»   » ಗಂಗಾಹಾರದಲ್ಲಿ ಚಿಕ್ಕಮಲ್ಲಿಗೆ ಸಾಹಸ ಸನ್ನಿವೇಶ

ಗಂಗಾಹಾರದಲ್ಲಿ ಚಿಕ್ಕಮಲ್ಲಿಗೆ ಸಾಹಸ ಸನ್ನಿವೇಶ

Subscribe to Filmibeat Kannada

ಕೆಂಪಾಂಬಿಕ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿತವಾಗುತ್ತಿರುವ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಚಿತ್ರೀಕೃತವಾಗುತ್ತಿರುವ ಸ್ಥಳಗಳು ನಮ್ಮ ನಾಡಿನ ಹೆಮ್ಮೆಯ ತಾಣಗಳು. ಇತ್ತೀಚೆಗೆ 4000ಅಡಿ ಎತ್ತರದ ಗಂಗಾಹಾರವೆಂಬ ಪ್ರದೇಶದ ತುತ್ತತುದಿಯಲ್ಲಿ ಚಿಕ್ಕಮಲ್ಲಿಗೆಯ ಸಾಹಸ ಸನ್ನಿವೇಶವೊಂದನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಕೇವಲ ಆಂಗ್ಲ ಸಿನೆಮಾದಲ್ಲಿ ನೋಡಿರಬಹುದಾದ ಸಾಹಸಮಯ ಸನ್ನಿವೇಶವದು. ಛಾಯಾಗ್ರಾಹಕ ಜೆ ಜಿ ಕೃಷ್ಣ ಎತ್ತರ ಪ್ರದೇಶದ ಮೂರು ಅಡಿಗಳನ್ನು ಹೊರತು ಪಡಿಸಿ ಉಳಿದವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿಜಕ್ಕೂ ಭಯ ಹುಟ್ಟಿಸುವ ಸ್ಥಳವದು. ಈ ಸಾಹಸ ಸನ್ನಿವೇಶ ಚಿತ್ರೀಕೃತವಾಗಲು ಸಾಹಸಿಗ ಬಂಪರ್ ಕೃಷ್ಣರ ನೆರವು ಅಪಾರ ಎನ್ನುತ್ತಾರೆ ನಿರ್ಮಾಪಕರು.

39 ದಿನಗಳಲ್ಲಿ ಚಿತ್ರೀಕರಣ ಪೂರೈಸಿರುವ ಚಿಕ್ಕಮಲ್ಲಿಗೆ ಬಲ್ಲಾಳರಾಯನ ದುರ್ಗ, ಬೈಗೂರು ಅರಮನೆ, ಕ್ಯಾಸನ್‌ಮತ್ತಿ, ಗುತ್ತೆಡ್ಕ, ಉಜಿರೆ, ಜಮಾಲಾಬಾದ್ ಕೋಟೆ ಮುಂತಾದ ನೈಜ ಸೌಂದರ್ಯ ತುಂಬಿರುವ ಸ್ಥಳಗಳಲ್ಲಿ ತನ್ನ ಪರಿಮಳ ಬೀರಿದೆ. ನೀರ ಮೇಲೆ ನಡೆಯೋ ಮೀನ ಹೆಜ್ಜೆ ಎಂಬ ಹಾಡಿನ ಒಂದು ಭಾಗಕ್ಕೆ ಧರ್ಮಸ್ಥಳದ ಬಳಿಯ ಶಿಶಿರ ಎಂಬಲ್ಲಿ ಕ್ರೇನ್ ಬಳಸಿ ಚಿತ್ರೀಕರಿಸಿಕೊಂಡಿದ್ದು ಸ್ಮೃತಿಪಟಲದಲ್ಲಿ ಅಚ್ಚಾಗಿದೆ ಎನ್ನುವ ನಿರ್ದೇಶಕರು ಹಾಡುಗಳು ಹಾಗೂ ಚಿತ್ರೀಕೃತವಾಗಿರುವ ಸ್ಥಳಗಳೇ ಚಿತ್ರದ ನಾಯಕ ಎಂದು ತಿಳಿಸಿದ್ದಾರೆ.

ವಿ.ಅಶ್ವಥ್ ಹಾಗೂ ಡಿ.ರಾಮಚಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಚನ್ನಗಂಗಪ್ಪ. ಪ್ರೇಮಕವಿ ಎಂದೇ ಖ್ಯಾತರಾಗಿರುವ ಕೆ.ಕಲ್ಯಾಣ್ ಚಿಕ್ಕಮಗಳೂರ ಚಿಕ್ಕಮಲ್ಲಿಗೆಗೆ ಮಧುರವಾದ ಗೀತೆಗಳನ್ನು ರಚಿಸಿರುವುದಲ್ಲದೆ ಸಂಗೀತವನ್ನು ಸಂಯೋಜಿಸಿದ್ದಾರೆ. ಮಲ್ಲಿಗೆಯ ಎಲ್ಲಾ ಹಾಡುಗಳನ್ನು ಕನ್ನಡಿಗರೇ ಹಾಡಿರುವುದುದು ವಿಶೇಷ. ಉಳಿದಂತೆ ಜೆ.ಜಿ.ಕೃಷ್ಣ ಛಾಯಾಗ್ರಹಣ, ರವಿ ಸಂಕಲನ, ಸುಂದರಂ ಕಲೆ, ಪ್ರಸಾದ್ ನೃತ್ಯ, ಪ್ರಕಾಶ್, ರುದ್ರೇಶ್ ಸಹ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರವಂತ್, ಜಗದೀಶ್, ಆನಂದ್, ರಾಧಿಕಾಗಾಂಧಿ, ಸಿ.ಆರ್.ಸಿಂಹ, ರಾಮಕೃಷ್ಣ, ಅವಿನಾಶ್, ವಿನಯಾಪ್ರಕಾಶ್, ಎ.ಎಸ್.ಮೂರ್ತಿ, ವಿಜಯಸಾರಥಿ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada