»   » ಬೆಳವಾಡಿ ಬತ್ತಳಿಕೆಯಲ್ಲಿ ಹೊಸ ಬಾಣ

ಬೆಳವಾಡಿ ಬತ್ತಳಿಕೆಯಲ್ಲಿ ಹೊಸ ಬಾಣ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಮಾರ್ವಾಡಿಗಳ ಲೋಕದಲ್ಲಿ ಹೊಸ ಪ್ರಯೋಗ ಮಾಡುತ್ತಾ, ಸ್ವಂತ ಕಥೆಯನ್ನು ತೆರೆಗೆ ತಂದು ಜೈಸಿಕೊಳ್ಳುವುದರಲ್ಲಿ ಸಾಕಪ್ಪಾ ಸಾಕು ಅನಿಸುತ್ತದೆ. ಯಾರೇ ಮಧ್ಯಮ ವರ್ಗದವರಿಗೂ ನನ್ನ ಸಲಹೆಯೆಂದರೆ, ಸ್ವಮೇಕ್‌ ಸಿನಿಮಾ ಮಾಡುವ ಕನಸು ಕಾಣಬೇಡಿ. ಸಾಲಗಾರರಾಗಿ ಸಾಯುತ್ತೀರಿ- ಹಾಗಂತ ಕೆಲವೇ ತಿಂಗಳ ಹಿಂದೆ ನೊಂದು ನುಡಿದಿದ್ದ ಪ್ರಕಾಶ್‌ ಬೆಳವಾಡಿ ಅವರ ‘ಸ್ಟಂಬಲ್‌’ ಚಿತ್ರಕ್ಕೆ ಇಂಗ್ಲಿಷ್‌ ಭಾಷೆಯ ಉತ್ತಮ ಚಿತ್ರವೆಂಬ ರಾಷ್ಟ್ರ ಪ್ರಶಸ್ತಿ ಸಿಕ್ಕ ನಂತರ ಅವರಲ್ಲಿ ಮತ್ತೆ ಹುಮ್ಮಸ್ಸು ಜಾಗೃತವಾಗಿದೆ.

ಕನ್ನಡ ಮನಸ್ಸುಗಳ ಆಲೋಚನೆಯನ್ನು ಇಂಗ್ಲಿಷ್‌ ಚಿತ್ರವನ್ನಾಗಿ ಯಾಕೆ ಮಾಡಿದಿರಿ ಎಂಬ ಆಕ್ಷೇಪಣೆಗೆ ನಗುನಗುತ್ತಲೇ ಬೆಳವಾಡಿ ಸಮಜಾಯಿಷಿ ಕೊಟ್ಟಿದ್ದರು. ಹೇಳಿಕೇಳಿ ಅವರು ಇಂಗ್ಲಿಷ್‌ ಪತ್ರಕರ್ತ. ಅವರ ಮನದ ಚಿಂತನೆಗಳು ಸುಲಭವಾಗಿ ಪದಗಳಾಗೋದು ಇಂಗ್ಲಿಷ್‌ನಲ್ಲೇ ಅಂತೆ.

ಈಗ ಬೆಳವಾಡಿ ಹೆಸರು ಅಂತರರಾಷ್ಟ್ರೀಯ ಮಟ್ಟ ಮುಟ್ಟಿದೆ. ಬತ್ತಿ ಹೋಗಿದ್ದ ಚೈತನ್ಯ ಮತ್ತೆ ಜಾಗೃತವಾಗಿದೆ. ಯಥಾ ಪ್ರಕಾರ ಅವರು ಬಂಗಾಲಿ ಹಾಗೂ ಮಲೆಯಾಳಿ ಮನಸ್ಸುಗಳಂತೆ ಕನ್ನಡಿಗರು ಇಲ್ಲವಲ್ಲ ಅಂತ ಖೇದ ತೋಡಿಕೊಂಡರು. ಗಿರೀಶ್‌ ಕಾಸರವಳ್ಳಿ ಏನಾದರೂ ಬಂಗಾಲಿಯಾಗಿದ್ದಿದ್ದರೆ, ಅಲ್ಲಿನ ಜನ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದರು. ಇಲ್ಲಿ ನೋಡಿ? ಮಲೆಯಾಳಂ ಜನ ಸಾಹಿತಿಗಳನ್ನು ಗೌರವಿಸುತ್ತಾರೆ. ಅಲ್ಲಿ ಕೃತಿಗಳು ಸಿನಿಮಾ ಆದರೆ, ಮೆಚ್ಚಿ ಮಾತಾಡುತ್ತಾರೆ. ಇಲ್ಲಿ ಒಬ್ಬ ಸಾಹಿತಿಗೆ ಒಂದಿಪ್ಪತ್ತೆೈದು ಸಾವಿರ ರುಪಾಯಿ ಸಂಭಾವನೆ ಕೊಟ್ಟು ಕಥೆ ಖರೀದಿಸುವ ಜನರಿಲ್ಲ. ನಿಂತಲ್ಲೇ ಸಿದ್ಧ ಐಡಿಯಾ ಹೊತ್ತುಕೊಂಡು ಬಂದು ಬಿಡುತ್ತಾರೆ. ರೀಮೇಕು ಸುಲಭ. ಸಾಹಿತ್ಯ ಓದಿ, ಸಿನಿಮಾ ಮಾಡೋದು ಕಷ್ಟ. ನಮ್ಮ ಕನ್ನಡದಲ್ಲೂ ವರ್ಷಕ್ಕೆ ಒಂದು 5 ಲಕ್ಷ ರುಪಾಯಿ ಸಾಹಿತಿಗಳಿಗೆ ಅಂತ ಕೊಟ್ಟರೆ, ಭಾರೀ ಒಳ್ಳೊಳ್ಳೆಯ ಸಿನಿಮಾ ಖಂಡಿತ ಬರುತ್ತವೆ.... ಬೆಳವಾಡಿ ಕಳಕಳಿ ಹೀಗೇ ಬೆಳೆಯುತ್ತಾ ಹೋಗುತ್ತದೆ.

ಗರ್ವ ಧಾರಾವಾಹಿ ಆಯಿತು. ಸ್ಟಂಬಲ್‌ ಕೂಡ ಗೆದ್ದಿತು. ಮುಂದೇನು?
ಬೆಳವಾಡಿಗೆ ಮತ್ತೆ ಸ್ಟಂಬಲ್‌ ರಿಲೀಸ್‌ ಮಾಡುವ ಬಯಕೆಯಿದೆ. ವಿಶ್ವ ಕಪ್‌ ಕ್ರಿಕೆಟ್‌ ನಡೆಯುತ್ತಿದ್ದಾಗ ಅದು ತೆರೆ ಕಂಡಿದ್ದೇ ಎಷ್ಟೋ ಜನಕ್ಕೆ ಗೊತ್ತಾಗಿರಲಿಲ್ಲ. ಈಗ ಪ್ರಶಸ್ತಿಯ ಬಿಸಿ ಬೇರೆ ಇರುವುದರಿಂದ ಈ ವರ್ಷ ಅದನ್ನು ಮತ್ತೆ ತೆರೆಗೆ ತರಲು ಬೆಳವಾಡಿ ಕಸರತ್ತು ಮಾಡುತ್ತಿದ್ದಾರೆ.

ಇಷ್ಟೆಲ್ಲಾ ಕನ್ನಡ ಚಿತ್ರಗಳ ಬಗ್ಗೆ ಮಾತಾಡುವ ನಿಮ್ಮ ಮುಂದಿನ ಚಿತ್ರ ಕನ್ನಡದಲ್ಲೇ ಇರುತ್ತದಾ ಅಂತ ಕಿಚಾಯಿಸಿದರೆ, ಖಂಡಿತ ಅಂತ ಅವರು ಮಾತುಕೊಡುತ್ತಾರೆ.

ಅಂದಹಾಗೆ, ಬೆಳವಾಡಿ ತೆಗೆಯಲಿರುವ ಮುಂದಿನ ಚಿತ್ರ ಅಕ್ರಮ ಸ್ಟಾಂಪ್‌ ಪೇಪರ್‌ ಜಾಲ ಕುರಿತದ್ದು. ಕರೀಂ ಲಾಲ ಇದರ ನಾಯಕನಾ? ಉತ್ತರಕ್ಕೆ ಸಿನಿಮಾ ಬರುವವರೆಗೆ ಕಾಯಿರಿ ಅನ್ನುತ್ತಾರೆ ಬೆಳವಾಡಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada