»   » ಲೋಕಸಭಾ ಸದಸ್ಯೆ ತೇಜಸ್ವಿನಿಗೌಡ ಚಿತ್ರರಂಗಕ್ಕೆ

ಲೋಕಸಭಾ ಸದಸ್ಯೆ ತೇಜಸ್ವಿನಿಗೌಡ ಚಿತ್ರರಂಗಕ್ಕೆ

Posted By:
Subscribe to Filmibeat Kannada

ಕನಕಪುರದ ಸಂಸತ್ ಸದಸ್ಯೆ, ಮಾಜಿ ಪತ್ರಕರ್ತೆ ( ಉದಯ ಟಿವಿ ಚಾನಲ್ಲಿನ ಉಗ್ರಪ್ರತಾಪಿ), ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಕನಕಪುರ ಕ್ಷೇತ್ರದಲ್ಲಿ ಮಣ್ಣು ಮುಕ್ಕಿಸಿದ ಧೀರಮಹಿಳೆ ತೇಜಸ್ವಿನಿ ಗೌಡ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಲಿದ್ದಾರಂತೆ. ಈ ಚಿತ್ರವನ್ನು ನಿಖಿಲ್ ಮಂಜು ಎನ್ನುವವರು ನಿರ್ದೇಶಿಸುತ್ತಿದ್ದಾರಂತೆ.

ಚಿತ್ರದ ಹೆಸರು ಇನ್ನೂ ಪಕ್ಕಾ ಆಗಿಲ್ಲವಂತೆ. 'ತೇಜ' ಅಥವಾ 'ತೇಜಸ್ವಿನಿ' ಎಂದು ಹೆಸರಿಡಲು ಚಿಂತನೆ ನಡೆದಿದೆಯಂತೆ. ತೇಜಸ್ವಿನಿ ಗೌಡ ಎಂದು ಹೆಸರು ಬದಲಾಯಿಸಿಕೊಂಡಿರುವ ಅವರ ಮುಂಚಿನ ಹೆಸರು ತೇಜಸ್ವಿನಿ ಶ್ರೀರಮೇಶ್ ಎಂದಿತ್ತೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧೀ ಸೇರಿದಂತೆ ಅಖಿಲ ಕರ್ನಾಟಕಕ್ಕೆ ಗೊತ್ತಿದೆಯಂತೆ.

ನಿಖಿಲ್ ಮಂಜು ಪ್ರಕಾರ ಅಂತೆಕಂತೆಯ ಚಿತ್ರದ ಕತೆ ಹೀಗಿದೆಯಂತೆ. ತೇಜಸ್ವಿನಿ ಅವರು ಮೊದಲು ಪತ್ರಕರ್ತೆಯಾಗಿರುತ್ತಾರೆ. ಜನಪರ ಹೋರಾಟಗಳನ್ನು ಮಾಡಿ ಚಿತ್ರದ ಕೊನೆಗೆ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾರಂತೆ. ಚಿತ್ರದ ತಾರಾಗಣದಲ್ಲಿ ಲಕ್ಷ್ಮಿ , ಅನಂತ್‌ನಾಗ್ ಸಹಾ ನಟಿಸಲಿದ್ದಾರಂತೆ. ಪೋಷಕ ಪಾತ್ರಗಳಿಗೆ ಬಾಲಿವುಡ್‌ನಿಂದ ನಾಜಿರ್, ಟಿನೂ ಆನಂದ್‌ರನ್ನು ಕರೆಸಲಾಗುತ್ತಿದೆ ಎಂದೂ ಚಿತ್ರದ ಬಗ್ಗೆ ನಿಖಿಲ್ ಮಂಜು ಹೇಳಿದ್ದಾರಂತೆ. ಎಲ್ಲಾ ಸುಸೂತ್ರವಾಗಿ ನಡೆದರೆ ಇದೇ ಮೇ ತಿಂಗಳ ಅಂತ್ಯಕ್ಕೆ ( ವಿಧಾನಸಭಾ ಚುನಾವಣೆ ವೇಳೆಗೆ) ಚಿತ್ರ ಬಿಡುಗಡೆಯೂ ಆಗಲಿದೆಯಂತೆ.

ಭ್ರಷ್ಟಾಚಾರದಲ್ಲಿ ಮುಳುಗಿರುವ ಕರ್ನಾಟಕದ ಘಟಾನುಘಟಿ ರಾಜಕಾರಣಿಗಳನ್ನು ಚಿತ್ರದ ನಾಯಕಿ(ತೇಜಸ್ವಿನಿ) ಕತ್ತುಹಿಡಿದು ಜೈಲಿಗೆ ತಳ್ಳಿ ಅಂತಿಮವಾಗಿ ರಾಜ್ಯದ ಮುಖ್ಯಮಂತ್ರಿಯಾಗುವುದು 'ತೇಜಸ್ವಿನಿ' ಚಿತ್ರದ ಕತೆಯಂತೆ. ಈ ಚಿತ್ರದ ಸಂಗೀತ ನಿರ್ದೇಶಕ, ಛಾಯಾಗ್ರಹಣ, ಹಾಡು ಕುಣಿತದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲವಂತೆ. ಒಟ್ಟಿನಲ್ಲಿ ತೇಜಸ್ವಿನಿ ಅವರ ಆತ್ಮಕತೆ ಬೆಳ್ಳಿತೆರೆಯ ಮೇಲೆ ಮಿಂಚಲಿದೆಯಂತೆ.

ಯಾರು ಈ ನಿಖಿಲ್ ಮಂಜು?

2006ರಲ್ಲಿ 'ದೇಸಿ' ಎಂಬ ನನ್ನ ಕಲಾತ್ಮಕ ಚಿತ್ರ ಮುಂಬೈನಲ್ಲಿ ನಡೆದ ಏಷ್ಯನ್ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿತ್ತು. 'ಚೈತ್ರದ ಚಿಗುರು' ಹಾಗೂ ಶೃತಿ ನಟಿಸಿದ್ದ 'ಊರ್ವಶಿ' ಚಿತ್ರದಲ್ಲಿ ನಟಿಸಿದ್ದೆ. ಚಂದನ ಟಿವಿಯಲ್ಲಿ ಪ್ರಸಾರವಾದ 'ಸವಿಗಾನ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದೆ. ನಂತರ 'ನಾನೇ ಕನಕ' ಎಂಬ ಧಾರಾವಾಹಿ ತೆಗೆದೆ ಎಂದು ತಮ್ಮ ಬಯೋಡಾಟವನ್ನು ಕನ್ನಡಿಗರ ಮುಂದೆ ನಿಖಿಲ್ ಮಂಜು ಇಟ್ಟಿದ್ದಾರಂತೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada