»   » ರಸಿಕರ ಹೃದಯ ದರೋಡೆಗೆ ಬಂದ ಕೊಂಕಣಿ ಬೆಡಗಿ

ರಸಿಕರ ಹೃದಯ ದರೋಡೆಗೆ ಬಂದ ಕೊಂಕಣಿ ಬೆಡಗಿ

Subscribe to Filmibeat Kannada

ಐಶ್ವರ್ಯಾ ನಾಗ್ ...ಯಾರೀಕೇ? ಅನಂತ್ ನಾಗ್ ಮಗಳಾ ಅಥವಾ ಶಂಕರ್ ನಾಗ್ ಮಗಳಾ, ಹೆಸರು ಕೇಳಿದ ತಕ್ಷಣ ಮೂಡಿದ ಪ್ರಶ್ನೆ ಇದು. ಅವರಂತೆ ಈಕೆ ಕೂಡ ಕೊಂಕಣಿ ಮೂಲದವಳು ಅನ್ನೊದು ಬಿಟ್ಟರೆ ನಾಗ್ ಸೋದರರಿಗೂ ಈಕೆಗೂ ಯಾವುದೇ ಸಂಬಂಧವಿಲ್ಲ. ಆದರೆ ನೀನೆ ನೀನೆ ಚಿತ್ರದಲ್ಲಿ ಅನಂತ್ ಈಕೆಯ ತಂದೆ ಪಾತ್ರ ಮಾಡಿದ್ದಾರೆಂಬುದು ಕಾಕತಾಳೀಯ ಸತ್ಯ.

*ಮಹೇಶ್ ಮಲ್ನಾಡ್

ನಾನು ಈ ಚಿತ್ರದಲ್ಲಿ ಮೊದಲು ಎದುರಿಸಿದ ದೃಶ್ಯದಲ್ಲಿ ಅನಂತ್ ಸಾರ್ ಜತೆ ಜಗಳ ಆಡೋ ಸೀನ್, ನಾನಂತೂ ತುಂಬಾ ಹೆದರಿದ್ದೆ. ಆದರೆ ಶಾಟ್ ಅದ್ಭುತವಾಗಿ ಬಂದಿದೆ ಎನ್ನುತ್ತಾರೆ 18 ರ ಹರೆಯ ಬೆಡಗಿ ಐಶ್ವರ್ಯಾ. ಓದು, ಸಿನಿಮಾ ಜಗತ್ತಿನ ಲೆಕ್ಕಾಚಾರದಲ್ಲಿ ತೊಡಗಿಕೊಂಡಿರುವ ಸಾಧಿಸುವ ವಿಶ್ವಾಸವುಳ್ಳ ಭರವಸೆಯ ಪ್ರತಿಭೆ.

ಐಶ್ವರ್ಯಾ ಪೂರ್ವ ಇತಿಹಾಸ:
ನನ್ನ ತಂದೆ ನಾಗೇಂದ್ರ ಶೆಣೈ , ತಾಯಿ ಪ್ರಶಾಂತಿ ನಾಯಕ್, ನಮ್ಮದು ದಕ್ಷಿಣಕನ್ನಡ ಜಿಲ್ಲೆ ಕಾರ್ಕಳ ಊರು. ಮನೆ ಮಾತು ಕೊಂಕಣಿ. ನಾವು ಇಲ್ಲಿಂದ ಮಸ್ಕತ್ತಿಗೆ ಹೋದಾಗ ನನಗಿನ್ನೂ 2 ವರ್ಷ. ನನ್ನ ಸ್ಟಡೀಸ್ ಎಲ್ಲಾ ಅಲ್ಲೇ ಆಯ್ತು. ನನಗೊಬ್ಬಳು ತಂಗಿ ಇದ್ದಾಳೆ. ಈಗ ಶೇಷಾದ್ರಿಪುರಂ ಕಾಲೇಜಿನಲ್ಲಿ ಫಸ್ಟ್ ಬಿಕಾಂ ಓದುತ್ತಾ ಇದ್ದೀನಿ. ಕನ್ನಡ ಕಲಿತಿದ್ದು ಈಗ 6 ತಿಂಗಳಿಂದ ಅಷ್ಟೇ ಎಂದು ಪಟಪಟ ಮಾತನಾಡುವ ಐಶ್ವರ್ಯಾ ಅವರಿಗೆ ಈಗ ನೀನೆ ನೀನೆ ಚಿತ್ರ ತೆರೆ ಕಂಡ ಸಂಭ್ರಮ ಒಂದು ಕಡೆ, ಬಿಕಾಂ ಪರೀಕ್ಷೆ ತಯಾರಿ ಇನ್ನೊಂದು ಕಡೆ.

ಫಿಲ್ಮಂ ಫೀಲ್ಡ್ ಗೆ ಬಂದದ್ದು ಹೀಗೆ....
ನನ್ನ ತಾಯಿ ಪ್ರಶಾಂತಿ ನಾಯಕ್ ಸುಮಾರು 25 ವರ್ಷದಿಂದ ಕನ್ನಡ ಫಿಲ್ಮಂ ಇಂಡಸ್ಟ್ರೀಯಲ್ಲಿದ್ದಾರೆ. ಬಹುಶಃ ಕಲೆ ರಕ್ತಗತವಾಗಿ ಬಂದಿರುತ್ತೆ ಅನ್ನುತ್ತಾರಲ್ಲ ಆ ರೀತಿ ನನಗೂ ಒಳ್ಳೆ ಅವಕಾಶ ಸಿಕ್ಕಿತು. ದರೋಡೆ ಚಿತ್ರ ನಿರ್ದೇಶಕ ಉದಯ್ ಜಾದೂಗಾರ್ ಅವರು ನಮ್ಮ ಮನೆಗೆ ನಮ್ಮ ತಾಯಿಯನ್ನು ನೋಡಲು ಬಂದಿದ್ದಾಗ, ನನ್ನ ನೋಡಿ ಅವರ ಚಿತ್ರಕ್ಕೆ ನಾಯಕಿಯಾಗ್ತೀಯ ಅಂಥಾ ಕೇಳಿದ್ರು. ಅಮ್ಮ ಒಪ್ಪ್ಪಿದ್ರೂ, ಪಪ್ಪಾ ಮೊದಲು ಓದು ಮುಗಿಸು ಅಂದ್ರು. ಕೊನೆಗೆ ಎಲ್ಲಾ ಒಳ್ಳೆದಾಯ್ತು.

ಮೊದಲ ಚಿತ್ರದ ಅನುಭವ....
ನಾನು ಮೊದಲು ಕ್ಯಾಮೆರಾ ಎದುರಿಸಿದ್ದು, ದರೋಡೆ ಚಿತ್ರಕ್ಕೆ. ಉದಯ್ ಸಾರ್ ನಮಗೆ ದೂರದ ಸಂಬಂಧಿ ಆಗಬೇಕು. ಆಗಾಗಿ ಶೂಟಿಂಗ್ ಸಮಯದಲ್ಲಿ ಅಷ್ಟು ಕಷ್ಟ ಅನಿಸಲಿಲ್ಲ.ನಂತರ ನೀನೆ ನೀನೆ ಚಿತ್ರ ಮಾಡಿದೆ. ಶಿವಧ್ವಜ್ ಸಾರ್, ದಿನೇಶ್ ಬಾಬು ಸಾರ್ ಅವರಿಂದ ತುಂಬಾ ಕಲಿತೆ. ಧ್ಯಾನ್ ಒಳ್ಳೆ ಆರ್ಟಿಸ್ಟ್, ತುಂಬಾ ಸಫೋರ್ಟಿಂಗ್ . ಈ ಚಿತ್ರದ ಫಸ್ಟ್ ಆಫ್ ನಲ್ಲಿ ನಂದೂ ತುಂಬಾ ಬಬ್ಲಿ ಕ್ಯಾರೇಕ್ಟರ್ , ಮುಂದೆ ಸಂಸಾರಸ್ಥೆ ಪಾತ್ರ. ಗೃಹಿಣಿ ಪಾತ್ರ ಮಾಡೋದು ಸ್ವಲ್ಪ ಕಷ್ಟ ಆಯ್ತು. ಈಗ ಚಿತ್ರ ಜನರ ಮುಂದಿದೆ. ಅವರು ಒಪ್ಪುತ್ತಾರೆ ಅನ್ನೊ ಭರವಸೆ ಇದೆ ಎನ್ನುತ್ತಾರೆ ಐಶ್ವರ್ಯಾ.

ಮುಂದಿನ ಯೋಜನೆ....

ಮೊದಲು ನಾನು ಬಿಕಾಂ ಮುಗಿಸಬೇಕು. ವಿದ್ಯಾಭ್ಯಾಸದ ಜತೆಗೆ ಚಿತ್ರರಂಗದಲ್ಲೂ ತೊಡಗಿಸಿಕೊಳ್ಳುತ್ತೇನೆ. ನೀನೆ ನೀನೆ ರಿಲೀಸ್ ಆಗಿದೆ. ದರೋಡೆ ಮುಂದಿನ ವಾರ ರಿಲೀಸ್ ಆಗುವ ಸಾಧ್ಯತೆಯಿದೆ. ನಂತರ ಎಂ.ಡಿ. ಶ್ರೀಧರ್ ಅವರ 'ಜಾಲಿಕೇಸ್' ಚಿತ್ರ ಒಪ್ಪಿಕೊಂಡಿದ್ದೀನಿ. ಈ ಚಿತ್ರ ಒಪ್ಪಿಕೊಂಡಿದ್ದರಿಂದ ನಾಗತಿಹಳ್ಳಿ ಅವರ ಚಿತ್ರ ಹಾಗೂ ವಿಷ್ಣು ಸಾರ್ ಅವ್ರ ಜತೆಗಿನ ಚಿತ್ರ ಕೈ ತಪ್ಪಿಹೊಗಿದ್ದಕ್ಕೆ ಬೇಸರವಿದೆ. ಆದರೆ ಮುಂದೆ, ಒಳ್ಳೆ ಅವಕಾಶ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐಶ್ವರ್ಯಾ ಇಷ್ಟ ಕಷ್ಟಗಳು.. .. .
ನಂಗೆ ದರ್ಶನ್ ಚಿತ್ರ ಎಂದರೆ ತುಂಬಾ ಇಷ್ಟ, ರೀಸೆಂಟ್ ಆಗಿ ಇಂದ್ರ ಚಿತ್ರ ನೋಡ್ದೆ. ಚೆನ್ನಾಗಿದೆ. ಧ್ಯಾನ್ ಅವರ ಕಾರ್ ಕಾರ್ ಹಾಡು ಇಷ್ಟ. ಆ ಸಿನಿಮಾ ಬಂದಾಗ ನಾನು ಇನ್ನೂ ಸ್ಕೂಲ್ ನಲ್ಲಿದ್ದೇ. ನಾನು ನನ್ನ ತಂಗಿ ಮಸ್ಕತ್ತಿನಲ್ಲಿ ಈ ಹಾಡು ಹಾಡಿ , ಕುಣಿದು ಮಜಾ ಮಾಡ್ತಾ ಇದ್ವಿ. ರಾಜ್ ಕುಮಾರ್ ಅವ್ರ ಮೂವೀಸ್ ಕೂಡ ನೋಡ್ತಾ ಇದ್ವಿ. ಹಿಂದಿಯಲ್ಲಿ ಹೃತಿಕ್ ರೋಷನ್ ಚಿತ್ರಗಳು ತುಂಬಾ ಇಷ್ಟ. ತಿಂಡಿಯಲ್ಲಿ ನಂಗೆ ಪಿಜ್ಜಾ ಅಂದ್ರೆ ಇಷ್ಟ. ಅಡುಗೆ ಮಾಡೋಕೆ ಬರೊಲ್ಲ. ಆದ್ರೆ ಕೆಲಸಾರಿ ಚಿತ್ರಾನ್ನ ಮಾಡೊಕೆ ಟ್ರೈ ಮಾಡಿದ್ದು ಇದೆ.

ಕನ್ನಡ ಕಲಿತು , ಇಲ್ಲೇ ಉಳಿದು ಬೆಳೆಯಬೇಕೆಂಬ ಕನಸು ಹೊತ್ತಿರುವ ಐಶ್ವರ್ಯಾ ಅವರಿಗೆ ಅವಕಾಶಗಳಿಗೇನೂ ಕೊರತೆ ಇಲ್ಲ. ಚಿತ್ರರಂಗಕ್ಕೆ ಮತ್ತೊಬ್ಬ ಪ್ರತಿಭಾವಂತ ಕನ್ನಡತಿ ಪ್ರವೇಶ ಉತ್ತಮವಾಗಿ ಆಗಿದೆ ಎಂಬುದು ನೆನ್ನೆ ನಡೆದ ನೀನೆ ನೀನೆ ಪ್ರೀಮಿಯರ್ ಶೋ ನೋಡಿದ ಜನರ ಅಭಿಪ್ರಾಯ. ನಗರದ ಇನ್ನೊಕ್ಸ್ ಚಿತ್ರಮಂದಿರಲ್ಲಿ ಉದ್ಯಮಿ, ನಿರ್ಮಾಪಕ ಬಸವಾರೆಡ್ಡಿ ಅವರು ಆಯೋಜಿಸಿದ್ದ ಪ್ರಿಮಿಯರ್ ಶೋ ಗೆ ಶಾಸಕ ಕರುಣಾಕರ ರೆಡ್ಡಿ, ಶ್ರೀರಾಮುಲು ಆಗಮಿಸಿ ಶುಭ ಹಾರೈಸಿದರು. ಉಳಿದಂತೆನಿರ್ದೇಶಕ ಇಂದ್ರಜೀತ್,ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಒಟ್ಟಿನಲ್ಲಿ ಈ ಚಿತ್ರ ಗೆದ್ದರೆ, ಕನ್ನಡ ಚಿತ್ರರಂಗಕ್ಕೆ ಒಬ್ಬ ಗಟ್ಟಿ ನಿರ್ಮಾಪಕ, ನಿರ್ದೇಶಕ, ನಟಿ ಸಿಗುವುದಂತೂ ಗ್ಯಾರಂಟಿ.ಪಿಯೂಸಿಯನ್ನು ಅಗ್ರಶ್ರೇಯಾಂಕದಲ್ಲಿ ಪಾಸ್ ಮಾಡಿದ ಐಶ್ವರ್ಯಾಗೆ, ಚಿತ್ರರಂಗ ಪರೀಕ್ಷೆಯಲ್ಲಿ ಎಷ್ಟು ಅಂಕ ಗಳಿಸುವರು ಕಾದು ನೋಡಬೇಕು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada