twitter
    For Quick Alerts
    ALLOW NOTIFICATIONS  
    For Daily Alerts

    ಹೋರಾಟ-ಪ್ರೀತಿ : ಗೆಲ್ಲುವುದೇ ಬಾಲಿವುಡ್‌?

    By *ಅಮೆಜಾನ್‌
    |

    ಎರಡು ಭಗತ್‌ ಸಿಂಗ್‌. ಒಂದು ದೇವದಾಸ್‌. ಕಳೆದ ಆರು ತಿಂಗಳಿಂದ ಫ್ಲಾಪ್‌ಗಳನ್ನೇ ಅಧಿಕವಾಗಿ ಕಂಡಿರುವ ಬಾಲಿವುಡ್‌ಗೆ ಚೇತರಿಕೆ ನೀಡುವ ಶಕ್ತಿಯಿರುವುದು ಸದ್ಯಕ್ಕೆ ಈ ಚಿತ್ರಗಳಿಗೆ ಮಾತ್ರ. ಯಾಕೆಂದರೆ, ಬಹುತೇಕರ ಈ ಹೊತ್ತಿನ ಅಚಲ ನಂಬಿಕೆ- ಗಲ್ಲಾ ಪೆಟ್ಟಿಗೆಯನ್ನು ಲಕಲಕ ಎನಿಸುವ ತಾಕತ್ತಿರುವುದು ಹೋರಾಟ ಮತ್ತು ಪ್ರೀತಿಗೆ ಮಾತ್ರ. ಗದರ್‌ ಹಾಗೂ ಬಾರ್ಡರ್‌ ಇದನ್ನು ಈಗಾಗಲೇ ಸಾಬೀತು ಮಾಡಿವೆ.

    ಬಾಬಿ ಡಿಯೋಲ್‌ ಮತ್ತು ಸನ್ನಿ ಡಿಯೋಲ್‌ ದುಡ್ಡು ಸುರಿದಿರುವ ಭಗತ್‌ ಸಿಂಗ್‌ ಕುರಿತಾದ 'ಶಹೀದ್‌" ಬರುವ ಶುಕ್ರವಾರ (ಜೂನ್‌ 7) ತೆರೆ ಕಾಣಲಿದೆ. ಇನ್ನೊಂದು ಭಗತ್‌ ಸಿಂಗ್‌ ಚಿತ್ರದಲ್ಲಿ ಅಜಯ್‌ ದೇವಗನ್‌ ನಾಯಕ. ಕಥೆ ಹೇಳುವುದರಲ್ಲಿ ಜಗಜ್ಜಾಣ ಎನಿಸಿರುವ ರಾಜ್‌ ಕುಮಾರ್‌ ಸಂತೋಷಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹೀಗಾಗಿ ಡಿಯೋಲ್‌ ಸೋದರರು ಮತ್ತು ಸಂತೋಷಿ ನಡುವೆ ನೇರ ಹಣಾಹಣಿ ಅನ್ನುವುದರಲ್ಲಿ ಅನುಮಾನವಿಲ್ಲ . ಮೊದಲು ತಮ್ಮ ಭಗತ್‌ ಸಿಂಗ್‌ ತೆರೆ ಕಾಣುವ ಭಾಗ್ಯ ಡಿಯೋಲ್‌ ಸೋದರರಿಗೆ ಒಲಿದಿರುವುದು ಈ ನಿಟ್ಟಿನಲ್ಲಿ ಅವರಿಗೆ ಸಿಕ್ಕಿರುವ ಮೊದಲ ಜಯ.

    ಆದರೆ ಸಿನಿಮಾ ಟೀಕೆ-ಟಿಪ್ಪಣಿಕಾರರ ಅಭಿಪ್ರಾಯವೇ ಬೇರೆ. ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೋ ಅದೇ ಗೆಲ್ಲುತ್ತದೆ ಎಂಬುದು ಸುಳ್ಳು. ಬಾಬಿ ಡಿಯೋಲ್‌ಗಿಂತ ಅಜಯ್‌ ನಟನೆಯಲ್ಲಿ ಮುಂದು. ಸಂತೋಷಿ ಒಬ್ಬ ಒಳ್ಳೆಯ ನಿರ್ದೇಶಕ. ಎರಡೂ ಚಿತ್ರಗಳಲ್ಲಿ ಯಾವುದರ ಗುಣಮಟ್ಟ ಮೇಲಿರುತ್ತದೋ ಅದು ದುಡ್ಡು ಮಾಡುತ್ತದೆ ಎಂಬುದು ಇವರ ಅಂಬೋಣ. ಈ ಎರಡು ಭಗತ್‌ ಸಿಂಗ್‌ಗಳಲ್ಲದೆ ಸಾಧಾರಣ ಬಜೆಟ್ಟಿನ ಭಗತ್‌ಸಿಂಗ್‌ ಕುರಿತಾದ ಇನ್ನೂ ಮೂರು ಚಿತ್ರಗಳು ಸಿದ್ಧವಾಗುತ್ತಿವೆ!

    50 ಕೋಟಿಯ ದೇವದಾಸ !
    ಒಂದು ವೇಳೆ ಭಗತ್‌ ಸಿಂಗ್‌ ಕುರಿತಾದ ಎರಡೂ ಚಿತ್ರಗಳೂ ನೆಲಕಚ್ಚಿದರೂ, ದೇವದಾಸ್‌ ಗೆಲ್ಲುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಬಾಲಿವುಡ್‌ ಪಂಡಿತರು. ಈಗಾಗಲೇ ಸಾಕಷ್ಟು ಕ್ಲಿಕ್ಕಾಗಿರುವ ಬೆಂಗಾಲಿ ಸಾಹಿತಿ ಶರತ್‌ ಚಂದ್ರ ಚಟರ್ಜಿಯವರ ಈ ಕೃತಿ ಈ ಹಿಂದೆ ಕೂಡ ಸಿನಿಮಾ ಆಗಿಯೂ ಯಶಸ್ವಿಯಾಗಿದೆ. ದಿಲೀಪ್‌ ಕುಮಾರ್‌, ವೈಜಯಂತಿ ಮಾಲ ಹಾಗೂ ಸುಚಿತ್ರ ಸೇನ್‌ ಅಭಿನಯಿಸಿದ್ದ ಹಳೆಯ ದೇವದಾಸ್‌ ಚಿತ್ರ ಬಾಲಿವುಡ್‌ನ ಮೈಲುಗಲ್ಲುಗಳಲ್ಲೊಂದು.

    ಆದರೀಗ ಅದೇ ಕಥೆಯ ಚಿತ್ರಕ್ಕೆ ಹೊಸ ಬಣ್ಣ. ಶಾರುಖ್‌ ಕಾನ್‌, ಮಾಧುರಿ ದೀಕ್ಷಿತ್‌ ಮತ್ತು ಐಶ್ವರ್ಯ ರೈ ತಾರಾಗಣ. ಸಂಜಯ್‌ ಲೀಲಾ ಬನ್ಸಾಲಿ ದಿಗ್ದರ್ಶನದ ಈ ಚಿತ್ರಕ್ಕೆ ಹರಿಸಿರುವ ಹಣ ಬರೋಬ್ಬರಿ 50 ಕೋಟಿ ರುಪಾಯಿ ! ಇವತ್ತಿನ ಜಾಯಮಾನಕ್ಕೆ ಚಿತ್ರವನ್ನು ಹೊಂದಿಸಲು ಸಂಜಯ್‌ ಲೀಲಾ ಬನ್ಸಾಲಿ ಸಾಕಷ್ಟು ಹೆಣಗಾಡಿದ್ದಾರಂತೆ. ಅಂದಹಾಗೆ, ಎರಡೂವರೆ ವರ್ಷ 260 ಶಿಫ್ಟ್‌ಗಳಲ್ಲಿ ಚಿತ್ರೀಕರಣ ನಡೆದಿದೆ. ಸಾಲದ್ದಕ್ಕೆ ಯೂನಿವರ್ಸಲ್‌ ಕೆಸೆಟ್‌ ಕಂಪನಿ ಮ್ಯೂಸಿಕ್‌ ಹಕ್ಕನ್ನು 12 ಕೋಟಿ ರುಪಾಯಿಗೆ ಖರೀದಿಸಿ, ದಾಖಲೆ ಸೃಷ್ಟಿಸಿದೆ. 'ಹಂ ದಿಲ್‌ ದೇ ಚುಕೇ ಸನಂ" ಚಿತ್ರದ ಮೂಲಕ ನಿರ್ಮಾಪಕರ ತಿಜೋರಿ ತುಂಬಿಸಿರುವ ಲೀಲಾ ಬನ್ಸಾಲಿಗೆ ದೇವದಾಸ್‌ ಯಶಸ್ಸಿನ ಬಗ್ಗೆ ಅನುಮಾನವೇ ಇಲ್ಲ.

    ಆದರೆ ಭಾರೀ ಬಜೆಟ್ಟಿನ ಚಿತ್ರಗಳೆಲ್ಲಾ ಎರಡು ಮೂರು ವಾರಗಳ ಅಂತರದಲ್ಲೇ ಬಿಡುಗಡೆಯಾಗಲಿರುವುದರಿಂದ ತುರುಸಿನ ಸ್ಪರ್ಧೆ ಗ್ಯಾರಂಟಿ. ಹೋರಾಟ, ಪ್ರೀತಿ- ಈ ಪೈಕಿ ಜಯ ಯಾರಿಗೆ?

    ಸ್ಯಾಂಡಲ್‌ವುಡ್‌ನಲ್ಲಂತೂ ಪ್ರೀತಿಯ ಹೂರಣವಿರುವ ಚಿತ್ರಗಳ ಒಬ್ಬಟ್ಟು ಜೋರಾಗಿ ಸವಿಯಲ್ಪಡುತ್ತಿವೆ. ಅಪ್ಪು, ನಿನಗಾಗಿ, ಚಂದು, ತುಂಟಾಟ ಇವೆಲ್ಲವೂ ಪ್ರೀತಿಯ ಹೂರಣದ ಒಬ್ಬಟ್ಟುಗಳೇ. ಈಗ ಪೈಪ್‌ಲೈನಿನಲ್ಲಿರುವ ಯೋಗೇಶ್ವರ್‌ ನಾಯಕತ್ವದ 'ಸೈನಿಕ" ಪ್ರೀತಿ ಹಾಗೂ ಹೋರಾಟ ಎರಡೂ ತಿರುಳನ್ನುಳ್ಳದ್ದು. ಇನ್ನಷ್ಟು ಪ್ರೀತಿ ಹಂಚಲು ಪ್ರೇಮ್‌ ಕೈದಿ, ನೀಲ ಮೇಘ ಶ್ಯಾಮ ಬರುತ್ತಿವೆ. ಎಲ್ಲಕ್ಕೂ ಮುನ್ನ ವಿಷ್ಣು ಘರ್ಜಿಸಿರುವ ಸಿಂಹಾದ್ರಿಯ ಸಿಂಹ. ಹೋರಾಟ- ಯುದ್ಧ- ಪ್ರೀತಿ; ಪ್ರೇಕ್ಷಕ ಇವುಗಳಿಗೆ ಸದಾ ಸ್ವಾಗತ ಕೋರುವುದಾದರೂ ಯಾತಕ್ಕೆ?

    English summary
    Only war, love
    Wednesday, July 10, 2013, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X