿರಿಯ ನಟರಿಂದ ಹಿಡಿದು- ಇತ್ತೀಚಿನ ಅಲಂಕಾರ್‌, ಶಿವಧ್ವಜ್‌ಗೂ ಪ್ರೇಮಾ ನಾಯಕಿ. ಇನ್ನೂ ತೆರೆ ಕಾಣದ ‘ಸಿಂಗಾರೆವ್ವ’ ಚಿತ್ರದ ಬಗೆಗಂತೂ ಪ್ರೇಮಾಗೆ ಭಯಂಕರ ನಿರೀಕ್ಷೆಯಿದೆ. ಈ ಚಿತ್ರ ಪ್ರೇಮಾಗೆ ಪ್ರಶಸ್ತಿ ತಂದುಕೊಡಬಹುದು ಎಂದು ಗಾಂಧಿನಗರದ ಪಂಡಿತರು ಹೇಳುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲೀಗ ಕಲ್ಯಾಣ ಯೋಗ ಅನ್ನಿಸುತ್ತದೆ. ಮಾಲಾಶ್ರೀ, ಶ್ರುತಿ ಹಾಗೂ ಸುಧಾರಾಣಿ ಮದುವೆಯಾಗಿ ಮಕ್ಕಳ ಆಡಿಸುತ್ತಿದ್ದರೆ, ಅನುಪ್ರಭಾಕರ್‌-ಕೃಷ್ಣಕುಮಾರ್‌ ಜೋಡಿ ಇನ್ನೂ ಹೊಸ ದಂಪತಿಗಳಂತೆ ಚುರುಕಾಗಿ ಓಡಾಡುತ್ತಿದ್ದಾರೆ. ಈ ನಡುವೆ ದುಂಬಿಯ ಆದರ್ಶನೊಂದಿಗೆ ನಟಿ ರಾಧಿಕಾ ಮದುವೆಯ ಸುದ್ದಿ ಕೇಳಿಸುತ್ತಿದೆ. ಈಗ ಪ್ರೇಮಾ ಸರದಿ.

ಕಲ್ಯಾಣ ಯೋಗದ ಸಾಲಿನಲ್ಲಿ ಇನ್ನೂ ಯಾರ್ಯಾರು ನಿಂತಿದ್ದಾರೋ ? ತಾರಾ ಯಾಕೋ ಮಾತಾಡುತ್ತಿಲ್ಲ

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada