»   » ಮಲ್ಲಿಕಾ ಶೆರಾವತ್‌ ಹಾಡಿಗೆ 75ಲಕ್ಷ ರೂಪಾಯಿ ಖರ್ಚು

ಮಲ್ಲಿಕಾ ಶೆರಾವತ್‌ ಹಾಡಿಗೆ 75ಲಕ್ಷ ರೂಪಾಯಿ ಖರ್ಚು

Subscribe to Filmibeat Kannada


ಬಾಲಿವುಡ್‌ ಸೆಕ್ಸೀ ತಾರೆ, ಚುಂಬನ ಚತುರೆ ಮಲ್ಲಿಕಾ ಶೆರಾವತ್‌, ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಾರೆನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆ ಹಾಡಿನ ವೆಚ್ಚ 75ಲಕ್ಷ ರೂಪಾಯಿ... ಇದು ಸದ್ಯದ ಬಿಸಿಬಿಸಿ ಸುದ್ದಿ...!?

ಈ ಹಾಡಿಗಾಗಿ ಐದು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಮಲ್ಲಿಕಾ ಶೆರಾವತ್‌ ವಸ್ತ್ರ ವಿನ್ಯಾಸವನ್ನು ಸ್ವತಃ ನಿರ್ದೇಶಕ-ನಾಯಕ ಪ್ರೇಮ್‌ ಮಾಡಿದ್ದಾರೆ. ಇದು ಮಲ್ಲಿಕಾಗೂ ಒಪ್ಪಿಗೆಯಾಗಿದೆಯಂತೆ. ಮಲ್ಲಿಕಾ ಸಂಭಾವನೆ ಸೇರಿ ಈ ಹಾಡಿನ ಒಟ್ಟು ವೆಚ್ಚ 75ಲಕ್ಷ ರೂಪಾಯಿ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೂ ಒಂದು ದಾಖಲೆಯೇ ಸರಿ.

ಚಿತ್ರ ತಂಡ ಈಗಾಗಲೇ ಕೆಲವು ದೃಶ್ಯ ಹಾಗೂ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಿಕೊಂಡು ಬಂದಿದೆ. ನೃತ್ಯ ಕಲಾವಿದರ ಸಂಘದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಲ್ಲಿಕಾ ಹಾಡಿನ ಚಿತ್ರೀಕರಣ ಮುಂದೂಡಲ್ಪಟ್ಟಿದ್ದು, ಡಿಸೆಂಬರ್‌ ಮೊದಲವಾರದಲ್ಲಿ ನಡೆಯುವ ಸಂಭವ ಇದೆ.

ಡಿಸೆಂಬರ್‌ ಮೊದಲ ವಾರದಲ್ಲೂ ಮಲ್ಲಿಕಾ ಹಾಡು ಚಿತ್ರೀಕರಣವಾಗದಿದ್ದರೆ, ಅವರ ಕಾಲ್‌ಶೀಟ್‌ ಮತ್ತೆ ಒಂದು ತಿಂಗಳವರೆಗೆ ದೊರೆಯುವುದಿಲ್ಲವಂತೆ. ಹಾಗಾಗಿ ನಿರ್ಮಾಪಕ ರಾಮ್‌ಪ್ರಸಾದ್‌ ನೃತ್ಯ ಕಲಾವಿದರ ನಾಯಕರುಗಳೊಂದಿಗೆ ಪರಿಸ್ಥಿತಿ ವಿವರಿಸಿ, ಚಿತ್ರೀಕರಣ ನಡೆಸುವ ಸಿದ್ಧತೆ ನಡೆಸುತ್ತಿದ್ದಾರೆ.

ಗೌರೀಪಾಳ್ಯ, ಸಿಟಿ ಮಾರ್ಕೆಟ್‌, ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ರಾಕ್‌ಲೈನ್‌ ಸ್ಟೂಡಿಯೋ, ಅಬ್ಬಾಯಿ ನಾಯ್ಡು ಸ್ಟೂಡಿಯೋ ಮೊದಲಾದೆಡೆ ಮಲ್ಲಿಕಾ ಕುಣಿಯಲಿದ್ದಾರೆ. ಚಿತ್ರೀಕರಣ ಅತೀ ಜನದಟ್ಟಣೆ ಇರುವ ಸ್ಥಳಗಳಲ್ಲಿ ನಡೆಯಲಿರುವುದರಿಂದ, ಪೊಲೀಸ್‌ ರಕ್ಷಣೆ ಕೇಳಲು ರಾಮ್‌ಪ್ರಸಾದ್‌ ನಿರ್ಧರಿಸಿದ್ದಾರೆ.

ಕೊಸರು : ಮಲ್ಲಿಕಾ ಶೆರಾವತ್‌ ಮೀರಿಸುವ ಅನೇಕ ಮಾದಕ ಬೆಡಗಿಯರು ಕನ್ನಡದಲ್ಲೇ ಇದ್ದಾರೆ. ಹಾಗಿದ್ದೂ ಆಕೆಯನ್ನೇ ಕರೆತರುವ ಹುಚ್ಚೇಕೆ? ಆಕೆಗೆ ನೀಡುವ ಸಂಭಾವನೆಯಲ್ಲಿ ಚಿತ್ರವನ್ನೇ ನಿರ್ಮಿಸಬಹುದಲ್ಲ? ಇದೆಂತಹ ಮೂರ್ಖತನ? ಎಂಬ ಪ್ರಶ್ನೆ ಗಾಂಧೀನಗರದ ಅಂಗಳದಿಂದಲೇ ಕೇಳಿ ಬಂದಿದೆ.

ನಿಮ್ಮ ಅನಿಸಿಕೆ ಬರೆಯಿರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada