»   » ಸೌಂದರ್ಯಳ ದ್ರೌಪದಿ ಪಾತ್ರಕ್ಕೆಗ್ರೇಸಿ?

ಸೌಂದರ್ಯಳ ದ್ರೌಪದಿ ಪಾತ್ರಕ್ಕೆಗ್ರೇಸಿ?

Posted By: Super
Subscribe to Filmibeat Kannada
Gracy Singh
ಕನ್ನಡತಿ ಸೌಂದರ್ಯ ಅವರ ಸಾವಿನಿಂದ ಕನ್ನಡ ಚಿತ್ರರಂಗಕ್ಕೆ ಆದ ನಷ್ಟವೇನು?

ಈ ಕುರಿತು ಯಾರೂ ಚರ್ಚಿಸುತ್ತಿಲ್ಲ . ಏಕೆಂದರೆ ಸೌಂದರ್ಯ ಅಭಿನಯಿಸುತ್ತಿರುವ ಯಾವ ಕನ್ನಡ ಚಿತ್ರಗಳಲ್ಲೂ ಗಾಂಧಿನಗರದಲ್ಲಿರಲಿಲ್ಲ . ಹಾಗಾಗಿ ಆಕೆಯ ಸಾವಿನ ಕುರಿತು ದುಃಖಿಸುವವರು ಚಿತ್ರೋದ್ಯಮದಲ್ಲಿ ಕಾಣುವುದು ಕಡಿಮೆ. ದುಃಖಿಸುವ ಮಾತು ಬಿಡಿ, ಗಾಂಧಿನಗರದಲ್ಲಿ ಕೆಲವರು ಸೌಂದರ್ಯ ಸಾವಿಗೆ ಒಳಗೊಳೊಗೇ ಸಂತೋಷ ಪಡುತ್ತಿದ್ದಾರೆಂದು ಸುದ್ದಿ . ಸೌಂದರ್ಯ ಹಾಗೂ ಅವರ ಸೋದರ ಅಮರನಾಥ್‌ ಅನೇಕ ಚಿತ್ರೋದ್ಯಮಿಗಳಿಗೆ ಸಾಲ ನೀಡಿದ್ದು , ಸಾಲ ಪಡೆದವರೀಗ ನಿರಾಳವಾಗಿದ್ದಾರೆ. ಋಣಪ್ರಜ್ಞೆ ಎಷ್ಟು ಜನಕ್ಕೆ ಕಾಡುತ್ತದೆ ?

ತೆಲುಗು ಚಿತ್ರರಂಗದಲ್ಲಿ ಹಾಗಲ್ಲ ! ಅಲ್ಲಿ ಸೌಂದರ್ಯ ಅವರಿಗೆಂದೇ ಒಂದಷ್ಟು ಪಾತ್ರಗಳು ಕಾಯುತ್ತಿದ್ದವು. ಅದೆಲ್ಲಕ್ಕಿಂಥ ಮುಖ್ಯವಾಗಿ- ತಮ್ಮ ಆತ್ಮಸಂತೋಷ ಹಾಗೂ ಋಣ ಸಂದಾಯಕ್ಕಾಗಿ ಸೌಂದರ್ಯ ನಿರ್ಮಿಸಲು ಉದ್ದೇಶಿಸಿದ್ದ 'ಕಮಲಿ" ಎನ್ನುವ ಕಲಾತ್ಮಕ ಚಿತ್ರದ ಕುರಿತು ತೆಲುಗು ಚಿತ್ರ ರಸಿಕರು ಕಾತರರಾಗಿದ್ದರು. ವಿಪರ್ಯಾಸ ನೋಡಿ ; ಕಮಲಿಯ ಕನಸು ಕೈಗೂಡಲೇ ಇಲ್ಲ .

ಸೌಂದರ್ಯ ಅವರ ಸಾವಿನಿಂದ ಕಂಗೆಟ್ಟ ತೆಲುಗರಲ್ಲಿ ನಟ ಬಾಲಕೃಷ್ಣ ಕೂಡ ಒಬ್ಬರು. ಬಾಲಕೃಷ್ಣ ರ 'ನರ್ತನ ಶಾಲ" ಪೌರಾಣಿಕ ಚಿತ್ರದಲ್ಲಿ ಸೌಂದರ್ಯ ದ್ರೌಪದಿ ಪಾತ್ರದಲ್ಲಿ ನಟಿಸಬೇಕಾಗಿತ್ತು . ಕೃಷ್ಣಸುಂದರಿ ಸೌಂದರ್ಯಾಗೆ ದ್ರೌಪದಿ ಪಾತ್ರ ಹೇಳಿಮಾಡಿಸಿದಂತಿತ್ತು . ಅಷ್ಟೇ ಅಲ್ಲ , ನರ್ತನಶಾಲಾದ ಮೊದಲ ಷೆಡ್ಯೂಲ್‌ ಈಗಾಗಲೇ ಮುಗಿದಿತ್ತು . ಆದರೆ, ವಿಧಿ ಬಗೆದುದೇ ಬೇರೆ....

ದ್ರೌಪದಿ ಪಾತ್ರಕ್ಕೆ ಬಾಲಕೃಷ್ಣ ಮತ್ತೊಬ್ಬ ನಟಿಯ ತಲಾಷಿನಲ್ಲಿದ್ದಾರೆ. ಸೌಂದರ್ಯ ಸ್ಥಾನವನ್ನು ತುಂಬುವ ನಟಿ ದೊರಕುವ ಕಷ್ಟ ಅವರಿಗೆ ಗೊತ್ತು . 'ನರ್ತನ ಶಾಲ" ಬಾಲಕೃಷ್ಣರ ಮಹತ್ವಾಕಾಂಕ್ಷೆಯ ಚಿತ್ರ. ನಿರ್ಮಾಣ, ನಟನೆ ಮಾತ್ರವಲ್ಲದೆ ಬಾಲಕೃಷ್ಣ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ.

ದ್ರೌಪದಿ ಪಾತ್ರಕ್ಕೆ ಬಾಲಿವುಡ್‌ನ 'ಲಗಾನ್‌" ಸುಂದರಿ ಗ್ರೇಸಿಸಿಂಗ್‌ ಹೊಂದಿಕೆಯಾದಾಳಾ ? ಹೀಗೊಂದು ಯೋಚನೆ ಬಾಲಕೃಷ್ಣರ ತಲೆಯಲ್ಲಿ ಮೊಳೆತಿದೆ. ಗ್ರೇಸಿ ಕೂಡ ಸಾಂಪ್ರದಾಯಿಕ ಚೆಲುವೆ. ನಟನೆಯನ್ನೂ ಬಲ್ಲವಳು. ಈ ಕಾರಣದಿಂದಲೇ ದ್ರೌಪದಿ ಪಾತ್ರದ ಪ್ರಸ್ತಾವನೆಯನ್ನು ಬಾಲಕೃಷ್ಣ ಗ್ರೇಸಿಸಿಂಗ್‌ ಮುಂದಿಟ್ಟಿದ್ದಾರೆ. ಗ್ರೇಸಿ ಒಪ್ಪುತ್ತಾಳಾ ?

ಗ್ರೇಸಿಸಿಂಗ್‌ಗೆ ತೆಲುಗು ಚಿತ್ರರಂಗ ಹೊಸದೇನೂ ಇಲ್ಲ . ಈ ಮುನ್ನ ನಾಗಾರ್ಜುನ್‌ಗೆ ನಾಯಕಿಯಾಗಿ 'ಸಂತೋಷಂ" ಚಿತ್ರದಲ್ಲಿ ನಟಿಸಿದ್ದರು. ಮೋಹನ್‌ಬಾಬುಗೆ ನಾಯಕಿಯಾಗಿಯೂ ಗ್ರೇಸಿ ಮಿಂಚಿದ್ದರು. ಆದರೆ ಈಗ ಗ್ರೇಸಿ ಬದಲಾಗಿದ್ದಾಳೆ ; ತಾರೆಯಾಗಿ ಬೆಳೆದಿದ್ದಾಳೆ. ಆಕೆ ನಾಯಕಿಯಾಗಿ ಅಭಿನಯಿಸಿರುವ 'ಮುನ್ನಾಭಾಯಿ ಎಂಬಿಬಿಎಸ್‌"ನ ಯಶಸ್ಸಿನಿಂದಾಗಿ ಗ್ರೇಸಿಯ ಸ್ಟಾರ್‌ಗಿರಿ ಫಳಫಳ ಮಿಂಚುತ್ತಿದೆ. ಹಾಗಾಗಿ, ಆಕೆ ಹಿಂದಿಯಿಂದ ತೆಲುಗಿಗೆ ಬರುವಳೇ ?

ಗೊತ್ತಿಲ್ಲ . ಗ್ರೇಸಿ 'ನರ್ತನ ಶಾಲ"ದಲ್ಲಿ ಅಭಿನಯಿಸುವ ವಿಷಯ ಇನ್ನೂ ಖಾತರಿಯಾಗಿಲ್ಲ . ಒಂದುವೇಳೆ ಒಪ್ಪಿಕೊಂಡು ಅಭಿನಯಿಸಿದರೂ ಆಕೆ ಸೌಂದರ್ಯಳನ್ನು ಮರೆಸುವಂತೆ ಅಭಿನಯಿಸುತ್ತಾಳಾ? ಅದು ಸುಲಭದ ಮಾತಲ್ಲ .

English summary
Gracy Singh as Draupadi in Narthanashala?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada