»   » ಶಿವರಾಜಕುಮಾರ್ ನಟನೆಯ ಬಂಧುಬಳಗ ತೆರೆಗೆ

ಶಿವರಾಜಕುಮಾರ್ ನಟನೆಯ ಬಂಧುಬಳಗ ತೆರೆಗೆ

Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟಿಸಿರುವ ಬಂಧುಬಳಗ ಚಿತ್ರ ಇಂದು ರಾಜ್ಯಾದ್ಯಾಂತ ತೆರೆ ಕಂಡಿದೆ. ಚಿತ್ರದ ಚಿತ್ರೀಕರಣ ಆರಂಭವಾದಗಿನಿಂದಲೂ ಸದಭಿರುಚಿಯ ಕೌಟುಂಬಿಕ ಚಿತ್ರವೆಂಬ ಭಾರಿ ಪ್ರಚಾರ ಪಡೆದುಕೊಂಡಿರುವ ಬಂದುಬಳಗ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ.

ನಟನೆಯಲ್ಲಿ ಚಿತ್ರದಿಂದ ಚಿತ್ರಕ್ಕೆ ಮಾಗುತ್ತಿರುವ ಶಿವರಾಜಕುಮಾರ್ ಬಂಧುಬಳಗ ಚಿತ್ರದ ಕೇಂದ್ರ ಬಿಂದು. ಅಣ್ಣನ ಪಾತ್ರದಲ್ಲಿ ನಟಿಸಿರುವ ಶಿವಣ್ಣನ ಮನೋಜ್ಞ ಅಭಿನಯ ಚಿತ್ರದ ಹೈಲೈಟ್. ತಂಗಿ ಪಾತ್ರದಲ್ಲಿ ಮುದ್ದು ಮುಖದ ಚೆಲುವೆ ತೇಜಸ್ವಿನಿ ಕಾಣಿಸಿಕೊಂಡಿದ್ದಾರೆ. ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವ ಮಾತಿದೆ. ಅದನ್ನು ಹುಟ್ಟುತ್ತಾ ದಾಯಾದಿಗಳು, ಬೆಳೆಯುತ್ತಾ ಅಣ್ಣ ತಮ್ಮಂದಿರು ಎಂದು ಬದಲಾಯಿಸಿದರೆ ಸೂಕ್ತ ಎಂದು ಯೋಚಿಸಿದ ನಿರ್ದೇಶಕ ನಾಗಣ್ಣ. ಅದೇ ಆಶಯದೊಂದಿಗೆ ಚಿತ್ರವನ್ನು ನಿರ್ಮಿಸಿದ್ದಾರೆ. ಕೇಶವ ಆದಿತ್ಯ ಚಿತ್ರದ ಕತೆಯನ್ನು ಅಚ್ಚುಕಟ್ಟಾಗಿ ಹೆಣೆದುಕೊಟ್ಟಿದ್ದಾರೆ.

ಹಿರಿಯ ನಟಿ ಹೇಮಾ ಚೌಧರಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಲನ್ ಪಾತ್ರಗಳಿಲ್ಲ. ಇಲ್ಲಿ ತಮ್ಮ ತಮ್ಮ ಹಕ್ಕುಗಳಿಗಾಗಿ ಎಲ್ಲರೂ ಹೋರಾಡುತ್ತಾರೆ. ಮೇಲ್ನೋಟಕ್ಕೆ ಇದೊಂದು ಅಣ್ಣ ತಂಗಿ ಚಿತ್ರ ಎಂದು ಅನಿಸಿದರೂ, ಚಿತ್ರದಲ್ಲಿ ಎಲ್ಲರಿಗೂ ಸಮಾನವಾದ ಪ್ರಾಮುಖ್ಯತೆಯಿದೆ. ನಿರ್ದೇಶಕ ನಾಗಣ್ಣ ಅವರಿಗೆ ಖುಷಿ ತಂದಿರುವ ವಿಷಯವೆಂದರೆ ಬಂಧುಬಳಗ ಚಿತ್ರ ನಿರ್ಮಾಪಕರಿಗೆ ಇಷ್ಯವಾಗಿದೆ ಎನ್ನುವುದು ಒಂದಡೆಯಾದರೆ, ಈ ಚಿತ್ರ ಚಿತ್ರೀಕರಣದ ಆರಂಭದಲ್ಲಿಯೇ ಮಾರಾಟವಾಗಿದೆ ಎಂದು ಹೇಳುತ್ತಾರೆ.

ಇಂದಿನ ಸಮಾಜದಲ್ಲಿ ಸಂಬಂಧಗಳು ಹೇಗೆ ಹದಗೆಟ್ಟಿವೆ. ಇದರಿಂದ ಎಷ್ಟೆಲ್ಲಾ ಅನಾಹುತಗಳು ಸಂಭವಿಸುತ್ತಿವೆ. ಇಂತಹ ಅನೇಕ ಘಟನೆಗಳನ್ನು ಎಳೆಎಳೆಯಾಗಿ ಚಿತ್ರದಲ್ಲಿ ತೋರಿಸಲಾಗಿದೆ. ನಾನು ಎಲ್ಲೆಲ್ಲಿ ಎಷ್ಟು ಕಣ್ಣೀರು ಹಾಕಿ ಬರೆದಿದ್ದೇನೂ, ಅಲ್ಲಿ ಪ್ರೇಕ್ಷಕರೂ ಕೂಡಾ ಕಣ್ಣೀರು ಹಾಕುವಷ್ಟು ಮನಮುಟ್ಟುವ ಕತೆ ಇದಾಗಿದೆ ಎಂದು ಸಂಭಾಷಣಾಕಾರ ಕೇಶವ ಅದಿತ್ಯ ಹೇಳುತ್ತಾರೆ.

ಒಟ್ಟಿನಲ್ಲಿ ಶಿವರಾಜಕುಮಾರ್ ಅವರ ಸೆಂಟಿಮೆಂಟ್ ಚಿತ್ರಗಳ ಸರಪಳಿ ಮುಂದುವರಿದಿದ್ದು, ಅಣ್ಣ ತಂಗಿ ಚಿತ್ರದ ಮೂಲಕ ಹೆಂಗಳೆಯರ ಮನ ಗೆದ್ದಿದ್ದ ಶಿವಣ್ಣ ಬಂಧುಬಳಗದಲ್ಲಿ ಯಶಸ್ವಿಯಾಗುವರೆ ಕಾದು ನೋಡಬೇಕು.

ನೀನೇ ನೀನೇ ತೆರೆಗೆ

ಉದ್ಯಮಿ ಬಸವಾರೆಡ್ಡಿ ನಿರ್ಮಾಣದ ನಟ ನಿರ್ದೇಶಕ ಶಿವಧ್ವಜ್ ನಿರ್ದೇಶಿಸಿದ ನೀನೇ ನೀನೇ ಚಿತ್ರ ಕೂಡಾ ಇಂದು ತೆರೆ ಕಾಣಲಿದೆ. ಚಿತ್ರದ ನಾಯಕನಾಗಿ ಧ್ಯಾನ್ ನಟಿಸಿದ್ದು, ಕಾರ್ಕಳದಗುಲಾಬಿ ಐಶ್ವರ್ಯ ನಾಗ್ ನಾಯಕಿಯಾಗಿ ನಟಿಸಿದ್ದಾರೆ. ವಿಭಿನ್ನ ಕತೆಯುಳ್ಳ ಚಿತ್ರ ಇದಾಗಿದ್ದು, ಚಿತ್ರ ಗೆಲ್ಲುವ ವಿಶ್ವಾಸವನ್ನು ಶಿವಧ್ವಜ್ ವ್ಯಕ್ತಪಡಿಸುತ್ತಾರೆ. ನಟನಾಗಿ ಸೋತಿರುವ ಶಿವಧ್ವಜ್ ನಿರ್ದೇಶಕನಾಗಿ ನೀನೇ ನೀನೇ ಚಿತ್ರದ ಮೂಲಕ ಗೆಲುವು ಸಾಧಿಸಲಿ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada