»   » ರಾಜ್‌-ಸಿದ್ದು ಸೌಹಾರ್ದಯುತ ಮಾತುಕತೆ

ರಾಜ್‌-ಸಿದ್ದು ಸೌಹಾರ್ದಯುತ ಮಾತುಕತೆ

Subscribe to Filmibeat Kannada

ಬೆಂಗಳೂರು : ಅಹಿಂದ ಸಂಘಟನೆಯ ಹಿಂದೆ ಬಿದ್ದಿರುವ ಜೆಡಿಎಸ್‌ನ ರೆಬಲ್‌ ಸ್ಟಾರ್‌ ಸಿದ್ದರಾಮಯ್ಯ, ಸ್ವಾಮೀಜಿಗಳು ಮತ್ತು ಬುದ್ದಿಜೀವಿಗಳನ್ನು ಇತ್ತೀಚೆಗೆ ಭೇಟಿ ಮಾಡುತ್ತಿದ್ದಾರೆ. ಈ ಬೆನ್ನಲ್ಲಿಯೇ ವರನಟ ಡಾ.ರಾಜ್‌ಕುಮಾರ್‌ ನಿವಾಸಕ್ಕೆ ಸಿದ್ದರಾಮಯ್ಯಭೇಟಿ ನೀಡಿ, ರಾಜ್‌ರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದರು.

ಪ್ರೀತಿಯಿಂದ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದ ವರನಟ, ಸಿಹಿ ನೀಡಿದರು. ‘ನಿಮ್ಮ ಕಾಲು ನೋವು ಈಗ ಪರವಾಗಿಲ್ವಾ’ ಎಂದು ಯೋಗಕ್ಷೇಮ ವಿಚಾರಿಸಿದ ಸಿದ್ದರಾಮಯ್ಯ, ತಾವು ಕಬ್ಬಡಿ ಆಡಲು ಹೋಗಿ ಕಾಲು ಮುರಿದುಕೊಂಡ ಕಥೆ ಹೇಳಿದರು.

ಎಂದಿನಂತೆಯೇ ‘ಇವ್ರು ನಮ್ಮ ಕಾಡ್ನೋರು’ ಎಂದು ರಾಜ್‌ ಆತ್ಮೀಯತೆ ವ್ಯಕ್ತಪಡಿಸಿದರು. ಮಳೆಬೆಳೆ ಕುರಿತು ಇಬ್ಬರೂ ಸ್ವಲ್ಪ ಕಾಲ ಮಾತನಾಡಿದರು. ಅಲ್ಲಿಯೇ ಇದ್ದ ಪುನೀತ್‌ ರಾಜ್‌ಕುಮಾರ್‌, ‘ಜೋಗಿ’ ಚಿತ್ರವನ್ನು ವೀಕ್ಷಿಸುವಂತೆ ಆಹ್ವಾನ ನೀಡಿದರು.

ರಾಜಕೀಯದಿಂದ ಮುಕ್ತವಾಗಿ ಮನಬಿಚ್ಚಿ ಮಾತನಾಡಿದ ಸಿದ್ದರಾಮಯ್ಯ, ರಾಜ್‌ರ ಸೇವೆ ರಾಜ್ಯಕ್ಕೆ ಮುಂದುವರೆಯಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು.

ಪಾರ್ವತಮ್ಮ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಬೆಂಬಲಿಗರು ಈ ಸಂದರ್ಭದಲ್ಲಿ ಹಾಜರಿದ್ದರು. ಮಾತುಕತೆಯ ನಂತರ ಇದೊಂದು ಸೌಹಾರ್ದ ಭೇಟಿ ಎಂದು ಸುದ್ದಿಗಾರರಿಗೆ ಸಿದ್ದರಾಮಯ್ಯ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada