ಸೂರಿ ನಿರ್ದೇಶನದಲ್ಲಿ 'ಜಾಕಿ'ಯಾಗಿ ಪುನೀತ್
ದುನಿಯಾ ಸೂರಿ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿರುವ ಚಿತ್ರಕ್ಕೆ 'ಜಾಕಿ' ಎಂದು ಹೆಸರಿಡಲಾಗಿದೆ. ಪುನೀತ್ ಅಭಿನಯಿಸುತ್ತಿರುವ ಪೃಥ್ವಿ ಚಿತ್ರದ ನಂತರ ಜಾಕಿ ಚಿತ್ರ ಸೆಟ್ಟೇರಲಿದೆ. ''ಜಾಕಬ್ ವರ್ಗೀಸ್ ಮತ್ತು ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಪೃಥ್ವಿ ಚಿತ್ರ ಬರುತ್ತಿದೆ. ಸೂರಿ ನಿರ್ದೇಶನದಲ್ಲಿ ನಟಿಸುವುದು ಒಂದು ದೊಡ್ಡ ಸವಾಲು. ಹಾಗಾಗಿ ಈ ಎರಡೂ ಚಿತ್ರಗಳ ಬಗ್ಗೆ ನಾನು ತುಂಬಾ ನರ್ವಸ್ ಆಗಿದ್ದೇನೆ'' ಎಂದು ಪುನೀತ್ ಪ್ರತಿಕ್ರಿಯಿಸಿದ್ದಾರೆ.
ಸವಾರಿ ಚಿತ್ರದ ಬಳಿಕ ಜಾಕಬ್ ನಿರ್ದೇಶನದಲ್ಲಿ ಬರುತ್ತಿರುವ ಎರಡನೇ ಚಿತ್ರ ಪೃಥ್ವಿ. ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಅವರ ಮಗ ಮಣಿಕಾಂತ್ ಕದ್ರಿ ಈಗಾಗಲೇ ಮಿ.ಗರಗಸ ಹಾಗೂ ಗಣೇಶ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸದ್ಯಕ್ಕೆ ವಿಜಯ್ ನಾಯಕ ನಟನಾಗಿರುವ ಕರಿ ಚಿರತೆ ಚಿತ್ರದಲ್ಲಿ ದುನಿಯಾ ಸೂರಿ ತಲ್ಲೀನರಾಗಿದ್ದಾರೆ. ಜಾಕಿ ಚಿತ್ರ ಜಾಕಿಗಳ ಬಗ್ಗೆ ಕುರಿತಾದ ಕತೆಯಲ್ಲ ಎಂದು ಪುನೀತ್ ರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಬರುತ್ತಿರುವ ಪುನೀತ್ ಚಿತ್ರದ ಬಗ್ಗೆ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











