»   » ಲತಾ ಮಂಗೇಷ್ಕರ್‌ ಧ್ವನಿ ತೀಡಿದ ನೌಶಾದ್‌ ಅಲಿ ಇನ್ನಿಲ್ಲ

ಲತಾ ಮಂಗೇಷ್ಕರ್‌ ಧ್ವನಿ ತೀಡಿದ ನೌಶಾದ್‌ ಅಲಿ ಇನ್ನಿಲ್ಲ

Subscribe to Filmibeat Kannada


ಪುಟ್‌ಪಾತ್‌ನಿಂದ ರೆಕಾರ್ಡಿಂಗ್‌ ಸ್ಟುಡಿಯೋ ತನಕ... ಸರಿಗಮಪದನಿಸ...

ಮುಂಬೈ : ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹಾಗೂ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ವಿಜೇತ ನೌಶಾದ್‌ ಅಲಿ (86) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.

ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಅವರು, ನಗರದ ನಾನಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶಾಸ್ತ್ರೀಯ ಸಂಗೀತವನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಹೊಂದಿದ್ದರು. ಅವರು 67 ಚಿತ್ರಗಳಲ್ಲಿ 250ಕ್ಕೂ ಅಧಿಕ ಗೀತೆಗಳಿಗೆ ಅವಿಸ್ಮರಣೀಯ ಸಂಗೀತ ನೀಡಿದ್ದರು.

ಡಿಸೆಂಬರ್‌ 25, 1919ರಂದು ಕ್ರಿಸ್‌ಮಸ್‌ ದಿನ ಲಖನೌನಲ್ಲಿ ಜನಿಸಿದ ನೌಶಾದ್‌, 1930ರಲ್ಲಿ ಬಾಲಿವುಡ್‌ ಪ್ರವೇಶಿಸಿದರು. 1940ರಲ್ಲಿ ‘ಪ್ರೇಮ್‌ನಗರ್‌’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಪಾದ ಊರಿದ್ದರು. ‘ಬೈಜು ಬಾವ್ರಾ’,‘ಮದರ್‌ ಇಂಡಿಯಾ’, ‘ಮುಘಲ್‌-ಎ-ಆಜಂ’, ‘ರಾಮ್‌ ಔರ್‌ ಶ್ಯಾಮ್‌, ‘ಗಂಗಾ ಜಮುನಾ’, ‘ಪಾಕೀಜಾ’, ‘ಅಂದಾಜ್‌’ ಮೊದಲಾದ ಚಿತ್ರಗಳು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿದ್ದವು.

ಫುಟ್‌ಪಾತ್‌ನಿಂದ ರೆಕಾರ್ಡಿಂಗ್‌ ಸ್ಟುಡಿಯೋವರೆಗೆ ಅವರು ಸಾಗಿ ಬಂದ ಕತೆ, ಮಾಡಿದ ಸಾಧನೆ ದೊಡ್ಡದು. ಸಂಗೀತ ನಿರ್ದೇಶಕರಾಗುವ ಉದ್ದೇಶದಿಂದ ಮುಂಬೈ ಸೇರಿದ ಅವರು ಅನೇಕ ರಾತ್ರಿಗಳನ್ನು ರಸ್ತೆಬದಿಯಲ್ಲಿಯೇ ಕಳೆದಿದ್ದರು.

ಮಾರ್ಗದರ್ಶಿ : ಖ್ಯಾತ ಗಾಯಕರಾದ ಸುರೈಯಾ, ಉಮಾದೇವಿ ಹಾಗೂ ಮಹೇಂದ್ರ ಕಪೂರ್‌ ಅವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿಯೂ ನೌಶಾದ್‌ ಅವರಿಗೆ ಸಲ್ಲುತ್ತದೆ.

ಭಾರತರತ್ನ ಪ್ರಶಸ್ತಿ ವಿಜೇತ ಖ್ಯಾತ ಗಾಯಕಿ ಲತಾ ಮಂಗೇಷ್ಕರ್‌ ಧ್ವನಿ ಮಧುರಗೊಳಿಸುವಲ್ಲಿ ನೌಶಾದ್‌ ಪಾತ್ರ ಹಿರಿದು. ಇವರು ಸಂಗೀತ ನಿರ್ದೇಶಿಸಿದ ಗೀತೆಗಳು ಲತಾ ಮಂಗೇಷ್ಕರ್‌ ಧ್ವನಿಯಲ್ಲಿ ಅಪಾರ ಜನಪ್ರಿಯತೆ ಪಡೆದಿರುವುದು ಗಮನಾರ್ಹ ಸಂಗತಿ.

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada