ಪಾರ್ವತಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯಗಳು
ಡಾ.ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಪಾರ್ವತಮ್ಮನವರು ಮಾನಸಿಕವಾಗಿ ಜರ್ಜರಿತರಾಗಿದ್ದರು. ರಾಜ್ ಜೊತೆಗಿದ್ದಾಗಿನ ಹುರುಪು ಉತ್ಸಾಹ ಈಗಿಲ್ಲದಿದ್ದರೂ ಕನ್ನಡ ಚಿತ್ರರಂಗಕ್ಕೆ ಸಮಸ್ಯೆಗಳು ಎದುರಾದಾಗಲೆಲ್ಲಾ ಸದಾ ಮುಂದಿರುವ ಜಾಯಮಾನ ಪಾರ್ವತಮ್ಮನವರದು.
ಕೆಲ ದಿನಗಳ ಹಿಂದೆ ಪಾರ್ವತಮ್ಮನವರ ಆರೋಗ್ಯ ಕೊಂಚ ಹದಗೆಟ್ಟಿತ್ತು. ಹಾಗಾಗಿ ಅವರು ಸಾರ್ವಜನಿಕ ಸಭೆ ಸಮಾರಂಭಗಳಿಂದ ದೂರ ಉಳಿದಿದ್ದರು. ಶಿವಣ್ಣನ ಇಪ್ಪತ್ತೈದರ ಸವಿನೆನಪಿನ ಕಾರ್ಯಕ್ರಮಗಳಲ್ಲೂ ಪಾರ್ವತಮ್ಮ ಕಾಣಿಸಿಕೊಳ್ಳಲಿಲ್ಲ. ಯಾವುದೇ ಚಿತ್ರದ ಮುಹೂರ್ತ, ಕಾರ್ಯಕ್ರಮಗಳಿಗೂ ಹಾಜರಾಗಿರಲಿಲ್ಲ.
'ಹುಡುಗರು' ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತಂದಿದ್ದರು. 'ಹುಡುಗರು' ಚಿತ್ರದಂತೆ ಎಲ್ಲ ಕನ್ನಡ ಚಿತ್ರಗಳು ಶತದಿನೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದ್ದರು. ಪಾರ್ವತಮ್ಮನವರ ಈ ದೊಡ್ಡಗುಣ ಬೇರೆ ಯಾವ ನಿರ್ಮಾಪಕರಿಗೆ ಇರಲು ಸಾಧ್ಯ ಹೇಳಿ.
"ನನಗೆ ವಯಸ್ಸಾಗಿದೆ. ದೇಹದಲ್ಲಿ ಶಕ್ತಿ ಇಲ್ಲ. ಆದರೂ ನಮ್ಮ ಯಜಮಾನರು ತುಂಬಿದ ಸ್ಫೂರ್ತಿ, ಆದರ್ಶಗಳು ಇನ್ನೂ ಜೀವಂತವಾಗಿವೆ. ಕನ್ನಡ ಚಿತ್ರೋದ್ಯಮಕ್ಕೆ ನೂರಾರು ವಿಘ್ನಗಳು ಎದುರಾಗಿವೆ. ಅವುಗಳಲ್ಲಿ ಮುಖ್ಯವಾಗಿ ಪರಭಾಷಾ ಚಿತ್ರಗಳ ಪೈಪೋಟಿ, ಚಿತ್ರಮಂದಿರ ಸಮಸ್ಯೆ, ಪೈರಸಿ ಪಿಡುಗು...ಹೀಗೆ ಅನೇಕ ಸಮಸ್ಯೆಗಳು ಕಾಡುತ್ತಿವೆ" ಎನ್ನುವ ಪಾರ್ವತಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯಗಳು. (ಒನ್‍ಇಂಡಿಯಾ ಕನ್ನಡ)


Click it and Unblock the Notifications












