»   » ಸಿನಿಮಾ ಯಶಸ್ಸಿನ ತೆರೆಮರೆಯ ಮಿದುಳುಗಳಲ್ಲಿ ಪಿಆರ್‌ಓ ಪಾತ್ರ ದೊಡ್ಡದು

ಸಿನಿಮಾ ಯಶಸ್ಸಿನ ತೆರೆಮರೆಯ ಮಿದುಳುಗಳಲ್ಲಿ ಪಿಆರ್‌ಓ ಪಾತ್ರ ದೊಡ್ಡದು

Posted By: Staff
Subscribe to Filmibeat Kannada

ಈತ 700 ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇವರ ಹೆಸರು ಕೇಳುತ್ತಲೇ ಸ್ಯಾಂಡಲ್‌ವುಡ್‌ನ ಎಂಥವರಲ್ಲೂ ಗೌರವ ಭಾವ. ಒಲವಿನ ಉಡುಗೊರೆ, ಗಣೇಶನ ಮದುವೆ, ಗುಂಡನ ಮದುವೆ, ನಗುನಗುತಾ ನಲಿ ಮೊದಲಾದ ಚಿತ್ರಗಳ ಸಹ ನಿರ್ಮಾಪಕರೂ ಹೌದು. ಯಾರು ಅಂತ ಗೊತ್ತಾಗಲಿಲ್ಲವಾ? ಇವರೇ ಸಿನಿಮಾ ಪಿಆರ್‌ಓ ಡಿ.ವಿ.ಸುಧೀಂದ್ರ.

1975ರ ಯಾವುದೋ ಸಿನಿಮಾ ಬಗ್ಗೆ ಮಾಹಿತಿ ಬೇಕಾದರೆ, ಸುಧೀಂದ್ರರ ಬಳಿ ಉತ್ತರವುಂಟು. ಇನ್ನಷ್ಟು ಕೆಣಕಿದರೆ, ತಣ್ಣನೆಯ ಮಾತುಗಳಲ್ಲಿ ಸಿನಿಮಾ ಚಿತ್ರೀಕರಣದ ರಸಾನುಭವಗಳೂ ಬಿಚ್ಚಿಕೊಳ್ಳುತ್ತವೆ. ಪುಟ್ಟಣ್ಣ ಕಣಗಾಲ್‌ ಜೊತೆ ಕಳೆದ ದಿನಗಳನ್ನು ಸುಧೀಂದ್ರ ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ. ಕನ್ನಡ ಚಿತ್ರಗಳ ನಡೆದಾಡುವ ಡೈರೆಕ್ಟರಿ ಎಂಬುದು ಗೆಳೆಯರ ಬಳಗ ಇವರಿಗೆ ಕೊಟ್ಟಿರುವ ಬಿರುದು. ಈ ವರ್ಷ ತಮ್ಮ ಸಿನಿಮಾ ಪಿಆರ್‌ಓ ಜೀವನದ ಸಿಲ್ವರ್‌ ಜ್ಯುಬಿಲಿ. ನೆನಪಿಗೊಂದು ಪುಟ್ಟ ಸಮಾರಂಭ. ಏಪ್ರಿಲ್‌ 6ರ ಶನಿವಾರ ಬೆಂಗಳೂರಿನ ಧರ್ಮಸ್ಥಳ ಮಂಜುನಾಥಸ್ವಾಮಿ ಕಲ್ಯಾಣ ಮಂದಿರದಲ್ಲಿ ಬೆಳಗ್ಗೆ 10.30 ಗಂಟೆಗೆ ಸತ್ಯನಾರಾಯಣ ಪೂಜೆ. ಪೂಜೆಯ ನಂತರ ಎಲ್ಲರೊಡನೆ ಊಟ. ಇದಿಷ್ಟು ಸುಧೀಂದ್ರ ಅವರ ವೃತ್ತಿ ಜೀವನದ ಸಿಲ್ವರ್‌ ಜ್ಯುಬಿಲಿ ಸಂಭ್ರಮ.

ಸುಧೀಂದ್ರರ ಪ್ರಚಾರಕರ್ತ ಜೀವನ ಶುರುವಾದದ್ದು...

ಸುಧೀಂದ್ರ ಮತ್ತವರ ಗೆಳೆಯರದ್ದೊಂದು ಪುಟ್ಟ ಸಂಘ- ಲಾವಣ್ಯ ಲೇಖಕರ ಬಳಗ. ಸಿನಿಮಾದ ಕಲಾವಿದರನ್ನು ಮಾತಾಡಿಸಿ, ಆಯಾ ಸಿನಿಮಾದ ಚಿಕ್ಕ ಚೊಕ್ಕ ವಿವರಣೆಗಳನ್ನು ಸಂಪಾದಕರಿಗೆ ಪತ್ರ ಕಾಲಂಗಾಗಿ ಬರೆಯುವುದು ಈ ಬಳಗದ ಗೆಳೆಯರ ಕೆಲಸ. ಈ ಹವ್ಯಾಸಕ್ಕೆ ಹೊಸ ಅರ್ಥ ಕೊಟ್ಟಿದ್ದು ಬದುಕು ಬಂಗಾರವಾಯ್ತು ಸಿನಿಮಾ. ಸಂಪಾದಕರಿಗೆ ಪತ್ರ ಕಾಲಂನಲ್ಲಿ ಸುಧೀಂದ್ರ ಅಂಡ್‌ ಫ್ರೆಂಡ್ಸ್‌ ಬರೆದ ಪುಟ್ಟ ಪುಟ್ಟ ಬರಹಗಳೇ ಸಿನಿಮಾಗೆ ಪ್ರಚಾರ ಕೊಟ್ಟವು. ಸಿನಿಮಾ ಹಿಟ್‌ ಆಯಿತು. ಖುಷಿಯಾದ ನಿರ್ಮಾಪಕ ಅಂಗಲಗಿ ಗೆಳೆಯರ ಬಳಗವನ್ನು ಸನ್ಮಾನಿಸಿದರು. ಇದನ್ನೇ ಯಾಕೆ ವೃತ್ತಿಮಾಡಿಕೊಳ್ಳಬಾರದು ಎಂದು ಸಲಹೆಯಿತ್ತರು. 1977ರಲ್ಲಿ ನಿರ್ಮಾಪಕ ಎಸ್‌.ಡಿ.ಅಂಕಲಗಿ ತಮ್ಮ ಸೊಸೆ ತಂದ ಸೌಭಾಗ್ಯ ಚಿತ್ರದ ಪ್ರಚಾರದ ಕೆಲಸವನ್ನು ಹಚ್ಚುವುದರ ಮೂಲಕ ಸುಧೀಂದ್ರ ಕೆರಿಯರ್‌ಗೆ ಬೇಗ ಟೇಕಾಫ್‌ ಸಿಕ್ಕಿತು.

ಒಂದು ಸಿನಿಮಾ ಹಿಟ್‌ ಆಗಲು ಪ್ರಚಾರಕರ್ತರು ಎಷ್ಟು ಮುಖ್ಯ ಎಂಬುದನ್ನು ತಮ್ಮ ಅಚ್ಚುಕಟ್ಟಾದ ಕೆಲಸದ ಮೂಲಕ ಸುಧೀಂದ್ರ ರುಜುವಾತು ಮಾಡಿದರು. ಚಕ್ರವ್ಯೂಹ, ಪ್ರೇಮಲೋಕ, ಹೃದಯಗೀತೆಯಿಂದ ಹಿಡಿದು ನನ್ನ ಪ್ರೀತಿಯ ಹುಡುಗಿ, ಚಿತ್ರ ಸಿನಿಮಾಗಳವರೆಗೆ ಸುಧೀಂದ್ರ ಪ್ರಚಾರಕರ್ತರಾಗಿ ಕೆಲಸ ಮಾಡಿದ್ದಾರೆ.

ಸಿನಿಮಾ ಪಿಆರ್‌ಓ ಕಾನ್ಸೆಪ್ಟೇ ಇಲ್ಲದಿದ್ದಾಗ ಪತ್ರಕರ್ತರಿಗೆ ಸಿನಿಮಾ ಬಗ್ಗೆ ಮಾಹಿತಿ ಕಲೆ ಹಾಕುವುದೇ ದೊಡ್ಡ ತಲೆನೋವಾಗಿತ್ತು. ಫೋಟೋಗಳು, ಸಿನಿಮಾದ ಕತೆಯ ಸಣ್ಣ ತಿರುಳು, ಲೊಕೇಷನ್‌ಗಳು... ಹೀಗೆ ಸಿನಿಮಾದ ಎಬಿಸಿಡಿಗಳ ಅವಶ್ಯಕತೆ ಪೂರೈಸುವರಾದರೂ ಯಾರು? ಅದಕ್ಕೆ ಒಂದು ವೃತ್ತಿಪರತೆಯ ಚೌಕಟ್ಟನ್ನು ಕೊಟ್ಟವರು ಸುಧೀಂದ್ರ. ತಮ್ಮ ಕೆಲಸದ ಅಚ್ಚುಕಟ್ಟು ಕಾಪಾಡಿಕೊಳ್ಳಲು ರಾಘವೇಂದ್ರ ಚಿತ್ರವಾಣಿ ಎಂಬ ಸ್ವಂತ ಏಜೆನ್ಸಿಯನ್ನು 1977ರಲ್ಲೇ ಹುಟ್ಟುಹಾಕಿದರು.

ಚಿತ್ರ ರಸಿಕರ ಸಂಘದ ಪ್ರಚಾರಕರ್ತ ಪ್ರಶಸ್ತಿ, ತಿಪಟೂರು ಕನ್ನಡ ಶಕ್ತಿ ಕೇಂದ್ರದ ಸುದ್ದಿ ರತ್ನ ಬಿರುದು, ಆರ್ಯಭಟ ಸಂಸ್ಥೆಯ ಪ್ರಶಸ್ತಿ, ಝೇಂಕಾರ್‌ ಮೆಲೋಡೀಸ್‌ ಸಂಸ್ಥೆಯ ಪ್ರಚಾರ ಸಾರ್ವಭೌಮ ಪ್ರಶಸ್ತಿ , ಹಂಸಜ್ಯೋತಿ ಸಂಸ್ಥೆಯ ಹಂಸ ರತ್ನ, ದೊಡ್ಡಬಳ್ಳಾಪುರ ವಿಜಯಭಾರತ ಕಲಾ ಸಂಘದ ಪ್ರಚಾರ ಬ್ರಹ್ಮ, ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ರಾಘವೇಂದ್ರ ಮಠದ ಪ್ರಚಾರ ರಾಜಕಮಲ ಹಂಸ- ಇವೆಲ್ಲಾ ಸುಧೀಂದ್ರ ಸಾಧನೆಗೆ ಸಂದಿರುವ ಪ್ರಶಸ್ತಿ- ಬಿರುದುಗಳು.

ತಾವು ಏನೇ ಕಿಂಚಿತ್‌ ಸಾಧಿಸಿದ್ದರೂ, ಅದಕ್ಕೆ ಪತ್ರಕರ್ತರು ಹಾಗೂ ಸಿನಿಮಾ ಸನ್ಮಿತ್ರರೇ ಕಾರಣ ಎಂದು ನಮ್ರವಾಗಿ ಹೇಳುವ ಸುಧೀಂದ್ರ ಇನ್ನು ಮುಂದೆ ಪ್ರತಿ ವರ್ಷ ಒಬ್ಬ ಸಿನಿಮಾ ಪತ್ರಕರ್ತ ಹಾಗೂ ಒಬ್ಬ ನಿರ್ಮಾಪಕರನ್ನು ಸನ್ಮಾನಿಸಲಿದ್ದಾರೆ. ಇದರ ಪ್ರಾರಂಭ ಇದೇ ವರ್ಷ. ಏಪ್ರಿಲ್‌ 25ರಂದು ಎಸ್‌.ಡಿ.ಅಂಕಲಗಿ ಮತ್ತು ಡಾ.ವಿಜಯಾ ಅವರನ್ನು 5 ಸಾವಿರ ರುಪಾಯಿ ಹಾಗೂ ಸ್ಮರಣಿಕೆ ನೀಡುವುದರ ಮೂಲಕ ಸನ್ಮಾನಿಸುವರು.

ಅಂದಹಾಗೆ, ಸುಧೀಂದ್ರ ತಮ್ಮ ಉತ್ತರಾಧಿಕಾರಿಗಳನ್ನೂ ಈಗಾಗಲೇ ತಯಾರು ಮಾಡುತ್ತಿದ್ದಾರೆ. ತಮ್ಮ ಬಂಧುಗಳೇ ಆದ ವೆಂಕಟೇಶ್‌ ಮತ್ತು ವಾಸು, ಸುಧೀಂದ್ರ ಗರಡಿಯಲ್ಲಿ ಪಳಗುತ್ತಿರುವ ಚಿಗುರುಗಳು. ತಮ್ಮ ನಂತರ ಈ ಹುಡುಗರೇ ಪ್ರಚಾರದ ಕೆಲಸವನ್ನು ಅಚ್ಚುಕಟ್ಟಾಗಿ ಮುಂದುವರಿಸಲಿದ್ದಾರೆ ಅನ್ನುವುದು ಸುಧೀಂದ್ರ ವಿಶ್ವಾಸ. ಸುಧೀಂದ್ರ ಅವರ ಸೇವೆ ಚಿತ್ರೋದ್ಯಮಕ್ಕೆ ಇನ್ನೂ ದೀರ್ಘ ಕಾಲ ಸಲ್ಲಲಿ.

English summary
25th birthday of PRO D.V.Sudheendra film career

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada