"ಹಾಯ್" ಓಂ ಪ್ರಕಾಶ್ ರಾವ್? ಏನ್ರಿ ಇದೆಲ್ಲಾ?
ಒಬ್ಬ ವ್ಯಕ್ತಿ ಸಿಗರೇಟು ಸೇದುತ್ತಾ ಆ ತಂಡದವರಿಗೆ ಹೀಗೀಗೇ ಮಾಡಿ ಎಂದು ಮಾಹಿತಿ ಕೊಡುತ್ತಾ ಹೋಗುತ್ತಾನೆ. ನೀವು ಮಾಡುತ್ತಿರುವುದು ಕೊಲೆಯಲ್ಲ; ಸಮಾಜದ ಸುಧಾರಣೆ. ನೀವು ನಿಮ್ಮ ಕೆಲಸವನ್ನು ನೀಟಾಗಿ ಮುಗಿಸಿ, ನಾನು ಅವನ್ನೆಲ್ಲಾ ನನ್ನ ಪತ್ರಿಕೆಯಲ್ಲಿ ಹಾಕುತ್ತೇನೆ. ಅದರಿಂದ ನಿಮಗೂ ಹೆಸರು ಬರುತ್ತದೆ. ನನಗೂ ನನ್ನ ಪತ್ರಿಕೆಗೂ ಒಳ್ಳೇ ಮಾರ್ಕೆಟ್ ಆಗುತ್ತದೆ...
ಈ ರೀತಿ ಆ ವ್ಯಕ್ತಿ ಕತ್ತಲಲ್ಲಿ ಕೂತು ಆ ಭೀಮಾತೀರದ ವ್ಯಾಘ್ರಗಳಿಗೆ ಹಂತಹಂತವಾಗಿ ಟಿಪ್ಸ್ ಕೊಡುತ್ತಾ ಹೋಗುತ್ತಾನೆ. ಆ ಹುಡುಗರ ಕೈಯಲ್ಲಿ ಕಪ್ಪು ಬಿಳುಪು ಟ್ಯಾಬ್ಲಾಯ್ಡ್ ಒಂದು ಇರುತ್ತದೆ. ಅದರ ಟೈಟಲ್ ಮೇಲೆ ಬ್ಲರ್ ಬ್ಲರ್ ಬರುತ್ತಿರುತ್ತದೆ. ನಂತರ ಅವರೆಲ್ಲರೂ ಸೇರಿ ಕೊಲೆಗೈಯುತ್ತಾರೆ. ರಕ್ತಪಾತ ಮಾಡುತ್ತಾ ಹೋಗುತ್ತಾರೆ...
ಈ ರೀತಿಯ ದೃಶ್ಯ ಶುಕ್ರವಾರ (ಏ.6) ತೆರೆಕಂಡಿರುವ 'ಭೀಮಾ ತೀರದಲ್ಲಿ' ಚಿತ್ರದಲ್ಲಿ ಬಂದುಹೋಗುತ್ತದೆ. ಇದು ಓಂ ಪ್ರಕಾಶ್ ರಾವ್ ಎಂಬ ಮಹಾ ಬುದ್ಧಿವಂತ ಎಂದು ಹಣೆಪಟ್ಟಿ ಹಾಕಿಕೊಂಡು ಓಡಾಡುವ ನಿರ್ದೇಶಕನ ಕೈಚಳಕದಲ್ಲಿ ಮೂಡಿಬಂದಿರುವ ಕೆಲಸ.
ಇಲ್ಲಿ ಓಂ ಯಾರನ್ನು ಟಾರ್ಗೆಟ್ ಮಾಡಿದ್ದಾರೆ? ಆ ಸಿಗರೇಟು ಸೇದುತ್ತಾ ಕತ್ತಲಲ್ಲಿ ಕೂತು ಮಾತನಾಡುತ್ತಿರುವ ವ್ಯಕ್ತಿ ಯಾರು ಎನ್ನುವುದನ್ನು ಒಬ್ಬ ಸಾಮಾನ್ಯ ಪ್ರೇಕ್ಷಕನೂ ಅರ್ಥ ಮಾಡಿಕೊಳ್ಳಬಲ್ಲ. 'ಭೀಮಾ ತೀರದಲ್ಲಿ' ಕಥೆಯನ್ನು ಸ್ವತಃ ತಾನೇ ಬರೆದಿದ್ದೇನೆ. ನನಗೆ ಮನೋಹರ್ ಎಂಬ ವ್ಯಕ್ತಿ ಸಹಾಯ ಮಾಡಿದ್ದಾನೆ ಎಂದು ಚಿತ್ರದ ಟೈಟಲ್‌ನಲ್ಲಿ ಹಾಕಿಕೊಂಡಿರುವ ಓಂ ಪ್ರಕಾಶ್ ಎಲ್ಲೋ ಒಂದು ಕಡೆ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ, ಅದರ ಸಂಪಾದಕರೊಬ್ಬರನ್ನು ಟಾರ್ಗೆಟ್ ಮಾಡಿರುವುದು ಗೊತ್ತಾಗುತ್ತದೆ.
ನೆಟ್ಟಗೆ ಸಿನಿಮಾ ಮಾಡ್ರಯ್ಯಾ ಎಂದರೆ ಇನ್ನೇನೋ ಮಾಡಲು ಹೊರಟಿರುವ ಈ ಓಂ ಪ್ರಕಾಶ್‌ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ! ಭೀಮಾತೀರದ ಹಂತಕರ ಕಥೆಗೂ, ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ಸಂಪಾದಕರಿಗೂ ಎತ್ತಣಿಂದೆತ್ತ ಸಂಬಂಧ? ಇಂಥ ಎಪರು ತೆಪರು ಕೆಲಸಕ್ಕೆ ಕೈ ಹಾಕಿರುವ ಓಂ ಪ್ರಕಾಶ್ ಮುಂದಿನ ದಿನಗಳಲ್ಲಾದರೂ ಇಂಥ ಮಾಧ್ಯಮ ವಿರೋಧಿ ಚಟುವಟಿಕೆಗಳನ್ನು ಮಾಡುವುದನ್ನು ಕಡಿಮೆ ಮಾಡಲಿ, ಅದರ ಬದಲು ಜನ ನೋಡುವ ಸಿನಿಮಾ ಮಾಡಲಿ.


Click it and Unblock the Notifications











