»   » ಬಣ್ಣಬಣ್ಣ ಕಾಣುವ ನಟೀಮಣಿಗಳು ಆತ್ಮಹತ್ಯೆ

ಬಣ್ಣಬಣ್ಣ ಕಾಣುವ ನಟೀಮಣಿಗಳು ಆತ್ಮಹತ್ಯೆ

Posted By: Staff
Subscribe to Filmibeat Kannada

ಸಿನಿಮಾ ನಾಯಕಿಯರು ಒಂದಲ್ಲ ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿರುತ್ತಾರೆ. ಇಂಥಾ ನಿರ್ಧಾರವನ್ನು ಹಿಂದೆ ನಾನೂ ಮಾಡಿದ್ದೆ!
ಗ್ಲಾಮರ್ರು, ನಟನೆ ಎರಡೂ ಸೆಳಕುಗಳಿಂದ ಅಭಿಮಾನಿಗಳು ತನಗಾಗಿ ದೇವಸ್ಥಾನ ಕಟ್ಟುವಷ್ಟರ ಮಟ್ಟಿಗೆ ಪ್ರವರ್ಧಮಾನಕ್ಕೆ ಬಂದ ನಟಿ ಖುಷ್ಬೂ ಟಿವಿ ಸಂದರ್ಶನವೊಂದರಲ್ಲಿ ಆಡಿರುವ ಮಾತಿದು. ಪ್ರತ್ಯೂಷ ವಿಷ ತಿಂದು ಸತ್ತಿದ್ದು, ಮೋನಾಲ್‌ ನೇಣು ಹಾಕಿಕೊಂಡಿದ್ದು ತಮಿಳು ಸಿನಿಮಾ ರಂಗದಲ್ಲಷ್ಟೇ ಅಲ್ಲ ಭಾರತೀಯ ಚಿತ್ರೋದ್ಯಮದಲ್ಲಿ ತೆಹಲಕಾ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆ- ನಟಿಯರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?

ಶೋಭಾ, ಫಟಾಪಟ್‌ ಜಯಲಕ್ಷ್ಮಿ, ಕಲ್ಪನ, ಕುಮಾರಿ ಪದ್ಮಿನಿ, ಮಂಜುಳಾ, ಲಕ್ಷ್ಮಿಶ್ರೀ, ವಿಜಯಶ್ರೀ, ಸಿಲ್ಕ್‌ಸ್ಮಿತಾ, ವಿಜಿ- ಹೀಗೆ ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಿನಿಮಾ ನಾಯಕಿಯರ ಈ ರೀತಿಯ ನಿರ್ಧಾರಕ್ಕೆ ಖುಷ್ಬೂ ಕಾರಣಗಳನ್ನು ಕೊಡುತ್ತಾರೆ...

ನಟಿಯರದ್ದು ಚಿತ್ಯೋದ್ಯಮದಲ್ಲಿ ಅಲ್ಪಾಯುಷ್ಯ. ಇದ್ದಷ್ಟು ದಿನ, ಸಿಕ್ಕಷ್ಟು ಸಿನಿಮಾ. ಎಷ್ಟು ಸಾಧ್ಯವೋ ಅಷ್ಟು ಹೆಸರು- ದುಡ್ಡು ಮಾಡಬೇಕು. ಕೆಲವು ಫಿಲಾಸಫಿ ಹಾಗೂ ಸಂಪ್ರದಾಯಗಳನ್ನು ಬದಿಗೊತ್ತಲೇಬೇಕು. ಹೀಗಾಗುವಾಗ ಎಷ್ಟೋ ಬಾರಿ ನಾಯಕಿಯರ 'ತಮ್ಮತನ"ಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಉದ್ದಿಮೆಯಲ್ಲಿ ಇದ್ದಷ್ಟೂ ದಿನ ಒತ್ತಡಗಳ ಮಹಾಪೂರ. ಮನಸ್ಸಲ್ಲಿ ಗೊಂದಲಗಳು ಭರಪೂರ. ಮೇಲಾಗಿ ಇನ್ನೊಂದು ತಲೆನೋವು- ಮಾಡಬೇಕು ಡಯಟ್ಟು, ಇರಬೇಕು ಸಪೂರ. ನಟನೆಯ ಸಾಣೆಗೊಡ್ಡಿಕೊಳ್ಳುವ ಹಂಬಲ, ದುಡ್ಡು ಮಾಡುವ ಛಲ- ಮನಸ್ಸಲ್ಲಿ ಸದಾ ತುಮುಲ.
ಇಷ್ಟೆಲ್ಲಾ ಒತ್ತಡಗಳ ನಡುವೆ ನಿದ್ರೆ ಮಾಡಲು ಮಾತ್ರೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ. ಹತಾಶೆ ಒಡ್ಡುವ ಫಜೀತಿ. ಕೆಲವು ನಟಿಯರ ಅಮ್ಮಂದಿರ ಕಾಟ ಬೇರೆ. ತಾವು ನಟಿಯಾಗಲು ಬಯಸಿದ ಎಷ್ಟೋ ತಾಯಂದಿರು, ತಮ್ಮ ಮಕ್ಕಳಿಗೆ ಆ ಭಾಗ್ಯ ಸಿಕ್ಕಾಗ, ತಮ್ಮ ಕನಸನ್ನೆಲ್ಲಾ ಮಕ್ಕಳ ಮೂಲಕ ತೀರಿಸಿಕೊಳ್ಳಲು ಹೋಗುತ್ತಾರೆ. ಇದೂ ಕೂಡ ದೊಡ್ಡ ಒತ್ತಡ. ಮನಸ್ಸು ಶೂನ್ಯವಾದಾಗ ಎಲ್ಲಕ್ಕೂ ಸಾವೇ ಉತ್ತರವಾಗಿ ಉಳಿಯುತ್ತದೆ. ಆತ್ಮಹತ್ಯೆ ಅನಿವಾರ್ಯವಾಗುತ್ತದೆ. ಇಂಥಾ ಒಂದು ತೀರ್ಮಾನವನ್ನು ನಾನೂ ಮಾಡಿದ್ದು ಉಂಟು. ಆದರೀಗ, ಛೆ! ಆಗ ನನ್ನದ್ದು ಅಳ್ಳೆದೆಯಾಗಿತ್ತಲ್ಲ ಎಂಬುದಕ್ಕೆ ವಿಷಾದವಾಗುತ್ತದೆ. ನೆನೆದರೆ ಈಗಲೂ ಬೇಜಾರು.

ಅಂದಹಾಗೆ, ಖುಷ್ಬೂ ಈಗ ಸ್ಥೂಲಕಾಯಿ. ಅದಕ್ಕೇ ಸಿನಿಮಾ ಆಫರ್‌ಗಳು ಅಷ್ಟಕ್ಕಷ್ಟೇ. ಆದರೂ ಸುಮ್ಮನೆ ಕೂರುವ ಜಾಯಮಾನ ಅವರದ್ದಲ್ಲ. ಜಯಾ ಟಿವಿಯಲ್ಲಿ ಕರೋಡ್‌ಪತಿ ತರಹದ ಕೋಟೇಶ್ವರನ್‌ ಎಂಬ ಗೇಮ್‌ಶೋ ನಡೆಸಿಕೊಡುತ್ತಿರುವ ಖುಷ್ಬೂ, ಮಾರುಮಗಳ್‌ ಎಂಬ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಈಗ ಮಾನಸಿಕವಾಗಿ ಅವರು ಭಾರೀ ಜೋರು. ಆತ್ಮಹತ್ಯೆ ವಿಷಯ ಅವರಿಂದ ದೂರ ಬಲು ದೂರ!

English summary
Why actresses commit suicide? Khushbu has an answer..
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada