»   » ಕಾವೇರಿ ಹೋರಾಟಕ್ಕೆ ಅಂಬಿ, ವಿಷ್ಣು ಮತ್ತಿತರರ ರಣಕಹಳೆ

ಕಾವೇರಿ ಹೋರಾಟಕ್ಕೆ ಅಂಬಿ, ವಿಷ್ಣು ಮತ್ತಿತರರ ರಣಕಹಳೆ

Posted By: Staff
Subscribe to Filmibeat Kannada
Ambrish
ಕಾವೇರಿ ನ್ಯಾಯಮಂಡಳಿ ತೀರ್ಪನ್ನು ಕಟುವಾಗಿ ಟೀಕಿಸಿರುವ ಕನ್ನಡ ಚಿತ್ರೋದ್ಯಮ, ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದೆ.ಎರಡು ರಾಜ್ಯಗಳ ನಡುವಿನ ಸಾಮರಸ್ಯ, ನ್ಯಾಯಮಂಡಳಿ ತೀರ್ಪಿನಿಂದ ಹಳಿ ತಪ್ಪಿದೆ ಎಂದು ಚಿತ್ರೋದ್ಯಮ ಆತಂಕ ವ್ಯಕ್ತಪಡಿಸಿದೆ.

ಯಾರ್ಯಾರು ಏನನ್ನುತ್ತಾರೆ?
ವಿಷ್ಣುವರ್ಧನ್‌ -ತೀರ್ಪನ್ನು ಕೇಳಿ ತುಂಬಾ ಬೇಸರವಾಗಿದೆ. ಹಂಚಿಕೊಳ್ಳುವುದರಲ್ಲಿ ಕನ್ನಡಿಗರು ಎಂದೂ ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಈ ಸಲ ನಮ್ಮ ರೈತರಿಗೆ ಅನ್ಯಾಯವಾಗಿದೆ. ಹೋರಾಟಕ್ಕೆ ನನ್ನನ್ನು ಬಳಸಿಕೊಳ್ಳಬಹುದು. ಯಾವುದೇ ಕ್ಷಣದಲ್ಲಿ ಕರೆದರೂ ಬರಲು ಸಿದ್ಧ.

ಶಿವರಾಜ್‌ ಕುಮಾರ್‌ -ನಮಗೆ(ಕನ್ನಡಿಗರಿಗೆ) ನೋವಾಗಿದೆ. ಆದರೆ ನೋವನ್ನು ಸಾತ್ವಿಕವಾಗಿ ವ್ಯಕ್ತಪಡಿಸೋಣ. ಹಿಂಸೆಯ ಮೂಲಕ ಅಮಾಯಕರನ್ನು ಮುಗ್ಧರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಬೇಡ. ಗಾಂಧಿ ಮಾರ್ಗವನ್ನು ಅನುಸರಿಸಿ, ನಮ್ಮ ಹಕ್ಕುಗಳ ಉಳಿಸಿಕೊಳ್ಳೋಣ.

ಅನಂತನಾಗ್‌ -ಮೊದಲಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಕಾವೇರಿ ನ್ಯಾಯಮಂಡಳಿಯ ತೀರ್ಪನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಕಾನೂನು ಸಮರ ಮತ್ತಿತರ ಕ್ರಮಗಳ ಮೂಲಕ ಹೋರಾಟ ನಡೆಸೋಣ.

ಅಂಬರೀಷ್‌ -ನಮ್ಮ ರೈತರಿಗೆ ತೀರ್ಪು ಸಮಾಧಾನ ತಂದಿಲ್ಲ. ನ್ಯಾಯಕ್ಕಾಗಿ ಹೋರಾಡೋಣ.

ದ್ವಾರಕೀಶ್‌ -ಕಾವೇರಿ ಮಂಡ್ಯ,ಮೈಸೂರಿಗೆ ಮಾತ್ರ ಸಂಬಂಧಿಸಿದವಳಲ್ಲ. ಈ ತೀರ್ಪಿನಿಂದ ಬೆಂಗಳೂರು ಜನರ ಕುಡಿಯುವ ನೀರಿಗೂ ಕಷ್ಟವಾಗುವ ಸಾಧ್ಯತೆಗಳಿವೆ. ಚಿತ್ರೋದ್ಯಮ ಒಗ್ಗಟ್ಟು ಪ್ರದರ್ಶಿಸಿ, ಹೋರಾಟವನ್ನು ಬೆಂಬಲಿಸಬೇಕು.

ಎಂ.ಪಿ.ಶಂಕರ್‌ -ಕಾನೂನು ಸಮರದಲ್ಲಿ ಸೋಲಲು ನಮ್ಮ ಸರ್ಕಾರಗಳೇ ಕಾರಣ. ಸಮರ್ಥ ದಾಖಲೆಗಳನ್ನು ಒದಗಿಸುವಲ್ಲಿ ಅದು ವಿಫಲವಾಗಿದೆ. ಈಗಲಾದರೂ ಎಲ್ಲ ರಾಜಕೀಯ ಪಕ್ಷಗಳು ರಾಜ್ಯದ ಹಿತಕ್ಕಾಗಿ ಕೈಸೇರಿಸಲಿ.

ಶ್ರೀನಿವಾಸ ಮೂರ್ತಿ -ನಮ್ಮ ಸಂಸದರು ಲೋಕಸಭೆಯಲ್ಲಿ ಏನ್‌ ಮಾಡುತ್ತಿದ್ದಾರೆ? ಗೋಕಾಕ್‌ ಚಳವಳಿ ಸ್ವರೂಪದಲ್ಲಿಯೇ ಈಗ ಕಾವೇರಿಗಾಗಿ ಹೋರಾಟ ರೂಪಿಸಬೇಕು. ಹೀಗಾದಾಗ, ಭವಿಷ್ಯದಲ್ಲಾದರೂ ನ್ಯಾಯ ಸಿಗಬಹುದು.

ದೇವರಾಜ್‌ -ನಮ್ಮವರ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ.

English summary
The Kannada film stars have declared that they are prepared to fight for securing justice for the people of Karnataka and have resolved to join any forces that will fight the injustice done to Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada