»   » ‘ಪುಟ್ಟಣ್ಣ ಮತ್ತೊಮ್ಮೆ ಹುಟ್ಟಿ ಬಾರಣ್ಣ...’

‘ಪುಟ್ಟಣ್ಣ ಮತ್ತೊಮ್ಮೆ ಹುಟ್ಟಿ ಬಾರಣ್ಣ...’

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸಿಂಗಪುರದಲ್ಲಿ ತಮಿಳು ಭಾಷೆ ರಾಷ್ಟ್ರ ಭಾಷೆಗಳಲ್ಲಿ ಒಂದು. ಇಲ್ಲಿನ ತಮಿಳು ಚಾನಲ್‌ ವಸಂತಂ ಸೆಂಟ್ರಲ್‌ನಲ್ಲಿ ತಮಿಳು ಚಿತ್ರಗಳ ಪ್ರಖ್ಯಾತ ನಿರ್ದೇಶಕ, ಪ್ರಸಿದ್ಧ ನಟರಾದ ರಜನೀಕಾಂತ್‌, ಕಮಲಹಾಸನ್‌ ಅವರನ್ನು ರೂಪಿಸಿದ ರೂವಾರಿ ಕೆ.ಬಾಲಚಂದರ್‌ ಅವರೊಡನೆ ಸಂದರ್ಶನದ ನೇರ ಪ್ರಸಾರವಿತ್ತು. ತಮಗೆ ಅನಿಸಿದ್ದನ್ನು ಅನಿಸಿದಂತೆ ಹೇಳುವ ನೇರ ಮಾತಿನ ವೈಖರಿಯನ್ನು ಕಂಡಾಗ ನೆನಪಾದರು ಪುಟ್ಟಣ್ಣ.

  ಒಬ್ಬ ಸಾಮಾನ್ಯ ವ್ಯಕ್ತಿಯಲಿ ಅಡಗಿರುವ ನಟನಾ ಕೌಶಲ್ಯವನು ಹೊರತಂದು, ಆ ಪಾತ್ರಗಳನು ಕೆತ್ತಿ, ಜೀವಂತಗೊಳಿಸುವ ಕಲೆ ನಿರ್ದೇಶಕನದು. ಆ ಕಲಾ ದೇವತೆ ಒಲಿದ ರೂವಾರಿಗಳು ಕೆಲವರು ಮಾತ್ರ. ಅಂತಹವರಲ್ಲಿ ಎಸ್‌.ಆರ್‌. ಪುಟ್ಟಣ್ಣ ಕಣಗಾಲ್‌ ಒಬ್ಬರು.

  ಪುಟ್ಟಣ್ಣ ಒಬ್ಬ ಸ್ಟಾರ್‌ ಮೇಕರ್‌ ಆಗಿದ್ದವರು. ಸಾಮಾನ್ಯ ಪ್ರತಿಭೆಗಳನ್ನು ಸಾಣೆ ಹಿಡಿದು ಅವರಿಂದ ಮನಸೂರೆಗೊಳ್ಳುವಂತಹ ಉತ್ತಮ ಅಭಿನಯವನ್ನು ಹೊರಹೊಮ್ಮಿಸುತ್ತಿದ್ದ ಮಾಂತ್ರಿಕ. ಇದಕ್ಕೆ ನಿದರ್ಶನ ಮಿನುಗುತಾರೆ ಕಲ್ಪನಾ, ರಾಮಾಚಾರಿ ವಿಷ್ಣುವರ್ಧನ್‌, ರೆಬೆಲ್‌, ಜಲೀಲ್‌ ಅಂಬರೀಶ್‌, ನಟಭೈರವ ವಜ್ರಮುನಿ, ಮಾನಸ ಸರೋವರದ ಪದ್ಮಾವಾಸಂತಿ, ರಾಮಕೃಷ್ಣ, ಎಡಕಲ್ಲುಗುಡ್ಡದ ಚಂದ್ರಶೇಖರ್‌.

  ಕನ್ನಡ ಚಿತ್ರ ಮಾಧ್ಯಮದಲ್ಲಿ ಒಳ್ಳೆಯ ಚಿತ್ರ ನಿರ್ದೇಶಕರು ಯಾರು ಎಂಬ ಪ್ರಶ್ನೆ ಮೂಡಿದಲ್ಲಿ ಮೊದಲ ಉತ್ತರ -ಪುಟ್ಟಣ್ಣ ಕಣಗಾಲ್‌. ತಮ್ಮ ಅತ್ಯುತ್ತಮ ನಿರ್ದೇಶನದಿಂದ ಉತ್ತಮ ಚಿತ್ರಗಳನ್ನು ಕನ್ನಡ ಜನತೆಗೆ ನೀಡಿದ ಮಹಾನ್‌ ನಿರ್ದೇಶಕ. ಪುಟ್ಟಣ್ಣನವರು ಚಿತ್ರರಂಗದಲ್ಲಿ ಆಯ್ದುಕೊಳ್ಳುತ್ತಿದ್ದ ಕತೆಗಳು ಮಹಿಳಾ ಪ್ರಧಾನ ಕಥೆಗಳೇ. ಹೆಣ್ಣಿನ ಮನೋಭಾವನೆಗಳು ಪ್ರತಿಬಿಂಬಿಸುವ ಅವರ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ, ಸಂದೇಶ, ಭಾವ ಹೊರಸೂಸುವಿಕೆ ಮುಖ್ಯವಾಗಿರುತ್ತಿತ್ತು.

  ಡಿಶುಂ, ಡಿಶುಂ, ಪ್ರೇಮ ಸೂಸಲು ಮರ ಸುತ್ತುವ ಪ್ರಮೇಯ, ಕನಸಿನ ಲೋಕ ತೋರಿಸುವ ಹಾಡುಗಳಿರುತ್ತಿರಲಿಲ್ಲ. ತಮ್ಮ ಚಿತ್ರಗಳಲ್ಲಿ ಪಾತ್ರಗಳು ಎಲ್ಲಿಯೂ ಎಲ್ಲೆ ಮೀರದೆ ಸಹಜವಾದ ರೀತಿಯಲಿ ಜನರ ಮನ ಮುಟ್ಟುವಂತೆ ರಕ್ತಗತ ಮಾಡಿಕೊಂಡಿದ್ದವರು ಪುಟ್ಟಣ್ಣ. ಸಾಹಿತ್ಯ ರಂಗದಲ್ಲಿ ತ್ರಿವೇಣಿ ಅವರ ಕಾದಂಬರಿಗಳು ಮಹಿಳಾ ಪ್ರಧಾನ ಕಾದಂಬರಿಗಳು. ಇಲ್ಲಿ ನಾಯಕಿಯೇ ಪ್ರಾಧಾನ್ಯ. ಈ ನಾಯಕಿಯ ಪಾತ್ರಗಳನ್ನು ತಮ್ಮ ಚಿತ್ರಗಳಲ್ಲಿ ಜೀವಂತಗೊಳಿಸಿ, ಮರೆಯಲಾಗದ ಪಾತ್ರಗಳ ವ್ಯಕ್ತಿಗಳನ್ನು ನಮಗಿತ್ತವರು ಪುಟ್ಟಣ್ಣ.

  ಚಲನಚಿತ್ರ ಮಾಧ್ಯಮದಲಿ ನಿರ್ದೇಶಕನೇ ಮುಖ್ಯ ಸೂತ್ರಧಾರಿ. ಸೃಷ್ಟಿಸಿದ ನಾನಾ ಪಾತ್ರಗಳ ಭಾವನೆಗಳನ್ನು ನಟ, ನಟಿಯರ ನಟನೆಯ ಮೂಲಕ ಜೀವ ತುಂಬಿಸುವ ಕಲಾ ಬ್ರಹ್ಮ. ಕಣಗಾಲರ ಯಾವುದೇ ಚಿತ್ರ ನೋಡಿದರೂ ಅದರಲಿ ಬರುವ ಪಾತ್ರಗಳು ಮರೆಯದೆ ಮನದಲಿ ಉಳಿಯುವಂತಹವು. ನಾಗರಹಾವಿನ ಚಾಮಯ್ಯ ಮೇಷ್ಟ್ರು, ಓಬವ್ವ, ಜಲೀಲ. ರಂಗನಾಯಕಿಯ ರಾಮಣ್ಣ, ಎಡಕಲ್ಲುಗುಡ್ಡದ ನಂಜುಂಡ, ಶರಪಂಜರದ ಅಡುಗೆಭಟ್ಟ, ಶುಭಮಂಗಳದ ಮೂಗ ಹೀಗೆ ಕತೆಗೆ ಊರುಗೋಲಿನಂತಿದ್ದ ಸಾಮಾನ್ಯ ಪಾತ್ರಗಳು ಕೂಡ ಮನದಲಿ ನಿಲ್ಲುವಂತಹ ಸ್ಥಿರ ನೆನಪಿನ ಚಿಲುಮೆಗಳು.

  ಪುಟ್ಟಣ್ಣನವರ ಚಿತ್ರಗಳೆಂದರೆ ಕಥೆ, ಪಾತ್ರ, ಪೋಷಣೆ, ದೃಶ್ಯ, ನಿಖರತೆ, ಸಾಹಿತ್ಯ, ಸಂಭಾಷಣೆ, ಸಂಕಲನಗಳಿಗೆ ಹೆಸರುವಾಸಿಯಾಗಿತ್ತು. 80ರ ದಶಕದಲ್ಲಿ ಕನ್ನಡದಲ್ಲಿ ಉತ್ತಮ ಚಿತ್ರಗಳಿಗೆ ಬರವಿರಲಿಲ್ಲ. ಅಂದಿನ ದಿನಗಳಲ್ಲಿ ಮಾರ್ನಿಂಗ್‌ ಶೋ ನನ್ನಂತೆ ಕ್ಲಾಸಿಗೆ ಬಂಕ್‌ ಹೊಡೆದು ಕದ್ದು ಚಿತ್ರ ನೋಡುವ ಚಿತ್ರ ಪ್ರೇಮಿಗಳಿಗೆ, ನಲ್ಲ-ನಲ್ಲೆಯರಿಗೆಂದೇ ಮೀಸಲಾಗಿತ್ತು. ಅಂದು ಕದ್ದು ನೋಡಿದ ಬೆಳ್ಳಿಮೋಡ, ಶರಪಂಜರ, ಕಪ್ಪು-ಬಿಳುಪು, ಉಯ್ಯಾಲೆ ಇಂದೂ ನೆನಪಿನ ಮೆಲುಕು ಹಾಕುವಂತಿದೆ. ಉತ್ತಮ ಸದಭಿರುಚಿಯ ಚಿತ್ರಗಳ ಕಾಲವದು.

  ಬೆಳ್ಳಿಮೋಡ-ಹಣಕ್ಕಾಗಿಯೇ ಎಸ್ಟೇಟ್‌ ಮಾಲಿಕರ ಮಗಳನ್ನು ಪ್ರೀತಿಸಿ, ಅವಳಿಗೆ ತಮ್ಮ ಹುಟ್ಟಿದಾಗ ಆಸ್ತಿ ಅವನ ಪಾಲಾಗುವುದೆಂದು ಅವಳನ್ನು ಮದುವೆಯಾಗಲು ಹಿಂದೇಟು ಹಾಕಿ, ಪ್ರೀತಿ ಎಂಬ ಭ್ರಮೆಯಿಂದ ವಂಚಿತಳಾದಳು ದುರಂತ ನಾಯಕಿ. ಗೆಜ್ಜೆಪೂಜೆ ವೇಶ್ಯೆಯ ಕಥೆ. ಅವಳಿಗೂ ಮನಸ್ಸು, ಹೃದಯ, ತನ್ನದೇ ಆದ ಭಾವನೆಗಳಿವೆ. ಮದುವೆಯಾಗಿ ಗರತಿಯಾಗಿ ಬಾಳಬೇಕೆಂಬ ಹಂಬಲವಿದೆ.

  ವೇಶ್ಯೆ ಎಂದೆನಿಸಿದರೂ ಒಬ್ಬನಿಗೇ ನಿಯತ್ತಿನಿಂದಿದ್ದ ಇದ್ದವರು. ದೇವದಾಸಿ ಪದ್ಧತಿಗೆ ಮನ ಒಪ್ಪದೆ ಜೀವತೆತ್ತ ಚಂದ್ರಾಳ ಅಭಿನಯ ಕಣ್ಣೀರು ಮಿಡಿಯುವಂತಿದೆ. ಶರಪಂಜರದಲಿ ಮನೋವೈಕಲ್ಯಕ್ಕೆ ಒಳಗಾದ ಒಬ್ಬ ಹೆಣ್ಣು ಗುಣಮುಖಳಾಗಿ ಹೊರಬಂದರೂ ಹುಚ್ಚಿ, ಹುಚ್ಚಿ ಎಂದು ಗಂಡನಿಂದ, ಸಮಾಜದಿಂದ ತಿರಸ್ಕೃತಗೊಂಡು ಮತ್ತದೇ ಶರಪಂಜರದೊಳಕ್ಕೆ ಆ ಹೆಣ್ಣನ್ನು ದೂಡುವ ನಮ್ಮ ಸಮಾಜದ ರೀತಿ, ನೀತಿ, ನಡವಳಿಕೆಗಳ ನಿಜ ರೂಪದ ಕಥೆಯಿದು. ಈ ಚಿತ್ರಗಳಲಿ ಕಲ್ಪನಾ ಅವರ ಅಭಿನಯ ಸಾಟಿಯಿಲ್ಲದ್ದು.

  ಜಾತಕ, ದೋಷ, ಹುಸಿನಂಬಿಕೆ. ಕುಜ ದೋಷವಿದೆಯೆಂದು ನಂಬಿಸಿ ಕಳ್ಳ ಪೂಜಾರಿಯಿಂದ ಮೋಸಗೊಂಡು ಬದುಕಿರುವವರೆಗೂ ಪ್ರೀತಿಸಿದ ಹುಡುಗನನ್ನು ಮದುವೆ ಮಾಡಿಕೊಳ್ಳಲಾಗದೆ ಮಡಿಯುವ ಅಬಲೆಯೊಬ್ಬಳ ಕಥೆ ಸಾಕ್ಷಾತ್ಕಾರ. ಈ ಚಿತ್ರದಲಿ ರಾಜ್‌-ಜಮುನರ ಅಭಿನಯ ಅಜರಾಮರ. ಹಿಂದಿಯ ಮೇರು ನಟ, ಶ್ಯೋಮಾನ್‌ ರಾಜ್‌ಕಪೂರ್‌ ಅವರ ತಂದೆ ಪೃಥ್ವೀರಾಜ್‌ಕಪೂರ್‌ ಅವರನ್ನು ಕನ್ನಡ ಚಿತ್ರದಲಿ ನಟಿಸಿದ ಹೆಗ್ಗಳಿಕೆ ಪುಟ್ಟಣ್ಣನವರದು.

  ಮಲ್ಲಮ್ಮನ ಪವಾಡ-ಮಲತಾಯಿಯ ಕಪಟ ಪ್ರೀತಿ, ಅಫೀಮ್‌ ಕುಡಿಸಿ ಮಂದ ಬುದ್ಧಿಯ ಗಂಡನನು ಸರಿಪಡಿಸಿದ ಓರ್ವ ಹೆಣ್ಣಿನ ದಿಟ್ಟತನ, ಜಾಣ್ಮೆ ಬಿ.ಸರೋಜದೇವಿ ತೋರಿದರೆ ಎಡಕಲ್ಲುಗುಡ್ಡದ ಮೇಲೆ ಚಿತ್ರದಲಿ ದಾಂಪತ್ಯ ಸುಖ ಸಿಗದೆ, ಪ್ರಾಯದ ಆಸೆಗಳ ತುಂಬಿ ಹಿಡಿಯಲಾರದೆ ಕಾಮಕ್ಕೆ ತಹತಹಿಸಿ ಸಂಧರ್ಭವಶಾತ್‌ ಒಬ್ಬ ಯುವಕನಿಗೆ ತನ್ನನ್ನೇ ಅರ್ಪಿಸಿ, ನಂತರ ಆತ ತನ್ನ ತಂಗಿಯನ್ನು ವರಿಸಲು ಅಣಿಯಾದಾಗ ಯಾರಿಗೂ ಹೇಳಲಾಗದೆ ತಳಮಳಿಸಿ ಕಡೆಗೆ ಬಂದೂಕಿಗೆ ಬಲಿಯಾದ ಮಹಿಳೆಯೋರ್ವಳ ಪಾತ್ರದಲಿ ಜಯಂತಿ ಅವರ ಅಮೋಘ ಅಭಿನಯವನ್ನು ಚಿತ್ರರಂಗದ ರಸಿಕರ ನೆನಪಿನ ಮನೆಯಲಿ ಚಿರಸ್ಥಾಯಿಯಾಗಿ ಉಳಿಯುವಂತಿದೆ.

  ಮಾನಸ ಸರೋವರ- ಮನೋರೋಗಿಗಳನ್ನು ಗುಣಮಾಡುವ ವೈದ್ಯನಾಗಿ ಮನೋರೋಗಿಯಾದ ಒಬ್ಬ ಹುಡುಗಿಯನ್ನು ಗುಣಪಡಿಸಿ, ಅವಳನ್ನು ಪ್ರೀತಿಸಿ ಆ ಹುಡುಗಿ ಮತ್ತೊಬ್ಬನ ಪಾಲಾದಾಗ ತಾನೇ ಮನೋರೋಗಿಯಾಗುವ ಮಾನಸ ಸರೋವರದ ಡಾಕ್ಟರ್‌ ಆಗಿ ನಟಿಸಿದ ಶ್ರೀನಾಥ್‌ ಅವರ ಅಭಿನಯ ಕಂಡಾಗ ಪ್ರಣಯ ಪಾತ್ರಗಳಿಗೇ ಮೀಸಲಾಗಿದ್ದ ಶ್ರೀನಾಥ್‌ ಉತ್ತಮವಾಗಿ ಅಭಿನಯಿಸಬಲ್ಲರು ಎಂದು ಸಾಬೀತು ಪಡಿಸಿದ ಚಿತ್ರ.

  ರಂಗನಾಯಕಿಯಲ್ಲಿ ನಾಟಕ ಕಂಪನಿಯ ತೆರೆಯ ಮರೆಯ ಸಾಮಾಜಿಕ ಬದುಕಿನ್ನು ಪ್ರತಿಬಿಂಬಿಸಿದ ವ್ಯಕ್ತಿ ಪುಟ್ಟಣ್ಣ. ಕಂಪನಿಯ ಉಳಿವು, ಕಲಾವಿದರ ನೋವು, ನಲಿವುಗಳನ್ನು ಎತ್ತಿ ತೋರಿದ ಚಿತ್ರವದು. ನಾಯಕಿ ಆರತಿ ಸಿನಿಮಾ ನಟಿಯಾಗಿ ತನಗೆ ಅರಿಯದೇ ತನ್ನ ಮಗನ ಪ್ರೇಮಪಾಶಕ್ಕೆ ಸಿಕ್ಕಿ ಕೊನೆಯುಸಿರೆಳೆಯುವ ಕಥೆ ಮರೆಯಲಾಗದ್ದು. ಅಂಬರೀಶ್‌ ಮತ್ತು ಆರತಿಯವರ ಅಭಿನಯ ಅತ್ಯಂತ ಶ್ಲಾಘನೀಯವಾದದ್ದು.

  ಗುರು-ಶಿಷ್ಯರ ಸಂಬಂಧ ಪುನೀತವಾದದ್ದು. ಅದರಲ್ಲಿರುವ ಗೌರವ, ಪ್ರೀತಿ, ಮಮತೆ, ವಾತ್ಸಲ್ಯಗಳಿಗೆ ಅಡ್ಡ ಬರುವ ಸಾಮಾಜಿಕ ಪರಿಸರ, ಒತ್ತಾಯದ ನಾಗರಹಾವಿನ ಚಾಮಯ್ಯ ಮೇಷ್ಟರನ್ನು ರಾಮಾಚಾರಿ-ಅಲಮೇಲುವನ್ನು ಪ್ರೀತಿಸಿದವರಾರು. ಅಮ್ಮ-ಮಗನ ಪ್ರೀತಿ ವಾತ್ಸಲ್ಯವನ್ನು ಎತ್ತಿ ಹಿಡಿದ ಚಿತ್ರ ಋಣಮುಕ್ತಳು. ಗೆಳತಿಯೋರ್ವಳು ತನ್ನ ಸ್ನೇಹಿತನಿಂದ ಬಸುರಾದಾಗ ಸಮಾಜದ ಕಣ್ಣು ಮುಚ್ಚಿಸಲು ಅವಳನ್ನು ವರಿಸಿದರೂ ಮನದಾಳದಲಿ, ನಡವಳಿಕೆಯಲಿ ಅವಳನ್ನು ಗೆಳತಿಯಂತೆ ಕಾಣುವ ಪಾತ್ರದಲಿ ಶ್ರೀಧರ್‌ ಅವರ ಉತ್ತಮ ಅಭಿನಯದ ಅಮೃತಘಳಿಗೆ. ಹೀಗೇ ವಿಶ್ಲೇಷಣೆಯ ಬರೆಯುತ್ತಾ ಹೋದಲ್ಲಿ ಒಂದೇ ಎರಡೇ....

  ಪುಟ್ಟಣ್ಣನವರ ವೈಯುಕ್ತಿಕ ಜೀವನ :

  ಮೈಸೂರು ಜಿಲ್ಲೆಯ ಕಾವೇರೀ ತೀರದ ಕಣಗಾಲ್‌ ಹಳ್ಳಿಯ ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ ಮುಂದೆ ಆದದ್ದು ಎಸ್‌.ಆರ್‌.ಪುಟ್ಟಣ್ಣ ಕಣಗಾಲ್‌. ಚಿಕ್ಕಂದಿನಲ್ಲಿ ಹೊಟ್ಟೆಪಾಡಿಗಾಗಿ ಕ್ಲೀನರ್‌, ಡ್ರೈವರ್‌ ನಂತರ ಸೇಲ್ಸ್‌ಮನ್‌ ಮತ್ತು ಟೀಚರ್‌ ಆಗಿ ಕೆಲ್ಸ ಮಾಡಿದ್ದರಂತೆ. ಚಿತ್ರರಂಗದಲ್ಲಿ ಮೊದಲು ಪಬ್ಲಿಸಿಟಿ ಬಾಯ್‌ು ಆಗಿ ಸೇರಿದ ಪುಟ್ಟಣ್ಣ ಅಂದಿನ ದಿನಗಳಲ್ಲಿ ನಾಟಕಗಳಲ್ಲಿ ನಟಿಸಿದ್ದರಂತೆ. ಇಂತಹ ಸಮಯದಲ್ಲಿ ಬಿ.ಆರ್‌.ಪಂತುಲು ಅವರ ಪರಿಚಯವಾಗಿ ಅವರೊಡನೆ ಸಹ-ನಿರ್ದೇಶಕರಾಗಿ ದುಡಿಯುವ ಸದವಕಾಶ ಸಿಕ್ಕಿತು. ಮುಂದೆ ಬೆಳ್ಳಿಮೋಡದಿಂದ ಪ್ರಾರಂಭಗೊಂಡ ಇವರ ನಿರ್ದೇಶನ ಕನ್ನಡ ಚಿತ್ರರಂಗಕ್ಕೆ ಬೆಳ್ಳಿಯ ಧಾರೆಯನ್ನೇ ಹರಿಸಿತು.

  ಪುಟ್ಟಣ್ಣ ಬಗ್ಗೆ ಯೋಚಿಸಿದಂತೆ ಅವರು ಭಾವನಾ ಜೀವಿ ಇದ್ದಿರಬಹುದೇ ಎನಿಸಿತು. ಏಕೆಂದರೆ ಅವರು ತಾವೇ ಸೃಷ್ಟಿಸಿಕೊಂಡ ಕಲಾ ಲೋಕದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡವರು. ಕಾಲೇಜುರಂಗ, ಪಡುವಾರಹಳ್ಳಿ ಪಾಂಡವರ ಕಂಡಾಗ ಅವರು ಸ್ವಲ್ಪ ಕ್ರಾಂತಿಕಾರಿಯಾಗಿದ್ದರೇನೋ ಎನಿಸಿದರೂ ತಿರುಳಿನಲ್ಲಿ ಅವರು ಕಟ್ಟಾ ಸಂಪ್ರದಾಯವಾದಿಯಾಗಿದ್ದರೆಂದು ಕಾಣುತ್ತದೆ. ಅದೇನೇ ಇದ್ದರೂ ಬೆಳ್ಳಿಮೋಡದಿಂದ ಮೂಡಿದ ಈ ನಿರ್ದೇಶಕನ ಮೋಡಿ ಕನ್ನಡ ಚಿತ್ರರಂಗಕ್ಕೆ 23 ಉತ್ತಮ ಚಿತ್ರಗಳನ್ನು ಇತ್ತಿದೆ. ಇಂದಿಗೂ ಆ ಚಿತ್ರಗಳ ನೋಡಿದಾಗ ಕಲಾರಸಿಕರ ಮನದಲ್ಲಿ ಪವಾಡ ಮಾಡಿ, ಬೆಳ್ಳಿಯ ಮೋಡಿ ಮಾಡಿ ಮನದಂಗಳದಲಿ ಉಳಿಯುವಂತೆ ಮಾಡಿದೆ.

  ಕೇವಲ ಐವತ್ಮೂರು ವರುಷ ಬದುಕಿದ್ದ ಪುಟ್ಟಣ್ಣ ಇಂದಿಗೆ(ಜೂ.5) ಕಾಲವಾಗಿ ಇಪ್ಪತ್ತೊಂದು ವರುಷಗಳು ತುಂಬುತ್ತದೆ. ನಿರ್ದೇಶಕನೇ ನಿಜವಾದ ಹೀರೋ ಎಂದು ಸಾಬೀತು ಪಡಿಸಿದ ಧೀಮಂತ ವ್ಯಕ್ತಿ ಪುಟ್ಟಣ್ಣ ಕಣಗಾಲ್‌ ಅವರು. ಇಂದಿನ ಚಿತ್ರಗಳಲಿ ಸತ್ವ ಇಲ್ಲದ ಕಥೆ, ಬರೀ ಕುಣಿತ, ಅಸಭ್ಯ ಸಂಭಾಷಣೆ, ಮೈತೋರುವಿಕೆ, ಸಾಹಿತ್ಯವೇ ಇಲ್ಲದ ಹಾಡುಗಳು, ಡಿಶುಂಗಳ ಚಿತ್ರಗಳ ಕಂಡಾಗ ‘ಪುಟ್ಟಣ್ಣ ಮತ್ತೊಮ್ಮೆ ಹುಟ್ಟಿ ಬಾ’ ... ಎಂಬ ಆಶಯ ಎಲ್ಲರಲ್ಲೂ ಮೂಡುತ್ತದೆ.

  Post your views

  ಪೂರಕ ಓದಿಗೆ-
  ಪುಟ್ಟಣ್ಣನೆಂಬ ‘ಸಾರ್ವಭೌಮ’!


  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more