»   » ಜಾಲಿ ಬಾರಿನ ಗೆಳೆಯರ ಬಳಗದಲ್ಲಿ ಅನಂತ ನಾದ.

ಜಾಲಿ ಬಾರಿನ ಗೆಳೆಯರ ಬಳಗದಲ್ಲಿ ಅನಂತ ನಾದ.

Posted By: Super
Subscribe to Filmibeat Kannada

ಅನಂತ್‌ನಾಗ್‌ ನಿತ್ಯ ತಪ್ಪದೆ ಗುಂಡು ಹಾಕುತ್ತಾರೆ. ರಂಗೇರಿದ ನಂತರ ಮಾತು ಹೊನಲಾಗುತ್ತದೆ. ಗರ್ವ ಧಾರಾವಾಹಿಗೆ ಸರಬರನೆ ಪರದೆ ಎಳೆಯಲು ಹೊರಟಿರುವ ಈ ಟಿವಿ ಮತ್ತು ತಮ್ಮ ಇಮೇಜನ್ನು ಮಾತ್ರ ಹಾಳು ಗೆಡಹುವ ಮಾಧ್ಯಮಗಳನ್ನು ತಮ್ಮದೇ ಆದ ವರಸೆಯಲ್ಲಿ ಅನಂತ್‌ ಹಿಗ್ಗಾಮುಗ್ಗಾ ಬೈಯುತ್ತಾರೆ.

ಇತ್ತೀಚೆಗಷ್ಟೇ ಬೆಂಗಳೂರಿನ ಗಾಲ್ಫ್‌ ಕ್ಲಬ್‌ನಲ್ಲಿ ಗರ್ವ ಧಾರಾವಾಹಿ 175 ಕಂತು ಪೂರೈಸಿದ ಸಂದರ್ಭದ ಸಿಹಿ ಮತ್ತು ಅದನ್ನು ಬೇಗ ಮುಗಿಸಬೇಕೆನ್ನುವ ಈ-ಟಿವಿ ಆದೇಶದ ಕಹಿ ಸಮಾರಂಭ ನಡೆಯಿತು. ಗರ್ವ ಧಾರಾವಾಹಿಯ ಬಗ್ಗೆ ಅನಂತ್‌ಗೆ ಎಲ್ಲಿಲ್ಲದ ಗರ್ವ. ಅದರ ಹಿಂದಿನ ಶ್ರಮವೂ ಅಂಥದ್ದೇ. ದೊಡ್ಡ ಸಂಶೋಧನಾ ಪ್ರಬಂಧದಲ್ಲೂ ದಕ್ಕದ ವಿಷಯಗಳು ಇದರಲ್ಲುಂಟು. ರೈತರ ಸಮಸ್ಯೆ, ಪೇಟೆಂಟ್‌, ಮಾಹಿತಿ ತಂತ್ರಜ್ಞಾನ, ಮದ್ಯೋದ್ಯಮ, ಬೆಳೆ ವಿಮೆ, ಯುವ ಚಾವಡಿ, ಎನ್‌ಜಿಓಗಳ ಸ್ಥಿತಿ- ಗತಿ...ಹೀಗೆ ದೊಡ್ಡ ಕ್ಯಾನ್‌ವಾಸ್‌ನ ಅರ್ಥಪೂರ್ಣ ಮೆಗಾ ಧಾರಾವಾಹಿ ಇದು.

ಗರ್ವದ ಬಗ್ಗೆ ನಮಗಿಲ್ಲ ಗರ್ವ. ಅದು ಚಿಕ್ಕಾಸೂ ತರಲಿಲ್ಲ. ಒಂದೂ ಜಾಹಿರಾತು ಇಲ್ಲವೇ ಇಲ್ಲ. ಬೇಗ ಮುಗಿಸಿ. ಇಲ್ಲವೇ ಕಾಮಿಡಿ, ಸೆಂಟಿಮೆಂಟ್‌ಗಳನ್ನು ಹೆಚ್ಚಿಸಿ- ಎಂದು ರಾಮೋಜಿ ರಾವ್‌ ಕ್ಯಾಪ್ಟನ್ಸಿಯ ಈ-ಟಿವಿ ಆಜ್ಞೆ ಕೊಟ್ಟಿದೆ. ಆದರೆ ನಿರ್ದೇಶಕ ಪ್ರಕಾಶ್‌ ಬೆಳವಾಡಿ ರಾಜಿಗೆ ತಯಾರಿಲ್ಲ.

ನಾವು ನಮ್ಮದೇ ನೋಡುಗ ಬಳಗ ಕಂಡುಕೊಂಡಿದ್ದೇವೆ. ಮಾಸ್‌ಗೆ ಇದು, ಕ್ಲಾಸ್‌ಗೆ ಇದು ಅಂತ ನಾವು ಧಾರಾವಾಹಿ ಮಾಡಲ್ಲ. ನಮ್ಮ ಉದ್ದೇಶಕ್ಕೆ ತಕ್ಕಂಥ ಸ್ಕಿೃಪ್ಟ್‌ ಇದು. ಇದನ್ನು ಯಾವುದೇ ಕಾರಣಕ್ಕೂ ತಿದ್ದೋಕೆ ನಾವು ಸಿದ್ಧರಿಲ್ಲ ಎಂಬ ಕಡ್ಡಿ ಮುರಿದಂಥ ಮಾತು ಬೆಳವಾಡಿಯವರದ್ದು. ಒಂದು ವೇಳೆ ಈ-ಟಿವಿಯವರು ಎತ್ತಂಗಡಿಗೆ ಹಟ ಹಿಡಿದದ್ದೇ ಆದರೆ, ಗರ್ವ ಧಾರಾವಾಹಿಯ ತರಹದ್ದೇ ಹಿಂದಿ ಸಿನಿಮಾವನ್ನು ನಮ್ಮ ತಂಡ ಮಾಡುತ್ತದೆ ಅಂತ ಅನಂತ್‌ ಚಾಲೆಂಜ್‌ ಕೂಡ ಮಾಡಿದ್ದಾರೆ.

ಮಾಧ್ಯಮಗಳು ನನ್ನನ್ನು 'ವುಮನೈಸರ್‌" ಮಾಡಿಬಿಟ್ಟಿವೆ

ಅಷ್ಟಕ್ಕೇ ಅನಂತ್‌ ಸುಮ್ಮನಾಗಿದ್ದರೆ ಪರವಾಗಿಲ್ಲ. ಆದರೆ ಈಗ ರಂಗೇರಿದಾಗೆಲ್ಲಾ ಅನಂತ್‌ ಬಾಯಲ್ಲಿ ಗರ್ವದ ಬಗೆಗಿನ ಗರ್ವದ ಮಾತುಗಳು ಉದುರುತ್ತವೆ. ಅದರ ಬೆನ್ನಿಗೇ ತಮ್ಮನ್ನು 'ವುಮನೈಸರ್‌" ಅಂತ ಮಾಧ್ಯಮಗಳು ಇಲ್ಲ ಸಲ್ಲದ್ದನ್ನು ಬರೆಯುತ್ತವೆ ಅಂತ ಜರೆಯುತ್ತಾರೆ. ರಾಜ್‌ಕುಮಾರ್‌ ಮತ್ತು ಅಂಬರೀಶನ್ನ ವಾಚಾಮಗೋಚರ ಹೊಗಳುವ ಮಾಧ್ಯಮಗಳು, ನಾನು ಒಂದು ಹುಡುಗಿಯನ್ನು ಮುಟ್ಟಿದರೆ ಸಾಕು ಏನೋ ಮಾಡಿಬಿಟ್ಟೆ ಅನ್ನುವ ರೀತಿಯಲ್ಲಿ ಪ್ರೊಜೆಕ್ಟ್‌ ಮಾಡುತ್ತವೆ ಎಂದು ಚೀರುತ್ತಾರೆ.

ತಮ್ಮ ಜೀವಮಾನದ ಅತ್ಯಂತ ಹೆಮ್ಮೆಯ ಪಾತ್ರ ಗರ್ವದ್ದು ಎಂದು ಬೀಗುವ ಅನಂತ್‌ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ರಾಮೋಜಿ ಬಳಗವನ್ನೇ ತಿರಸ್ಕಾರದಿಂದ ನೋಡಲು ಶುರುವಿಟ್ಟುಕೊಂಡಿರುವ ವರದಿಯಾಗಿದೆ. ನಿನಗಾಗಿ ಎಂಬ ರೀಮೇಕ್‌ ಚಿತ್ರದ ಶೂಟಿಂಗ್‌ ವೇಳೆ ತಮ್ಮ ಸಂಭಾಷಣೆಯ ಹಾಳೆಯನ್ನೇ ಪರಪರ ಹರಿದು ಹಾಕಿ ಅನಂತ್‌ ಹೊರಟುಬಿಟ್ಟರಂತೆ. ಗರ್ವ ಧಾರಾವಾಹಿಯನ್ನೇ ಉಳಿಸಿಕೊಳ್ಳದ ರಾಮೋಜಿ ಬಳಗಕ್ಕೆ ಇದು ಅನಂತ್‌ ಕೊಟ್ಟ ದಿಟ್ಟ ಉತ್ತರವೇ? ಫೋನಾಯಿಸಿದರೆ, ರಾಮೋಜಿ ಈಸ್‌ ನಾಟ್‌ ಅವೇಯ್ಲಬಲ್‌ !

English summary
Ananthnag blames E- TV for deciding to put fullstop for Garva

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada