ಕೋಳಿಗಳ ಅಮಾನವೀಯ ಹತ್ಯೆ ನಿಲ್ಲಿಸಿ; ಮಾಧವನ್
ದೇಶದಲ್ಲಿ ಅನ್ಯಾಯ, ಅವಿನೀತಿ ತಾಂಡವಾಡುತ್ತಿದ್ದರೂ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ . ಇನ್ನು ಕೋಳಿಗಳ ಬಗ್ಗೆ ಯಾರಾದರೂ ಕಿಂಚಿತ್ ಗಮನ ಕೊಡಲು ಸಾಧ್ಯವೆ? ಆದರೆ ನಟ ಮಾಧವನ್‌ಗೆ ಕೋಳಿಗಳ ಬಗ್ಗೆ ಅದೇನು ಅಕ್ಕರೆಯೋ ಏನೋ ಗೊತ್ತಿಲ್ಲ. ಕೋಳಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾರೆ.
ಎಲ್ಲರ ಅಸಡ್ಡೆಗೆ ಗುರಿಯಾದ (ಮಾಂಸ ಪ್ರಿಯರ ಹೊರತು) ಕೋಳಿಗಳ ಸಂತತಿಯನ್ನು ಉಳಿಸಲು ಪಣತೊಟ್ಟಿದ್ದಾರೆ. ದಯವಿಟ್ಟು ಕೋಳಿಗಳ ಮಾರಣ ಹೋಮವನ್ನು ತಡೆಯಿರಿ ಎಂದು ಕೆಎಫ್‌ಸಿ (Kentucky fried chicken) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ನೋವಾಕ್ ಅವರಿಗೆ ಪ್ರಾಣಿ ದಯಾ ಸಂಘದ (PETA) ಪರವಾಗಿ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಪ್ರಾಣಿಗಳ ಬಗ್ಗೆ ನಿಮಗೆ ನಿಜವಾಗಿಯೂ ಅಕ್ಕರೆ ಇದೆ ಎಂದು ತಿಳಿದುಕೊಂಡಿದ್ದೇನೆ. ಅದು ನಾಯಿಮರಿಯಾಗಬಹುದು, ಬೆಕ್ಕಿನ ಮರಿ ಆಗಬಹುದು ಅಥವಾ ಕೋಳಿ ಮರಿಯಾಗಬಹುದು. ಅದು ಯಾವುದೇ ಪ್ರಾಣಿ ಇರಲಿ ದಯವಿಟ್ಟು ಅವುಗಳ ಅಮಾನವೀಯ ಹತ್ಯೆಯನ್ನು ನಿಲ್ಲಿಸಿ ಎಂದು ಪತ್ರದಲ್ಲಿ ಮಾಧವನ್ ಗೋಗರೆದಿದ್ದಾರೆ.
ಪ್ಲೀಸ್ ದಯವಿಟ್ಟು ಈ ಮುಗ್ಧ ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಿ. ಪ್ರಾಣಿ ದಯಾ ಸಂಘ ಹಾಗೂ ನಿಮ್ಮದೇ ಸಂಸ್ಥೆಯ ಮುಖಾಂತರ ಈ ನಿಟ್ಟಿನಲ್ಲಿ ದಾಪುಗಾಲು ಹಾಕಿ, ಮುಗ್ಧ ಪ್ರಾಣಿಗಳ ಮಾರಣ ಹೋಮವನ್ನು ತಡೆಯಿರಿ ಎಂದು ಮಾಧವನ್ ವಿನಂತಿಸಿಕೊಂಡಿದ್ದಾರೆ. ಆದರೆ ಕೆಂಟುಕಿ ಫ್ರೈಡ್ ಚಿಕನ್(ಕೆಎಫ್‌ಸಿ) ಮಾತ್ರ ಕೂಗೋ ಕೋಳಿಗೆ ಖಾರ ಮಸಾಲೆ...ಮೇಯೋ ಮೇಕೆಗೆ ಮಿಲ್ಟ್ರಿ ಮಸಾಲೆ...ಎಂದು ಹಾಡುತ್ತಿದೆ.


Click it and Unblock the Notifications











